
ಚಿತ್ರದುರ್ಗ .ನ.11:
ರಸ್ತೆಯ ಅವೈಜ್ಞಾನಿಕ ನಿರ್ಮಾಣ ಹಾಗೂ ಬೇಜವಾಬ್ದಾರಿ ನಿರ್ವಹಣೆಯಿಂದ ಅಪಘಾತಗಳು ಸಂಭವಿಸಿದರೆ, ರಸ್ತೆ ನಿರ್ವಹಣೆಯ ಹೊಣೆ ಹೊತ್ತ ಅಧಿಕಾರಿ ಹಾಗೂ ಗುತ್ತಿಗೆದಾರರನ್ನು ಆರೋಪಿಗಳನ್ನಾಗಿಸಿ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.
ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ರಸ್ತೆ ಸುರಕ್ಷಿತ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಿತಿ ನೀಡಿದ ಸೂಚನೆಗಳನ್ನು ಅಧಿಕಾರಿಗಳು ತಪ್ಪದೇ ಪಾಲಿಸಬೇಕು. ಜಿಲ್ಲೆಯಲ್ಲಿ ಉಂಟಾಗುತ್ತಿರುವ ಅಪಘಾತಗಳ ಪ್ರಮಾಣ ಇಳಿಕೆಯಾಗಬೇಕು. ರಸ್ತೆ ಸುರಕ್ಷತಾ ನಿಧಿಯಿಂದ ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲಾಗಿರುವ ಅಪಘಾತ ವಲಯಗಳಲ್ಲಿ ಸೂಚನಾ ಫಲಕ, ಮಾರ್ಕಿಂಗ್, ಬ್ಲಿಂಕರ್ಸ್ ಅಳವಡಿಕೆ ಸೇರಿದಂತೆ ಅಗತ್ಯ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಈ ಹಿಂದೆ ಜರುಗಿದ ಸಭೆಯ ಅನುಪಾಲನಾ ವರದಿ ಸಲ್ಲಿಸದ ಅಧಿಕಾರಿಗಳಿಗೆ ಸಮಿತಿ ವತಿಯಿಂದ ಕಾರಣ ಕೇಳಿ ನೋಟಿಸು ನೀಡುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ನಿರ್ದೇಶಿಸಿದರು.
ಎಲ್ಲೆಂದರಲ್ಲಿ ಬೀದಿಬದಿ ವ್ಯಾಪಾರ ಮಾಡುವುದರಿಂದ ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ನಗರಸಭೆ ಕಡೆಯಿಂದ ಬೀದಿ ವ್ಯಾಪಾರಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಚಿತ್ರದುರ್ಗ ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ರಸ್ತೆಗಳಲ್ಲಿ ಬೀದಿ ದೀಪಗಳನ್ನು ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ನಗರಸಭೆಯಿಂದ ಆಟೋ ನಿಲ್ದಾಣಗಳಿಗಾಗಿ 27 ಹಾಗೂ ಬೀದಿ ಬದಿ ವ್ಯಾಪಾರಿಗಳಿಗಾಗಿ 12 ಸ್ಥಳಗಳನ್ನು ಗುರುತಿಸಲಾಗಿದೆ. ಸಾರ್ವಜನಿಕರ ಬೇಡಿಕೆ ಆಧಾರಿಸಿ ಡಿವೈಡರ್ ತೆರವು ಗೊಳಿಸಲಾಗುತ್ತಿದೆ ಎಂದು ನಗರಸಭೆ ಅಧಿಕಾರಿಗಳು ಸಭೆಯಲ್ಲಿ ತಿಳಿಸದರು.
ಅಪಘಾತದಲ್ಲಿ ದಿನಕ್ಕೆ ಒಂದಕ್ಕಿಂತ ಹೆಚ್ಚು ಸಾವು: ಜಿಲ್ಲೆಯಲ್ಲಿ ವಾರ್ಷಿಕ ಸರಾಸರಿ 400 ಜನರು ಅಪಘಾತದಲ್ಲಿ ಮರಣ ಹೊಂದುತ್ತಿದ್ದಾರೆ. ದಿನಕ್ಕೆ ಸರಾಸರಿ ಒಂದಕ್ಕಿಂತ ಹೆಚ್ಚು ಸಾವು ಅಪಘಾತಗಳಲ್ಲಿ ಸಂಭವಿಸುತ್ತಿದ್ದು, ರಸ್ತೆ ಸರಿಯಲ್ಲದ ಕಾರಣದಿಂದ ಶೇ.20 ರಷ್ಟು ಅಪಘಾತಗಳಲ್ಲಿ ವಾಹನ ಸವಾರರು ಸಾವನ್ನಪ್ಪುತ್ತಿದ್ದಾರೆ. ರಸ್ತೆ ನಿರ್ವಹಣೆ ಹೊಣೆಹೊತ್ತ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ತಮ್ಮ ಕರ್ತವ್ಯ ನಿರ್ವಹಿಸಿದರೆ ಈ ಸಾವುಗಳನ್ನು ತಡೆಗಟ್ಟಬಹುದು ಎಂದು ಪೆÇಲೀಸ್ ವರಿμÁ್ಠಧಿಕಾರಿ ರಂಜಿತ್ ಕುಮಾರ್ ಬಂಡಾರು ತಿಳಿಸಿದರು.
ಬಸ್ ಸಂಚಾರ ಮಾರ್ಗ ಬದಲು : ನಗರದ ಬಿಡಿ ರಸ್ತೆಯ ಮೂಲಕ ಬೆಂಗಳೂರು, ಶಿವಮೊಗ್ಗ ಹಾಗೂ ಚಳ್ಳಕೆರೆ ಮಾರ್ಗಗಳಿಗೆ ಸಂಚರಿಸುವ ಕೆ.ಎಸ್.ಆರ್.ಟಿ.ಸಿ ಹಾಗೂ ಖಾಸಗಿ ಬಸ್‍ಗಳ ಸಂಚಾರ ಮಾರ್ಗ ಬದಲಾವಣೆಗೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಸದ್ಯ 1200 ಕ್ಕೂ ಹೆಚ್ಚು ಬಸ್‍ಗಳು ಈ ಮಾರ್ಗಗಳ ಮೂಲಕವೇ ಸಂಚಾರ ನಡೆಸುತ್ತವೆ. ಇದರಿಂದಾಗಿ ಗಾಂಧಿ ಹಾಗೂ ಎಸ್.ಬಿ.ಐ ವೃತ್ತದಲ್ಲಿ ಹೆಚ್ಚಿನ ಸಂಚಾರಿ ದಟ್ಟಣೆ ಉಂಟಾಗುತ್ತಿದೆ. ಇದನ್ನು ತಪ್ಪಿಸಲು ಹಳೆ ರಾಷ್ಟ್ರೀಯ ಹೆದ್ದಾರಿ ಮಾರ್ಗ ಬಳಿಸಿ ಬಸ್‍ಗಳು ಕಾರ್ಯಾಚರಣೆ ನಡೆಸುವಂತೆ ಆದೇಶ ಹೊರಡಿಸಲಾಗುವುದು. ಇದರ ಜೊತೆಗೆ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ಹಾಗೂ ಜಾಥಾ ನಡೆಸಲು ಅನುಮತಿ ನೀಡದಿರಲು ತೀರ್ಮಾನಿಸಲಾಯಿತು.
ಟ್ರಕ್ ಟರ್ಮಿನಲ್ ನಿಮಾರ್ಣಕ್ಕೆ ಪ್ರಸ್ತಾವನೆ ಸಲ್ಲಿಸಿ: ಜಿಲ್ಲೆಯ ಹೆದ್ದಾರಿ ಪಕ್ಕದಲ್ಲಿಯೇ ವಾಹನಗಳನ್ನು ನಿಲ್ಲಿಸುತ್ತಿರುವುದು ಕಂಡುಬಂದಿದ್ದು, ಇದರಿಂದಲೂ ಅಪಘಾತಗಳು ಸಂಭವಿಸುತ್ತಿವೆ. ಹಿರಿಯೂರು ಜೆ.ಜೆ.ಹಳ್ಳಿ ಬಳಿ 20 ಎಕೆರೆ ವಿಸ್ತೀರ್ಣದಲ್ಲಿ ಟ್ರಕ್ ಟರ್ಮಿನಲ್ ನಿರ್ಮಿಸಲು ಪ್ರಸ್ತಾವನೆಯನ್ನು ದೇವರಾಜ ಅರಸು ಟರ್ಕ್ ಟರ್ಮಿನಲ್ ನಿಗಮಕ್ಕೆ ಸಲ್ಲಿಸಬೇಕು. ಹೆದ್ದಾರಿಯ ಇಕ್ಕೆಲಗಳಲ್ಲಿ ಅನಧಿಕೃತವಾಗಿ ನಡೆಸಲಾಗುತ್ತಿರುವ ಎಲ್ಲಾ ಗೂಡಂಗಡಿ, ಹೋಟೆಲ್ ಹಾಗೂ ಡಾಬಾಗಳನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು.
