ಚಿತ್ರದುರ್ಗ:
ಚಿತ್ರದುರ್ಗ ನಗರದ ಕ್ರೀಡಾ ಭವನದಲ್ಲಿ ಕಂಪಳ ಗೆಳೆಯರ ಬಳಗದ ವತಿಯಿಂದ ಸನ್ಮಾನ ಹಾಗೂ ಗೆಳೆಯರ 5ನೇ ವಾರ್ಷಿಕ ಸಮ್ಮಿಲನ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ಸಹ್ಯಾದ್ರಿ ಕಲಾ ಮತ್ತು ವಿಜ್ಞಾನ ಕಾಲೇಜು, ಶಿವಮೊಗ್ಗದ ನಿವೃತ್ತ ಪ್ರಾಚಾರ್ಯರಾದ ಪ್ರೊ. ಟಿ.ಎಸ್. ಹೂವಯ್ಯ ಗೌಡ ಅವರು ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಈ ಕಾರ್ಯಕ್ರಮ ಕೇವಲ ಸನ್ಮಾನ ಮತ್ತು ಗೆಳೆಯರ ಸಮ್ಮಿಲನವಷ್ಟೇ ಅಲ್ಲ, ಇದೊಂದು ಗುರು ವಂದನಾ ಕಾರ್ಯಕ್ರಮವೂ ಹೌದು” ಎಂದು ತಿಳಿಸಿದರು. ತಾವು ಚಿತ್ರದುರ್ಗ ಕಲಾ ಕಾಲೇಜಿನಲ್ಲಿ ಪ್ರಾಚಾರ್ಯರಾಗಿಯೂ ಹಾಗೂ ಎನ್‌ಸಿಸಿ ಕ್ಯಾಪ್ಟನ್ ಆಗಿಯೂ ಸೇವೆ ಸಲ್ಲಿಸಿದ ಅನುಭವಗಳನ್ನು ಸ್ಮರಿಸಿ, ಆ ಸೇವೆಯೇ ತಮ್ಮ ಜೀವನಕ್ಕೆ ಗೌರವ ಹಾಗೂ ಕೀರ್ತಿ ತಂದಿತು ಎಂದು ಹೇಳಿದರು. ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ ಮತ್ತು ಸಮಯಪ್ರಜ್ಞೆ ಅತ್ಯಂತ ಅಗತ್ಯವೆಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಪ್ರೊ. ಟಿ.ಎಸ್. ಹೂವಯ್ಯ ಗೌಡ ಅವರನ್ನು ಕಂಪಳ ಗೆಳೆಯರ ಬಳಗದ ವತಿಯಿಂದ ಸನ್ಮಾನಿಸಲಾಯಿತು.
ಬಳಗದ ಗೌರವಾಧ್ಯಕ್ಷರಾದ ಎಂ. ರೇವಣಸಿದ್ದಪ್ಪ (ನಿವೃತ್ತ ಜಂಟಿ ನಿರ್ದೇಶಕರು) ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ, ಕಂಪಳ ಗೆಳೆಯರ ಬಳಗವು ಜಾತ್ಯತೀತ ಹಾಗೂ ಧರ್ಮರಹಿತ ಸೌಹಾರ್ದತೆಯ ಬಳಗವಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಡಾ. ಶ್ರೀ ಚಂದ್ರಪ್ಪ ವಿರಚಿತ, ಡಾ. ಬಿ.ಆರ್. ಅಂಬೇಡ್ಕರ್ ಅವರ ‘ಜಾತಿ ವಿನಾಶ’ ಕೃತಿಯ ಅನುವಾದ ಪುಸ್ತಕವನ್ನು ಲೋಕಾರ್ಪಣೆ ಮಾಡಲಾಯಿತು. ಪುಸ್ತಕ ಕುರಿತು ಡಾ. ಅಂಜಿನಪ್ಪ (ನಿವೃತ್ತ ಪ್ರಾಚಾರ್ಯರು, ಶಿವಮೊಗ್ಗ) ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರೊ. ಹೆಚ್. ಲಿಂಗಪ್ಪ, ಪ್ರೊ. ಸಿ.ಕೆ. ಮಹೇಶ್ವರಪ್ಪ ಹಾಗೂ ಪ್ರೊ. ಅಶೋಕ್ ಕುಮಾರ್ ಅವರು ಮಾತನಾಡಿದರು.
ಈ ವೇಳೆ ಡಾ. ಮಂಜಣ್ಣ (ನಿವೃತ್ತ ಪ್ರಾಚಾರ್ಯರು, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ದಾವಣಗೆರೆ) ಹಾಗೂ ಶ್ರೀ ಜೈ ಶ್ರೀನಿವಾಸ್ (ನಿವೃತ್ತ ಉಪನ್ಯಾಸಕರು, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಚಿತ್ರದುರ್ಗ) ಅವರನ್ನು ಬಳಗದ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನಿತರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಬಳಗದ ಕಾರ್ಯದರ್ಶಿ ಹಾಗೂ ಜಿಲ್ಲಾ ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ಎಸ್. ಲಕ್ಷ್ಮಣ ಮಾತನಾಡಿ, ಪ್ರೊ. ಟಿ.ಎಸ್. ಹೂವಯ್ಯ ಗೌಡರು ತಮ್ಮ ಜೀವನದ ಮಾರ್ಗದರ್ಶಕರಾಗಿದ್ದು, ತಮ್ಮ ಸೇವಾ ಬದುಕಿಗೆ ಭದ್ರತೆ ನೀಡಿದ ಗುರುಗಳು ಎಂದು ಕೃತಜ್ಞತೆ ವ್ಯಕ್ತಪಡಿಸಿದರು. ಅವರ ಪ್ರಾಚಾರ್ಯರ ಅವಧಿಯನ್ನು ಕಲಾ ಕಾಲೇಜಿನ ಸುವರ್ಣಯುಗ ಎಂದು ಬಣ್ಣಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿ. ಅಜ್ಜಪ್ಪ (ನಿವೃತ್ತ ಜಂಟಿ ನಿರ್ದೇಶಕರು) ಮಾತನಾಡಿ, ಗ್ರಾಮೀಣ ಹಿನ್ನೆಲೆಯಿಂದ ಬಂದ ನಾವು ಸ್ವಂತ ಪರಿಶ್ರಮದಿಂದ ಬದುಕು ರೂಪಿಸಿಕೊಂಡೆವು. ಮುಂದಿನ ದಿನಗಳಲ್ಲಿ ಬಳಗದ ವತಿಯಿಂದ ಇನ್ನೂ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಜಂಟಿ ನಿರ್ದೇಶಕರಾದ ಎಂ. ರೇವಣಸಿದ್ದಪ್ಪ, ವಿ. ಅಜ್ಜಪ್ಪ, ಬಳಗದ ಖಜಾಂಚಿ ಆರ್.ಪಿ. ಜಯಣ್ಣ, ಶ್ರೀಮತಿ ಲಲಿತಮ್ಮ ರೇವಣಸಿದ್ದಪ್ಪ, ಲೇಖಕ ಡಾ. ಚಂದ್ರಪ್ಪ, ಯುವ ಮುಖಂಡ ಪ್ರತಾಪ್ ಜೋಗಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.