July 12, 2025
bbb.jpg

ಕೊಪ್ಪಳ – ರಸಗೊಬ್ಬರ ನಿಯಂತ್ರಣ ಆದೇಶ 1985 ಹಾಗೂ 1955 ರ ಉಲ್ಲಂಘನೆ ಕಂಡುಬಂದ ಹಿನ್ನೆಲೆಯಲ್ಲಿ ಕೊಪ್ಪಳ ನಗರದ ಶ್ರೀ ನಾಗರಾಜ ಟ್ರೇಡಿಂಗ್ ಕಂಪನಿ ಮಾರಾಟ ಮಳಿಗೆಯ ಮಾರಾಟ ಪರವಾನಿಗೆಯನ್ನು ಅಮಾನತ್ತುಗೊಳಿಸಲಾಗಿದೆ.
ಮಂಜುನಾಥ ಕೆ. ಹಕಾರಿ, ಮೊ.ನಂ : 6364590248 ಎಂಬ ಗ್ರಾಹಕರು ಕೊಪ್ಪಳ ನಗರದ ಎಸ್.ಜಿ. ಗಂಜ್ ನಲ್ಲಿರುವ ಶ್ರೀ ನಾಗರಾಜ ಟ್ರೇಡಿಂಗ್ ಕಂಪನಿಯ ರಸಗೊಬ್ಬರ ಮಾರಾಟಗಾರರು ಯೂರಿಯಾ ರಸಗೊಬ್ಬರವನ್ನು ಹೆಚ್ಚಿನ ದರಕ್ಕೆ ಮತ್ತು ರಸಗೊಬ್ಬರಕ್ಕೆ ಸೆಟ್‌ರೈಟ್ ಲಿಂಕ್ ಮಾಡುತ್ತಿರುವ ಕುರಿತು ದೂರನ್ನು ಹಾಗೂ ಅದಕ್ಕೆ ಸಂಬಂಧಿಸಿದಂತೆ ವಿಡಿಯೋ ಸಂದೇಶವನ್ನು ಸಲ್ಲಿಸಿದ್ದರು. ದೂರಿನನ್ವಯ ಜಂಟಿ ಕೃಷಿ ನಿರ್ದೇಶಕರ ಕಛೇರಿಯ ಸಹಾಯಕ ಕೃಷಿ ನಿರ್ದೇಶಕರಾದ (ಜಾರಿದಳ-1) ಸುನಿಲ್ ಕುಮಾರ್ ಎಂ.ಟಿ, ಕೃಷಿ ಅಧಿಕಾರಿ ಮುತ್ತಣ್ಣ ಈಳಗೇರ ಹಾಗೂ ವಿಶ್ವನಾಥ ಬಗನಾಳ, ಕೊಪ್ಪಳ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಸದ್ದಾಂ ಹುಸೇನ್ ಇವರು ಜುಲೈ 08 ರಂದು ಶ್ರೀ ನಾಗರಾಜ ಟ್ರೇಡಿಂಗ್ ಕಂಪನಿ, ಎಸ್.ಜಿ. ಗಂಜ್, ಕೊಪ್ಪಳ ರಸಗೊಬ್ಬರ ಮಾರಾಟ ಮಳಿಗೆಗೆ ಭೇಟಿ ನೀಡಿ ಪರಿಶೀಲಿಸಿದ್ದು, ಪರಿಶೀಲನಾ ಸಮಯದಲ್ಲಿ ರಸಗೊಬ್ಬರ ನಿಯಂತ್ರಣ ಆದೇಶ 1985 ಹಾಗೂ 1955 ರ ವಿವಿಧ ಕ್ಲಾಸುಗಳ ಉಲ್ಲಂಘನೆ ಮಾಡಿರುವುದು ಕಂಡುಬಂದಿರುತ್ತದೆ.
ಮಾರಾಟ ಮಳಿಗೆಯಲ್ಲಿ ನಿಯಮಾನುಸಾರ ರಸಗೊಬ್ಬರ ದಾಸ್ತಾನು ಮತ್ತು ಮಾರಾಟದ ಬೆಲೆಯನ್ನು ನಾಮಫಲಕದಲ್ಲಿ ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸದೆ ರಸಗೊಬ್ಬರ ನಿಯಂತ್ರಣ ಆದೇಶ 1985 ಕ್ಲಾಸ್ 4ನ್ನು ಉಲ್ಲಂಘಿಸಿರುತ್ತಾರೆ. ರಸಗೊಬ್ಬರ ಕೊಂಡವರಿಗೆ ನಮೂನೆ-ಒ ನಲ್ಲಿ ಬಿಲ್ ನೀಡದೇ ರಸಗೊಬ್ಬರ ನಿಯಂತ್ರಣ ಆದೇಶ 1985 ಕ್ಲಾಸ್ 5 ನ್ನು ಉಲ್ಲಂಘಿಸಿರುತ್ತಾರೆ. ವಿವಿಧ ರಸಗೊಬ್ಬರಗಳನ್ನು ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದು, ಆ ಕಂಪನಿಗಳ ಫಾರಂ-ಒ ಅನ್ನು ರಸಗೊಬ್ಬರ ಮಾರಾಟದ ಪರವಾನಗಿಯಲ್ಲಿ ಅನುಮತಿ ಪಡೆದಿರುವುದಿಲ್ಲ ಅಥವಾ ಅವಧಿ ಮುಕ್ತಾಯಗೊಂಡಿರುತ್ತವೆ. ಕಾರಣ ರಸಗೊಬ್ಬರ ನಿಯಂತ್ರಣ ಆದೇಶ 1985 ಕ್ಲಾಸ್ 8ನ್ನು ಉಲ್ಲಂಘಿಸಿರುತ್ತಾರೆ. ದೂರುದಾರರು ನೀಡಿದ ಮಾಹಿತಿ ಹಾಗೂ ವಿಡಿಯೋ ಸಂದೇಶದ ಕುರಿತು ಮಾರಾಟಗಾರರನ್ನು ಪ್ರಶ್ನಿಸಿದಾಗ ನಾವು ಯಾವುದೇ ರೀತಿಯಾಗಿ ಯೂರಿಯಾ ಗೊಬ್ಬರವನ್ನು 350 ರೂಪಾಯಿಗೆ ಮಾರಾಟ ಮಾಡಿರುವುದಿಲ್ಲ ಆದರೆ ಆ ವಿಡಿಯೋದಲ್ಲಿರುವ ನಮ್ಮ ಅಂಗಡಿಯ ಸಹಾಯಕರಾದ ವಿಶ್ವನಾಥ ಹಳ್ಳಿಕೇರಿರವರು 350ಕ್ಕೆ ಒಂದು ಚೀಲ ಯೂರಿಯಾ ಎಂದು ಹೇಳಿರುವುದು ಸತ್ಯವಿರುತ್ತದೆ ಎಂದು ಒಪ್ಪಿಕೊಂಡಿರುತ್ತಾರೆ. ಅದು ಗಮನಕ್ಕೆ ಇರುವುದಿಲ್ಲ ಎಂದು ತಿಳಿಸಿರುತ್ತಾರೆ. ಈ ಮೂಲಕ ರಸಗೊಬ್ಬರ ನಿಯಂತ್ರಣ ಆದೇಶ 1985 ಕ್ಲಾಸ್ 3ನ್ನು ಉಲ್ಲಂಘಿಸಿರುತ್ತಾರೆ.
ಸಹಾಯಕ ಕೃಷಿ ನಿರ್ದೇಶಕರು (ಜಾರಿದಳ-1), ಜಂಟಿ ಕೃಷಿ ನಿರ್ದೇಶಕರ ಕಛೇರಿ, ಕೊಪ್ಪಳ ಇವರು ತಮಗೆ ನೀಡಿದ ನೋಟಿಸ್‌ಗೆ ತಾವು ಸಲ್ಲಿಸಿದ ಉತ್ತರವು ಸಮಂಜಸವಾಗಿರುವುದಿಲ್ಲ ಎಂದು ತಿಳಿಸಿರುತ್ತಾರೆ. ರೈತರಿಗೆ ಖರೀದಿ ಸಮಯದಲ್ಲಿ ಬಿಲ್ಲುಗಳನ್ನು ನೀಡದೇ ಅಧಿಕಾರಿಗಳು ಭೇಟಿ ನೀಡಿದ ನಂತರ ನೀಡಿರುತ್ತಾರೆ. ಈ ಹಿನ್ನೆಲೆ ಮಳಿಗೆಯು ರಸಗೊಬ್ಬರ (ಸಾವಯವ, ನಿರವಯವ ಅಥವಾ ಮಿಶ್ರಿತ) ನಿಯಂತ್ರಣ ಆದೇಶ 1985 ಕ್ಲಾಸ್ 3, 4, 5, 8, 35 ಮತ್ತು ಅಗತ್ಯ ವಸ್ತುಗಳ ಕಾನೂನು 1955ರ ಕಲಂ 8 ಮತ್ತು 9 ರ ನಿಯಮಾವಳಿಗಳನ್ನು ಉಲ್ಲಂಘಿಸಿರುತ್ತಾರೆ.
ದೂರುದಾರರ ಲಿಖಿತ ದೂರು ಹಾಗೂ ವಿಡಿಯೋ ಸಂದೇಶದನ್ವಯ ಜಂಟಿ ಕೃಷಿ ನಿರ್ದೇಶಕರು ಹಾಗೂ ಸಹಾಯಕ ಕೃಷಿ ನಿರ್ದೇಶಕರು(ಜಾರಿದಳ-1) ಇವರ ದೂರವಾಣಿ ಆದೇಶದಂತೆ ನಿಯಮಾವಳಿಗಳ ಉಲ್ಲಂಘನೆಗಾಗಿ ಶ್ರೀ ನಾಗರಾಜ ಟ್ರೇಡಿಂಗ್ ಕಂಪನಿ, ಎಸ್.ಜಿ ಗಂಜ್, ಕೊಪ್ಪಳ (ನೋಂದಣಿ ಸಂಖ್ಯೆ : ADA/7/FE19-2044947/2020-2021 ರಸಗೊಬ್ಬರ ಮಾರಾಟ ಮಳಿಗೆಯ ಪರವಾನಿಗೆ (ಲೈಸನ್ಸ್)ಯನ್ನು ಕ್ಲಾಸ್ 31(2)ರ ಪ್ರಕಾರ ಅಮಾನತ್ತುಗೊಳಿಸಿ ಆದೇಶಿಸಿದೆ ಎಂದು ಕೊಪ್ಪಳ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading