ಚಿತ್ರದುರ್ಗ ಮಾ. 12 :
ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಯವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಮದ್ಯ ಮತ್ತು ಮಾದಕ ವಸ್ತುಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಕಿರುನಾಟಕ ಹಾಗೂ ಜಾಗೃತಿ ಗೀತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯು ಮದ್ಯ ಮತ್ತು ಮಾದಕ ವಸ್ತುಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಲು ರಾಜ್ಯಾದ್ಯಂತ ಕಿರುನಾಟಕ, ಜಾಗೃತಿ ಗೀತೆಗಳು, ವಿಚಾರ ಸಂಕಿರಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಬಿ.ಜಿ.ಕೆರೆ, ಕೊಂಡ್ಲಹಳ್ಳಿ, ಕೋನಸಾಗರ, ಚಿಕ್ಕೋಬನಹಳ್ಳಿ, ಹಾನಗಲ್, ಯರ್ರನಹಳ್ಳಿ, ಮರ್ಲಹಳ್ಳಿ, ಹಿರೇಕೆರೆಹಳ್ಳಿ ಗ್ರಾಮದಲ್ಲಿ ಕಿರಿ ನಾಟಕ ಪ್ರದರ್ಶಿಸಿ ಜಾಗೃತಿ ಮೂಡಿಸಲಾಯಿತು. ಮೊಳಕಾಲ್ಮೂರು ತಾಲ್ಲೂಕು ಚಿಕ್ಕೋಬನಹಳ್ಳಿಯ ಸಿ. ಬಾಬು ಅವರ ನೇತೃತ್ವದ ಬೀದಿ ನಾಟಕ ತಂಡವು ಗ್ರಾಮಗಳಲ್ಲಿ ಕಿರು ನಾಟಕಗಳನ್ನು ಪ್ರದರ್ಶಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದರು.
ತಾಲ್ಲೂಕಿನ ಆಯಿತೋಳು ಗ್ರಾಮದ ಕಲಾವಿದ ಜಿ.ಎನ್. ವಿರುಪಾಕ್ಷಪ್ಪ ಅವರ ನೇತೃತ್ವದ ಕಲಾ ತಂಡವು ಚಿತ್ರದುರ್ಗ ತಾಲ್ಲೂಕಿನ ಚಿಕ್ಕಪುರ, ರಿಮ್ಮಾಗಟ್ಟೆ, ಗೊಡಬನಹಾಳ್, ಪಂಡರಹಳ್ಳಿ, ಐನಹಳ್ಳಿ, ವಡ್ಡನಹಳ್ಳಿ, ನಾಯಕರ ಸೊಲ್ಲಾಪುರ, ಕ್ಯಾಸಾಪುರ ಗ್ರಾಮಗಳಲ್ಲಿ ಸಂಚರಿಸಿ, ಜಾಗೃತಿ ಗೀತೆಗಳ ಮೂಲಕ ಮದ್ಯ ಮತ್ತು ಮಾದಕ ವಸ್ತುಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು ಎಂದು ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಅವರು ತಿಳಿಸಿದ್ದಾರೆ.


About The Author
Discover more from JANADHWANI NEWS
Subscribe to get the latest posts sent to your email.