September 15, 2025
1747135550699.jpg



ಚಿತ್ರದುರ್ಗಮೇ.13:
ಭಾರತ-ಪಾಕಿಸ್ತಾನ ದೇಶಗಳ ನಡುವಿನ ಉದ್ವಿಗ್ನ ಸ್ಥಿತಿ ಈಗ ಶಮನಗೊಂಡಿದೆ. ಆದಾಗ್ಯೂ ಸಹ ಸರ್ಕಾರದ ಸೂಚನೆಯಂತೆ ತುರ್ತು ಸಂದರ್ಭಗಳಲ್ಲಿ ನಾಗರೀಕರನ್ನು ರಕ್ಷಣೆ ಮಾಡುವ ಕುರಿತು ನಾಗರೀಕ ಸುರಕ್ಷಾ ಅಣಕು ಪ್ರದರ್ಶವನ್ನು ಇದೇ ಮೇ.15 ರಂದು ಬೆಳಿಗ್ಗೆ 11 ಗಂಟೆಗೆ ಚಿತ್ರದುರ್ಗ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಾಗರೀಕ ರಕ್ಷಣಾ ಕಾರ್ಯ ಚಟುವಟಿಕೆಗಳ ಕುರಿತು ಪರಾಮರ್ಶಿಸಲು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ತುರ್ತು ಪರಿಸ್ಥಿತಿ ಮತ್ತು ಪ್ರಕೃತಿ ವಿಕೋಪಗಳಿಂದ ಉಂಟಾಗುವ ಸಂದರ್ಭವನ್ನು ಸಮರ್ಥವಾಗಿ ನಿಭಾಯಿಸಲು ಹಾಗೂ ಇಂತಹ ಸಂದರ್ಭಗಳಲ್ಲಿ ಕಡಿಮೆ ಸಮಯದಲ್ಲಿ, ತುರ್ತಾಗಿ ಸ್ಪಂದನೆ ದೊರಕುವಂತಾಗಲು ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವುದು ಅಗತ್ಯವಾಗಿರುತ್ತದೆ. ತುರ್ತು ಸಂದರ್ಭಗಳಲ್ಲಿ ಜನರು ಗಾಬರಿಯಾಗದೆ, ವಿವೇಚನೆಯಿಂದ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಅವರಲ್ಲಿ ಜಾಗೃತಿ ಮೂಡಿಸುವುದು ಈ ಅಣಕು ಪ್ರದರ್ಶನದ ಉದ್ದೇಶವಾಗಿದೆ. ವಿಕೋಪದಲ್ಲಿ ಸಿಲುಕಿದಾಗ ರಕ್ಷಣಾತ್ಮಕ ಕ್ರಮಗಳ ಜೊತೆಗೆ ಜೀವಹಾನಿಯನ್ನು ತಡೆಗಟ್ಟಲು ಸನ್ನದ್ಧವಾಗಿರಬೇಕಾಗುತ್ತದೆ. ರಕ್ಷಣಾತ್ಮಕ ಕ್ರಮಗಳು ಮತ್ತು ಕ್ಷಿಪ್ರ ಕಾರ್ಯಾಚರಣೆ ಕೈಗೊಳ್ಳುವ ನಿಟ್ಟಿನಲ್ಲಿ ತಂಡಗಳು ಸಿದ್ಧವಾಗಿರಬೇಕಾಗುತ್ತದೆ ಎಂದರು.
ಅಣಕು ಪ್ರದರ್ಶನ ಸಂದರ್ಭದಲ್ಲಿ ಕಲ್ಪಿತ ವಿಪತ್ತು ಸನ್ನಿವೇಶವನ್ನು ಸೃಷ್ಟಿಸಿ, ಅದಕ್ಕೆ ವಿವಿಧ ತಂಡಗಳು ಸ್ಪಂದಿಸುವ ಬಗೆ ಹಾಗೂ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಹಾಗೂ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಈ ಸಂದರ್ಭದಲ್ಲಿ ಸಂದೇಶ ಜನರಿಗೆ ಸಿಗುವಂತಾಗಬೇಕು. ಮೆಡಿಕಲ್ ಕಾಲೇಜು, ನರ್ಸಿಂಗ್, ಪದವಿ, ರೆಡ್‍ಕ್ರಾಸ್, ಸ್ವಯಂ ಸೇವಕರು, ಸಾರ್ವಜನಿಕರು ಹಾಗೂ ಪೊಲೀಸ್, ಗೃಹರಕ್ಷಕ ದಳ, ಜಿಲ್ಲಾ ಅಗ್ನಿಶಾಮಕ ದಳ, ಆರೋಗ್ಯ ಇಲಾಖೆ, ಬೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಾಗರೀಕ ಸುರಕ್ಷಾ ಅಣಕು ಪ್ರದರ್ಶವನ್ನು ವ್ಯವಸ್ಥಿತವಾಗಿ ಆಯೋಜನೆ ಮಾಡಿ, ಅಣಕು ಪ್ರದರ್ಶನ ನಡೆಸಿ, ಎಲ್ಲರಲ್ಲೂ ಅರಿವು ಮೂಡಿಸುವಂತೆ ತಿಳಿಸಿದರು.
ಅಣಕು ಕಾರ್ಯಾಚರಣೆ ಸಂದರ್ಭದಲ್ಲಿ ತುರ್ತು ಸಂದರ್ಭದಲ್ಲಿ ಸ್ಪಂದಿಸುವ ರೀತಿ, ಪ್ರಕ್ರಿಯೆ, ಸಾರ್ವಜನಿಕರ ಪ್ರತಿಕ್ರಿಯೆ, ಸಾರ್ವಜನಿಕರು ತಕ್ಷಣ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಜನರಿಗೆ ಜಾಗೃತಿ ಮೂಡಿಸಬೇಕು. ಇದರಿಂದ ಸಾರ್ವಜನಿಕರು ತುರ್ತು ಸ್ಥಿತಿಗಳಲ್ಲಿ ಯಾವ ರೀತಿಯ ಪ್ರತಿಕ್ರಿಯೆ ತೋರಬೇಕು ಎಂಬುದು ಗೊತ್ತಾಗಲಿದೆ. ಅಣಕು ಪ್ರದರ್ಶನ ಸಂದರ್ಭದಲ್ಲಿ ಎಲ್ಲ ಇಲಾಖಾ ಅಧಿಕಾರಿಗಳು, ಸಿಬ್ಬಂದಿಗಳು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ ಬಂಡಾರು ಅವರು ಮಾತನಾಡಿ, ಜಿಲ್ಲೆಯಲ್ಲಿ ವಿಪತ್ತು ನಿರ್ವಹಣೆ ನಿಟ್ಟಿನಲ್ಲಿ ಸರ್ಕಾರದ ಸೂಚನೆಯಂತೆ ಮೇ. 15 ರಂದು ಅಣಕು ಪ್ರದರ್ಶನವನ್ನು ವ್ಯವಸ್ಥಿತ ರೀತಿಯಲ್ಲಿ ಆಯೋಜನೆ ಮಾಡಲಾಗುವುದು. ಆರೋಗ್ಯ, ಬೆಸ್ಕಾಂ, ಅಗ್ನಿಶಾಮಕ ದಳ, ಗೃಹರಕ್ಷಕ ದಳ ಸೇರಿದಂತೆ ವಿವಿಧ ಇಲಾಖೆಗಳೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಿ, ಅಣಕು ಪ್ರದರ್ಶನ ಏರ್ಪಡಿಸುವ ಬಗ್ಗೆ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ತಿಮ್ಮಪ್ಪ, ಪೊಲೀಸ್ ಉಪಾಧೀಕ್ಷಕ ದಿನಕರ್, ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ಆನಂದ್, ಆಹಾರ ಇಲಾಖೆ ಜಂಟಿ ನಿರ್ದೇಶಕ ಮಧುಸೂದನ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ.ಕಾಳೇಸಿಂಘೆ, ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಸಿ.ಕೆ. ಸಂಧ್ಯಾ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

==========

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading