ಚಳ್ಳಕೆರೆ: ಸಾಮಾಜಿಕ ಸಮಸ್ಯೆಗಳು ಇಂದಿನ ಸಮಾಜವನ್ನು ರೋಗಗ್ರಸ್ತವಾಗಿಸುತ್ತಿದ್ದು, ದೇಶದ ಅಭಿವೃದ್ಧಿಗೆ ಅಡ್ಡಿಯಾಗುತ್ತಿರುವುದು ಗಮನಾರ್ಹ ಸಂಗತಿಯಾಗಿದೆ. ಇಂತಹ ಸಂದರ್ಭದಲ್ಲಿ ಸಮಾಜ ವಿಜ್ಞಾನ, ಅದರಲ್ಲೂ ಸಮಾಜಶಾಸ್ತ್ರ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸಂಶೋಧನಾ ವಿದ್ಯಾರ್ಥಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಸಮಾಜಶಾಸ್ತ್ರ ಸಹ ಪ್ರಾಧ್ಯಾಪಕ ಡಾ. ಸ.ರಾ. ಲೇಪಾಕ್ಷ ತಿಳಿಸಿದರು.


ಚಳ್ಳಕೆರೆ ನಗರದ ಹೆಚ್.ಪಿ.ಪಿ.ಸಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ಸ್ನಾತಕೋತ್ತರ ಹಾಗೂ ಸ್ನಾತಕ ಪದವಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಭೇಟಿಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕಾರಾಗೃಹಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಹಾಗೂ ಸನ್ನಿವೇಶಗಳನ್ನು ಅವಲೋಕನ ಮಾಡಿದರು.
ಭೇಟಿಯ ವೇಳೆ ಜಿಲ್ಲೆಯಲ್ಲಿ ಅತಿಹೆಚ್ಚು ಪೋಕ್ಸೊ ಪ್ರಕರಣಗಳಿಗೆ ಸಂಬಂಧಿಸಿದ ಆರೋಪಿಗಳನ್ನು ಕಾಣಲು ಸಾಧ್ಯವಾಯಿತು. ಜೊತೆಗೆ ಸಮಾಜದಲ್ಲಿ ಮಾದಕ ವಸ್ತುಗಳ ವ್ಯಸನಕ್ಕೆ ತುತ್ತಾಗುತ್ತಿರುವ ಯುವಕರು ಮತ್ತು ಯುವತಿಯರ ಸಂಖ್ಯೆ ಹೆಚ್ಚುತ್ತಿರುವುದು ಸಮಾಜಕ್ಕೆ ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ. ಇಂತಹ ಸಾಮಾಜಿಕ ಸಮಸ್ಯೆಗಳನ್ನು ಹತ್ತಿಕ್ಕಲು ಸಮಾಜಶಾಸ್ತ್ರ ವಿದ್ಯಾರ್ಥಿಗಳು ಮುನ್ನಡೆಯಬೇಕಾಗಿದೆ ಎಂದು ಡಾ. ಲೇಪಾಕ್ಷ ಅಭಿಪ್ರಾಯಪಟ್ಟರು.
ಕಾರಾಗೃಹದಲ್ಲಿನ ವ್ಯವಸ್ಥೆ ಕುರಿತು ಅಧೀಕ್ಷಕ ಸಿದ್ದರಾಮ ಪಾಟೀಲ್ ಹಾಗೂ ಜೈಲರ್ ರಾಜೇಂದ್ರ ಕೋಪರ್ಡ್ ಮತ್ತು ಸಿಬ್ಬಂದಿ ಸಂಪೂರ್ಣ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿದರು.
ಇದರ ಜೊತೆಗೆ ವಿದ್ಯಾರ್ಥಿಗಳು ರುಡ್‌ಸೆಟ್ ಸಂಸ್ಥೆಗೆ ಭೇಟಿ ನೀಡಿ ಯುವಕರಿಗೆ ಲಭ್ಯವಿರುವ ಉದ್ಯೋಗಾವಕಾಶಗಳು, ತರಬೇತಿ ಕಾರ್ಯಕ್ರಮಗಳು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಸೌಲಭ್ಯಗಳ ಕುರಿತು ತಿಳಿದುಕೊಂಡರು. ಸಂಸ್ಥೆಯ ತೋಟಪ್ಪ ಹಾಗೂ ಸಿಬ್ಬಂದಿ ಸ್ವಯಂ ಉದ್ಯೋಗ ಮತ್ತು ಬ್ಯಾಂಕ್ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸ್ನಾತಕೋತ್ತರ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಕೆ.ಸಿ. ಶರಣಪ್ಪ, ಸ್ನಾತಕ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ವಿ. ನಾಗರಾಜ್, ಡಾ. ಸಿ.ಎಂ. ಪ್ರಕಾಶ್, ಡಾ. ಚಿತ್ತಯ್ಯ ಸೇರಿದಂತೆ ಸಮಾಜಶಾಸ್ತ್ರ ವಿಭಾಗದ ಸ್ನಾತಕೋತ್ತರ ಹಾಗೂ ಸ್ನಾತಕ ವಿದ್ಯಾರ್ಥಿಗಳು ಹಾಜರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.