
ವರದಿ: ಕೆ.ಟಿ.ಮೋಹನ್ ಕುಮಾರ್
ಸಾಲಿಗ್ರಾಮ (ಮೈಸೂರು ಜಿಲ್ಲೆ): ಸಹಕಾರಿ ಸಂಸ್ಥೆಗಳ ಬೆಳವಣಿಗೆಯು ಸಂಘದ ಸದಸ್ಯರುಗಳಿಂದ ಮಾತ್ರ ಸಾಧ್ಯವೆಂದು ಮೈಸೂರು, ಮಂಡ್ಯ, ಕೊಡಗು ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷ ಕೆ.ನಾರಾಯಣರಾವ್ ಹೇಳಿದರು.



ಅವರು ಸಾಲಿಗ್ರಾಮ ಪಟ್ಟಣದ ಗ್ರಾಮೀಣ ನಿಧಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಹಕಾರಿ ಸಂಘಗಳ ವಾರ್ಷಿಕ ಮಹಾಸಭೆಗಳು ಹಬ್ಬದ ರೀತಿಯಲ್ಲಿ ನಡೆಯುವಂತಾಗಬೇಕು. ಸಂಘದ ಸದಸ್ಯರುಗಳು ಸಭೆಗಳಲ್ಲಿ ಪಾಲ್ಗೊಂಡು ಸಂಘದ
ಕಾರ್ಯವೈಖರಿ, ಹಣಕಾಸಿನ ವಿಚಾರ, ಆಡಳಿತ ವ್ಯವಸ್ಥೆ, ಉಪಯೋಗ ಹಾಗೂ ಸಮಸ್ಯೆಗಳ ಬಗ್ಗೆ ಸಮಗ್ರವಾಗಿ ಚರ್ಚಿಸುವ ಮೂಲಕ ವಾರ್ಷಿಕ ಮಹಾಸಭೆಗಳು ಯಶಸ್ವಿಗೊಳ್ಳುವುದರ ಮೂಲಕ ಸಹಕಾರ ಸಂಸ್ಥೆಗಳನ್ನು ಗಟ್ಟಿಯಾಗಿ ಕಟ್ಟುವುದರೊಂದಿಗೆ ಅವುಗಳನ್ನು ಉಳಿಸಿ ಬೆಳೆಸಬೇಕು ಎಂದರು.
ಅಪೇಕ್ಸ್ ಬ್ಯಾಂಕ್ ಮಾಜಿ ನಿರ್ದೇಶಕ ಎಸ್.ಕೆ.ಮಧುಚಂದ್ರ ಮಾತನಾಡಿ ಗ್ರಾಮೀಣ ನಿಧಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯು ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಜನಸಾಮಾನ್ಯರ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದರು. ಜನಸಾಮಾನ್ಯರು ತಮ್ಮ ದಿನ ನಿತ್ಯದ ವ್ಯಾಪಾರ ವಹಿವಾಟುಗಳಲ್ಲಿ ಉಳಿಸುವ ಸಣ್ಣ ಸಣ್ಣ ಉಳಿತಾಯವನ್ನು ಸೊಸೈಟಿಯ ಮೂಲಕ ತಮ್ಮ ವ್ಯವಹಾರವನ್ನು ಮಾಡುವುದರೊಂದಿಗೆ ತಮ್ಮ ಅಭಿವೃದ್ಧಿ ಜೊತೆಗೆ ಸಂಘದ ಬೆಳವಣಿಗೆಗೆ ಕಾರಣಕರ್ತರಾಗಬೇಕು ಎಂದು ಕರೆ ನೀಡಿದರು.
ಗ್ರಾಮೀಣ ನಿಧಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಕೆ.ಆರ್.ಶ್ಯಾಮಸುಂದರ್ ಮಾತನಾಡಿ ಕಳೆದ ಆರು ವರ್ಷಗಳ ಹಿಂದೆ ಸ್ಥಾಪಿಸಿದ ನಮ್ಮ ಸೊಸೈಟಿಗೆ ಈ ಭಾಗದ ಸಾರ್ವಜನಿಕರು ಉತ್ತಮ ಬೆಂಬಲ ನೀಡಿದ ಪರಿಣಾಮವಾಗಿ ಯಶಸ್ವಿಯಾಗಿ ಮುನ್ನಡೆಯುತ್ತಾ ಬರುವುದರ ಜೊತೆಗೆ ಸೊಸೈಟಿಯ ಎರಡನೇ ಶಾಖೆಯನ್ನು ಕೆ.ಆರ್.ನಗರ ಪಟ್ಟಣದಲ್ಲಿ ಪ್ರಾರಂಭಿಸಲಾಗಿದೆ. ಉತ್ತಮ ವ್ಯವಹಾರವನ್ನು ಮಾಡುವ ಮೂಲಕ ಸೊಸೈಟಿಯ ಬೆಳವಣಿಗೆಗೆ ಆಡಳಿತ ಮಂಡಳಿಯವರು, ಸಿಬ್ಬಂದಿಗಳು ಹಾಗೂ ಷೇರುದಾರರುಗಳು ಪ್ರಮುಖ ಕಾರ್ಯಕರ್ತರಾಗಿದ್ದು ಮುಂದಿನ ದಿನಗಳಲ್ಲಿ ಎಲ್ಲರ ಸಲಹೆ ಸಹಕಾರವನ್ನು ಪಡೆದು ಸೊಸೈಟಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಲಾಗುವುದು ಎಂದರು.
ಪತ್ರಕರ್ತ ಕೆ.ಟಿ.ಮೋಹನ್ ಕುಮಾರ್ ಮಾತನಾಡಿ ಗ್ರಾಮೀಣ ನಿಧಿ ಸೊಸೈಟಿಯು ತಮ್ಮ ಸಹಕಾರ ಸಂಘದ ವ್ಯವಹಾರ ಚಟುವಟಿಕೆಗಳನ್ನು ಮಾತ್ರ ಮಾಡದೆ ಸಾಮಾಜಿಕ ಕಳಕಳಿಯನ್ನು ಇಟ್ಟುಕೊಂಡು ವಿವಿಧ ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡಿಕೊಂಡು ಬರುವ ಮೂಲಕ ಇತರ ಸಹಕಾರಿ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸೊಸೈಟಿಯ ಸದಸ್ಯರುಗಳ ಮಕ್ಕಳು ದ್ವಿತೀಯ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಜೊತೆಗೆ ಸೊಸೈಟಿಯ ಷೇರುದಾರರಿಗೆ, ಅತಿ ಹೆಚ್ಚು ವ್ಯವಹಾರ ಮಾಡಿದವರಿಗೆ ಹಾಗೂ ಠೇವಣಿ ದಾರರಿಗೆ ಉಡುಗೊರೆಗಳನ್ನು ನೀಡಲಾಯಿತು.
ಸಭೆಯಲ್ಲಿ ಮೈಸೂರು, ಮಂಡ್ಯ ಹಾಗೂ ಕೊಡಗು ಜಿಲ್ಲಾ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟದ ನಿರ್ದೇಶಕ ವೆಂಕಟೇಶ್, ಸಿಇಓ ಭಗೀರಥ, ಸೊಸೈಟಿಯ ಕಾನೂನು ಸಲಹೆಗಾರ ವಕೀಲ ತಿಪ್ಪೂರು ತಿಮ್ಮೇಗೌಡ, ಸೊಸೈಟಿಯ ಉಪಾಧ್ಯಕ್ಷೆ ಎಚ್.ಜೆ.ಭಾಗ್ಯ ಗುರುರಾಜ್, ನಿರ್ದೇಶಕರುಗಳಾದ ಎಂ.ಎಸ್ ನರಸಿಂಹ,
ಎಂ.ಎಸ್.ಕುಮಾರ್, ಕೆ.ಎಸ್.ಶಶಿಕುಮಾರ್, ಕೆ.ಎಸ್.ರಾಜೇಶ್, ಮಂಜುನಾಥ, ಮಂಜುಳಕನಕರಾಜು, ಕಮಲ ರೇಣುಕೇಶ್, ಸಿಇಓ ಸಿಂಧೂ ಮಂಜುನಾಥ್, ಸಿಬ್ಬಂದಿ ಮಮತಾ ರಾಜೇಶ್, ರೂಪನಂದೀಶ್, ಮುಖಂಡ ಸುರೇಶ ಸೇರಿದಂತೆ ಹಲವರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.