
ಚಿತ್ರದುರ್ಗ ಸೆ.12:
ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿರುವ ಚಿತ್ರದುರ್ಗದ ಕೋಟೆಯಲ್ಲಿ 28. 40 ಕೋಟಿ ರೂ. ವೆಚ್ಚದಲ್ಲಿ ಧ್ವನಿ ಬೆಳಕು ವ್ಯವಸ್ಥೆ, ಕೋಟೆಯಲ್ಲಿ ಪಾದಚಾರಿ ಮಾರ್ಗ ನಿರ್ಮಾಣ ಹಾಗೂ ವಿವಿಧ ಮೂಲ ಸೌಕರ್ಯ ಒದಗಿಸಿ ಅಬಿವೃದ್ಧಿಪಡಿಸಲು ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋಟೆಯ ನಾಡು ಚಿತ್ರದುರ್ಗದ ಪ್ರಮುಖ ಪ್ರವಾಸಿ ತಾಣವಾಗಿರುವ ಕೋಟೆಯನ್ನು ಇನ್ನಷ್ಟು ಆಕರ್ಷಕವಾಗಿಸಿ, ಇಲ್ಲಿನ ಇತಿಹಾಸ ಕುರಿತು ವ್ಯಾಪಕ ಪ್ರಚಾರ ನೀಡುವ ನಿಟಿನಲ್ಲಿ ಕೋಟೆಯಲ್ಲಿ ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದ್ದು, ಈ ನಿಟ್ಟಿನಲ್ಲಿ ಈಗಾಗಲೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದಕ್ಕೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಅನುಮತಿ ಪಡೆಯುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಕೂಡ ಕ್ರಮ ವಹಿಸಿದ್ದಾರೆ. ಇದರ ಜೊತೆಗೆ ಕೋಟೆಯಲ್ಲಿ ಪಾದಚಾರಿ ಮಾರ್ಗ ನಿರ್ಮಾಣ ಹಾಗೂ ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಹೊಸದುರ್ಗ ತಾಲ್ಲೂಕಿನ ಗವಿರಂಗಾಪುರ ಹಾಗೂ ಹಾಲುರಾಮೇಶ್ವರ ಕ್ಷೇತ್ರ ಅಭಿವೃದ್ದಿಗೂ ಅಂದಾಜು 2 ಕೋಟಿ ರೂ. ಅನುದಾನ ಒದಗಿಸಲಾಗಿದೆ. ರಾಜ್ಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗಳ ವ್ಯಾಪ್ತಿಯಲ್ಲಿ ಬರುವ ಪ್ರಮುಖ ವೀರಗಲ್ಲು, ಮಾಸ್ತಿಗಲ್ಲು ಹಾಗೂ ಸ್ಮಾರಕಗಳ ರಕ್ಷಣೆಗೆ ಕೂಡ ಯೋಜನೆ ರೂಪಿಸಬೇಕು ಎಂದರು.
ಚಿತ್ರದುರ್ಗ ಕೋಟೆಯಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಕೆಫೆಟೇರಿಯಾ ನಿರ್ಮಿಸಿ ಸೌಲಭ್ಯ ಒದಗಿಸುವುದು, ರಾಜ್ಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ವತಿಯಿಂದ ವಸ್ತು ಸಂಗ್ರಹಾಲಯ ನಿರ್ಮಾಣ ಹಾಗೂ ಕೋಟೆಯೊಳಗಡೆ ಪ್ರಮುಖ ತಾಣಗಳಿಗೆ ಪ್ರವಾಸಿಗರು ತಲುಪಲು ಸಮಸ್ಯೆ ಇರುವ ಸ್ಥಳಗಳಲ್ಲಿ ರೈಲಿಂಗ್ಸ್ ಅಳವಡಿಸುವುದು ಸೇರಿದಂತೆ 05 ಕೋಟಿ ರೂ. ಗಳ ವೆಚ್ಚದ ವಿವಿಧ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ತಯಾರಿಸಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಒತ್ತುವರಿ ತೆರವಿಗೆ ಕ್ರಮ :
**ಚಿತ್ರದುರ್ಗದ ಕೋಟೆಗೆ ಪ್ರತಿ ತಿಂಗಳು ಸುಮಾರು 35 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ರವಾಸಿಗರು ತಮ್ಮ ವಾಹನಗಳಲ್ಲಿ ತಲುಪಲು ಸೂಕ್ತ ರಸ್ತೆ ಇಲ್ಲ, ಇರುವ ರಸ್ತೆಗಳೂ ಕೂಡ ಒತ್ತುವರಿಯ ಕಾರಣದಿಂದಾಗಿ ಕಿರಿದಾಗಿದೆ, ಹೀಗಾಗಿ ವಾಹನಗಳ ಮೂಲಕ ಕೋಟೆಗೆ ತೆರಳುವುದು ತ್ರಾಸದಾಯಕವಾಗಿದೆ. ಕೋಟೆಯ ಮುಂಭಾಗದಲ್ಲಿಯೂ ವಾಹನಗಳನ್ನು ನಿಲ್ಲಿಸಲು ತೀವ್ರ ಸಮಸ್ಯೆಯಾಗುತ್ತಿದೆ. ಹೀಗಾಗಿ ಚಿತ್ರದುರ್ಗ ನಗರದ ಗಾಂಧಿ ವೃತ್ತದಿಂದ ಕೋಟೆಗೆ ತೆರಳುವ ಮಾರ್ಗಗಳ ರಸ್ತೆ ಹಾಗೂ ಕೋಟೆಯ ಸುತ್ತಮುತ್ತ ಅಕ್ರಮವಾಗಿ ಆಗಿರುವ ಒತ್ತುವರಿ ತೆರವುಗೊಳಿಸುವ ನಿಟ್ಟಿನಲ್ಲಿ ಮತ್ತು ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಶೀಘ್ರ ಸಭೆ ನಿಗದಿಪಡಿಸಿ, ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಈ ಹಿಂದೆ ಎನ್‍ಹೆಚ್-4 ರಸ್ತೆಯಿಂದ, ಕೋಟೆಗೆ ತಲುಪುವ ರೀತಿ ಸುಮಾರು 3.5 ಕಿ.ಮೀ. ರಿಂಗ್ ರಸ್ತೆ ನಿರ್ಮಾಣ ಕುರಿತಂತೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಪ್ರಸ್ತಾವನೆ ಸಲ್ಲಿಕೆಯಾಗಿ, ಲೋಕೋಪಯೋಗಿ ಇಲಾಖೆಯು ಯೋಜನೆ ಜಾರಿ ಕುರಿತಂತೆ ಆಸಕ್ತಿ ತೋರಲಿಲ್ಲ ಎಂಬುದಾಗಿ ತಿಳಿದುಬಂದಿದೆ, ಈ ಬಗ್ಗೆಯೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗಿನ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಕೋಟೆ ಸ್ವಚ್ಛತೆಗೆ ವಿಶೇಷ ಅಭಿಯಾನ :
*** ಚಿತ್ರದುರ್ಗದ ಕೋಟೆ ಆವರಣ ಹಾಗೂ ಒಳಗಡೆಯ ಆವರಣದಲ್ಲಿ ಸ್ವಚ್ಛತೆಯ ಕೊರತೆಯಿದೆ, ಮೂಲ ಸೌಕರ್ಯಗಳ ಕೊರತೆ ಕೂಡ ಇದೆ ಎಂಬುದಾಗಿ ಬಹಳಷ್ಟು ದೂರುಗಳು ಕೇಳಿಬರುತ್ತಿದೆ. ಆದರೆ ಈ ನಿಟ್ಟಿನಲ್ಲಿ ಕೋಟೆಯ ಆವರಣ ನಿರ್ವಹಣೆ ಮಾಡುತ್ತಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಯಾವುದೇ ಕ್ರಮ ವಹಿಸುತ್ತಿಲ್ಲದಿರುವುದು ಬೇಸರದ ಸಂಗತಿಯಾಗಿದೆ ಎಂದು ಜಿಲ್ಲಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಎಸ್‍ಐ ನ ಅಧಿಕಾರಿಗಳು, ಸಿಬ್ಬಂದಿ ಮತ್ತು ಅನುದಾನದ ಕೊರತೆಯಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಸ್ವಚ್ಛತೆ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಹೆಚ್ಚಿನ ಸಿಬ್ಬಂದಿ ನಿಯೋಜನೆಗಾಗಿ ಅನುಮತಿ ನೀಡುವಂತೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಅನುದಾನದ ಕೊರತೆ ಇದ್ದಲ್ಲಿ, ಡಿಎಂಎಫ್ ನಿಧಿಯಿಂದ ಅನುದಾನ ಒದಗಿಸಲಾಗುವುದು. ನಗರಸಭೆ, ಪ್ರವಾಸೋದ್ಯಮ ಇಲಾಖೆ, ರಾಜ್ಯ ಮತ್ತು ಕೇಂದ್ರದ ಪುರಾತತ್ವ ಮತ್ತು ಸರ್ವೇಕ್ಷಣಾ ಇಲಾಖೆ, ಎನ್‍ಎಸ್‍ಎಸ್ ಘಟಕಗಳು, ವಿವಿಧ ಸಂಘಟನೆಗಳ ಸಹಯೋಗದಲ್ಲಿ ಕೊಟೆಯ ಆವರಣ ಮತ್ತು ಒಳಾಂಗಣದ ಸ್ವಚ್ಛತೆಗೆ ವಿಶೇಷ ಅಭಿಯಾನ ಕೈಗೊಳ್ಳಲು ಸಮನ್ವಯ ಕೈಗೊಳ್ಳುವಂತೆ ಪ್ರವಾಸೋದ್ಯಮ ಇಲಾಖೆ ಮತ್ತು ಎಎಸ್‍ಐ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸ್ಮಾರಕ ದತ್ತು ಸ್ವೀಕಾರ ಯೋಜನೆ :
*** ಪ್ರವಾಸೋದ್ಯಮ ಅಭಿವೃದ್ಧಿ ನಿಟ್ಟಿನಲ್ಲಿ ಸ್ಮಾರಕ ದತ್ತು ಸ್ವೀಕಾರ ಯೋಜನೆಯನ್ನು ರೂಪಿಸಿ, ಜಾರಿಗೊಳಿಸಿದ್ದು, ಈ ಯೋಜನೆಯಡಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ವ್ಯಾಪ್ತಿಗೆ ಬರುವ ಸ್ಮಾರಕಗಳನ್ನು ಹೊರತುಪಡಿಸಿ, ರಾಜ್ಯದ ವಿವಿಧ ಧಾರ್ಮಿಕ ಕ್ಷೇತ್ರಗಳು, ರಾಜ್ಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ವ್ಯಾಪ್ತಿಗೆ ಬರುವ ಸ್ಮಾರಕಗಳನ್ನು ಖಾಸಗಿ ಸಂಸ್ಥೆಗಳು, ಕಾರ್ಖಾನೆಗಳು, ಕಂಪನಿಗಳು ತಮ್ಮ ಸಿಎಸ್‍ಆರ್ ಚಟುವಟಿಕೆಗಳಡಿ ದತ್ತು ಪಡೆದು, ಅಲ್ಲಿ ತಂಗುದಾಣ, ಶೌಚಾಲಯ, ಕೆಫೆಟೇರಿಯಾ, ಪಾರ್ಕ್ ಮುಂತಾದ ಮೂಲಭೂತ ಸೌಕರ್ಯಗಳನ್ನು ಒದಗಿಸಬಹುದು, ಅಲ್ಲದೆ, ಈ ಪ್ರದೇಶಗಳಲ್ಲಿ ತಮ್ಮ ಸಂಸ್ಥೆಯ ಹೆಸರು, ಜಾಹೀರಾತು ಪ್ರದರ್ಶಿಸಲು ಕೂಡ ಅವಕಾಶ ಇರುತ್ತದೆ. ಈ ಬಗ್ಗೆ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆ ಯಾವುದೇ ಪ್ರಚಾರ ನೀಡದಿರುವ ಕಾರಣ, ಸಂಸ್ಥೆಗಳಿಗೆ ಮಾಹಿತಿ ತಿಳಿದಿಲ್ಲ. ಜಿಲ್ಲೆಯಲ್ಲಿ ಈ ವರ್ಷ ಕನಿಷ್ಟ 05 ಪ್ರವಾಸಿ ತಾಣ, ಸ್ಮಾರಕ ಪ್ರದೇಶಗಳನ್ನು ಖಾಸಗಿ ಸಂಸ್ಥೆಗಳಿಗೆ ದತ್ತು ನೀಡಿ, ಅಭಿವೃದ್ಧಿಪಡಿಸುವ ಕಾರ್ಯ ಮಾಡಬೇಕು ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
04 ಕೆರೆಗಳಲ್ಲಿ ಜಲಕ್ರೀಡೆಗೆ ಅನುಮತಿ :
** ಚಿತ್ರದುರ್ಗ ತಾಲ್ಲೂಕಿನ ಚಂದ್ರವಳ್ಳಿ ಕೆರೆ, ಮಲ್ಲಾಪುರ ಕೆರೆ, ಚಳ್ಳಕೆರೆ ತಾಲ್ಲೂಕಿನ ಕೆರೆಕಲ್ ಕೆರೆ, ಮೊಳಕಾಲ್ಮೂರು ತಾಲ್ಲೂಕು ರಂಗಯ್ಯನದುರ್ಗ ದಲ್ಲಿ ಸಾಹಸ ಪ್ರವಾಸೋದ್ಯಮ ಹಾಗೂ ಜಲಕ್ರೀಡೆಗಳನ್ನು ಕೈಗೊಳ್ಳಲು ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಬಿವೃದ್ಧಿ ಪ್ರಾಧಿಕಾರವು ಕಳೆದ ವರ್ಷವೇ ಅನುಮತಿ ನೀಡಿದೆ. ಚಂದ್ರವಳ್ಳಿ ಕೆರೆಯಲ್ಲಿ ಜಲಸಾಹಸ ಕ್ರೀಡೆಗಳಾದ ಕಯಾಕಿಂಗ್, ಕನೋಯಿಂಗ್, ವಿಂಡ್ ಸರ್ಫಿಂಗ್, ಜಿಟ್ ಸ್ಕೀಯಿಂಗ್ ವಾಟರ್ ಜಾರ್ಬಿಂಗ್ ಹಾಗೂ ಬೋಟಿಂಗ್ ಕೈಗೊಳ್ಳಲು ಸಣ್ಣ ನೀರಾವರಿ ಇಲಾಖೆ ಹಾಗೂ ನಗರಸಭೆಯು ನಿರಾಪೇಕ್ಷಣ ಪತ್ರ ನೀಡಿದೆ ಎಂದು ಪ್ರವಾಸೋದ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೆ ಶೀಘ್ರ ಇದನ್ನು ಅನುಷ್ಟಾನಗೊಳಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಗಾಯತ್ರಿ, ಭದ್ರಾ ಮೆಲ್ದಂಡೆ ಯೋಜನೆ ಕಾರ್ಯಪಾಲಕ ಅಭಿಯಂತರ ಚಂದ್ರಪ್ಪ ಬಾರಿಕರ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ನಾಗರಾಜ್, ಪ್ರವಾಸೋದ್ಯಮ, ಭಾರತೀಯ ಪುರಾತತ್ವ ಮತ್ತು ಸರ್ವೇಕ್ಷಣಾ ಇಲಾಖೆ, ರಾಜ್ಯ ಪುರಾತತ್ವ ಮತ್ತು ಸರ್ವೇಕ್ಷಣಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.