September 15, 2025
FB_IMG_1731507032528.jpg


ಹಿರಿಯೂರು:
ತಾಲ್ಲೂಕಿನ ತಾಲ್ಲೂಕು ಕಚೇರಿ ಸೇರಿದಂತೆ ಎಲ್ಲಾ ಸರ್ಕಾರಿ ಇಲಾಖೆಗಳಲ್ಲೂ ಭ್ರಷ್ಟಾಚಾರ ತಾಂಡವಾಡುತ್ತಿದ್ದು, ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಇಂದಿನಿಂದ ಅಂದರೆ ನವಂಬರ್ 13 ರಿಂದ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದ್ದು, ಈ ಕೂಡಲೇ ಸಂಬಂಧಪಟ್ಟ ಸಚಿವರುಗಳು ಧರಣಿ ಸ್ಥಳಕ್ಕೆ ಆಗಮಿಸಬೇಕು ಎಂಬುದಾಗಿ ರೈತ ಸಂಘದ ಅಧ್ಯಕ್ಷರಾದ ಕೆ.ಟಿ. ತಿಪ್ಪೇಸ್ವಾಮಿ ಒತ್ತಾಯಿಸಿದ್ದಾರೆ.
ತಾಲ್ಲೂಕಿನ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಬುಧವಾರದಂದು ತಾಲ್ಲೂಕಿನ ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ನಿಯಂತ್ರಿಸುವಂತೆ ಒತ್ತಾಯಿಸಿ, ತಾಲ್ಲೂಕು ರೈತಸಂಘದ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಂದಾಯ ಇಲಾಖೆಯಲ್ಲಿ ನಕಲಿ ದಾಖಲೆಗಳ ಸೃಷ್ಟಿಸಿ, ಸರ್ಕಾರಿ ಸೌಲಭ್ಯಗಳನ್ನು ಪಡೆಯುತ್ತಿರುವುದು, ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ರೈತರಿಗೆ ಹಕ್ಕು ಪತ್ರ ನೀಡದೆ ಬಲಾಡ್ಯರಿಗೆ, ಭೂಗಳ್ಳರಿಗೆ ಮಣೆ ಹಾಕಲಾಗುತ್ತಿದೆ. ನೋಂದಣಿ ಇಲಾಖೆ, ಸರ್ವೆ ಇಲಾಖೆ ಮತ್ತು ಹಳೆ ದಾಖಲೆ ಪಡೆಯುವುದಕ್ಕೆ ಇಂತಿಷ್ಟು ಹಣ ನಿಗದಿಪಡಿಸಲಾಗಿದ್ದು ಮಧ್ಯವರ್ತಿಗಳಿಲ್ಲದೆ ಯಾವ ಕೆಲಸವೂ ಆಗುವುದಿಲ್ಲ ಎಂಬಂತಾಗಿದೆ ಎಂದರಲ್ಲದೆ,
ರಾಷ್ಟ್ರೀಯ ಹೆದ್ದಾರಿ 150 ಎ ಕಾಮಗಾರಿ ನಡೆಸುತ್ತಿರುವ ಪಿ.ಎನ್.ಸಿ. ಕಂಪನಿ ಹಾಗೂ ಉಪಗುತ್ತಿಗೆದಾರರು ರೈತರ ಹೆಸರಿನಲ್ಲಿ ಮಣ್ಣು ತುಂಬುತ್ತಾ ನೂರಾರು ಕೋಟಿ ತೆರಿಗೆಯನ್ನು ಕಟ್ಟದೇ ವಂಚಿಸುತ್ತಿದ್ದಾರೆ ಹಾಗೂ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಭೂಮಿಯನ್ನು ಬೇರೆಯವರ ಹೆಸರಿಗೆ ಖಾತೆ ಮಾಡಿ ಭೂಸ್ವಾದೀನ ಮಾಡಿ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ವಂಚಿಸಿರುತ್ತಾರೆ ಎಂಬುದಾಗಿ ಅವರು ಆರೋಪಿಸಿದರು.
ಅನೇಕ ಕಂಪನಿಗಳು ಸರ್ಕಾರಿ ಭೂಮಿಯನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುತ್ತಾರೆ. ಕಂದಾಯ ಇಲಾಖೆಗಳಿಗೆ ವರ್ಷಾನುಗಟ್ಟಲೆ ಅಲೆದಾಡಿದರೂ ರೈತರ, ಸಾರ್ವಜನಿಕರ ಕೆಲಸಗಳು ಆಗುತ್ತಿಲ್ಲ. ಇವುಗಳ ಬಗ್ಗೆ ನಿಯಮಾನುಸಾರ ಪರಿಶೀಲಿಸಿ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಲು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರವರು ಕೂಡಲೇ ಧರಣಿ ಸ್ಥಳಕ್ಕೆ ಆಗಮಿಸಬೇಕು ಎಂಬುದಾಗಿ ಅವರು ಒತ್ತಾಯಿಸಿದರು.
ತಾಲ್ಲೂಕಿನ ವಾಣಿವಿಲಾಸ ಜಲಾಶಯಕ್ಕೆ ಭದ್ರಾ ಮೇಲ್ದಂಡೆ ಯೋಜನೆಯ ಮೂಲಕ ಪ್ರತಿವರ್ಷ 10 ಟಿ.ಎಂ.ಸಿ ನೀರು ತುಂಬಿಸಬೇಕು ಮತ್ತು ಜೆಜೆಹಳ್ಳಿ, ಕಸಬಾ, ಐಮಂಗಲ ಹೋಬಳಿಯ ಕೆರೆಗಳಿಗೆ ವಾಣಿವಿಲಾಸ ಜಲಾಶಯದಿಂದ ನೀರು ತುಂಬಿಸಬೇಕು ಈ ನಿಟ್ಟಿನಲ್ಲಿ ಈಗಾಗಲೇ ಜೆ.ಜೆ. ಹಳ್ಳಿಯಲ್ಲಿ ಕಳೆದ 140 ದಿನಗಳಿಂದ ಆ ಭಾಗದ ರೈತರಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಂದರಲ್ಲದೆ,
ಭದ್ರಾ ಮೇಲ್ದಂಡೆ ಯೋಜನೆಯ ಹನಿ ನೀರಾವರಿ ಕಾಮಗಾರಿಯಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ನೌಕರರು ನಿಯಮಗಳನ್ನು ಉಲ್ಲಂಘನೆ ಮಾಡಿ ರೈತರನ್ನು ವಂಚಿಸಿ ಅಕ್ರಮವಾಗಿ ಅತ್ಯಂತ ಕಳಪೆಕಾಮಗಾರಿ ಮಾಡಲಾಗುತ್ತಿದೆ. ಆದ್ದರಿಂದ ನೀರಾವರಿ ಸಚಿವರು ಹಾಗೂ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರು ಧರಣಿ ಸ್ಥಳಕ್ಕೆ ಆಗಮಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದಾಗಿ ಅವರು ಒತ್ತಾಯಿಸಿದರು.
ಕೃಷಿ ಇಲಾಖೆಯಲ್ಲಿ ಬೆಳೆವಿಮೆ ಮತ್ತು ಬೆಳೆ ಪರಿಹಾರ ಹಾಗೂ ರೈತರಿಗೆ ರಿಯಾಯಿತಿ ಧರದಲ್ಲಿ ನೀಡುತ್ತಿರುವ ಪರಿಕರಗಳ ಬೆಲೆ ಮಾರುಕಟ್ಟೆ ಧರಕ್ಕೂ, ಸಬ್ಸಿಡಿ ಧರಕ್ಕೂ ಕೇವಲ 10% ಮಾತ್ರ ವ್ಯತ್ಯಾಸವಿದ್ದು, ರೈತರ ಹೆಸರಿನಲ್ಲಿ ಅಧಿಕಾರಿಗಳು ಮತ್ತು ಕಂಪನಿಗಳ ಮಾಲೀಕರು ಸರ್ಕಾರಕ್ಕೆ ಮತ್ತು ರೈತರಿಗೆ ವಂಚಿಸುತ್ತಿದ್ದಾರೆ ಹಾಗಾಗಿ ಕರ್ನಾಟಕ ಸರ್ಕಾರದ ಕೃಷಿ ಸಚಿವರು ಧರಣಿ ಸ್ಥಳಕ್ಕೆ ಆಗಮಿಸಬೇಕು ಎಂದರಲ್ಲದೆ,
ಬೆಸ್ಕಾಂ ಇಲಾಖೆಯಲ್ಲಿ ಅಕ್ರಮ ಸಕ್ರಮ ಯೋಜನೆಯಲ್ಲಿ ರೈತರ ಜಮೀನಿನಲ್ಲಿ ಕಾಮಗಾರಿ ನಡೆಸದೆ ಹಣ ಪಡೆದಿರುತ್ತಾರೆ ಮತ್ತು ಕಾರ್ಯಾದೇಶ ನೀಡದೆ ಕಾಮಗಾರಿ ಮಾಡಿರುತ್ತಾರೆ ಹಾಗೂ ಒಂದೇ ಕಾಮಗಾರಿಗೆ ಎರಡು ಬಿಲ್ ಪಡೆದಿರುತ್ತಾರೆ. ಸುಟ್ಟುಹೋದ ಪರಿವರ್ತಕಗಳಿಗೆ ಹಣ ಕೊಡದೆ ಹೊಸ ಪರಿವರ್ತಕಗಳನ್ನು ಕೊಡುವುದಿಲ್ಲ. ಅಲ್ಲದೆ ರೈತರಿಗೆ ಕಳಪೆ ವಿದ್ಯುತ್ ಸರಬರಾಜು ಮಾಡುತ್ತಾ ಅಧಿಕಾರಿಗಳು ವಂಚಿಸಿರುತ್ತಾರೆ ಆದ್ದರಿಂದ ಕೆ.ಪಿ.ಟಿ.ಸಿ.ಎಲ್. ಸಚಿವರು ಧರಣಿ ಸ್ಥಳಕ್ಕೆ ಆಗಮಿಸಬೇಕು
ಗ್ರಾಮ ಪಂಚಾಯತಿಗಳಲ್ಲಿ ಪಿಡಿಓಗಳು ಹಾಗೂ ಗುತ್ತಿಗೆದಾರರು ಶಾಮೀಲಾಗಿ ಉದ್ಯೋಗ ಖಾತರಿ ಯೋಜನೆಯಲ್ಲಿ ಅನೇಕ ಕಾಮಗಾರಿಗಳನ್ನೇ ನಡೆಸದೆ ಹಣ ದೋಚಿರುತ್ತಾರೆ. ಅಲ್ಲದೆ ನಿಯಮಗಳನ್ನು ಉಲ್ಲಂಘನೆ ಮಾಡಿ ಅನೇಕ ಕಾಮಗಾರಿಗಳನ್ನು ನಡೆಸಿರುತ್ತಾರೆ. ಪಂಚಾಯತಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೈಗಾರಿಕೆಗಳು, ವಾಣಿಜ್ಯ ಕಂಪನಿಗಳು ತೆರಿಗೆ ಕಟ್ಟದೆ ಖಾತೆ ಮಾಡದೆ ಅನಧಿಕೃತವಾಗಿ ನಡೆಯುತ್ತಿವೆ.
ಅಲ್ಲದೆ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ರೈತರ ಖಾತೆ ಮಾಡಲು ಮತ್ತು ಈ-ಸ್ವತ್ತು ಮಾಡಲು ಗ್ರಾಮ ಪಂಚಾಯಿತಿಗೆ ಅನೇಕ ಬಾರಿ ಅಲೆದಾಡಿ ಹಣ ಕೊಟ್ಟರು ಯಾವುದೇ ಕೆಲಸವಾಗುತ್ತಿಲ್ಲ ಮತ್ತು ಪಂಚಾಯಿತಿಯ ವಿವಿಧ ಹಂತದ ಅನುದಾನವನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಆದ್ದರಿಂದ ಇವುಗಳ ಬಗ್ಗೆ ತನಿಖೆ ನಡೆಸಲು ಗ್ರಾಮೀಣ ಅಭಿವೃದ್ಧಿ ಸಚಿವರಾದ ಪ್ರಿಯಾಂಕ ಖರ್ಗೆ ಅವರು ಧರಣಿ ಸ್ಥಳಕ್ಕೆ ಆಗಮಿಸಬೇಕು.
ಅರಣ್ಯ ಇಲಾಖೆಯಲ್ಲಿ ಪ್ರತಿ ವರ್ಷ ಗಿಡ ನೆಡುವ ಕಾಮಗಾರಿ ನಡೆಸುತ್ತಿದ್ದು, ಕೋಟ್ಯಾಂತರ ಹಣ ದುರುಪಯೋಗವಾಗಿದೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಕ್ರಮ ನಡೆದಿದೆ ಮತ್ತು ಕಂಪನಿಗಳು ಅರಣ್ಯ ಇಲಾಖೆಯ ಭೂಮಿಯನ್ನು ಹೊತ್ತುವರಿ ಮಾಡಿಕೊಂಡರು ಯಾವುದೇ ಕ್ರಮ ವಹಿಸುತ್ತಿಲ್ಲ. ಅರಣ್ಯ ಇಲಾಖೆ ವ್ಯಾಪ್ತಿಯ ದಿನ ನಿತ್ಯ ಮಣ್ಣು ಸಾಗಾಣಿಕೆ ಮಾಡುತ್ತಾರೆ.
ಅರಣ್ಯ ಇಲಾಖೆ ಸಂಬಂಧಿಸಿದ ಮರಗಳನ್ನು ಕಳ್ಳರು ಕಟ್ ಮಾಡಿದಾಗ ಅವುಗಳ ಬಗ್ಗೆ ಪ್ರಕರಣ ದಾಖಲು ಮಾಡಿಕೊಳ್ಳುವುದಿಲ್ಲ ಮತ್ತು ಕಾಡು ಪ್ರಾಣಿಗಳು ಅನೇಕ ಬಾರಿ ರೈತರಿಗೆ ಮತ್ತು ರೈತರು ಸಾಕಿರುವ ಸಾಕು ಪ್ರಾಣಿಗಳಿಗೆ ಹಾನಿ ಮಾಡಿರುತ್ತವೆ ಅಧಿಕಾರಿಗಳು ಕ್ರಮ ವಹಿಸದೆ ಇರುವುದರಿಂದ ಅರಣ್ಯ ಇಲಾಖೆ ಸಚಿವರು ಧರಣಿ ಸ್ಥಳಕ್ಕೆ ಆಗಮಿಸಬೇಕು.
ಅಬಕಾರಿ ಇಲಾಖೆಯ ನಿಯಮಗಳನ್ನು ಉಲ್ಲಂಘನೆ ಮಾಡಿ ಅಕ್ರಮವಾಗಿ ಕಾನೂನು ಬಾಹಿರವಾಗಿ ವಿವಿಧ ಕಡೆ ಮಧ್ಯದ ಅಂಗಡಿಗಳನ್ನು ತೆರೆಯಲಾಗಿದೆ ಮತ್ತು ಬಹುತೇಕ ಗ್ರಾಮಗಳಲ್ಲಿ ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದು ಅಧಿಕಾರಿಗಳು ನಿರ್ಲಕ್ಷ ವಹಿಸಿರುವುದರಿಂದ ಅಬಕಾರಿ ಸಚಿವರು ಧರಣಿ ಸಳಕ್ಕೆ ಆಗಮಿಸಬೇಕು.
ತೋಟಗಾರಿಕೆ ಇಲಾಖೆಯಲ್ಲಿ ಹನಿ ನೀರಾವರಿ ಕಾಮಗಾರಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದು ಇವುಗಳ ಬಗ್ಗೆ ತನಿಖೆ ನಡೆಸಬೇಕು ಮತ್ತು ಸಬ್ಸಿಡಿಯಲ್ಲಿ ರೈತರಿಗೆ ವಂಚನೆ ಆಗುತ್ತಿದ್ದು ಮತ್ತು ತೋಟಗಾರಿಕೆ ಬೆಳೆವಿಮೆಯಲ್ಲಿ ಅಧಿಕಾರಿಗಳು ಮತ್ತು ಕಂಪನಿಯ ಮಾಲೀಕರೊಂದಿಗೆ ಶಾಮೀಲಾಗಿ ರೈತರಿಗೆ ಬೆಳೆ ವಿಮೆ ಬಂದಿರುವುದಿಲ್ಲ ಆದ್ದರಿಂದ ತೋಟಗಾರಿಕೆ ಸಚಿವರು ಧರಣಿ ಸಳಕ್ಕೆ ಆಗಮಿಸಬೇಕು.
ಸಣ್ಣನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಇಲಾಖೆಯಲ್ಲಿ ಕೆರೆಗಳ ಪುನಶ್ಚೇತನ ಕಾಮಗಾರಿ,ಕೆರೆಗಳ ಅಭಿವೃದ್ಧಿ, ಚೆಕ್ ಡ್ಯಾಮ್, ಗೋಕಟ್ಟೆ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದ್ದು ಇವುಗಳ ಬಗ್ಗೆ ತನಿಖೆ ನಡೆಸಲು ತಪ್ಪಿಸಸ್ತ ಅಧಿಕಾರಿಗಳ ವಿರುದ್ಧ ಕ್ರಮ ವಹಿಸಲು ಸಣ್ಣ ನೀರಾವರಿ ಇಲಾಖೆಯ ಸಚಿವರು ಧರಣಿ ಸ್ಥಳಕ್ಕೆ ಆಗಮಿಸಬೇಕು.
ಈ ನಮ್ಮ ಎಲ್ಲ ಒತ್ತಾಯಗಳ ಬಗ್ಗೆ ಸಂಬಂಧಪಟ್ಟ ಸಚಿವರು ಧರಣಿ ಸ್ಥಳಕ್ಕೆ ಆಗಮಿಸಬೇಕು, ಆಗಮಿಸಿದ ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖೆಗಳಲ್ಲಿ ಅಕ್ರಮ ನಡೆದಿರುವ ಬಗ್ಗೆ ದಾಖಲೆಗಳನ್ನು ಒದಗಿಸಲಾಗಿರುತ್ತದೆ. ಇವುಗಳನ್ನ ಪರಿಶೀಲಿಸಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ಅಮಾನತು ಮಾಡಬೇಕು,
ಅಲ್ಲದೆ ತಾಲ್ಲೂಕಿನ ವಿವಿಧ ಇಲಾಖೆಗಳಲ್ಲಿ ಕ್ಯಾನ್ಸರ್ ಗಿಂತಲೂ ಮಿಗಿಲಾಗಿ ಬೆಳೆಯುತ್ತಿರುವ ಭ್ರಷ್ಟಾಚಾರವನ್ನು ಕಡಿವಾಣ ಹಾಕಿ ಸರ್ಕಾರದಿಂದ ಜನಸಾಮಾನ್ಯರಿಗೆ ಸಿಗುವ ಸೌಲಭ್ಯಗಳು ಸಿಗುವಂತಾಗಬೇಕು ಅಲ್ಲಿಯವರೆಗೂ ನಿರಂತರ ಧರಣಿ ಸತ್ಯಾಗ್ರಹ ಹೋರಾಟ ಮಾಡಲಾಗುವುದು ಎಂಬುದಾಗಿ ಅವರು ಸಭೆಗೆ ತಿಳಿಸಿದರು.
ಈ ಧರಣಿ ಸತ್ಯಾಗ್ರಹದಲ್ಲಿ ರೈತಮುಖಂಡರುಗಳಾದ ಆಲೂರುಸಿದ್ದರಾಮಣ್ಣ, ಮೀಸೆರಾಮಣ್ಣ, ತಿಮ್ಮಾರೆಡ್ಡಿ, ತಿಪ್ಪೇಸ್ವಾಮಿ, ಬಿ.ಆರ್.ರಂಗಸ್ವಾಮಿ, ದೊರೆಸ್ವಾಮಿ, ಸಣ್ಣತಿಮ್ಮಣ್ಣ, ಗೋಪಾಲಪ್ಪ, ತಿಮ್ಮಜ್ಜ, ಸಿಂಪಣ್ಣ, ಜಗನ್ನಾಥ್, ಹುಸೇನ್, ಕೃಷ್ಣಪ್ಪ, ಕರಿಯಪ್ಪ, ಶ್ರೀಮತಿ ಜಯಮ್ಮ, ಶ್ರೀಮತಿ ರಾಜಮ್ಮ, ಶ್ರೀಮತಿ ತಿಪ್ಪಮ್ಮ, ರಾಜಪ್ಪ, ಪೂಜಣ್ಣ, ಹನುಮಂತಪ್ಪ, ಉಗ್ರಪ್ಪ, ಬಸವರಾಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading