March 13, 2026
IMG-20260312-WA0208.jpg

ಚಳ್ಳಕೆರೆ:
ಗುಣಮಟ್ಟದ ಹಾಲು ಉತ್ಪಾದನೆ ಮಾಡುವ ಮೂಲಕ ರೈತರು ಹಾಲು ಉತ್ಪಾದಕರ ಒಕ್ಕೂಟವನ್ನು ಇನ್ನಷ್ಟು ಸುಭದ್ರಪಡಿಸಬೇಕು ಎಂದು ಶಿಮುಲ್ ನಿರ್ದೇಶಕರಾದ ಬಿ.ಸಿ. ಸಂಜೀವಮೂರ್ತಿ ಹೇಳಿದರು.

ಚಳ್ಳಕೆರೆ–ಪಾವಗಡ ರಸ್ತೆಯಲ್ಲಿರುವ ಶ್ರೀ ಸಾಯಿ ಮಂದಿರದ ಸಭಾಂಗಣದಲ್ಲಿ ಶಿಮುಲ್ ಒಕ್ಕೂಟದ ವತಿಯಿಂದ ಹೈನುಗಾರಿಕೆಯಲ್ಲಿ ತೊಡಗಿರುವ ಹಾಲು ಉತ್ಪಾದಕರಿಗೆ ಶುದ್ಧ ಹಾಗೂ ಗುಣಮಟ್ಟದ ಹಾಲು ಉತ್ಪಾದನೆ ಕುರಿತು ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೃಷ್ಣಾಪುರ ಗ್ರಾಮದಲ್ಲಿ ಒಟ್ಟು 70 ಮನೆಗಳಿದ್ದು, ಸುಮಾರು 400 ಹಸುಗಳನ್ನು ಸಾಕಲಾಗಿದೆ. ಗ್ರಾಮದಿಂದ ಪ್ರತಿನಿತ್ಯ 3 ಸಾವಿರದಿಂದ 4 ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಇಲ್ಲಿ ಹಸುಗಳನ್ನು ಅತ್ಯುತ್ತಮವಾಗಿ ಸಾಕಲಾಗುತ್ತಿದ್ದು, ರಾಸುಗಳ ಸಾಕಾಣಿಕೆ ತರಬೇತಿಗಾಗಿ ರೈತರು ಧಾರವಾಡಕ್ಕೆ ಹೋಗಬೇಕಿಲ್ಲ, ಕೃಷ್ಣಾಪುರಕ್ಕೆ ಬಂದು ನೋಡಿದರೆ ಸಾಕು ಎಂದು ಅವರು ಹೇಳಿದರು.
ರಾಜ್ಯದಲ್ಲಿ ಒಟ್ಟು 16 ಹಾಲು ಒಕ್ಕೂಟಗಳಿದ್ದು, ಎರಡು ಬಿ.ಎಂ.ಸಿ. ಕೇಂದ್ರಗಳನ್ನು ಹೊಂದಿರುವ ಏಕೈಕ ಕೇಂದ್ರ ಧರ್ಮಪುರವಾಗಿದೆ. ಇಲ್ಲಿ ಪ್ರತಿನಿತ್ಯ ಸುಮಾರು 6 ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ ಎಂದು ತಿಳಿಸಿದರು.
ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಿಗಾಗಿ ದಾವಣಗೆರೆಯಲ್ಲಿ ಪ್ರತ್ಯೇಕ ಮೆಗಾ ಡೈರಿ ನಿರ್ಮಾಣವಾಗುತ್ತಿದ್ದು, ಸುಮಾರು 14 ಎಕರೆ ವಿಸ್ತೀರ್ಣದಲ್ಲಿ 300 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ. ಈಗಾಗಲೇ ಭೂಮಿಪೂಜೆ ನಡೆದಿದ್ದು, ಇಲ್ಲಿ 27 ನಂದಿನಿ ಉತ್ಪನ್ನಗಳನ್ನು ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದರು.
ಇಂದಿನ ದಿನಗಳಲ್ಲಿ ಹಾಲು ಉತ್ಪಾದನೆ ಒಂದು ಪ್ರಮುಖ ಉದ್ಯಮವಾಗಿ ಬೆಳೆಯುತ್ತಿದ್ದು, ರೈತರು ರಾಸುಗಳ ನಿರ್ವಹಣೆಯಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ವಿಮಾ ಕಂಪನಿಗಳು ರೈತರ ಪರವಾಗಿ ನಿಲ್ಲಬೇಕು. ಆಕಸ್ಮಿಕವಾಗಿ ರಾಸು ಸತ್ತರೆ ಕಡಿಮೆ ವಿಮೆ ನೀಡದೆ, ಸಮರ್ಪಕ ಪರಿಹಾರ ನೀಡಬೇಕು. ರೈತರ ಬದುಕು ಕಷ್ಟಮಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿಮುಲ್ ನಿಯೋಜಕರಾದ ಡಾ. ಶರತ್ ಕುಮಾರ್ ಮಾಹಿತಿ ನೀಡಿದರು. ಶಿವಮೊಗ್ಗ ಪಶು ವೈದ್ಯಕೀಯ ಮಹಾವಿದ್ಯಾಲಯದ ಪ್ರಾಣಿ ಆಹಾರ ಶಾಸ್ತ್ರ ವಿಭಾಗದ ಡಾ. ಜಿ.ಎಂ. ಮತ್ತು ಸಾರ್ವಜನಿಕ ಆರೋಗ್ಯ ಹಾಗೂ ಸಮುದಾಯ ರೋಗ ಅಧ್ಯಯನ ಶಾಸ್ತ್ರ ವಿಭಾಗದ ಸಹಾಯಕ ಉಪನ್ಯಾಸಕರಾದ ಡಾ. ಪ್ರಶಾಂತ್ ಎಸ್. ಬಾಗಲಕೋಟೆ ಉಪನ್ಯಾಸ ನೀಡಿದರು.
ಈ ವೇಳೆ ಚಳ್ಳಕೆರೆ ವಿಭಾಗಾಧಿಕಾರಿ ಎಂ. ಪುಟ್ಟರಾಜ್, ವಿಸ್ತರಣಾಧಿಕಾರಿ ನಯಾಜ್ ಬೇಗ್, ಕೃಷ್ಣಕುಮಾರ್ ಸೇರಿದಂತೆ ಶಿಮುಲ್ ಸಿಬ್ಬಂದಿ, ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳು ಹಾಗೂ ಹಾಲು ಉತ್ಪಾದಕರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading