ಚಿತ್ರದುರ್ಗಮಾ.13:
ದೇಹದ ಪ್ರಮುಖ ಅಂಗಗಳಲ್ಲಿ ಮೂತ್ರಪಿಂಡ (ಕಿಡ್ನಿ) ಮಹತ್ವದಾಗಿದೆ. ಹಾಗಾಗಿ ಮೂತ್ರಪಿಂಡದ ಕಾರ್ಯಕ್ಷಮತೆ ಕುಸಿಯದಂತೆ ಮೂತ್ರಪಿಂಡದ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಹೇಳಿದರು.
ಇಲ್ಲಿನ ಚಳ್ಳಕೆರೆ ರಸ್ತೆಯಲ್ಲಿರುವ ಪದ್ಮಾವತಿ ನರ್ಸಿಂಗ್ ಕಾಲೇಜಿನಲ್ಲಿ ಗುರುವಾರ ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಕಿಡ್ನಿ ದಿನದ ಅಂಗವಾಗಿ ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿ ವರ್ಷ ಮಾರ್ಚ್ 13ರಂದು ವಿಶ್ವ ಮೂತ್ರಪಿಂಡ ದಿನ ಎಂದು ಆಚರಿಸಲಾಗುತ್ತಿದೆ. ಈ ವರ್ಷದ ಘೋಷವಾಕ್ಯ “ನಿಮ್ಮ ಮೂತ್ರಪಿಂಡಗಳು ಸರಿಯಾಗಿವೆಯೇ? ಮೊದಲೇ ಪತ್ತೆ ಮಾಡಿ, ಮೂತ್ರಪಿಂಡದ ಆರೋಗ್ಯವನ್ನು ರಕ್ಷಿಸಿ.” ಎಂದಾಗಿದೆ. ಇದು ಮೂತ್ರಪಿಂಡದ ಆರೋಗ್ಯ, ತಡೆಗಟ್ಟುವಿಕೆ ಮತ್ತು ಆರೈಕೆಗೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುತ್ತದೆ ಎಂದು ಹೇಳಿದರು.
ಜಾಗತಿಕ ಜನಸಂಖ್ಯೆಯನ್ನು ಬಾಧಿಸುವ ಅತ್ಯಂತ ಸಾಮಾನ್ಯವಾದ ಗಂಭೀರ ಕಾಯಿಲೆಗಳಲ್ಲಿ ಮೂತ್ರಪಿಂಡದ ಕಾಯಿಲೆಗಳು ಮಹತ್ವದ ಪಾತ್ರ ವಹಿಸುತ್ತವೆ. 1960 ರಿಂದ ವಿಶ್ವಾದ್ಯಂತ ಮೂತ್ರಪಿಂಡದ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುವ ಅಂತರರಾಷ್ಟ್ರೀಯ ಸಂಘವಾದ ಇಂಟನ್ರ್ಯಾಷನಲ್ ಸೊಸೈಟಿ ಆಫ್ ನೆಫ್ರಾಲಜಿ, ಮೂತ್ರಪಿಂಡದ ಕಾಯಿಲೆಯು ಜಾಗತಿಕ ಜನಸಂಖ್ಯೆಯ ಶೇ.10ರಷ್ಟು ಜನರ ಮೇಲೆ ಪರಿಣಾಮ ಬೀರಿದೆ ಎಂದು ಹೇಳುತ್ತದೆ. ಮುಂಬರುವ ವರ್ಷಗಳಲ್ಲಿ ಮೂತ್ರಪಿಂಡದ ಕಾಯಿಲೆಗಳು ಸಾವಿಗೆ 5ನೇ ಪ್ರಮುಖ ಕಾರಣವಾಗಲಿದೆ ಎಂದು ಜಾಗತಿಕ ಸಂಸ್ಥೆ ಬಹಿರಂಗಪಡಿಸಿದೆ ಎಂದು ಹೇಳಿದರು.
ವಿಶ್ವ ಮೂತ್ರಪಿಂಡ ದಿನವು ಮೂತ್ರಪಿಂಡದ ಆರೋಗ್ಯದ ಮಹತ್ವದ ಮೇಲೆ ಕೇಂದ್ರೀಕರಿಸಿದ ಅಂತರರಾಷ್ಟ್ರೀಯ ಉಪಕ್ರಮವಾಗಿದೆ. ಇದು ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಮತ್ತು ಮೂತ್ರಪಿಂಡ ವೈಫಲ್ಯ, ಡಯಾಲಿಸಿಸ್ ಮತ್ತು ಮೂತ್ರಪಿಂಡ ಕಸಿ ಸೇರಿದಂತೆ ಇತರ ಮೂತ್ರಪಿಂಡ ಸಂಬಂಧಿತ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ ಎಂದು ತಿಳಿಸಿದ ಅವರು, ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆ ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ ಹಿಮೋ ಡಯಾಲಿಸಿಸ್ ಸೌಲಭ್ಯವನ್ನು ನೆಪ್ರೋ ಪ್ಲಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ಸೇವೆಯನ್ನು ಒದಗಿಸಲಾಗುತ್ತಿದೆ. ಇದುವರೆಗೂ ಜಿಲ್ಲೆಯಲ್ಲಿ 258 ಪ್ರಕರಣಗಳು ಈ ಸೇವೆಯವನ್ನು ಪಡೆಯುತ್ತಿದ್ದಾರೆ ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, ಪ್ರಾಥಮಿಕ ಆರೋಗ್ಯ ಸೌಲಭ್ಯಗಳನ್ನು ಅಗತ್ಯ ರೋಗನಿರ್ಣಯ ಸಾಧನಗಳೊಂದಿಗೆ ಸಜ್ಜುಗೊಳಿಸಿ. ಸಾರ್ವತ್ರಿಕ ಆರೋಗ್ಯ ವ್ಯಾಪ್ತಿಯಲ್ಲಿ ಮೂತ್ರಪಿಂಡ ರೋಗ ತಡೆಗಟ್ಟುವಿಕೆ ಮತ್ತು ನಿರ್ವಹಣೆ ಸೇರಿಸಿ. ಆರೋಗ್ಯ ಸೇವೆ ಒದಗಿಸುವವರಿಗೆ ತರಬೇತಿ ಅವಕಾಶಗಳನ್ನು ಹೆಚ್ಚಿಸುವುದು. ಆರೋಗ್ಯ ರಕ್ಷಣಾ ಮೂಲಸೌಕರ್ಯವನ್ನು ಸುಧಾರಿಸಲು ಮತ್ತು ಮೂತ್ರಪಿಂಡದ ಆರೋಗ್ಯವನ್ನು ಬೆಂಬಲಿಸಲು ಇವು ಪರಿಣಾಮಕಾರಿ ಕ್ರಮಗಳಾಗಿವೆ ಎಂದು ಹೇಳಿದರು.
ಮೂತ್ರಪಿಂಡದ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ, ಸಂಭಾವ್ಯ ವೈದ್ಯಕೀಯ ವೆಚ್ಚಗಳಿಗಾಗಿ ನಿಮ್ಮ ಆರೋಗ್ಯ ಬಜೆಟ್ ಅನ್ನು ಯೋಜಿಸುವುದು ಮುಖ್ಯವಾಗಿದೆ. ಇದನ್ನು ಮಾಡಲು ಒಂದು ಪರಿಣಾಮಕಾರಿ ಮಾರ್ಗವೆಂದರೆ ಆರೋಗ್ಯ ವಿಮಾ ಯೋಜನೆಯನ್ನು ಖರೀದಿಸುವುದು ಜೀವನ ಸಾರ್ಥಕತೆ ಡಾಟ್ ಕಾಮ್ ಅಂತರ್ಜಾಲದ ಮೂಲಕ ನೇರವಾಗಿ ಅಂಗಾಂಗ ದಾನ ಮಾಡಬಹುದಾಗಿದೆ, ಪ್ರತಿಯೊಬ್ಬ ಮನುಷ್ಯನಿಗೂ ಎರಡು ಮೂತ್ರಪಿಂಡಗಳಿರುತ್ತವೆ. ಅವಶ್ಯವಿರುವ ಸಂಬಂಧಿಗಳಿಗೆ ಅಥವಾ ಮೂತ್ರ ಪಿಂಡ ವೈಫಲ್ಯತೆ ಇರುವವರಿಗೆ ತಾವು ದಾನ ಮಾಡಬಹುದಾಗಿದೆ ಎಂದರು,.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀನಿವಾಸ್ ಮತ್ತು ಆಶಾ ಬೋಧಕಿ ತಬಿತ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಗಂಗಾ, ವೆಂಕಟೇಶ್, ವಿಜಯ್ ಕುಮಾರ್ ಸೇರಿದಂತೆ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದರು.




About The Author
Discover more from JANADHWANI NEWS
Subscribe to get the latest posts sent to your email.