September 13, 2025
1757680702485.jpg




ಚಿತ್ರದುರ್ಗ .ಸೆ.12:
ಸಾರ್ವಜನಿಕ ಉಪಯುಕ್ತ ಸೇವೆಗಳಿಗೆ ಸಂಬಂಧಪಟ್ಟ ವಿವಾದಗಳನ್ನು ರಾಜೀ ಮತ್ತು ವಿಚಾರಣೆ ಮೂಲಕ ತ್ವರಿತವಾಗಿ ಇತ್ಯರ್ಥಗೊಳಿಸಲು, 1987ರ ಕಾನೂನು ಸೇವೆಗಳ ಪ್ರಾಧಿಕಾರ ಕಾಯ್ದೆಗೆ ತಿದ್ದುಪಡಿ ತಂದು, ಪ್ರತಿ ಕಂದಾಯ ವಿಭಾಗ ಮಟ್ಟದಲ್ಲಿ ಖಾಯಂ ಜನತಾ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. ಸದ್ಯ ಖಾಯಂ ಜನತಾ ನ್ಯಾಯಾಲಯಗಳ ಕಾರ್ಯವೈಖರಿಯಲ್ಲಿ ಸುಧಾರಣೆ ತಂದು, ಕಕ್ಷಿದಾರಿಗೆ ಅನುಕೂಲವಾಗುವಂತೆ ಕಂದಾಯ ವಿಭಾಗದಲ್ಲಿ ಬರುವ ಜಿಲ್ಲಾ ಕೇಂದ್ರಗಳಲ್ಲಿಯೂ ನಿಯಮಿತವಾಗಿ ವಿಚಾರಣೆಗಳನ್ನು ನಡೆಸಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ರೋಣ ವಾಸುದೇವ ತಿಳಿಸಿದ್ದಾರೆ.
ಜಿಲ್ಲಾ ನ್ಯಾಯಾಲಯದ ಮಧ್ಯಸ್ಥಿಕೆ ಕೇಂದ್ರದಲ್ಲಿ ಶುಕ್ರವಾರ ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ಸಾರ್ವಜನಿಕರಿಗೆ ವಿವಿಧ ಸೌಲಭ್ಯ ಒದಗಿಸುವ ಸೇವಾ ವಲಯಗಳ ವ್ಯಾಪ್ತಿಯಲ್ಲಿ ರೂ.01 ಕೋಟಿ ಮೌಲ್ಯದವರೆಗಿನ ಕ್ಲೈಮ್ ಅಥವಾ ಹಣಕಾಸಿನ ವ್ಯವಹಾರ ಸಂಬಂಧಿಸಿದಂತೆ ಸಾರಿಗೆ, ಅಂಚೆ, ದೂರವಾಣಿ, ವಿದ್ಯುತ್, ಬೆಳಕು, ನೀರು ಸರಬರಾಜು ಮಾಡುವ ಯಾವುದೇ ಸಂಸ್ಥೆಗಳ ಸೇವೆಗಳು, ಎಲ್.ಪಿ.ಜಿ. ಸಾರ್ವಜನಿಕ ನೈರ್ಮಲ್ಯ, ವಿಮೆ, ಆಸ್ಪತ್ರೆ ಮತ್ತು ಔಷಧಾಲಯ, ಬ್ಯಾಂಕು ಮತ್ತು ಹಣಕಾಸು ಸಂಸ್ಥೆ, ಶಿಕ್ಷಣ ಸಂಸ್ಥೆ, ಗೃಹ ಮತ್ತು ರಿಯಲ್ ಎಸ್ಟೇಟ್‍ಗಳಿಗೆ ಸಂಬಂಧಿಸಿದ ಸಾರ್ವಜನಿಕ ಉಪಯುಕ್ತ ಸೇವೆಗಳ ಪ್ರಕರಣಗಳನ್ನು ಖಾಯಂ ಜನತಾ ನ್ಯಾಯಾಲಯದಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುತ್ತಿದೆ. ಇವುಗಳೊಂದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾರ್ವಜನಿಕ ಉಪಯುಕ್ತತಾ ಸೇವೆಗಳ ವಿಷಯಗಳು ಕೂಡ ಈ ನ್ಯಾಯಾಲಯದ ವ್ಯಾಪ್ತಿಗೆ ಬರುತ್ತವೆ. ಇತರೆ ನ್ಯಾಯಾಲಯ ಹಾಗೂ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ನ್ಯಾಯಾಲಯಗಳಿಗಿಂತ, ಖಾಯಂ ಜನತಾ ನ್ಯಾಯಾಲಯ ಭಿನ್ನವಾಗಿದೆ ಎಂದು ನ್ಯಾಯಾಧೀಶ ರೋಣ ವಾಸುದೇವ ಹೇಳಿದರು.
ಖಾಯಂ ಜನತಾ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಯಾವುದೇ ಶುಲ್ಕವಿರುವುದಿಲ್ಲ. ಅರ್ಜಿದಾರರು ನೇರವಾಗಿ ಅಥವಾ ವಕೀಲರ ಮೂಲಕ ಪ್ರಕರಣ ದಾಖಲಿಸಬಹುದು. ಉಭಯ ಪಕ್ಷಗಾರರು ರಾಜೀ ಸಂಧಾನಕ್ಕೆ ಒಪ್ಪದಿದ್ದರೆ, ವಿವಾದವನ್ನು ವಿಚಾರಣೆ ಮಾಡಿ ಕಾನೂನು ಆಧಾರದಲ್ಲಿ ತ್ವರಿತವಾಗಿ ತೀರ್ಪು ನೀಡಲಾಗುತ್ತದೆ. ಖಾಯಂ ಜನತಾ ನ್ಯಾಯಾಲಯದ ಡಿಕ್ರಿ ಅಥವಾ ತೀರ್ಪನ್ನು ಯಾವುದೇ ಸಿವಿಲ್ ಅಥವಾ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಶ್ನಿಸುವ ಅವಕಾಶ ಇರುವುದಿಲ್ಲ. ಉಚ್ಚನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸುವ ಮೂಲಕ ಮಾತ್ರ ಪ್ರಶ್ನಿಸಲು ಅವಕಾಶವಿರುತ್ತದೆ. ಜಿಲ್ಲಾ ನ್ಯಾಯಾಲಗಳ ಮೂಲಕ ಖಾಯಂ ಜನತಾ ನ್ಯಾಯಾಲಯದ ಆದೇಶವನ್ನು ಅನುಷ್ಠಾನಗೊಳಿಸಲಾಗುತ್ತದೆ. ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಅಧ್ಯಕ್ಷರಾಗಿ ಹಾಗೂ ಸಾರ್ವಜನಿಕ ಉಪಯುಕ್ತ ಸೇವೆಗಳಲ್ಲಿ ಅನುಭವ ಹೊಂದಿರುವ ಇಬ್ಬರು ನಾಮನಿರ್ದೇಶಿತ ಸದಸ್ಯರು ಖಾಯಂ ಜನತಾ ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸುತ್ತಾರೆ ಎಂದು ನ್ಯಾಯಾಧೀಶ ರೋಣ ವಾಸುದೇವ ಮಾಹಿತಿ ನೀಡಿದರು.
ಜಿಲ್ಲಾ ಹಂತದಲ್ಲೇ ಪ್ರಕರಣಗಳ ವಿಚಾರಣೆ:


ಚಿತ್ರದುರ್ಗ ವಿಭಾಗಕ್ಕೆ ಬರುವ ಖಾಯಂ ಜನತಾ ನ್ಯಾಯಾಲಯ ಬೆಂಗಳೂರಿನಲ್ಲಿದೆ. ಇನ್ನು ಮುಂದೆ ಸಾರ್ವಜನಿಕರು ಪ್ರಕರಣ ದಾಖಲಿಸಲು ಬೆಂಗಳೂರಿಗೆ ತೆರಳುವ ಪ್ರಮೇಯ ಉದ್ಭವಿಸುವುದಿಲ್ಲ. ಖಾಯಂ ಜನತಾ ನ್ಯಾಯಾಲಯದ ಕಾರ್ಯವೈಖರಿಯಲ್ಲಿ ಬದಲಾವಣೆ ತರಲಾಗಿದೆ. ಅರ್ಜಿದಾರರು ಜಿಲ್ಲಾ ನ್ಯಾಯಾಲಯದಲ್ಲಿಯೇ ಪ್ರಕರಣಗಳನ್ನು ದಾಖಲಿಸಬಹುದು. ಪ್ರಕರಣ ದಾಖಲಿಸಲು ಯಾವುದೇ ನ್ಯಾಯಾಲಯದ ಶುಲ್ಕ ಪಾವತಿಸುವ ಅಗತ್ಯ ಇರುವುದಿಲ್ಲ. ವಿಚಾರಣೆಗೆ ಹಾಜರಾಗಲು ವಿಭಾಗಮಟ್ಟಕ್ಕೆ ತೆರಳಬೇಕಿಲ್ಲ. ವಾರ ಅಥವಾ ಹದಿನೈದು ದಿನಗಳಿಗೊಮ್ಮೆ ಖಾಯಂ ಜನತಾ ನ್ಯಾಯಾಲಯದ ನ್ಯಾಯಾಧೀಶರು ಜಿಲ್ಲಾ ಕೇಂದ್ರಕ್ಕೆ ಆಗಮಿಸಿ ಪ್ರಕರಣಗಳನ್ನು ವಿಚಾರಣೆ ನಡೆಸುವರು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 15100 ಅಥವಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸಂಪರ್ಕಿಸುವಂತೆ ನ್ಯಾಯಾಧೀಶ ರೋಣ ವಾಸುದೇವ ಹೇಳಿದರು.
ಈ ವೇಳೆ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್, 1ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶ ವೀರಣ್ಣ ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading