December 14, 2025
FB_IMG_1735046408407.jpg


ಚಿತ್ರದುರ್ಗ .ಮಾರ್ಚ್.13:
ಚಿತ್ರದುರ್ಗ ಜಿಲ್ಲೆಯಲ್ಲಿ ಅಧಿಕ ಉಷ್ಣಾಂಶ ದಾಖಲಾಗಿದೆ. ಹವಾಮಾನ ಇಲಾಖೆ ಹಾಗೂ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಜಿಲ್ಲೆಗೆ ಬಿಸಿಗಾಳಿ ಎಚ್ಚರಿಕೆ (ಹೀಟ್ ವೇವ್) ನೀಡಿದೆ. ಹೀಟ್ ವೇವ್ ಸ್ಟ್ರೋಕ್ (ಶಾಖದ ಅಲೆ) ನಿಂದಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಈ ಹಿನ್ನಲೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಾರ್ವಜನಿಕರ ಹಿತದೃಷ್ಟಿಯಿಂದ ಮನ್ನೆಚ್ಚರಿಕೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಹೀಟ್ ವೇವ್ ಸ್ಟ್ರೋಕ್ ತಪ್ಪಿಸಲು ಅನುಸರಿಸಬೇಕಾದ ಕ್ರಮಗಳು:
ಸಾರ್ವಜನಿಕರು ಹೀಟ್ ವೇವ್ ಕುರಿತು ಸದಾ ಎಚ್ಚರಿಕೆಯಿಂದ ಇರಬೇಕು. ರೇಡಿಯೋ,ಟಿವಿ,ದಿನ ಪತ್ರಿಕೆಗಳಲ್ಲಿ ಬರುವ ಮುನ್ಸೂಚನೆಗಳನ್ನು ತಿಳಿದುಕೊಂಡು ಅವುಗಳನ್ನು ಪಾಲಿಸಬೇಕು. ಬಾಯಾರಿಕೆಯಿಲ್ಲದಿದ್ದರೂ ಹೆಚ್ಚಾಗಿ ನೀರನ್ನು ಕುಡಿಯುಬೇಕು. ಹಗುರ, ತಿಳಿ-ಬಣ್ಣದ, ಸಡಿಲವಾದ ಮತ್ತು ರಂಧ್ರವುಳ್ಳ ಹತ್ತಿ ಬಟ್ಟೆಗಳನ್ನು ರಕ್ಷಣಾತ್ಮಕ ಕನ್ನಡಕಗಳು, ಛತ್ರಿ,ಟೋಪಿ, ಬೂಟುಗಳು ಅಥವಾ ಚಪ್ಪಲಿಗಳನ್ನು ಧರಿಸಿಬೇಕು. ರಾತ್ರಿ ವೇಳೆ ಬಸ್ಸಿನಲ್ಲಿ ದೂರದ ಪ್ರಯಾಣ ಉತ್ತಮ, ಒಂದು ವೇಳೆ ಹಗಲಿನಲ್ಲಿ ಪ್ರಯಾಣ ಮಾಡುವ ಸಂದರ್ಭ ಬಂದರೆ, ನಿಮ್ಮೊಂದಿಗೆ ನೀರನ್ನು ತೆಗೆದುಕೊಂಡು ಹೋಗಿ ಕುಡಿಯಬೇಕು. ಬಿಸಿನಲ್ಲಿ ಹೊರಗೆ ಕೆಲಸ ಮಾಡುವವರು, ಟೋಪಿ ಧರಿಸಬೇಕು. ತಲೆ, ಕುತ್ತಿಗೆ, ಮುಖ ಮತ್ತು ಕೈಕಾಲುಗಳ ಮೇಲೆ ಒದ್ದೆಯಾದ ಬಟ್ಟೆಯನ್ನು ಬಳಸಬೇಕು. ದೇಹವನ್ನು ತಂಪಾಗಿಡಲು ಮನೆಯಲ್ಲಿ ತಯಾರಿಸಿದ ಪಾನೀಯಗಳಾದ ಲಸ್ಸಿ, ಶರಬತ್, ನಿಂಬೆ ನೀರು, ಮಜ್ಜಿಗೆ ಇತ್ಯಾದಿಗಳನ್ನು ಸೇವನೆ ಮಾಡಬೇಕು. ಸಾಕು ಪ್ರಾಣಿ, ಪಕ್ಷಿಗಳನ್ನು ನೆರಳಿನಲ್ಲಿ ಇರಿಸಿ ಸಾಕಷ್ಟು ಕುಡಿಯಲು ಸಾಕಷ್ಟು ನೀರು ಕೊಡಬೇಕು. ಫ್ಯಾನ್ ಗಳನ್ನು ಬಳಸಿ, ತಣ್ಣೀರಿನಲ್ಲಿ ಸ್ನಾನ ಮಾಡಿ, ಒದ್ದೆಯಾದ ಬಟ್ಟೆಗಳನ್ನು ಬಳಸಬೇಕು. ತಂಪಾದ ಸಮಯ ಹಾಗೂ ಸ್ಥಳದಲ್ಲಿ ಕೆಲಸ ನಿರ್ವಹಿಸಬೇಕು. ಕೆಲಸ ನಿರ್ವಹಿಸುವ ಗರ್ಭಿಣಿ ಮಹಿಳೆಯರು ಮತ್ತು ಅನಾರೋಗ್ಯದಲ್ಲಿರುವ ಕಾರ್ಮಿಕರಿಗೆ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಬೇಕು. ಕಲ್ಲಂಗಡಿ, ಕರಬೂಜ, ಕಿತ್ತಳೆ, ದ್ರಾಕ್ಷಿ, ಅನಾನಸ್, ಸೌತೆಕಾಯಿ, ಎಳನೀರನ್ನು ಹೆಚ್ಚಾಗಿ ಸೇವಿಸಬೇಕು. ನವಜಾತ ಶಿಶುಗಳು ಹಾಗೂ ಚಿಕ್ಕ ಮಕ್ಕಳು, ಗರ್ಭಿಣಿಯರು, ಹೊರಾಂಗಣದಲ್ಲಿ ಕೆಲಸ ನಿರ್ವಹಿಸುವವರು, ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರು ಹಾಗೂ ಇತರ ಆರೋಗ್ಯ ಸಮಸ್ಯೆಗಳಿರುವವರು, ಅದರಲ್ಲೂ ವಿಶೇಷವಾಗಿ ಹೃದ್ರೋಗ ಹಾಗೂ ರಕ್ತದ ಒತ್ತಡದಿಂದ ಬಳಲುತ್ತಿರುವವರು ಹೆಚ್ಚು ಜಾಗರೂಕತೆ ವಹಿಸಬೇಕು.
ಇವುಗಳನ್ನು ಮಾಡಬೇಡಿ :
ಮಕ್ಕಳು ಅಥವಾ ಸಾಕುಪ್ರಾಣಿಗಳನ್ನು ಬಿಸಿಲಿನಲ್ಲಿ ನಿಲ್ಲಿಸಿದ ವಾಹನಗಳ ಹತ್ತಿರ ಬಿಡಬೇಡಿ. ವಾಹನಗಳ ಒಳಗಡೆ ತಾಪಮಾನವು ಹೆಚ್ಚಿ ಮಕ್ಕಳಿಗೆ ಅಪಾಯಕಾರಿಯಾಗಬಹುದು. ಕಪ್ಪುಬಟ್ಟೆ ಅಥವಾ ಬಿಗಿಯಾದ ಬಟ್ಟೆಗಳನ್ನು ಧರಿಸಬಾರದು. ಮಧ್ಯಾಹ್ನ 12 ರಿಂದ 3 ರವರೆಗೆ ಹೊರಗೆ ಕೆಲಸ ಹಾಗೂ ಶ್ರಮದಾಯಕ ಚಟುವಟಿಕೆಗಳನ್ನು ಮಾಡಬಾರದು. ಬಿಸಿಲಿನ ಸಮಯದಲ್ಲಿ ಅಡುಗೆ ಮಾಡಬಾರದು. ಅಡಿಗೆ ಮಾಡುವ ಸ್ಥಳದಲ್ಲಿ ಸಮರ್ಪಕವಾಗಿ ಗಾಳಿಯಾಡಲು ಬಾಗಿಲು ಮತ್ತು ಕಿಟಕಿಗಳನ್ನು ತೆರೆದಿಡಬೇಕು. ದೇಹವನ್ನು ನಿರ್ಜಲೀಕರಣಗೊಳಿಸುವ ಆಲ್ಕೋಹಾಲ್, ಚಹಾ, ಕಾಫಿ ಮತ್ತು ಹಾನಿಕಾರಕ ತಂಪು ಪಾನೀಯಗಳನ್ನು ಸೇವಿಸಬೇಡಿ. ಇವು ಹೊಟ್ಟೆ ನೋವನ್ನು ಉಂಟು ಮಾಡುತ್ತವೆ. ಹಾನಿಕಾರಕವಾದ ಆಹಾರ ಮತ್ತು ಹಳಸಿದ ಆಹಾರವನ್ನು ಸೇವಿಸಬೇಡಿ. ಚಪ್ಪಲಿ ಧರಿಸದೆ ಹೊರಗಡೆ ಹೋಗಬಾರದು. ಜಿಲ್ಲಾ ವಿಪತ್ತು ನಿರ್ವಹಣೆ ಪ್ರಾಧಿಕಾರ ನೀಡಿರುವ ಈ ಸೂಚನೆಗಳನ್ನು ತಪ್ಪದೇ ಪಾಲಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸಾರ್ವಜನಿಕರಲ್ಲಿ ಕೋರಿದ್ದಾರೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading