
ರೈತರಲ್ಲಿ ಹೈನುಗಾರಿಕೆ ನಿರ್ವಹಣೆ ಬಗ್ಗೆ ಜಾಗೃತಿ ಬೆಳೆಯಬೇಕಿದೆ ಎಂದು ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ. ಮಂಜುನಾಥ ಹೇಳಿದರು.
ಚಳ್ಳಕೆರೆ ತಾಲೂಕಿನ ರೇಣುಕಾಪುರ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಹಾಲು ಉತ್ಪಾದಕರ ಸಂಘದ ಸದಸ್ಯರ ಸಭೆಯಲ್ಲಿ ಮಾತನಾಡಿದರು.
ಒಣ ಬೇಸಾಯ ಪದ್ದತಿ ರೈತರ ಬದುಕಿನ ಭದ್ರತೆ ಆಗುವುದಿಲ್ಲ. ಸಮಗ್ರ ಕೃಷಿ ಚಟುವಟಿಕೆ ಬಗ್ಗೆ ರೈತರಲ್ಲಿ ಆಸಕ್ತಿ ಬೆಳೆಯಬೇಕು. ರೈತರ ಸಂಸ್ಕೃತಿ ಮತ್ತು ಕುಟುಂಬ ನಿರ್ವಹಣೆಗೆ ಹಸು ಸಾಕಾಣಿಕೆ ಪ್ರಧಾನ ಆಗಬೇಕು. ಈ ಹಿನ್ನೆಲೆಯಲ್ಲಿ ಇಲಾಖೆಯಿಂದ ಸಬ್ಸಿಡಿ ಯೋಜನೆಯಡಿ ೨೦೦ ಹಸುಗಳನ್ನು ರೈತರ ನೀಡಲಾಗಿದೆ. ಆರಂಭದಲ್ಲಿ ೨೦೦ ಲೀಟರ್ ಹಾಲು ಉತ್ಪಾದನೆ ಆಗುತ್ತಿದ್ದ ಗ್ರಾಮದಲ್ಲಿ ಪ್ರಸ್ತುತ ೧೩೦೦ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಇದರಿಂದ ರೈತರ ಕುಟುಂಬಗಳು ಆರ್ಥಿಕವಾಗಿ ಸಬಲೀಕರಣವಾಗುತ್ತಿವೆ. ಮಕ್ಕಳ ವಿದ್ಯಾಭ್ಯಾಸ ಮತ್ತು ಕೃಷಿ ಚಟುವಟಿಕೆಗಳಿಗೆ ಅನುಕೂಲ ಇರುತ್ತದೆ. ನಿರ್ಜೀವವಾಗುತ್ತಿರುವ ಮಣ್ಣಿನಲ್ಲಿ ನಿರೀಕ್ಷಿತ ಕೃಷಿ ಬೆಳೆಯುತ್ತಿಲ್ಲ. ರಸಾಯನಿಕ ಗೊಬ್ಬರ ಬಳಕೆ ನಿಲ್ಲಬೇಕು. ಜಾನುವಾರುಗಳ ಸಾಕಾಣಿಕೆ ಮತ್ತು ಕೊಟ್ಟಿಗೆ ಗೊಬ್ಬರ ಭೂಮಿಗೆ ಬಳಕೆ ಮಾಡಬೇಕು. ವೈಜ್ಞಾನಿಕ ಪದ್ದತಿಯಲ್ಲಿ ಬೇಸಾಯ ಕ್ರಮಗಳಲ್ಲಿ ಸುಧಾರಣೆ ಕಂಡುಕೊಳ್ಳುವ ಜಾಣ್ಮೆ ಇರಬೇಕು ಎಂದು ಹೇಳಿದರು.
ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ನಿರ್ದೇಶಕ ಬಿ.ಸಿ. ಸಂಜೀವಮೂರ್ತಿ ಮಾತನಾಡಿ, ಬಯಲುಸೀಮೆಯಲ್ಲಿ ರೈತರಿಗೆ ಕೃಷಿ ಕಷ್ಟವಾಗುತ್ತಿದೆ. ಅತಿವೃಷ್ಟಿ, ಅನಾವೃಷ್ಟಿ ಪ್ರಕೃತಿಯಿಂದ ನಿರೀಕ್ಷಿತ ಫಸಲು ಸಿಗುತ್ತಿಲ್ಲ. ಇದಕ್ಕೆ ರೈತರು ಪರ್ಯಾಯ ಮಾರ್ಗವಾಗಿ ಹೈನುಗಾರಿಕೆ ಕಸುಬು ಕಂಡುಕೊಳ್ಳಬೇಕು. ಸಬ್ಸಿಡಿ ಖರೀದಿಯಲ್ಲಿ ಹಸು ನೀಡಲಾಗುತ್ತಿದೆ. ವಿಮಾ ಸೌಲಭ್ಯ ಸೇರಿ ಮೇವು ಮತ್ತು ಪರಿಕರಗಳ ವಿತರಣೆಗೆ ರಿಯಾಯಿತಿ ಅವಕಾಶ ಇರುತ್ತದೆ. ಗ್ರಾಮದಲ್ಲಿ ಹಾಲು ಒಕ್ಕೂಟ ಕೇಂದ್ರಕ್ಕೆ ಸ್ವಂತ ಕಟ್ಟಡ ನಿರ್ಮಾಣ ಮಾಡಿಕೊಳ್ಳಲು ೯.೫ ಲಕ್ಷ ಅನುದಾನ ನೀಡಲಾಗುವುದು. ಇದನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.
ಗ್ರಾಮದ ಹಾಲು ಉತ್ಪಾದಕರ ಸಂಘದ ಅಮರೇಶಪ್ಪ, ಬಸಣ್ಣ, ಕೆ. ನರಸಿಂಹಮೂರ್ತಿ, ಉಪವ್ಯವಸ್ಥಾಪಕ ಪುಟ್ಟರಾಜು, ಡಾ.ಜೆ. ಅಶೋಕ್, ಸ್ವಾಮಿ ಆಂಜನೇಯ, ಫಾರ್ಮರ್ ಪ್ಯೂಸರ್ ಕಂಪನಿ ಅಧ್ಯಕ್ಷ ಎಂ. ಪಾಲಣ್ಣ ಇತರರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.