April 12, 2026
IMG-20260412-WA0340.jpg

ಚಿತ್ರದುರ್ಗ: ಅಂಬೇಡ್ಕರ್ ವಿಚಾರ ವೇದಿಕೆ(ರಿ), ಜಂಬೂದ್ವೀಪ ಕರ್ನಾಟಕ ಇವರ ಸಹಯೋಗದಲ್ಲಿ ಮಹಾತ್ಮ ಫುಲೆ ಅಧ್ಯಯನ ಕೇಂದ್ರದಲ್ಲಿ ಮಹಾತ್ಮ ಜ್ಯೋತಿಬಾ ಫುಲೆ ಅವರ 199ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಚಿಂತಕ ಶ್ರೀನಿವಾಸರಾಜು ದೊಡ್ಡೇರಿ ಅವರು, ಜ್ಯೋತಿಬಾ ಫುಲೆ ಎಲ್ಲ ವರ್ಗಗಳ ಐಕಾನ್ ಆಗಿದ್ದು, ವಿಶೇಷವಾಗಿ ಶೂದ್ರ ವರ್ಗದವರು ಅವರ ಚಿಂತನೆಗಳನ್ನು ಆದರ್ಶವಾಗಿ ತೆಗೆದುಕೊಳ್ಳಬೇಕಿದೆ ಎಂದರು. ಪುಲೆ ದಂಪತಿಗಳು ಬಾಬಾಸಾಹೇಬರ ತಂದೆ ರಾಮಜಿ ಸಕ್ಪಾಲ್ ಅವರೊಂದಿಗೆ ಸತ್ಯಶೋಧಕ ಸಮಾಜದ ಒಡನಾಡಿಗಳಾಗಿದ್ದು, ಬಾಬಾಸಾಹೇಬರು ಅವರ ಸಾಧನೆಗಳನ್ನು ಕೇಳುತ್ತಲೇ ಬೆಳೆದಿದ್ದರು ಎಂದು ತಿಳಿಸಿದರು.
ಬುದ್ಧನು ಸ್ತ್ರೀಯರಿಗೆ ಬೌದ್ಧ ಧರ್ಮದಲ್ಲಿ ಅವಕಾಶ ನೀಡಿದಂತೆ, ಫುಲೆ ಅವರು ಮಹಿಳೆಯರಿಗೆ ಶಿಕ್ಷಣ ಮತ್ತು ಉದ್ಯೋಗದ ಅವಕಾಶ ಕಲ್ಪಿಸಿದರು. ಶೋಷಿತ ಸಮುದಾಯಗಳ ಬಿಡುಗಡೆಗಾಗಿ ಅವರ ವೈಚಾರಿಕ ಹೋರಾಟವೇ ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ಪುಲೆಯನ್ನು ಗುರುವಾಗಿ ಸ್ವೀಕರಿಸಲು ಪ್ರೇರೇಪಿಸಿತು ಎಂದರು.
ಶಿಕ್ಷಣವೇ ತಳಸಮುದಾಯಗಳ ಅಭಿವೃದ್ಧಿಗೆ ಪ್ರಮುಖ ಸಾಧನವಾಗಿದ್ದು, ಅದು ಎಲ್ಲ ವರ್ಗಗಳಿಗೂ ಬೆಳಕಿನ ದೀಪವಾಗಬೇಕು ಎಂದು ಹೇಳಿದರು. ಪುಣೆ ಪ್ರಾಂತ್ಯದಲ್ಲಿ ಮಹಿಳಾ ಶಿಕ್ಷಣ ಮತ್ತು ಆತ್ಮಗೌರವದ ಬದುಕಿಗೆ ನಾಂದಿ ಹಾಡಿದ ಫುಲೆ ಅವರ ಹೋರಾಟ ಸಂವಿಧಾನದ ಸಾರ್ವತ್ರಿಕ ಶಿಕ್ಷಣ ಆಶಯಗಳ ಮುಂದುವರೆದ ಭಾಗವಾಗಿದೆ ಎಂದು ಸ್ಮರಿಸಿದರು.
ಕವಿ ಶಿವಶಂಕರ ಸೀಗೆಹಟ್ಟಿ ಅವರು ಮಾತನಾಡಿ, ಅಂಬೇಡ್ಕರ್ ಅವರು ಫುಲೆ ಅವರನ್ನು ಮೂರನೇ ಗುರುವಾಗಿ ಸ್ವೀಕರಿಸಿರುವುದು ಚಾರಿತ್ರಿಕ ಸಂಗತಿಯಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಅವರ ಕೊಡುಗೆಯನ್ನು ಇನ್ನಷ್ಟು ಸ್ಮರಿಸುವ ಅಗತ್ಯವಿದೆ ಎಂದರು. ಕಾಲೇಜು ಹಂತದಲ್ಲಿ ಫುಲೆ ಕುರಿತು ಪಠ್ಯಗಳನ್ನು ರೂಪಿಸಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ಅಭಿಪ್ರಾಯಪಟ್ಟರು.
ಶಿಕ್ಷಕರಾದ ಡಾ. ಪ್ರದೀಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತದ ಶೈಕ್ಷಣಿಕ ಇತಿಹಾಸದಲ್ಲಿ ನೆನೆಯಬೇಕಾದ ಮಹತ್ವದ ಮೈಲುಗಲ್ಲುಗಳ ಬಗ್ಗೆ ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೇದಾಂತ ಏಳಂಜಿ ಅವರು, ಫುಲೆ ಮತ್ತು ಬಾಬಾಸಾಹೇಬರು ಶೋಷಿತ ಸಮುದಾಯಗಳ ಮಾರ್ಗದರ್ಶಕರಾಗಿದ್ದು ಸದಾ ಪ್ರೇರಣೆಯಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಜಂಬೂದ್ವೀಪ ಕರ್ನಾಟಕದ ಕಾರ್ಯದರ್ಶಿ ಸಿದ್ದೇಶ್, ನಿಕಟಪೂರ್ವ ಅಧ್ಯಕ್ಷ ರಾಮಣ್ಣ ಬಾಲೇನಹಳ್ಳಿ, ವಕೀಲ ವಿಶ್ವಾನಂದ ವದ್ದೀಕೆರೆ, ಆರ್. ಮಂಜುನಾಥ್, ಡಾ. ಕುಮಾರ್, ಭೀಮರಾಜು, ಶ್ರೀನಿವಾಸ್, ಹನುಮಂತಪ್ಪ ದಡಗೂರು, ಪ್ರಕಾಶ ಯಾದಲಗಟ್ಟೆ, ಪುರುಷೋತ್ತಮ, ಬುದ್ಧನಗರ ರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading