September 15, 2025
1747055537176.jpg



ಚಿತ್ರದುರ್ಗ  ಮೇ.12:
ಮುಂಬರುವ ಜೂನ್ 30 ರೊಳಗಾಗಿ ಜಿಲ್ಲೆಯಲ್ಲಿ ಬಾಕಿ ಇರುವ ಕಂದಾಯ ಗ್ರಾಮಗಳ ರಚನೆಗೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆ ಹೊರಡಿಸಬೇಕು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲೆಯ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಹಟ್ಟಿ, ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುವ ಕಾರ್ಯ ತ್ವರಿತಗತಿಯಲ್ಲಿ ನಡೆಯಬೇಕು ಎಂದು ಸೂಚನೆ ನೀಡಿದರು.
ಕಂದಾಯ ಗ್ರಾಮಗಳ ರಚನೆಗೆ ಜಿಲ್ಲೆಯಲ್ಲಿ ಒಟ್ಟು 316 ಗ್ರಾಮಗಳ ಗುರುತಿಸಲಾಗಿದ್ದು, ಈಗಾಗಲೇ 296 ಪ್ರಾಥಮಿಕ ಸೂಚನೆ ಹಾಗೂ 206 ಅಂತಿಮ ಅಧಿಸೂಚನೆಯಾಗಿದೆ. ಇನ್ನೂ 61 ಗ್ರಾಮಗಳು ಅಂತಿಮ ಅಧಿಸೂಚನೆಗೆ ಬಾಕಿ ಇದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾಹಿತಿ ನೀಡಿದರು.
ಗ್ರಾಮ ಪಂಚಾಯಿತಿಯಲ್ಲಿ ವಸತಿ ಪ್ರದೇಶಗಳ ಪಟ್ಟಿ ಇದೆ. ಕಂದಾಯ ಗ್ರಾಮಗಳ ಸಂಖ್ಯೆಗಿಂತ ವಸತಿ ಪ್ರದೇಶಗಳ ಸಂಖ್ಯೆ ಹೆಚ್ಚಿದೆ. ಇಲ್ಲಿ ದಾಖಲೆ ರಹಿತ ವಸತಿ ಪ್ರದೇಶಗಳ ಎಂಟ್ರಿ ಇರುತ್ತವೆ. ಕಂದಾಯ ಇಲಾಖೆಯ ಬಳಿ ದಾಖಲೆ ಸಹಿತ ಗ್ರಾಮಗಳ ಮಾಹಿತಿ ಇರುತ್ತದೆ ಎಂದು ತಿಳಿಸಿದ ಅವರು, ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಗಮನಿಸಿ, ಗ್ರಾಮ ರಚನೆ ಮಾಡಬೇಕು. ದಾಖಲೆ ರಹಿತ ಇದ್ದಲ್ಲಿ ಅವರಿಗೆ ಒಂದು ದಾಖಲೆ ಕಲ್ಪಿಸಿ, ಬದುಕು ಕಲ್ಪಿಸಿಕೊಡಬೇಕಿದೆ. ಈಗಾಗಲೆ ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಅನಧಿಕೃತ ನಿವೇಶನ, ಕಟ್ಟಡಗಳಿಗೆ ಬಿ-ಖಾತಾ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಅದೇ ರೀತಿ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿಯೂ ಅನಧಿಕೃತವಾಗಿ ರಚನೆಯಾಗಿರುವ ಕಂದಾಯ ನಿವೇಶನ, ಕಟ್ಟಡಗಳಿಗೂ ಬಿ-ಖಾತಾ ವಿತರಣೆಗೆ ಸರ್ಕಾರ ನಿರ್ಧಾರ ಕೈಗೊಂಡಿದ್ದು, ಹತ್ತು ದಿನಗಳಲ್ಲಿ ಈ ಪ್ರಕ್ರಿಯೆ ಪ್ರಾರಂಭವಾಗುವ ನಿರೀಕ್ಷೆ ಇದೆ. ಜನರ ಬದುಕಿಗೆ ನಿಶ್ಚಿತತೆ ಇರಬೇಕು. ಹಾಗಾಗಿ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಸಚಿವರು ಹೇಳಿದರು.
ಕಂದಾಯ ಗ್ರಾಮಗಳ ರಚನೆ ಕುರಿತಂತೆ ಜೂನ್ 30 ರ ಗಡುವನ್ನು ನಿಗದಿಪಡಿಸಲಾಗಿದ್ದು, ಕೇಂದ್ರ ಸರ್ಕಾರದಿಂದ ಜನಗಣತಿ ಕಾರ್ಯದ ಪ್ರಕ್ರಿಯೆ ಆರಂಭವಾದರೆ, ಹೊಸ ಕಂದಾಯ ಘಟಕಗಳ ರಚನೆಗೆ ನಿಷೇಧ ಅನ್ವಯ ಆಗಲಿದೆ. ಈ ನಿಷೇಧ ತೆರವಾಗಲು ಎರಡು ವರ್ಷ ಆಗಬಹುದು. ಹೀಗಾಗಿ ಬಾಕಿ ಇರುವ ಎಲ್ಲ ಕಂದಾಯ ಗ್ರಾಮಗಳ ರಚನೆ ಕಾರ್ಯ ಜೂ. 30 ರ ಒಳಗಾಗಿ ಪೂರ್ಣಗೊಳ್ಳಬೇಕು ಎಂದು ತಾಕೀತು ಮಾಡಿದರು.
ಗ್ರಾಮದ 1 ಕಿ.ಮೀ ವ್ಯಾಪ್ತಿ ಒಳಗೆ ಇದ್ದು, 10 ಮನೆಗಳಿಗಿಂತಲೂ ಹೆಚ್ಚು ಇದ್ದರೆ ಉಪ ಗ್ರಾಮ ರಚನೆ ಮಾಡಲು ಅವಕಾಶ ಇದೆ. ಜನರಿಗೆ ನಾವು ಸ್ಥಿರ ಬದುಕು ನೀಡಬೇಕು. ಬಿಟ್ಟು ಹೋಗಿರುವ ಕಂದಾಯ ಗ್ರಾಮಗಳ ರಚನೆ ಹಾಗೂ ಗುರುತಿಸುವ ಕಾರ್ಯ ಆಗಬೇಕು. ಈ ನಿಟ್ಟಿನಲ್ಲಿ ಯಾದವ ಹಾಗೂ ತಾಂಡಾ ಸಂಘದವರಿಂದ ಮಾಹಿತಿ ಪಡೆದು ಗ್ರಾಮ ಪಂಚಾಯಿತಿಯಿಂದ ಜನವಸತಿ ಪಟ್ಟಿ ಪಡೆಯುವಂತೆ ಸಚಿವರು ಸೂಚನೆ ನೀಡಿದರು.
ಕಂದಾಯ ಗ್ರಾಮಗಳ ಫಲಾನುಭವಿಗಳ ಹಕ್ಕುಪತ್ರ ನೊಂದಣಿ :
ಜಿಲ್ಲೆಯಲ್ಲಿ ಕಂದಾಯ ಗ್ರಾಮಗಳ ಹಕ್ಕುಪತ್ರ ಹಾಗೂ ಆಸ್ತಿ ನೊಂದಣಿಗೆ ಸಂಬಂಧಿಸಿದಂತೆ ಒಟ್ಟು 6393 ಕುಟುಂಬಗಳ ದಾಖಲೆಗಳಿಗೆ ಆಯಾ ತಹಸಿಲ್ದಾರರು ಅನುಮೋದನೆ ನೀಡಿದ್ದು, 4305 ಡೀಡ್‍ಗಳಿಗೆ ತಹಸಿಲ್ದಾರರು ಸಹಿ ಮಾಡಿರುತ್ತಾರೆ. ಈವರೆಗೆ 2888 ಫಲಾನುಭವಿಗಳಿಗೆ ಕಾವೇರಿ ತಂತ್ರಾಂಶದಲ್ಲಿ ಉಪನೊಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಸಲಾಗಿದ್ದು, 2403 ಫಲಾನುಭವಿಗಳ ಇ-ಸ್ವತ್ತು ನೋಟಿಸ್ ಜನರೇಟ್ ಮಾಡಲಾಗಿದೆ. ಎಲ್ಲ ಫಲಾನುಭವಿಗಳ ಹಕ್ಕುಪತ್ರ ನೊಂದಣಿ ದಾಖಲೆ ಹಾಗೂ ಇ-ಸ್ವತ್ತು ತಯಾರಿಸುವ ಕಾರ್ಯವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರು ಕಂದಾಯ ಸಚಿವರಿಗೆ ಭರವಸೆ ನೀಡಿದರು.
ಭೂ ಸುರಕ್ಷಾ ಯೋಜನೆಗೆ ವೇಗ ನೀಡಿ:
ಭೂ ಸುರಕ್ಷಾ ಯೋಜನೆಯನ್ನು ಭೂ ಕಂದಾಯ ಇಲಾಖೆಯ ಎಲ್ಲಾ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಉದ್ದೇಶದಿಂದ ಕೈಗೆತ್ತಿಕೊಳ್ಳಲಾಗಿದ್ದು, ಈ ಯೋಜನೆ ತ್ವರಿತಗತಿಯಲ್ಲಿ ಆಗಬೇಕು ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಈ ಯೋಜನೆಯಡಿ ಜಿಲ್ಲೆಯಲ್ಲಿ ಚಳ್ಳಕೆರೆ, ಹಿರಿಯೂರು, ಹೊಳಲ್ಕೆರೆ ತಾಲ್ಲೂಕುಗಳು ಉತ್ತಮ ಸಾಧನೆ ತೋರಿದ್ದು, ಉಳಿದ ಮೂರು ತಾಲ್ಲೂಕುಗಳು ಸಹ ತ್ವರಿತಗತಿಯಲ್ಲಿ ಆಗಬೇಕು. ಜಿಲ್ಲೆಯಲ್ಲಿ ಸರಾಸರಿ 10 ಸಾವಿರ ಪುಟಗಳ ಸ್ಕ್ಯಾನ್ ಹಾಗೂ ಆಪ್‍ಲೋಡ್ ಆಗಬೇಕು ಎಂದು ಸಚಿವರು ಸೂಚನೆ ನೀಡಿದರು.

ಹೊಸಪೇಟೆಯಲ್ಲಿ ಸರ್ಕಾರದ ಎರಡು ವರ್ಷಗಳ ಸಾಧನಾ ಸಮಾವೇಶ:
ಇದೇ ಮೇ.20ರಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಸರ್ಕಾರಕ್ಕೆ ಎರಡು ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ 01 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ, ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ನಾವು ಮಾಡಿರುವ ಕೆಲಸವನ್ನು ಜನರಿಗೆ ಸಮರ್ಪಣೆ ಮಾಡುತಿದ್ದೇವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಇದು 2 ವರ್ಷಗಳ ಸಂಭ್ರಮಾಚರಣೆ ಕಾರ್ಯಕ್ರಮ ಅಲ್ಲ, ನಾವು ಮಾಡಿರುವ ಮಹತ್ವಪೂರ್ಣ ಕಾರ್ಯವನ್ನು ಜನರಿಗೆ ಸಮರ್ಪಿಸಿ, ಅವರ ಬದುಕಿಗೆ ಸ್ಥಿರತೆ ತಂದು ಕೊಡುವ ಅರ್ಥಪೂರ್ಣ ಕಾರ್ಯಕ್ರಮ ಇದಾಗಲಿದೆ. ಜನರಿಗೆ ಶಕ್ತಿ ತುಂಬುವ ಮೂಲಕ ಸರ್ಕಾರದ ಎರಡು ವರ್ಷಗಳ ಸಾಧನೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ 1 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಹಕ್ಕುಪತ್ರ, ದಾಖಲೆ ವಿತರಿಸುವ ಮೂಲಕ ಆಚರಿಸುತ್ತಿದ್ದೇವೆ ಎಂದು ಹೇಳಿದರು.
ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಎಲ್ಲ ಸಚಿವರು ಭಾಗವಹಿಸಲಿದ್ದು, ನಮ್ಮ ಸರ್ಕಾರ ಜನಪರ ಹಾಗೂ ಬಡವರ ಪರವಾಗಿದೆ. ರಾಜ್ಯದ ಜನತೆಗೆ ಸಮರ್ಪಿಸಲು 2 ವರ್ಷದ ಸಾಧನೆ ಕಾರ್ಯಕ್ರಮ ವೇದಿಕೆಯಾಗಲಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ಈ ಕಾರ್ಯಕ್ರಮಕ್ಕೆ ಪ್ರತಿ ಫಲಾನುಭವಿ ಜೊತೆಗೆ ಅವರ ಕುಟುಂಬ ಸದಸ್ಯರೊಬ್ಬರು ಆಗಮಿಸುವ ರೀತಿ ವ್ಯವಸ್ಥೆ ಮಾಡಲಾಗುತ್ತಿದೆ. ಚಿತ್ರದುರ್ಗ ಜಿಲ್ಲೆಯಿಂದಲೂ ವಿವಿಧ ಫಲಾನುಭವಿಗಳನ್ನು ಕಾರ್ಯಕ್ರಮಕ್ಕೆ ಸಮರ್ಪಕವಾಗಿ ಕರೆತರುವ ರೀತಿಯಲ್ಲಿ ವ್ಯವಸ್ಥೆ ಕೈಗೊಳ್ಳಬೇಕು, ಹಾಗಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸಿ, ಫಲಾನುಭವಿ ಹಾಗೂ ಕುಟುಂಬದ ಒರ್ವ ಸದಸ್ಯರನ್ನು ಕರೆತರುವ ಮೂಲಕ ಸವಲತ್ತು ವಿತರಣಾ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ರಾಜ್ಯ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್‍ಪೀರ್, ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಶಿವಣ್ಣ, ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ತಾಲ್ಲೂಕುಗಳ ತಹಸಿಲ್ದಾರರು ಪಾಲ್ಗೊಂಡಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading