ಚಿತ್ರದುರ್ಗ ಜ.12:
ಸರ್ಕಾರದ ಸುತ್ತೋಲೆಯನ್ವಯ ರಾಜ್ಯ ಸರ್ಕಾರಿ ಅಧಿಕಾರಿ, ಸಿಬ್ಬಂದಿಗಳ ಕುರಿತು ಅನಾಮಧೇಯ ಹಾಗೂ ಆರೋಪಕ್ಕೆ ಪೂರಕವಾಗಿರುವ ದಾಖಲೆಗಳನ್ನು ಸಲ್ಲಿಸದ ದೂರುಗಳನ್ನು ಆಧರಿಸಿ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ತನಿಖೆ ಸೇರಿದಂತೆ ಯಾವುದೇ ಕ್ರಮ ಕೈಗೊಳ್ಳದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಜಂಟಿ ಸಮಾಲೋಚನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವೈಯಕ್ತಿಕ ದ್ವೇಷ, ಅಸೂಯೆ ಅಥವಾ ಪೂರ್ವಾಗ್ರಹ ಪೀಡಿತರಾಗಿ ಸರ್ಕಾರಿ ನೌಕರರ ವಿರುದ್ಧ ಮಾಡುವ ಆರೋಪಗಳು, ದೂರು ಅರ್ಜಿಗಳಿಗೆ, ಪೂರಕವಾದ ಮಾಹಿತಿ ಅಥವಾ ದಾಖಲೆಗಳನ್ನು ಸಲ್ಲಿಸದ ಅರ್ಜಿಗಳನ್ನು ಆಧರಿಸಿ, ನೌಕರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ. ಅಲ್ಲದೆ ಅನಾಮಧೇಯ ದೂರುಗಳನ್ನು ಪರಿಗಣಿಸಿ, ತನಿಖೆ ಅಥವಾ ಕ್ರಮಗಳನ್ನು ಕೈಗೊಳ್ಳದಂತೆಯೂ ಸರ್ಕಾರ ಈಗಾಗಲೆ ಸುತ್ತೋಲೆ ಹೊರಡಿಸಿದೆ. ಆದರೆ ಜಿಲ್ಲೆಯಲ್ಲಿ ಕೆಲವು ಅಧಿಕಾರಿಗಳು, ಆಧಾರ ರಹಿತ ಮತ್ತು ಅನಾಮಧೇಯ ದೂರು ಪತ್ರಗಳನ್ನು ಆಧರಿಸಿ, ನೌಕರರ ವಿರುದ್ಧ ನೇರವಾಗಿ ತನಿಖೆಗೆ ಒಳಪಡಿಸುತ್ತಿರುವುದು ಕಂಡುಬಂದಿದೆ. ಇದು ಸರ್ಕಾರಿ ನೌಕರರು ನಿಭೀರಾಗಿ, ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಲು ತೊಂದರೆಯಾಗುತ್ತಿದ್ದು, ಇಂತಹ ಕ್ರಮಗಳು ಸರ್ಕಾರಿ ನೌಕರರ ಆತ್ಮಸ್ಥೈರ್ಯ ಕುಸಿಯುವಂತೆ ಮಾಡುತ್ತಿದೆ. ನೌಕರರ ವಿರುದ್ಧ ಯಾವುದೇ ದೂರು ಸಲ್ಲಿಕೆಯಾದಾಗ, ದೂರುದಾರರ ಹೆಸರು, ವಿಳಾಸ ಖಚಿತಪಡಿಸಿಕೊಂಡು, ದೂರುದಾರರು ಆರೋಪಕ್ಕೆ ಪೂರಕ ದಾಖಲೆಗಳನ್ನು ಒದಗಿಸುವಂತೆ ತಿಳಿಸಬೇಕು. ದಾಖಲೆ ಅಥವಾ ಮಾಹಿತಿ ಒದಗಿಸಿದ ನಂತರವೇ, ಆರೋಪವು ಮೇಲ್ನೋಟಕ್ಕೆ ಕಂಡುಬಂದಲ್ಲಿ, ಅಂತಹ ದೂರು ಅರ್ಜಿಗಳಿಗೆ ಸಂಬಂಧಿಸಿದಂತೆ ಮಾತ್ರ ಪಾಥಮಿಕ ತನಿಖೆ ಅಥವಾ ವಿಚಾರಣೆಗೆ ಪರಿಗಣಿಸಬೇಕು. ಯಾವುದೇ ದಾಖಲಾತಿಗಳನ್ನು ನೀಡದಿರುವ ಅರ್ಜಿಗಳನ್ನು ಪರಿಗಣಿಸದಂತೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಮಾಲತೇಶ ಮುದ್ದಜ್ಜಿ ಅವರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಅಪರ ಜಿಲ್ಲಾಧಿಕಾರಿಗಳು, ಯಾವುದೇ ಅಧಿಕಾರಿಗಳು ಇಂತಹ ದೂರುಗಳನ್ನು ಮಾನ್ಯ ಮಾಡಬಾರದು, ಪೂರಕ ದಾಖಲೆಗಳು