February 13, 2026
IMG-20260212-WA0122.jpg

ನಾಯಕನಹಟ್ಟಿ-ಫೆ.12: ಗ್ರಾಮೀಣ ಪ್ರದೇಶದ ಬಡ ಜನರು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ಸಂಘ ಮಿತ್ರ ಗ್ರಾಮೀಣ ಸಂಸ್ಥೆ ದಾವಣಗೆರೆ ಪ್ರಾದೇಶಿಕ ವ್ಯವಸ್ಥಾಪಕ ಹೆಚ್.ಎಂ. ನಾಗರಾಜ್ ಹೇಳಿದರು.
ಹೋಬಳಿಯ ಗೌಡಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಭೀಮಗೊಂಡನಹಳ್ಳಿ ಗ್ರಾಮದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಚಿತ್ರದುರ್ಗ, ಜಿಲ್ಲಾ ಆಯುಷ್ ಇಲಾಖೆ ಚಿತ್ರದುರ್ಗ, ಕರ್ನಾಟಕ ರಾಜ್ಯ ಸರ್ಕಾರಿ ಆಯುಷ್ ವೈದ್ಯಾಧಿಕಾರಿಗಳ ಸಂಘ (ರಿ) ಚಿತ್ರದುರ್ಗ ಘಟಕ, ಬಾಪೂಜಿ ಆಯುರ್ವೇದಿಕ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಚಳ್ಳಕೆರೆ ಹಾಗೂ ಸಂಗಮಿತ್ರ ಗ್ರಾಮೀಣ ಹಣಕಾಸು ಸೇವಾ ಸಂಸ್ಥೆ ಚಳ್ಳಕೆರೆ, ಸಮುದಾಯ ನಿರ್ವಹಿತ ಸಂಪನ್ಮೂಲ ಕೇಂದ್ರ ನಾಯಕನಹಟ್ಟಿ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಆಯುರ್ವೇದಿಕ್ ತಪಾಸಣೆ ಮತ್ತು ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹೊಳ-ಮನೆಯಲ್ಲಿ ದೈಹಿಕ ಶ್ರಮ ಹಾಕಿ ಕೆಲಸ ಮಾಡುವ ರೈತರು ಹಾಗೂ ಹಳ್ಳಿಗಾಡಿನ ಜನರಲ್ಲೂ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಆಧುನಿಕ ಜೀವನ ಶೈಲಿ ಮತ್ತು ಒತ್ತಡದ ಬದುಕಿನಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಆರೋಗ್ಯದ ಬಗ್ಗೆ ಪ್ರತಿಯೊಬ್ಬರಲ್ಲೂ ಅರಿವು ಮೂಡಿದಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಅಬ್ಬೇನಹಳ್ಳಿ ಆಯುರ್ವೇದಿಕ್ ವೈದ್ಯಾಧಿಕಾರಿ ಬೊಮ್ಮಣ್ಣ ಎಸ್. ಬಾಬು ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿ ಆರೋಗ್ಯವೇ ಮುಖ್ಯ. ಆಯುರ್ವೇದ ವೈದ್ಯರಾಗಿ ನಿಮ್ಮ ಮನೆ ಬಾಗಿಲಿಗೆ ಬಂದು ಚಿಕಿತ್ಸೆ ನೀಡುವುದು ನಮ್ಮ ಸೌಭಾಗ್ಯ. ಗ್ರಾಮೀಣ ಭಾಗದ ಬಡ ಜನರು ಇಂತಹ ಶಿಬಿರಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯತಿ ಸದಸ್ಯ ಎಸ್. ತಿಪ್ಪೇಸ್ವಾಮಿ, ಗೌಡಗೆರೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಂಜುಳಾ ರಂಗಸ್ವಾಮಿ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಹನುಮಣ್ಣ, ಜಿ.ಓ. ಓಬಳೇಶ್, ಊರಿನ ಮುಖಂಡರಾದ ಬಸವರಾಜ್, ಬಾಪೂಜಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಆಡಳಿತ ವೈದ್ಯಾಧಿಕಾರಿ ಡಾ. ಅರುಣ್, ಡಾ. ಗುರುಭಗವತಿ, ಡಾ. ಕಲ್ಯಾಣಿ, ಸಂಘ ಮಿತ್ರ ಮುಖ್ಯ ವ್ಯವಸ್ಥಾಪಕ ಎಂ. ರಮೇಶ್, ವಲಯ ವ್ಯವಸ್ಥಾಪಕ ಕೆ.ಎಂ. ಸುನಿಲ್ ಕುಮಾರ್, ಮೈರಾಡ ಶ್ರೀಮತಿ ಲಕ್ಷ್ಮಿ, ವಿಜಯಮ್ಮ, ಮಹಾಂತೇಶ್, ಭೋಜರಾಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಶಿಬಿರದಲ್ಲಿ ಗ್ರಾಮಸ್ಥರು ಹಾಗೂ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading