January 29, 2026
IMG-20260112-WA0331.jpg

ಚಳ್ಳಕೆರೆ:
ಯುವಜನತೆಯೇ ದೇಶದ ನಿಜವಾದ ಶಕ್ತಿ ಎಂದು ಸ್ವಾಮಿ ವಿವೇಕಾನಂದರು ನಂಬಿದ್ದರು. ವಿದ್ಯಾರ್ಥಿಗಳಲ್ಲಿ ಉತ್ತಮ ನಡತೆ, ಶ್ರದ್ಧೆ, ಆತ್ಮವಿಶ್ವಾಸ ಹಾಗೂ ಸಾಧಿಸುವ ಛಲವಿದ್ದರೆ ದೇಶದ ಭವಿಷ್ಯವನ್ನೇ ಬದಲಿಸಬಹುದು ಎಂದು ಜೆಎಂಎಫ್‌ಸಿ ನ್ಯಾಯಾಲಯದ ಅಪರ ನ್ಯಾಯಾಧೀಶರಾದ ಪುನೀತ್ ಬಿ.ಆರ್. ಅಭಿಪ್ರಾಯಪಟ್ಟರು.ನಗರದ ಗಿರಿಯಮ್ಮ ಸ್ವತಂತ್ರ ಮಹಿಳಾ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಮುಂದಿನ ಬೆಳವಣಿಗೆ ಯುವಜನತೆಯ ಮೇಲೆ ಅವಲಂಬಿತವಾಗಿದೆ ಎಂದರು. ಪಿಯುಸಿ ಹಂತದಲ್ಲೇ ಸ್ಪಷ್ಟ ಗುರಿ ನಿಗದಿಪಡಿಸಿಕೊಂಡು ಅದನ್ನು ಸಾಧಿಸುವ ಛಲ ಬೆಳೆಸಿಕೊಳ್ಳಬೇಕು. ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು ಗುರಿಯತ್ತ ಏಕಾಗ್ರತೆಯಿಂದ ಪಯಣಿಸಬೇಕು ಎಂದು ಸಲಹೆ ನೀಡಿದರು.ಈ ಹಂತದಲ್ಲಿ ವಿದ್ಯಾರ್ಥಿಗಳು ಏನನ್ನಾದರೂ ಸಾಧಿಸುವ ಶಕ್ತಿಯನ್ನು ಹೊಂದಿರುತ್ತಾರೆ. ಪೋಷಕರು ಹಾಗೂ ಉಪನ್ಯಾಸಕರ ಮಾರ್ಗದರ್ಶನ ಪಡೆದು ತಮ್ಮ ಗುರಿ ನಿಗದಿಪಡಿಸಿಕೊಂಡು ಸಾಧನೆಯ ದಾರಿಯಲ್ಲಿ ಮುಂದುವರಿಯಬೇಕು. ಸ್ವಾಮಿ ವಿವೇಕಾನಂದರ ಆದರ್ಶಗಳು ಇಡೀ ವಿಶ್ವಕ್ಕೆ ಮಾದರಿಯಾಗಿದ್ದು, ಆ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ಸುರೇಶ್ ಮಾತನಾಡಿ, ಸ್ವಾಮಿ ವಿವೇಕಾನಂದರಿಗೆ ವೇದಾಂತದ ಜೊತೆಗೆ ಮಾನವೀಯ ಮೌಲ್ಯಗಳ ಬಗ್ಗೆ ಅಪಾರ ಜ್ಞಾನವಿತ್ತು. ಧರ್ಮ ಹಾಗೂ ನೈಜತೆಯ ಕುರಿತು ಅವರು ನೀಡಿದ ಚಿಂತನೆಗಳ ಬೆಳಕಿನಲ್ಲಿ ಇಂದಿನ ಯುವಜನತೆ ಸಾಗಬೇಕಿದೆ ಎಂದು ತಿಳಿಸಿದರು.
ವಕೀಲರ ಸಂಘದ ಉಪಾಧ್ಯಕ್ಷೆ ಶಮಲ ಮಾತನಾಡಿ, ಸ್ವಾಮಿ ವಿವೇಕಾನಂದರ ಆದರ್ಶಗಳು ಯುವಜನತೆಗೆ ಸದಾ ಸ್ಪೂರ್ತಿದಾಯಕವಾಗಿವೆ. 1984ರಿಂದ ದೇಶಾದ್ಯಂತ ರಾಷ್ಟ್ರೀಯ ಯುವ ದಿನಾಚರಣೆ ಆಚರಿಸಲಾಗುತ್ತಿದೆ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ದೈವತ್ವದ ಭಾವನೆ ಮೂಡಿಸುವಲ್ಲಿ ವಿವೇಕಾನಂದರು ಯಶಸ್ವಿಯಾಗಿದ್ದರು. ಯುವಜನತೆಯ ಶಕ್ತಿಯನ್ನು ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡಿದರೆ ದೇಶದ ಅಮೂಲ್ಯ ಸಂಪತ್ತಾಗಿ ಪರಿವರ್ತಿಸಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಅಶ್ವತ ನಾಯಕ್ ವಹಿಸಿದ್ದರು. ವಕೀಲ ಕೆ. ಕುಮಾರ್ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಮಂಜ ನಾಯಕ್, ವಕೀಲರಾದ ಪರಮೇಶ್ವರಪ್ಪ, ಬಸವರಾಜೇಶ್ವರಿ, ಮುಖ್ಯ ಶಿಕ್ಷಕ ಮಧು, ಕಾಲೇಜಿನ ವಿದ್ಯಾರ್ಥಿನಿಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading