March 16, 2026
FB_IMG_1733920724636.jpg


ಹಿರಿಯೂರು:
ತಾಲ್ಲೂಕಿಗೆ ಅತ್ಯಂತ ಅವಶ್ಯಕ ಬೇಡಿಕೆಯಾಗಿ ತಾಲ್ಲೂಕಿನ ಬಸ್ ಡಿಪೋ ನಿರ್ಮಾಣ ಹಾಗೂ ಉಧ್ಘಾಟನೆಯು ಪರಿಣಮಿಸಿದೆ. ಪುಣೆ- ಬೆಂಗಳೂರು ಮತ್ತು ಬೀದರ್-ಶ್ರೀರಂಗಪಟ್ಟಣ ಎಂಬ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುವ ಹಾಗೂ ಅತಿ ಹೆಚ್ಚು ಕೆ.ಎಸ್.ಆರ್.ಟಿ.ಸಿ ಬಸ್ ಗಳು ಸಂಚರಿಸುವುದರಿಂದ ತಾಲ್ಲೂಕಿನಲ್ಲಿ ಬಸ್ ಡಿಪೋ ನಿರ್ಮಾಣದ ಸಾರ್ವಜನಿಕರ ಒತ್ತಾಯಕ್ಕೆ ಬಲ ತುಂಬಿದಂತಾಗಿದೆ.
ತಾಲ್ಲೂಕಿನಲ್ಲಿ ಡಿಪೋ ಆರಂಭಿಸಬೇಕೆಂಬ ಒತ್ತಾಯವು ಸಾರ್ವಜನಿಕರಿಂದ ಸುಮಾರು 1998ರಿಂದಲೂ ನಡೆಯುತ್ತಲೇ ಇದೆ. ಆದರೆ ಈ ಕ್ಷೇತ್ರದಲ್ಲಿ ಕೆ.ಎಚ್.ರಂಗನಾಥ್, ಡಿ.ಮಂಜುನಾಥ್ ರಂತಹ ಘಟಾನುಘಟಿ ಶಾಸಕರು, ಸಚಿವರುಗಳಾಗಿ ಹಲವು ವರ್ಷಗಳ ಕಾಲ ಆಡಳಿತ ನಡೆಸಿದ್ದರೂ ಬಸ್ ಡಿಪೋ ನಿರ್ಮಾಣಕ್ಕೆ ಮಾತ್ರ ಭಾಗ್ಯ ಕೂಡಿ ಬಂದಿರಲಿಲ್ಲ. ಪ್ರತಿ ಚುನಾವಣೆ ಬಂದಾಗಲೆಲ್ಲಾ, ಚುನಾವಣಾ ಅಭ್ಯರ್ಥಿಗಳು ತಮ್ಮ ಗೆಲುವಿಗೆ ಇದನ್ನು ಪ್ರಮುಖ ಅಸ್ತ್ರವಾಗಿ ಬಳಸುತ್ತಿದ್ದರು.
ಉತ್ತಮ ಕಾರ್ಯಕ್ಕೆ ಕಾಲ ಕೂಡಿ ಬಂದಿತು ಎಂಬಂತೆ, 2010ರಲ್ಲಿ ಬಿ.ಜೆ.ಪಿ ಸರ್ಕಾರದಲ್ಲಿ ಬಸ್ ಡಿಪೋ ನಿರ್ಮಾಣ ಪ್ರಸ್ತಾವನೆಗೆ ಅನುಮೋದನೆ ದೊರೆತು, ಅಂದಿನ ಸಚಿವರಾಗಿದ್ದ ಡಿ.ಸುಧಾಕರ್ ಅವರು ಸಾರಿಗೆ ಮಂತ್ರಿಯಾಗಿದ್ದ ಆರ್. ಅಶೋಕ್ ಅವರನ್ನು ಕರೆತಂದು ಹುಳಿಯಾರು ರಸ್ತೆಯಲ್ಲಿ ಡಿಪೋ ಕಾಮಗಾರಿಗೆ ಪೂಜೆ ಮಾಡಿಸಿದ್ದರು. ನಂತರದ ರಾಜಕೀಯ ಬೆಳವಣಿಗೆಗಳಿಂದ ಡಿಪೋ ನಿರ್ಮಾಣ ನೆನೆಗುದಿಗೆ ಬಿದ್ದಿತ್ತು. ಅಲ್ಲದೇ ಆ ಜಾಗದಲ್ಲೇ ಜಾಲಿಗಿಡಗಳು ಬೆಳೆದಿದ್ದವು.
ನಂತರದಲ್ಲಿ ಈ ಜಾಗದಲ್ಲಿ ಡಿಪೋ ನಿರ್ಮಾಣ ಮಾಡಲು ಸಾಧ್ಯವಿಲ್ಲವೆಂದು ಪಟ್ರೇಹಳ್ಳಿ ಸಮೀಪ ಆದಿವಾಲ ಗ್ರಾಮದ ರಿ.ಸ.ನಂ.109ರಲ್ಲಿ ಎಂಟು ಎಕರೆ ಭೂಮಿಯನ್ನು ರಸ್ತೆ ಸಾರಿಗೆ ಸಂಸ್ಥೆಗೆ ಹಸ್ತಾಂತರಿಸಲಾಗಿತ್ತು. ಅಲ್ಲದೇ 10 ಕೋಟಿ ರೂಗಳ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು . ಆದರೆ, ಕೋವಿಡ್ ಕಾರಣದಿಂದ ಕಾಮಗಾರಿ ಆರಂಭವಾಗಲಿಲ್ಲ.
ಕೊನೆಗೆ 2022ರ ಡಿಸೆಂಬರ್ 6ರಂದು ಅಂದಿನ ಶಾಸಕಿಯಾಗಿದ್ದ ಶ್ರೀಮತಿ ಪೂರ್ಣಿಮಾಶ್ರೀನಿವಾಸ್ ರವರು ಮತ್ತೆ ಸಾರಿಗೆ ಸಚಿವರಾಗಿದ್ದ ಬಿ.ಶ್ರೀರಾಮುಲು ಅವರನ್ನು ಕರೆಯಿಸಿ ನಗರದ ಹುಳಿಯಾರು ರಸ್ತೆಯ ತಾಲ್ಲೂಕು ಕ್ರೀಡಾಂಗಣದ ಸಮೀಪ ಸುಮಾರು ಮೂರು ಎಕರೆ ವಿಸ್ತೀರ್ಣದಲ್ಲಿ 6 ಕೋಟಿರೂಗಳ ವೆಚ್ಚದ ಡಿಪೋ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ನೆರವೇರಿಸಿದ್ದರು.
ಶಂಕುಸ್ಥಾಪನೆ ನೆರವೇರಿಸಿ ಆರಂಭಗೊಂಡಂತಹ ಡಿಪೋದಲ್ಲಿ ಈ ಎರಡು ವರ್ಷದಲ್ಲಿ ನಗದು ಮತ್ತು ಟಿಕೆಟ್ , ಆಡಳಿತ, ಯಾಂತ್ರಿಕ, ಸಂಚಾರ ಭದ್ರತಾ ಶಾಖೆಗಳ ಕೊಠಡಿಗಳು, ಘಟಕ ವ್ಯವಸ್ಥಾಪಕರ, ತೈಲ, ಇಂಧನ, ಬ್ಲಾಕ್ ಸ್ಥಿತ, ಕೆ.ಎಂ.ಪಿ.ಎಲ್, ಗಾಳಿ ಸಂಕೇತಕ, ಟೈರ್ , ಬ್ಯಾಟರಿ, ಉಗ್ರಾಣ, ವಾಷರ್, ದಾಖಲಾತಿ, ಟ್ರೇ ಬಾಕ್ಸ್, ವಿದ್ಯುತ್ ಜನಕ, ಪ್ಯಾನಲ್ ಬೋರ್ಡ್ ಕೊಠಡಿಗಳು, ಶೌಚಾಲಯ ಕೊಠಡಿ ನಿರ್ಮಾಣಗೊಂಡಿದ್ದು, ಕೇವಲ ಸಿವಿಲ್ ವರ್ಕ್ ಮಾತ್ರ ಪೂರ್ಣಗೊಂಡಿದೆ.
ಆದರೆ ಈ ಕಾಮಗಾರಿಯ ಶಂಕು ಸ್ಥಾಪನೆ ನೆರವೇರಿಸಿ, ಎರಡು ವರ್ಷಗಳಾದರೂ ಉದ್ಘಾಟನೆ ಭಾಗ್ಯ ಕಾಣದೆ ಜನರಿಗೆ ದೂರವಾಗುತ್ತಿದೆ. ಅಂದಿನಿಂದಲೂ ಕಾಮಗಾರಿ ತ್ವರಿತಗತಿಯಲ್ಲಿ ನಡೆಸುವಂತೆ ಸಾರ್ವಜನಿಕರು, ರೈತರು, ನಾನಾ ಪ್ರಗತಿಪರ ಸಂಘಟನೆಗಳು ಒತ್ತಾಯ ಮಾಡುತ್ತಲೇ ಬರುತ್ತಿದ್ದಾರೆ. ಆದರೂ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. ರೈತ ಸಂಘವು ಗಡುವು ನೀಡಿದ್ದು, ಅದರಂತೆ ಪೂರ್ಣಗೊಳ್ಳದ ಕಾರಣ ಧರಣಿ ನಡೆಸಲು ತೀರ್ಮಾನಿಸಿದೆ. ಇತ್ತ ವಿದ್ಯಾರ್ಥಿಗಳು ಕೂಡ ಸಮರ್ಪಕ ಬಸ್ ವ್ಯವಸ್ಥೆಯಿಲ್ಲ ಎಂದು ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading