ಚಿತ್ರದುರ್ಗಏ.13:
ದುಶ್ಚಟಗಳಿಂದ ದೂರವಿದ್ದು, ಗುಣಮಟ್ಟದ ಆಹಾರ ಪದ್ಧತಿ ಅನುಸರಿಸಿ, ಜೀವನ ಶೈಲಿ ಬದಲಾವಣೆಯೊಂದಿಗೆ ಹವ್ಯಾಸ ಬದಲಾಯಿಸಿ ಅದೃಷ್ಟ ಬದಲಾಗುತ್ತದೆ ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಿ. ಮೂಗಪ್ಪ ಹೇಳಿದರು.
ನಗರದ ಸರ್ಕಾರಿ ಕಲಾ (ಸ್ವಾಯತ್ತ) ಕಾಲೇಜಿನಲ್ಲಿ ಈಚೆಗೆ ಆರೋಗ್ಯ ಇಲಾಖೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಎನ್‍ಎಸ್‍ಎಸ್ ಘಟಕ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಂತ್ರಜ್ಞಾನದ ಬೆಳವಣಿಗೆಗಳು ಜನರ ಜೀವಿತಾವಧಿಯನ್ನು ಹೆಚ್ಚಿಸುತ್ತಿವೆ. ಆರೋಗ್ಯಕ್ಕಾಗಿ ಒಟ್ಟಾಗಿ ವಿಜ್ಞಾನದೊಂದಿಗೆ ನಿಲ್ಲೋಣ, ರೋಗ ಮುಕ್ತ ಸಮಾಜ ನಿರ್ಮಿಸಲು ಶ್ರಮಿಸೋಣ, ಸ್ವಚ್ಛತೆಯಿಂದ ಆರೋಗ್ಯ ವೃದ್ಧಿ, ಸಾಂಕ್ರಾಮಿಕ ರೋಗಗಳು ಹಾಗೂ ಅಸಾಂಕ್ರಾಮಿಕ ರೋಗಗಳಾದ ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್ ಹಾವಳಿ ಹೆಚ್ಚಾಗದಂತೆ ಜೀವನ ಶೈಲಿ ಬದಲಾವಣೆ ಮಾಡಿಕೊಂಡು ಸದೃಢ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ದಾಪುಗಾಲು ಹಾಕಬೇಕು ಎಂದು ತಿಳಿಸಿದರು.
ರೋಗಗಳು ದೇವರ ಕಾಟ, ಪಾಪ ಪುಣ್ಯದ ಫಲವಲ್ಲ, ಉತ್ತಮ ಆರೋಗ್ಯ ಅಭ್ಯಾಸಗಳಿಂದ ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಿ ರೋಗಗಳು ಸುಳಿಯದಂತೆ ತಡೆಯಬಹುದು ಎಂದು ಕಿವಿಮಾತು ಹೇಳಿದರು.
ಸರ್ಕಾರಿ ಕಲಾ ಕಾಲೇಜು ಪ್ರಾಂಶುಪಾಲರಾದ ಪ್ರೊ. ತಾರಿಣಿ ಶುಭದಾಯಿನಿ ಮಾತನಾಡಿ, ಆರೋಗ್ಯವೇ ಮಹಾಭಾಗ್ಯ ಆರೋಗ್ಯ ಹೊಂದಿದ್ದರೆ ಏನೆಲ್ಲಾ ಸಾಧಿಸಬಹುದು. ಆರೋಗ್ಯ ಇಲಾಖೆ ಅಧಿಕಾರಿಗಳು ಮಾರ್ಗದರ್ಶನ ನೀಡಿದಂತೆ ನಾವುಗಳೆಲ್ಲರೂ ಪಾಲಿಸಿ ಆರೋಗ್ಯವಂತ ದೇಶ ನಿರ್ಮಾಣ ಮಾಡಲು ಪ್ರಯತ್ನಿಸೋಣ ಎಂದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಂಚಾಲಕ ಪ್ರದೀಪ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಎನ್‍ಎಸ್‍ಎಸ್ ಘಟಕದ ಅಧಿಕಾರಿ ಬಸವರಾಜ್ ಮಾತನಾಡಿ, ಕಾಲೇಜು ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಕಾರ್ಯಕ್ರಮವಾಗಿದ್ದು, ಕಾರ್ಯಕ್ರಮದ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಎನ್‍ಎಸ್‍ಎಸ್ ಘಟಕದ ಪ್ರಸಾದ್, ಉಪನ್ಯಾಸಕರಾದ ಡಾ.ಸೌಮ್ಯ, ಇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.