ರೆಫ್ಲೆಕ್ಟರ್‍ಗಳ ಅಳವಡಿಕೆ : ಗ್ರಾಮೀಣ ಭಾಗದಲ್ಲಿ ಹಳೆಯ ಗೂಡ್ಸ್ ವಾಹನ, ಟ್ಯಾಕ್ಟರ್, ಟ್ರ್ಯಾಲಿ, ಲಾರಿ, ಟಿಪ್ಪರ್‍ಗಳ ಹಿಂಬದಿಯಲ್ಲಿ ರಿಫ್ಲೆಕ್ಟರ್‍ಗಳು ಇಲ್ಲದೇ ಇರುವುದು ಕಂಡುಬರುತ್ತದೆ. ಇದರಿಂದ ಸಾಕಷ್ಟು ಅಫಘಾತ ಹಾಗೂ ಸಾವು ನೋವು ಸಂಭವಿಸುತ್ತಿವೆ. ಇದನ್ನು ತಪ್ಪಿಸಲು ಸಾರಿಗೆ ಇಲಾಖೆ ಅಧಿಕಾರಿಗಳು ರಿಫ್ಲೆಕ್ಟರ್‍ಗಳ ಅಳವಡಿಸುತ್ತಿದ್ದಾರೆ. ಮಕ್ಕಳ ಹಿತದೃಷ್ಟಿಯಿಂದ ಬೈಕ್ ಸವಾರಿಯ ವೇಳೆ 9 ತಿಂಗಳ ಮೇಲ್ಪಟ್ಟ ಹಾಗೂ 4 ವರ್ಷದ ಮಕ್ಕಳಿಗೆ ಶಿಶು ಕವಚ ಕಡ್ಡಾಯಗೊಳಿಸಿದೆ. 4 ಆಸನಗಳ ಮೇಲ್ಪಟ್ಟ ವಾಹನಗಳಲ್ಲಿ ವಿಎಲ್‍ಟಿ (ವೆಹಿಕಲ್ ಲೊಕೇಷನ್ ಟ್ರಾಕಿಂಗ್ ) ಮಹಿಳೆ ಹಾಗೂ ಮಕ್ಕಳ ಹಿತದೃಷ್ಟಿಯಿಂದ ಪ್ಯಾನಿಕ್ ಬಟನ್ ಅಳವಡಿಸುವುದು ಕಡ್ಡಾಯ ಮಾಡಲಾಗಿದೆ. ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್.ಎಂ.ಕಾಳೆಸಿಂಗೆ ಸಭೆಯಲ್ಲಿ ಮಾಹಿತಿ ನೀಡಿದರು.
ಸಂಚಾರಿ ಪೊಲೀಸ್ ಇನ್ಸಪೆಕ್ಟರ್ ರಾಜು ಅವರು ನಗರ ಸಂಚಾರಿ ಸುಧಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಭೆಯಲ್ಲಿ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆಗೆ ಚಾಲನೆ : ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರು ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆಗೆ ಚಾಲನೆ ನೀಡಿದರು. ಸಾರಿಗೆ ಇಲಾಖೆ ವತಿಯಿಂದ ನವೆಂಬರ್ ಮಾಹೆಯನ್ನು ವಾಯು ಮಾಲಿನ್ಯ ನಿಯಂತ್ರಣ ಮಾಸವನ್ನಾಗಿ ಆಚರಣೆ ಮಾಡಲಾಗುತ್ತಿದೆ.
ಸಭೆಯಲ್ಲಿ ಲೋಕೋಪಯೋಗಿ ಕಾರ್ಯಪಾಲಕ ಅಭಿಯಂತರ ಮೋನಪ್ಪ, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್.ಎಂ.ಕಾಳೆಸಿಂಘೆ, ಡಿವೈಎಸ್ಪಿಗಳಾದ ದಿನಕರ್, ರಾಜಣ್ಣ, ಶಿವಕುಮಾರ್ ಸೇರಿದಂತೆ ಹೆದ್ದಾರಿ ಪ್ರಾಧಿಕಾರ ಹಾಗೂ ಇತರೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.


About The Author
Discover more from JANADHWANI NEWS
Subscribe to get the latest posts sent to your email.