ಚಿತ್ರದುರ್ಗನ.12:
ಶಿಕ್ಷಣ, ಆರೋಗ್ಯ, ವಿದ್ಯಾರ್ಥಿನಿಲಯಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಅಗತ್ಯ ಕ್ರಿಯಾ ಯೋಜನೆ ರೂಪಿಸುವುದು ಬಹಳ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ವಿಶೇಷ ಗಮನ ಹರಿಸಬೇಕು ಎಂದು ಯೋಜನಾ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಯೋಜನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಅಭಿವೃದ್ಧಿಗಾಗಿ 2026-27 ನೇ ಸಾಲಿಗಾಗಿ ಪಂಚಾಯತಿ ರಾಜ್ ಸಂಸ್ಥೆಗಳ ಕರಡು ವಾರ್ಷಿಕ ಆಯವ್ಯಯದನ್ವಯ ಪ್ರಧಾನ ಲೆಕ್ಕಶೀರ್ಷಿಕೆವಾರು ಒಟ್ಟು 1701.87 ಕೋಟಿ ರೂ. ಗಳಿಗಾಗಿ ಕರಡು ಪ್ರಸ್ತಾವನೆ ಸಿದ್ಧಪಡಿಸಲಾಗಿದ್ದು, ಇದು ಕಳೆದ ಸಾಲಿಗಿಂತಲೂ 184.91 ಕೋಟಿ ರೂ. ಹೆಚ್ಚಿನ ಅನುದಾನ ಬೇಡಿಕೆ ಪ್ರಸ್ತಾವನೆಯಾಗಿದೆ. 2025-26 ನೇ ಸಾಲಿನಲ್ಲಿ ಒಟ್ಟು 1516.96 ಕೋಟಿ ರೂ. ಅನುದಾನ ಜಿಲ್ಲೆಗೆ ಹಂಚಿಕೆಯಾಗಿರುತ್ತದೆ. ಜಿಲ್ಲೆಯಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಎಲ್ಲ ಇಲಾಖೆಗಳು ತಮಗೆ ಅಗತ್ಯವಾಗಿರುವ ವಿಷಯಕ್ಕೆ ಅನುಗುಣವಾಗಿ ಹೆಚ್ಚಿನ ಮಹತ್ವ ನೀಡುವ ಮೂಲಕ ಇನ್ನೂ ಎರಡು ವಾರದೊಳಗೆ ಕ್ರಿಯಾ ಯೋಜನೆ ರೂಪಿಸಿ ಅಭಿವೃದ್ಧಿ ಕರಡು ಯೋಜನೆ ಸಿದ್ದಪಡಿಸಿ ಸಲ್ಲಿಸುವಂತೆ ತಿಳಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಚರಂಡಿ ಸ್ವಚ್ಚತೆ ಹಾಗೂ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ಸಲಹೆ ನೀಡಿದರು.
ಚಳ್ಳಕೆರೆ ಶಾಸಕರು ಹಾಗೂ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ರಘುಮೂರ್ತಿ ಮಾತನಾಡಿ, 2026-27ನೇ ಸಾಲಿನ ವಾರ್ಷಿಕ ಕರಡು ಅಭಿವೃದ್ಧಿ ಯೋಜನೆ ಸಿದ್ದಪಡಿಸುವ ವೇಳೆ ಅಭಿವೃದ್ಧಿಗೆ ಹೆಚ್ಚಿನ ಅನುದಾನಕ್ಕೆ ಯೋಜನೆ ರೂಪಿಸಬೇಕು. ಗ್ರಾಮೀಣ ರಸ್ತೆಗಳ ನಿರ್ವಹಣೆ, ಕೆರೆಗಳ ನಿರ್ವಹಣೆ, ತಾಲ್ಲೂಕು ಕ್ರೀಡಾಂಣಗಣಗಳ ನಿರ್ವಹಣೆ, ವಿಸ್ತರಣೆ, ಗ್ರಾಮೀಣ ಪ್ರದೇಶಗಳಲ್ಲಿ ಚರಂಡಿ ಸ್ವಚ್ಛತೆ, ನಿರ್ವಹಣೆಗೆ ಹೆಚ್ಚಿನ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಮಾತನಾಡಿ, ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಮೂಲಸೌಕರ್ಯಗಳ ಕೊರತೆ ಇದ್ದು, ಗ್ರಾಮ ಪಂಚಾಯಿತಿಗಳಲ್ಲಿ ಮೂಲಭೂತ ಸೌಕರ್ಯಗಳ ಕಲ್ಪಿಸಲು ಅಭಿವೃದ್ಧಿ ಯೋಜನೆ ರೂಪಿಸಬೇಕು. ಆರೋಗ್ಯ, ಶಿಕ್ಷಣ, ಆಡಳಿತಕ್ಕೆ ಹೆಚ್ಚಿನ ಒತ್ತು ಕೊಡುವ ರೀತಿ ಕ್ರಿಯಾ ಯೋಜನೆ ರೂಪಿಸಬೇಕು. ಜಿಲ್ಲೆಯಲ್ಲಿ ಹೈನುಗಾರಿಕೆಗೆ, ಕುರಿ ಮೇಕೆ ಸಾಕಾಣಿಕೆಗೆ ವ್ಯಾಪಕ ಅವಕಾಶವಿದೆ. ಹೀಗಾಗಿ ಜಿಲ್ಲೆಗೆ ವೆಟರ್‍ನರಿ ಡಿಪ್ಲೋಮಾ ಕಾಲೇಜು ಪ್ರಾರಂಭದ ಅಗತ್ಯವಿದ್ದು, ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸುವಂತೆ ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್ ಮಾತನಾಡಿ, 2025-26ನೇ ಸಾಲಿನ ಜಿಲ್ಲೆಗೆ ವಾರ್ಷಿಕ ಆಯವ್ಯಯ ಲಿಂಕ್ ಪುಸ್ತಕದ ಪ್ರಕಾರ ರೂ.1516.96 ಕೋಟಿ ಅನುದಾನ ಹಂಚಿಕೆಯಾಗಿದ್ದು, ಈವರೆಗೆ ರೂ.703 ಕೋಟಿ ಅನುದಾನ ಖರ್ಚಾಗಿದೆ. ಮಾರ್ಚ್ ವೇಳೆಗೆ ಪೂರ್ಣ ಅನುದಾನ ವೆಚ್ಚವಾಗುವ ನಿರೀಕ್ಷೆ ಹೊಂದಲಾಗಿದೆ. 2026-27ನೇ ಸಾಲಿಗೆ ವಾಸ್ತವವಾಗಿ ರೂ.1701.87 ಕೋಟಿ ಅನುದಾನ ಬೇಕಾಗಿದೆ. ಕಳೆದ ಸಾಲಿಗಿಂತ ಹೆಚ್ಚವರಿಯಾಗಿ ರೂ.184.91 ಕೋಟಿ ಅನುದಾನ ಅವಶ್ಯಕವಾಗಿದೆ. 2026-27 ನೇ ಸಾಲಿನಲ್ಲಿ ಪ್ರಮುಖವಾಗಿ ಶಿಕ್ಷಣ ಕ್ಷೇತ್ರಕ್ಕೆ 1066.60 ಕೋಟಿ ರೂ., ಪ.ಜಾತಿ, ಪ.ಪಂಗಡ, ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ 176.78 ಕೋಟಿ ರೂ., ಆರೋಗ್ಯ-115.29 ಕೋಟಿ ರೂ. ಅನುದಾನ ಬೇಡಿಕೆಗೆ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.
ಇದು ಕೇವಲ ಕರಡು ಪ್ರಸ್ತಾವನೆಯಾಗಿದ್ದು, ಜಿಲ್ಲೆಗೆ ಹಾಗೂ ತಾಲ್ಲೂಕಿಗೆ ಅನುಗುಣವಾಗಿ ಆಯಾ ಇಲಾಖೆಗಳು ಅಂಕಿ-ಅಂಶಗಳ ಆಧಾರದ ಮೇಲೆ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಸಮರ್ಪಕವಾಗಿ ಯೋಜನೆ ರೂಪಿಸಿಕೊಳ್ಳಬೇಕು. ಆದಷ್ಟು ಶೀಘ್ರವಾಗಿ ಯೋಜನೆ ರೂಪಿಸಿ, ಸಲ್ಲಿಸಬೇಕು. ನಂತರ ಜಿಲ್ಲಾ ವಾರ್ಷಿಕ ಕರಡು ಅಭಿವೃದ್ಧಿ ಯೋಜನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಸಭೆಗೆ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೇರಿದಂತೆ ಜಿಲ್ಲಾ ಯೋಜನಾ ಸಮಿತಿ ಸದಸ್ಯರು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.