ಚಳ್ಳಕೆರೆ: ತಾಲೂಕಿನ ಪರಶುರಾಂಪುರ ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿ ಮಾಡಬೇಕು ಎಂದು ಒತ್ತಾಯಿಸಿ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಹಸಿರು ಶಾಲನ್ನು ಧರಿಸಿರುವುದನ್ನು ತಾಲೂಕಿನ ಬಿಜೆಪಿ ಮುಖಂಡರು ಖಂಡಿಸಿದ್ದರು ಈ ಆರೋಪಕ್ಕೆ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ನಾನು ಮೂಲತಃ ರೈತನಾಗಿದ್ದು ರೈತಪರ ಚಳುವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುತ್ತೇನೆ ಆದರೆ ಬಿಜೆಪಿ ಮುಖಂಡರು ನನ್ನನ್ನು ಕಾಂಗ್ರೆಸ್ ಪಕ್ಷದ ಮುಖಂಡನೆಂದು ಗುರುತಿಸಿ ಆರೋಪ ಮಾಡಿರುವುದು ಸಮಂಜಸವಲ್ಲ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರಬಹುದು ಆದರೂ ನಾನು ಪರಶುರಾಂಪುರ ತಾಲೂಕು ಹೋರಾಟದಲ್ಲಿ ಈ ಹಿಂದಿನಿಂದಲೂ ಯಾವುದೇ ಪಕ್ಷಗಳು ಅಧಿಕಾರದಲ್ಲಿದ್ದರೂ ಅನೇಕ ಚಳುವಳಿಗಳಲ್ಲಿ ಭಾಗವಹಿಸಿದ್ದೇನೆ ಹಾಗೂ ಚಿತ್ರದುರ್ಗ ಜಿಲ್ಲೆಯವರೆಗೂ ಪಾದಯಾತ್ರೆಯನ್ನು ಮಾಡಿ ಉಪವಾಸ ಸತ್ಯಾಗ್ರಹವನ್ನು ಸಹ ಮಾಡಿದ್ದೇನೆ. ಪರಶುರಾಂಪುರ ತಾಲೂಕು ರಚನೆಗೆ ಬಿಜೆಪಿ ಪಕ್ಷದ ಮುಖಂಡರು ಹೋರಾಟ ಮಾಡಬೇಕು ಆದರೆ ನಾನು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು ಪಕ್ಷ ಇಂದು ಅಧಿಕಾರದಲ್ಲಿದೆ ಆದರೂ ನಾನು ರೈತರ ಪರವಾಗಿ ಹೋರಾಟ ನಡೆಸಿದ್ದೇನೆ ಒಬ್ಬ ಆಡಳಿತ ಪಕ್ಷದ ಕಾರ್ಯಕರ್ತನಾಗಿ ನಾನು ಹೋರಾಟ ಮಾಡುತ್ತಿದ್ದೇನೆ ಎಂದರೆ ನನ್ನಲ್ಲಿರುವ ಕಿಚ್ಚು ಎಂತಹದ್ದು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಬಿಜೆಪಿ ಪಕ್ಷದ ಮುಖಂಡರು ರಾಜಕೀಯದ ದುರುದ್ದೇಶಕ್ಕೆ ಆರೋಪ ಮಾಡುವುದನ್ನು ಬಿಟ್ಟು ಪರಶುರಾಂಪುರ ತಾಲೂಕು ರಚನೆಗೆ ಪ್ರಾಮಾಣಿಕವಾಗಿ ಹೋರಾಟ ಮಾಡಲಿ ಆಗ ಅಖಂಡ ಕರ್ನಾಟಕ ರಾಜ್ಯ ರೈತ ಸಂಘವು ಬೆಂಬಲವನ್ನು ಸೂಚಿಸಲಿದೆ ಪರಶುರಾಂಪುರ ತಾಲೂಕು ಹೋರಾಟಕ್ಕೆ ಅನೇಕ ಬಲಿದಾನಗಳಿದ್ದು ಸರ್ಕಾರದ ಮೇಲೆ ಒತ್ತಡ ಏರಲು ಹೋರಾಟಗಳನ್ನು ಮಾಡಲಾಗುತ್ತಿದೆ ಇದನ್ನು ರಾಜಕೀಯವಾಗಿ ಬಳಸಿಕೊಳ್ಳದೆ ಜನರ ಹಿತಕ್ಕಾಗಿ ಬಳಸಿಕೊಳ್ಳಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರಾದ ವೆಂಕಟರಮಣಪ್ಪ ಮಹಾಂತೇಶ್ ರುದ್ರಪ್ಪ ಕೃಷ್ಣಪ್ಪ ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.