ಹಾಗೂ ಸತ್ಯಾಸತ್ಯತೆ ಪರಿಶೀಲಿಸದೇ ತನಿಖೆಗೆ ಆದೇಶಿಸುವುದು ಸೂಕ್ತವಲ್ಲ, ಸರ್ಕಾರ ಈಗಾಗಲೆ ಈ ಕುರಿತಂತೆ ಸೂಕ್ತ ಸುತ್ತೊಲೆ ಹೊರಡಿಸಿದೆ. ಅಧಿಕಾರಗಳು, ಸುತ್ತೋಲೆಯಲ್ಲಿನ ಅಂಶಗಳನ್ನು ಉಲ್ಲಂಘಿಸಿ, ನೌಕರರ ವಿರುದ್ಧ ನೇರ ಕ್ರಮಕ್ಕೆ ಮುಂದಾಗದಂತೆ ಹಾಗೂ ಸರ್ಕಾರದ ನಿರ್ದೇಶನಗಳನ್ನು ಪಾಲಿಸುವಂತೆ ಸೂಚಿಸಿ, ಅಧಿಕಾರಿಗಳಿಗೆ ಮತ್ತೊಮ್ಮೆ ಸುತ್ತೊಲೆ ಹೊರಡಿಸಲಾಗುವುದು ಎಂದು ತಿಳಿಸಿದರು.
ಆರೋಗ್ಯ ಸಂಜೀವಿನಿಗೆ ಸಹಕಾರ ತೋರದ ಆಸ್ಪತ್ರೆಗಳ ವಿರುದ್ಧ ಕ್ರಮ :
************
ರಾಜ್ಯ ಸರ್ಕಾರಿ ನೌಕರರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ಸೌಲಭ್ಯ ನೀಡುವಂತಹ “ಕರ್ನಾಟಕ ಆರೊಗ್ಯ ಸಂಜೀವಿನಿ” ಯೋಜನೆಯನ್ನು ಈಗಾಗಲೆ ಜಾರಿಗೊಳಿಸಲಾಗಿದ್ದು, ಯೋಜನೆಯಡಿ ಈಗಾಗಲೆ ನೋಂದಾಯಿತವಾಗಿರುವ ಖಾಸಗಿ ಆಸ್ಪತ್ರೆಗಳು ಸಿಜಿಹೆಚ್‍ಎಸ್ ಚಿಕಿತ್ಸಾ ದರ ಕಡಿಮೆ ಇದೆ ಎಂಬ ಸಬೂಬು ಹೇಳಿ, ಚಿಕಿತ್ಸೆ ನೀಡಲು ನಿರಾಕರಿಸುತ್ತಿದ್ದಾರೆ, ಅಲ್ಲದೆ ಯೋಜನೆಗೆ ಅಸಹಕಾರ ತೋರುತ್ತಿದ್ದಾರೆ. ನೌಕರರು ಪ್ರತಿ ತಿಂಗಳು ಈ ಯೋಜನೆಗೆ ವಂತಿಗೆಯನ್ನು ಪಾವತಿಸುತ್ತಿದ್ದಾರೆ, ಆದರೆ ನೋಂದಾಯಿತ ಆಸ್ಪತ್ರೆಗಳಿಂದ ನೌಕರರಿಗೆ ನಿರೀಕ್ಷಿತ ಮಟ್ಟದಲ್ಲಿ ಸಹಕಾರ ಸಿಗುತ್ತಿಲ್ಲ. ಈ ಕುರಿತಂತೆ ಸಂಬಂಧಿಸಿದ ಖಾಸಗಿ ಆಸ್ಪತ್ರೆಗಳಿಗೆ ಸ್ಪಷ್ಟ ಸೂಚನೆ ನೀಡಬೇಕು. ಅಸಹಕಾರ ತೋರುವ ಖಾಸಗಿ ಆಸ್ಪತ್ರೆಗಳ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ನೌಕರರ ಸಂಘದ ಅಧ್ಯಕ್ಷ ಮಾಲತೇಶ್ ಮುದ್ದಜ್ಜಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಪರ ಜಿಲ್ಲಾಧಿಕಾರಿಗಳು, ಈ ಯೋಜನೆ ಅನುಷ್ಠಾನಕ್ಕೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಕುಷ್ಟರೋಗ ನಿವಾರಣಾ ಅಧಿಕಾರಿಗಳನ್ನು ಸದಸ್ಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಈ ಅಧಿಕಾರಿಗಳು ನೌಕರರಿಗೆ ಸಹಾಯವಾಣಿ ಹಾಗೂ, ನಿರ್ದಿಷ್ಟ ದೂರುಗಳಿದ್ದಲ್ಲಿ ಸ್ವೀಕರಿಸಿ, ಪರಿಹರಿಸುವ ಕಾರ್ಯ ಮಾಡಬೇಕು. ಈ ಕುರಿತಂತೆ ಸೂಚನೆ ನೀಡಲಾಗುವುದು ಹಾಗೂ ಅಸಹಕಾರ ತೋರುವ ಆಸ್ಪತ್ರೆಗಳ ವಿರುದ್ಧ ನಿರ್ದಿಷ್ಟ ಪ್ರಕರಣಗಳು ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಆಸ್ಪತ್ರೆಗಳಿಗೆ ಸೂಚನೆ ನೀಡಬೇಕು ಎಂದು ತಾಕೀತು ಮಾಡಿದರು.
ಕಾನೂನಿನ ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸಿ :
********* ಸರ್ಕಾರಿ ನೌಕರರು ಒತ್ತಡದಲ್ಲಿಯೇ ಪ್ರತಿ ದಿನ ಕಾರ್ಯ ನಿರ್ವಹಿಸುತ್ತಿದ್ದಾರೆ, ಆದಾಗ್ಯೂ ನೌಕರರು ಒಂದು ಕುಟುಂಬದಂತೆ ಸಹಬಾಳ್ವೆಯಿಂದ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಬೇಕು. ಸರ್ಕಾರದ ಎಲ್ಲ ಪ್ರಕ್ರಿಯೆಗಳು ಪಾರದರ್ಶಕವಾಗಿದೆ. ಹೀಗಾಗಿ ಕಾನೂನು ಮತ್ತು ನಿಯಮಗಳ ಚೌಕಟ್ಟಿನಲ್ಲಿಯೇ ಕಾರ್ಯ ನಿರ್ವಹಿಸಬೇಕು. ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸುವವರ ವಿರುದ್ಧ ಅಥವಾ ಅಸಭ್ಯವಾಗಿ ವರ್ತಿಸುವವರ ವಿರುದ್ಧ ಕಾನೂನು ರೀತ್ಯಾ ದೂರು ದಾಖಲಿಸಲು ಅವಕಾಶವಿದೆ. ಇದಕ್ಕೆ ಪೂರಕವಾಗಿ ಫೋಟೋ ಹಾಗೂ ವಿಡಿಯೋ ನೌಕರರಲ್ಲಿ ಇರಬೇಕು. ಮಾಹಿತಿ ಹಕ್ಕು ಕಾಯ್ದೆ ಕುರಿತು ಕಾಯ್ದೆಯನ್ನು ಓದಿ ಅರ್ಥೈಸಿಕೊಂಡಲ್ಲಿ ಮಾತ್ರ ಯಾವ ದಾಖಲೆಗಳನ್ನು ಕೊಡಬೇಕು, ಯಾವುದನ್ನು ಕೊಡಬಾರದು ಎಂಬುದು ತಿಳಿಯುತ್ತದೆ. ಆರ್‍ಟಿಐ ಅರ್ಜಿಗಳನ್ನು ನಿಗದಿತ ಕಾಲ ಮಿತಿಯಲ್ಲಿ ವಿಲೇವಾರಿ ಮಾಡಬೇಕು. ಕಡತಗಳನ್ನು ಎ,ಬಿ,ಸಿ,ಡಿ,ಇ ರಂತೆ ವಿಭಾಗಿಸಿ, ನಿಯಮಾನುಸಾರ ಕಾಲಮಿತಿಯಲ್ಲಿ ವಿಲೇ ಮಾಡಬೇಕು. ಕಾಯ್ದೆ ಕುರಿತಂತೆ ನೌಕರರಿಗೆ ಪುನಶ್ಚೇತನ ಕಾರ್ಯಗಾರ ಏರ್ಪಡಿಸುವಂತೆ ಅಪರ ಜಿಲ್ಲಾಧಿಕಾರಿಗಳು ಸಲಹೆ ನೀಡಿದರು.
03 ವರ್ಷಗಳಿಂದ ಸರ್ವೋತ್ತಮ ಸೇವಾ ಪ್ರಶಸ್ತಿ ಬಾಕಿ :
**********ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ರಾಜ್ಯ ಸರ್ಕಾರಿ ನೌಕರರನ್ನು ಗುರುತಿಸಿ, ಅಂತಹವರಿಗೆ ಪ್ರತಿ ವರ್ಷದ ಏ. 21 ರಂದು ನಡೆಯುವ ಸರ್ಕಾರಿ ನೌಕರರ ದಿನಾಚರಣೆಯಲ್ಲಿ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡುವಂತೆ ಸರ್ಕಾರದ ಆದೇಶವಿದೆ. ಆದರೆ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದಲೂ ಪ್ರಶಸ್ತಿಗೆ ಆಯ್ಕೆ ಹಾಗೂ ವಿತರಣೆ ಬಾಕಿ ಉಳಿದಿದೆ. ಈ ವರ್ಷವಾದರೂ ಕಳೆದ ಮೂರು ವರ್ಷಗಳ ಅವಧಿಯ ಪ್ರಶಸ್ತಿಗಳನ್ನು ನೀಡಲು ಜಿಲ್ಲಾಡಳಿತ ಕ್ರಮ ವಹಿಸಬೇಕು ಎಂದು ನೌಕರರ ಸಂಘದ ಅಧ್ಯಕ್ಷ ಮಾಲತೇಶ ಮುದ್ದಜ್ಜಿ ಮನವಿ ಮಾಡಿದರು.
ಮಹಿಳಾ ನೌಕರರಿಗೆ ರಜೆ ನೀಡಲು ಸೂಚನೆ:
**********
ಮಹಿಳಾ ಸರ್ಕಾರಿ ನೌಕರರಿಗೆ ಇಡೀ ಸೇವಾ ಅವಧಿಯಲ್ಲಿ 180 ದಿನಗಳ ಶಿಶುಪಾಲನೆ ರಜೆ ಮಂಜೂರು ಮಾಡಬೇಕು. ಇದರ ಜೊತೆಗೆ 18 ರಿಂದ 52 ವರ್ಷದ ಒಳಗಿನ ಮಹಿಳಾ ನೌಕರರಿಗೆ ಪ್ರತಿ ತಿಂಗಳು 1 ಋತುಚಕ್ರ ರಜೆಯ ಸೌಲಭ್ಯ ನೀಡುವಂತೆ ಈಗಾಗಲೆ ಸರ್ಕಾರವೇ ಆದೇಶ ಹೊರಡಿಸಿದೆ. ಇಲಾಖಾವಾರು ಪ್ರತ್ಯೇಕ ಆದೇಶ ಬಂದಿಲ್ಲ ಎನ್ನುವ ನೆಪ ಹೇಳಬಾರದು. ಎಲ್ಲಾ ಡಿಡಿಓಗಳು ಈ ಆದೇಶ ಉಲ್ಲೇಖಿಸಿ ಋತುಚಕ್ರ ರಜೆಯನ್ನು ಮಹಿಳಾ ನೌಕರರಿಗೆ ತಪ್ಪದೆ ನೀಡಬೇಕು. ಕ್ಯಾನ್ಸರ್‍ಗೆ ತುತ್ತಾಗಿ ಕಿಮೋಥೆರಪಿ ಚಿಕಿತ್ಸೆ ಪಡೆಯುತ್ತಿರುವ ಸರ್ಕಾರಿ ನೌಕರರಿಗೆ ಗರಿಷ್ಠ 6 ತಿಂಗಳ ಮಿತಿಗೆ ಒಳಪಟ್ಟು ಸಾಂದರ್ಭಿಕ ರಜೆ ಮಂಜೂರು ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ನೀಡಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ವೆಂಕಟೇಶ್ ನಾಯ್ಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಪ್ರಸಾದ್, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕ ಮಂಜುನಾಥ, ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ತುಕಾರಾಂರಾವ್ ಬಿ.ವಿ., ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಖಜಾಂಜಿ ಮಲ್ಲಿಕಾರ್ಜುನ್, ರಾಜ್ಯ ಪರಿಷತ್ ಸದಸ್ಯ ರಾಜಪ್ಪ, ಹಿರಿಯೂರು ತಾಲ್ಲೂಕು ಅಧ್ಯಕ್ಷ ರಮೇಶ್, ಹೊಸದುರ್ಗ ಅಧ್ಯಕ್ಷ ಶಾಂತಕುಮಾರ್, ಹೊಳಲ್ಕೆರೆ ಅಧ್ಯಕ್ಷ ತಿಪ್ಪೇಶ್, ಚಳ್ಳಕೆರೆ ಅಧ್ಯಕ್ಷ ಸಿ.ಟಿ. ವೀರೇಶ್, ಮೊಳಕಾಲ್ಮೂರು ತಾಲ್ಲೂಕು ಅಧ್ಯಕ್ಷ ರಂಗಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಮತ್ತಿತರರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.