ಚಳ್ಳಕೆರೆ: ಭಾರತದ ಸಂಸ್ಕೃತಿ ವಿಶ್ವಕ್ಕೆ ಮಾದರಿಯಾಗಿದ್ದು, ಈ ದೇಶದ ಆಧ್ಯಾತ್ಮಿಕ ಚಿಂತನೆಗಳೇ ಇಂದು ಭಾರತವನ್ನು ಸಾಂಸ್ಕೃತಿಕ ರಾಯಭಾರಿಯಾಗಿ ರೂಪಿಸಿವೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ವಿಮಲಾ ಅಕ್ಕ ತಿಳಿಸಿದರು.
ನಗರದ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ದೇಶದ ಧಾರ್ಮಿಕ ಪರಂಪರೆಯನ್ನು ಸಂರಕ್ಷಿಸುವಲ್ಲಿ ಹಬ್ಬ–ಹರಿದಿನ ಹಾಗೂ ವ್ರತಾಚರಣೆಗಳ ಪಾತ್ರ ಮಹತ್ವದ್ದಾಗಿದೆ ಎಂದರು. ವರ್ಷದ ಆರಂಭದಲ್ಲಿ ಯುಗಾದಿ ಉನ್ನತ ಆದರ್ಶಮಯ ಜೀವನದ ಸಂದೇಶ ಸಾರಿದರೆ, ಮಹಾಶಿವರಾತ್ರಿ ಶಿವಭಕ್ತಿಯ ಶ್ರೇಷ್ಠ ಹಬ್ಬವಾಗಿದೆ ಎಂದು ಹೇಳಿದರು.
ಈ ವರ್ಷ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ 90ನೇ ಶಿವ ಜಯಂತಿ ಆಚರಣೆ ನಡೆಯುತ್ತಿದ್ದು, 140ಕ್ಕೂ ಹೆಚ್ಚು ರಾಷ್ಟ್ರಗಳ 9,000ಕ್ಕೂ ಅಧಿಕ ಈಶ್ವರಿಯ ಕೇಂದ್ರಗಳಲ್ಲಿ ಶಿವಧ್ವಜಾರೋಹಣದ ಮೂಲಕ ಶಿವ ಜಯಂತಿ ಆಚರಿಸಲಾಗುತ್ತಿದೆ ಎಂದು ವಿವರಿಸಿದರು.
ಮಹಾಶಿವರಾತ್ರಿ ಅಂಗವಾಗಿ ಚಳ್ಳಕೆರೆ ನಗರದಲ್ಲಿ ಪ್ರಥಮ ಬಾರಿಗೆ 45 ಅಡಿ ಎತ್ತರದ ಬೃಹತ್ ಬಲೂನ್ ಶಿವಲಿಂಗದ ದರ್ಶನ ವ್ಯವಸ್ಥೆ ಮಾಡಲಾಗಿದೆ. ಈ ವಿಶೇಷ ಕಾರ್ಯಕ್ರಮವನ್ನು ನಗರದ ಬಿಸಿನೀರು ಮುದ್ದಪ್ಪ ಪ್ರೌಢಶಾಲಾ ಆವರಣದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದು, ಪ್ರತಿದಿನ ಸಂಜೆ 6ರಿಂದ 9ರವರೆಗೆ ಭಕ್ತರಿಗೆ ದರ್ಶನ ಸಿಗಲಿದೆ.
ಕಾರ್ಯಕ್ರಮಗಳ ವಿವರ
ಫೆ. 14 ಸಂಜೆ 6.00: ಉದ್ಘಾಟನಾ ಮಹೋತ್ಸವ, ಕಾರ್ಮಿಕರ ಗೌರವೋತ್ಸವ – “ಕಾಯಕವೇ ಕೈಲಾಸ” ಕಾರ್ಯಕ್ರಮ
ಫೆ. 15 ಸಂಜೆ 6.00: ಶಿವರಾತ್ರಿ ಮಹೋತ್ಸವ, ಸಾಂಸ್ಕೃತಿಕ ಉತ್ಸವ, ವಿಶೇಷ ನಾಟಕ ಪ್ರದರ್ಶನ
ಫೆ. 16 ಸಂಜೆ 6.00: ಶಿವರಾತ್ರಿ ಮಹೋತ್ಸವ ಗೌರವಾರ್ಪಣೆ ಉತ್ಸವ – “ನಿಸ್ವಾರ್ಥ ಸೇವೆಯಿಂದಲೇ ಆಶೀರ್ವಾದಗಳ ಪ್ರಾಪ್ತಿ” ಕಾರ್ಯಕ್ರಮ
ಫೆ. 18ರಿಂದ 22ರವರೆಗೆ: ರಾಜಯೋಗ ಶಿಬಿರ – ಬೆಳಗ್ಗೆ ಹಾಗೂ ಸಂಜೆ 7ರಿಂದ 8ರವರೆಗೆ
ಕಾರ್ಯಕ್ರಮಗಳಲ್ಲಿ ರಾಜ್ಯ ಮನರೇಗಾ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಉಪಾಧ್ಯಕ್ಷ ಎಂ. ಶೇಖರಪ್ಪ, ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಶಿವರುದ್ರಪ್ಪ, ಎಂ.ಎಚ್. ಸ್ವಾಮಿ, ಪ್ರಸನ್ನಕುಮಾರ್, ನಾಗರಾಜ್, ತಿಪ್ಪೇಸ್ವಾಮಿ, ದಿವಾಕರ್, ಶಶಿಧರ್, ಪೋಸ್ಟ್ ಮಾಸ್ಟರ್ ಗೀತಾ ಗುಂಡಾರ್ಪಿ, ವೆಂಕಟೇಶ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸುಮಾ ಅಕ್ಕ, ಲಲಿತ ಅಕ್ಕ, ಸ್ವಪ್ನ ಅಕ್ಕ, ವಿಜಯಮ್ಮ ಅಕ್ಕ ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.