September 15, 2025
FB_IMG_1731501298545.jpg


ಚಿತ್ರದುರ್ಗ ನ.13:
ಸಿರಿಧಾನ್ಯಗಳು ಉತ್ತಮ ಪೋಷಕಾಂಶ ಹೊಂದಿರುವುದರಿಂದ ಸಿರಿಧಾನ್ಯ ಸೇವನೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಹೇಳಿದರು.
ನಗರದ ಎಪಿಎಂಸಿ ಆವರಣದ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಬುಧವಾರ ಜಿಲ್ಲಾಮಟ್ಟದ ಸಿರಿಧಾನ್ಯಗಳ ಹಾಗೂ ಮರೆತುಹೋದ ಖಾದ್ಯಗಳ ಪಾಕ ಸ್ಪರ್ಧೆಯನ್ನು ಸಿರಿಧಾನ್ಯಗಳಿಂದ ತಯಾರಿಸಿದ ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ರಾಸಾಯನಿಕ ಯುಕ್ತ ಗೊಬ್ಬರದ ಬಳಕೆಯಿಂದ ಎಲ್ಲಾ ಆಹಾರ ಪದಾರ್ಥಗಳು ಕಲುಷಿತಗೊಂಡಿದ್ದು, ಈ ನಿಟ್ಟಿನಲ್ಲಿ ಆರೋಗ್ಯದ ದೃಷ್ಠಿಯಿಂದಲೂ ಸಿರಿಧಾನ್ಯಗಳ ಬಳಕೆಯಿಂದ ಆರೋಗ್ಯ ವೃದ್ಧಿಯಾಗಲಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಸಿರಿಧಾನ್ಯಗಳ ಸಂಸ್ಕರಣೆ, ಮೌಲ್ಯವರ್ಧನೆ ಹಾಗೂ ಮಾರುಕಟ್ಟೆಗೆ ಸೂಕ್ತ ವೇದಿಕೆ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಜಂಟಿ ಕೃಷಿ ನಿರ್ದೇಶಕ ಮಂಜುನಾಥ್ ಮಾತನಾಡಿ, ಜಿಲ್ಲಾಮಟ್ಟದ ಸಿರಿಧಾನ್ಯಗಳ ಪಾಕಸ್ಪರ್ಧೆಯನ್ನು ಸಿಹಿ, ಖಾರ ಹಾಗೂ ಮರೆತುಹೋದ ಖಾದ್ಯಗಳು ಎಂದು ಮೂರು ವಿಭಾಗ ಮಾಡಿ ಸ್ಪರ್ಧೆ ಆಯೋಜಿಸಲಾಗಿದೆ. 2017 ರಿಂದಲೂ ಜಿಲ್ಲಾಮಟ್ಟ ಹಾಗೂ ರಾಜ್ಯಮಟ್ಟದಲ್ಲಿಯೂ ಸಿರಿಧಾನ್ಯ ಪಾಕ ಸ್ಪರ್ಧೆಯನ್ನು ಆಯೋಜನೆ ಮಾಡಲಾಗುತ್ತಿದೆ ಎಂದು ಹೇಳಿದರು.
ನಾವು ನಮ್ಮ ಆಹಾರಧಾನ್ಯ ಹಾಗೂ ಆಹಾರ ಪದ್ಧತಿಯಲ್ಲಿ ಜಾಗತೀಕ ಮಟ್ಟದಲ್ಲಿ ಆದ ಬೆಳವಣೆಗೆಯಿಂದ ನಮ್ಮ ರೂಢಿಗತ ಆಹಾರ ಪದ್ಧತಿಗಳಿಂದ ಬಹಳಷ್ಟು ದೂರ ಹಿಮ್ಮುಖವಾಗುತ್ತಿದ್ದು, ಇದರಿಂದ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದೇವೆ ಎಂದು ತಿಳಿಸಿದ ಅವರು, ನಮ್ಮ ಆರೋಗ್ಯ ಹಾಳು ಮಾಡುವುದರ ಜತೆಗೆ ಆರ್ಥಿಕ, ಸಾಮಾಜಿಕವಾಗಿ ದುರ್ಬಲರನ್ನಾಗಿ ಮಾಡುತ್ತದೆ. ಈ ನಿಟ್ಟಿನಲ್ಲಿ ಉತ್ತಮ ಪೌಷ್ಠಿಕಾಂಶ ಹೊಂದಿರುವ ಸಿರಿಧಾನ್ಯಗಳನ್ನು ಹೆಚ್ಚು ಬಳಕೆ ಮಾಡಬೇಕು ಎಂದರು.
ಜಿಲ್ಲಾ ಮಟ್ಟದ ಸಿರಿಧಾನ್ಯ ಸ್ಪರ್ಧೆಯಲ್ಲಿ ಮೂರು ವಿಭಾಗಗಳನ್ನು ಮಾಡಲಾಗಿದ್ದು, ಪ್ರತಿಯೊಂದು ವಿಭಾಗದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಎಂದು ಆಯ್ಕೆ ಮಾಡಿ, ಮೂರು ವಿಭಾಗಳಿಂದ ಒಟ್ಟು 9 ಮಂದಿ ವಿಜೇತರಿಗೆ ಪ್ರಶಸ್ತಿ ಹಾಗೂ ಬಹುಮಾನ ನೀಡಲಾಗುವುದು. ಸಿಹಿ, ಖಾರ ಸಿರಿಧಾನ್ಯ ಖಾದ್ಯಗಳಿಗೆ ಮತ್ತು ಮರೆತು ಹೋದ ಖಾದ್ಯಗಳ ತಿನಿಸಿಗೆ ಪ್ರಥಮ, ದ್ವಿತೀಯ ಹಾಗೂ ತೃತಿಯ ಸ್ಥಾನ ವಿಜೇತರಿಗೆ ಕ್ರಮವಾಗಿ ರೂ.5000/-, 3000/- ಹಾಗೂ 2000/- ಗಳನ್ನು ನೀಡಲಾಗುವುದು ಎಂದು ಹೇಳಿದರು.
ರಾಜ್ಯ ಮಟ್ಟದ ಸ್ಪರ್ಧೆಯನ್ನು ಮುಂಬರುವ ಡಿಸೆಂಬರ್ ಅಥವಾ ಜನವರಿ ಮಾಹೆಯಲ್ಲಿ ಬೆಂಗಳೂರಿನಲ್ಲಿ ಏರ್ಪಡಿಸಲಾಗುತ್ತದೆ. ರಾಜ್ಯ ಮಟ್ಟದ “ಸಿರಿಧಾನ್ಯ” ಮತ್ತು “ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ”ಯಲ್ಲಿ ಜಿಲ್ಲಾ ಮಟ್ಟದ ಪ್ರಥಮ ಬಹುಮಾನ ವಿಜೇತರು ಸ್ವತಃ ತಿನಿಸನ್ನು ತಯಾರಿಸಲು ಅವಶ್ಯವಿರುವ ಸಾಮಗ್ರಿಗಳೊಂದಿಗೆ ಸಿದ್ದರಿರಬೇಕು ಎಂದು ಹೇಳಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ ಮಾತನಾಡಿ, ಈ ಹಿಂದೆ ನಮ್ಮ ಪೂರ್ವಜರು ಸಿರಿಧಾನ್ಯಗಳ ಬಳಕೆಯಿಂದ ಉತ್ತಮ ಆರೋಗ್ಯ ಹೊಂದಿದ್ದರು. ಇಂದಿನ ಆಹಾರ ಪದಾರ್ಥಗಳಲ್ಲಿ ಆರೋಗ್ಯಕ್ಕೆ ಪೂರಕವಾಗಿರುವ ಯಾವುದೇ ಗುಣಗಳಿಲ್ಲ ಎಂದು ತಿಳಿಸಿದ ಅವರು, ಆರೋಗ್ಯ ಪೂರ್ಣವಾಗಿರಲು ಸಿರಿಧಾನ್ಯಗಳ ಸೇವನೆ ಉತ್ತಮ. ಸಿರಿಧಾನ್ಯಗಳಲ್ಲಿ ದೇಹಾರೋಗ್ಯ ಹೆಚ್ಚಿಸುವ ಪೌಷ್ಠಿಕಾಂಶಗಳಿವೆ. ಹಾಗಾಗಿ ಆರೋಗ್ಯದ ಹಿತದೃಷ್ಠಿಯಿಂದ ಸಿರಿಧಾನ್ಯಗಳ ಬಳಕೆ ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಸಿರಿಧಾನ್ಯ ಪಾಕಸ್ಪರ್ಧೆಯಲ್ಲಿ ತರಹೇವಾರಿ ಖಾದ್ಯ: ಸಿರಿಧಾನ್ಯ ಪಾಕ ಸ್ಪರ್ಧೆಯಲ್ಲಿ ಒಟ್ಟು 41 ಜನರು ಭಾಗವಹಿಸಿ, ಸಿರಿಧಾನ್ಯಗಳ ಸಿಹಿ ಹಾಗೂ ಖಾರದ ಖಾದ್ಯಗಳು ಹಾಗೂ ಮರೆತುಹೋದ ವಿವಿಧ ಖಾದ್ಯಗಳಾದ ರಾಗಿಪೇಡ, ರಾಗಿ ಬಿಸ್ಕತ್, ನವಣಕ್ಕಿ ಉಪ್ಪಿಟ್ಟು, ನವಣಕ್ಕಿ ಪಲಾವ್, ಚಿನ್ನಕುರುಳಿ, ಒತ್ತುಶಾವಿಗೆ ಕಾಯಿರಸ, ಸಜ್ಜೆರೊಟ್ಟಿ, ಕುಂಬಳಕಾಯಿ ಕಡಬು, ರಾಗಿ ಕಿಲ್ಸ್, ಸಿಹಿ ಪೊಂಗಲ್, ಸಿರಿಧಾನ್ಯ ಹಲ್ವ, ರಾಗಿ ದೋಸೆ, ನವಣಕ್ಕಿ ತಂಬಿಟ್ಟು, ಮಾಲ್ದಿ, ಒತ್ತುಶಾವಿಗೆ, ರಾಗಿ ಹಲ್ವ, ಆರ್ಕದ ಅಕ್ಕಿ ಉಂಡೆ, ಸಿರಿಧಾನ್ಯ ಉಂಡೆ, ರಾಗಿ ಬೆಲ್ಲದ ಬರ್ಫಿ, ಸಜ್ಜೆ ಕಡಬು, ನವಣೆ ಪೇಡಾ, ಸಾವೆ ಕಿಚಡಿ, ಉದಲೂ ಪಾಯಸ, ಸಜ್ಜೆ ಲಾಡು, ಸಾಮೆ ಬಿಸಿಬೆಳೆಬಾತ್, ನವಣಕ್ಕಿ ಚಕ್ಕುಲಿ, ಸಾವೆಅಕ್ಕಿ ನಿಪ್ಪಟ್ಟು, ಸಜ್ಜೆ ಮಸಾಲೆ ರೊಟ್ಟಿ, ಸಾಮೆ ಅಕ್ಕಿಯ ಚಕ್ಕುಲಿ, ಹಾರಕ ಪಲಾವ್, ಬರಗು, ಅರಕ, ಅರ್ಗನಿಕ್ ಬೆಲ್ಲದಿಂದ ತಯಾರಿಸಿದ ಕೇಕ್ ಸೇರಿದಂತೆ ಸಿರಿಧಾನ್ಯಗಳಿಂದ ತಯಾರಿಸಿದ ಖಾದ್ಯ ಪ್ರದರ್ಶಿಸಿದರು.
ಸಿರಿಧಾನ್ಯ ಮತ್ತು ಸಾವಯವ ಅಂತರಾಷ್ಟ್ರೀಯ ವಾಣಿಜ್ಯ ಮೇಳ-2025 ರ ಅಂಗವಾಗಿ ರಾಜ್ಯಮಟ್ಟದ ಸಿರಿಧಾನ್ಯ ಮತ್ತು ಮರೆತುಹೋದ ಖಾದ್ಯಗಳ ಪಾಕ ಸ್ಪರ್ಧೆಯ ಪೂರ್ವಭಾವಿಯಾಗಿ ಜಿಲ್ಲಾ ಮಟ್ಟದಲ್ಲಿ ಸಿರಿಧಾನ್ಯ ಮತ್ತು ಮರೆತುಹೋದ ಖಾದ್ಯಗಳ ಪಾಕ ಸ್ಪರ್ಧೆಯನ್ನು ಆಯೋಜಿಸುವ ಮೂಲಕ ಸಿರಿಧಾನ್ಯಗಳ ಪೌಷ್ಠಿಕಾಂಶದ ಮಹತ್ವಗಳು, ಬಳಕೆಯ ವಿಧಾನಗಳು, ಆರೋಗ್ಯಕರ ಅಂಶಗಳ ಪ್ರಯೋಜನಗಳು ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಉಪನಿರ್ದೇಶಕ ಪ್ರಭಾಕರ್, ಸಹಾಯಕ ಕೃಷಿ ನಿರ್ದೇಶಕ ಪ್ರವೀಣ್ ಚೌಧರಿ, ರೇಷ್ಮೆ ಇಲಾಖೆಯ ಉಪನಿರ್ದೇಶಕ ಮಾರಪ್ಪ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಪವಿತ್ರ, ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದ ಸರಸ್ವತಿ, ರೈತಮಹಿಳೆ ಪ್ರತಿನಿಧಿ ಶೋಭಾ, ಪ್ರಗತಿಪರ ರೈತರಾದ ಮಹಾವೀರ ಜೈನ್, ರಂಗಣ್ಣ ಸೇರಿದಂತೆ ಮತ್ತಿತರರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading