February 13, 2026
FB_IMG_1770996461846.jpg

ಹಿರಿಯೂರು :
ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಕಳೆದ 2 ಪೂರ್ವಸಿದ್ಧತಾ ಪರೀಕ್ಷೆಗಳಲ್ಲಿ ಪಡೆದ ಅಂಕಗಳನ್ನು ಆಧರಿಸಿ, ಕಡಿಮೆ ಅಂಕ ಪಡೆದಿರುವ ಶಾಲೆಗಳ ಮುಖ್ಯ ಶಿಕ್ಷಕರು ವಿದ್ಯಾರ್ಥಿಗಳ ಫಲಿತಾಂಶವನ್ನು ಸುಧಾರಿಸುವ ನಿಟ್ಟಿನಲ್ಲಿ ತರಗತಿಗಳಲ್ಲಿ ವಿದ್ಯಾರ್ಥಿಗಳು ಕನಿಷ್ಠ 40 ಅಂಕಗಳನ್ನು ಪಡೆಯಲು ನೀಡಲಾದ ಕಾರ್ಯಗಾರದ ಅಂಶಗಳನ್ನು ತರಗತಿ ಕೋಣೆಯಲ್ಲಿ ಅನುಷ್ಠಾನಕ್ಕೆ ತರಬೇಕು ಎಂಬುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ.ಎಂ.ತಿಪ್ಪೇಸ್ವಾಮಿ ಹೇಳಿದರು.

ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಿರಿಯೂರು ವಿಧಾನಸಭಾ ಕ್ಷೇತ್ರದ ಶಿಕ್ಷಣ ಸುಧಾರಣಾ ಸಮಿತಿಯ ಅಧ್ಯಕ್ಷರಾದ ಅಮೃತೇಶ್ವರಸ್ವಾಮಿರವರ ಅಧ್ಯಕ್ಷತೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಸುಧಾರಣೆಯ ಸಂಬಂಧ ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ನಡೆಸಲಾದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಶಾಲೆಗಳಲ್ಲಿ ಶಿಕ್ಷಕರು ಫಲಿತಾಂಶ ಸುಧಾರಣೆಗಾಗಿ ವಿಶೇಷ ತರಗತಿಗಳ ನಿರ್ವಹಣೆ, ವಿಷಯವಾರು ಪುನರಾವರ್ತನೆ ತರಗತಿಗಳು, ವಿದ್ಯಾರ್ಥಿಗಳ ಪರೀಕ್ಷೆ ಭಯ ನಿವಾರಣೆ ಮಾಡಲು ಆಪ್ತಸಮಾಲೋಚನೆ ಕಾರ್ಯಕ್ರಮ, ವಿಷಯವಾರು ಪ್ರಶ್ನೆಪತ್ರಿಕೆಗಳ ವಿಶ್ಲೇಷಣೆ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ತರಗತಿಗಳ ವ್ಯವಸ್ಥೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂಬುದಾಗಿ ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಸುಧಾರಣಾ ಸಮಿತಿಯ ಅಧ್ಯಕ್ಷರಾದ ಅಮೃತೇಶ್ವರಸ್ವಾಮಿಯವರು ಮಾತನಾಡಿ, ಶಿಕ್ಷಣ ಸುಧಾರಣಾ ಸಮಿತಿ ವತಿಯಿಂದ ತಾಲ್ಲೂಕಿನ ಎಲ್ಲಾ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರ ವ್ಯಾಟ್ಸಾಪ್ ಗ್ರೂಪ್ ರಚನೆ ಮಾಡಲಾಗುವುದು ಎಂದರಲ್ಲದೆ, ಇದರಲ್ಲಿ ಫಲಿತಾಂಶ ಸುಧಾರಣೆಗೆ ಅಗತ್ಯ ಅಂಶಗಳನ್ನು ಮುಖ್ಯ ಶಿಕ್ಷಕರ ಜೊತೆ ಹಂಚಿಕೊಳ್ಳಲಾಗುವುದು ಎಂದರು,
ತಾಲ್ಲೂಕಿನ ಹರಿಯಬ್ಬೆ ಶಾಲೆಯಲ್ಲಿ 48 ವಿದ್ಯಾರ್ಥಿಗಳಿಗೆ ರಾತ್ರಿ ಶಾಲೆಗಳನ್ನು ನಡೆಸಲಾಗುತ್ತಿದ್ದು, ಸತತ ಪರಿಶ್ರಮದಿಂದ ಮಾತ್ರ ಉತ್ತಮ ಫಲಿತಾಂಶ ಸಿಗುತ್ತದೆ, ಅದರಂತೆ ನಮ್ಮ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲು ತಾಲ್ಲೂಕಿನ ಎಲ್ಲಾ ಶಾಲೆಗಳ ಶಿಕ್ಷಕರು ಸೇರಿ ಶಕ್ತಿಮೀರಿ ಶ್ರಮಿಸುವ ಮೂಲಕ ಉತ್ತಮ ಫಲಿತಾಂಶ ತರಲು ಮುಂದಾಗಬೇಕು ಎಂಬುದಾಗಿ ಕರೆ ನೀಡಿದರು.
ಸರ್ಕಾರಿ ವಸತಿ ಶಾಲೆಗಳ ಫಲಿತಾಂಶ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಹಾಸ್ಟೆಲ್ ಗಳ ಮಕ್ಕಳಿಗೆ ವಿಶೇಷ ಶಿಕ್ಷಕರನ್ನು ನೇಮಕ ಮಾಡುವ ಮೂಲಕ ಬೋಧನಾಕಾರ್ಯ ನಡೆಸಲಾಗುತ್ತಿದ್ದು, ವಿಶೇಷ ತರಗತಿಗಳ ವೇಳಾಪಟ್ಟಿ ತಯಾರಿಸಿ, ಬೋಧಿಸುವ ಕ್ರಮ ವಹಿಸಲಾಗಿದೆ ಎಂಬುದಾಗಿ ಬಿಸಿಎಂ ಇಲಾಖೆ ಮಾಹಿತಿ ನೀಡಿದೆ ಎಂದರಲ್ಲದೆ,
ಈ ಎಲ್ಲಾ ವಸತಿ ಶಾಲೆಗಳಿಗೆ ಶಿಕ್ಷಣ ಸುಧಾರಣಾ ಸಮಿತಿ ಸದಸ್ಯರು ಯಾವ ಸಂದರ್ಭದಲ್ಲಿ ಬೇಕಾದರೂ ಅನಿರೀಕ್ಷಿತ ಭೇಟಿ ನೀಡಿ, ಪರಿಶೀಲಿಸಬಹುದಾಗಿದ್ದು, ಈ ಬಗ್ಗೆ ವಸತಿ ನಿಲಯಗಳ ಮುಖ್ಯಸ್ಥರು ಆ ಸಂದರ್ಭದಲ್ಲಿ ಹಾಜರಿದ್ದು, ತಾವು ಕೈಗೊಂಡಿರುವ ಕ್ರಮಗಳ ಬಗ್ಗೆ ಶಿಕ್ಷಣ ಸುಧಾರಣಾ ಸಮಿತಿಗೆ ಅಗತ್ಯ ಮಾಹಿತಿ ನೀಡಬೇಕು ಎಂಬುದಾಗಿ ತಿಳಿಸಿದರು.
ಶಿಕ್ಷಣ ಸುಧಾರಣಾ ಸಮಿತಿ ಸದಸ್ಯರಾದ ನಾಗೇಂದ್ರನಾಯ್ಕ ಮಾತನಾಡಿ, ತಾಲ್ಲೂಕಿನಲ್ಲಿ ಶೇ.100ರಷ್ಟು ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗೆ ನಮ್ಮೆಲ್ಲರ ಸಹಕಾರ ಇದೆ, ಯಾವುದೇ ಸಮಸ್ಯೆಯಿದ್ದರೂ ಮುಕ್ತವಾಗಿ ಚರ್ಚಿಸಿ, ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂಬುದಾಗಿ ಹೇಳಿದರು.
ಶಿಕ್ಷಣ ಸುಧಾರಣಾ ಸಮಿತಿ ಸದಸ್ಯರಾದ ಅಂಜಿನಪ್ಪ ಮಾತನಾಡಿ, ಪೋಷಕರ ಸಮಸ್ಯೆಯ ಬಗ್ಗೆ ಸಭೆಯಲ್ಲಿ ಚರ್ಚಿಸಿ, ಯಾವುದೇ ಸಮಸ್ಯೆಗಳಿದ್ದರೆ ಪೋಷಕರು ಸಮಿತಿ ಸದಸ್ಯರನ್ನು ಸಂಪರ್ಕಿಸಬಹುದಾಗಿದ್ದು, ಸರ್ಕಾರಿ ಶಾಲೆಗಳ ಗುಣಮಟ್ಟ ಉತ್ತಮವಾಗಿಸುವ ನಿಟ್ಟಿನಲ್ಲಿ ಮಕ್ಕಳ ವಿಶೇಷ ಪ್ರತಿಭೆಗಳನ್ನು ಗುರುತಿಸುವ ಕಾರ್ಯ ಮಾಡಬೇಕು ಎಂಬುದಾಗಿ ಹೇಳಿದರು.
ಈ ಸಭೆಯಲ್ಲಿ ಡಯಟ್ ಉಪನ್ಯಾಸಕರಾದ ಪ್ರಸಾದ್, ಇಸಿಓ ನಾಗರಾಜ್, ಬಿ.ಆರ್.ಪಿ ಶ್ರೀನಿವಾಸ್, ಶಿಕ್ಷಣ ಸುಧಾರಣಾ ಸಮಿತಿ ಸದಸ್ಯರಾದ ನಾಗೇಂದ್ರನಾಯ್ಕ, ಅಂಜಿನಪ್ಪ, ನಹೀಂ, ಸೇರಿದಂತೆ ತಾಲ್ಲೂಕಿನ ವಿವಿಧ ಶಾಲೆಗಳ ಮುಖ್ಯಶಿಕ್ಷಕರುಗಳು, ವಸತಿ ನಿಲಯಗಳ ನಿಲಯಪಾಲಕರು, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಮುಖ್ಯಶಿಕ್ಷಕರುಗಳು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading