September 13, 2025
1757598198553.jpg



ಚಿತ್ರದುರ್ಗ ಸೆ.11:
ಜಿಲ್ಲಾಸ್ಪತ್ರೆಗೆ ಮಂಜೂರಾದ ಹುದ್ದೆಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅನುಗುಣವಾಗಿ ತಜ್ಞ ವೈದ್ಯರು, ಶುಶ್ರೂಷಕರು, ತಂತ್ರಜ್ಞರು, ಗ್ರೂಪ್-ಡಿ ನೌಕರರನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾಸ್ಪತ್ರೆಗೆ ಮಂಜೂರಾದ ಹುದ್ದೆಗಳು ಖಾಲಿ ಇದ್ದ ಸಂದರ್ಭದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿದೆ. ಜಿಲ್ಲಾಸ್ಪತ್ರೆಯಲ್ಲಿ ಫಿಜಿಷಿಯನ್, ಹೃದ್ರೋಗ ತಜ್ಞರು, ಅರವಳಿಕೆ ತಜ್ಞರು, ನೆಫ್ರೋಲಜಿ, ನ್ಯೂರೋಲಜಿ ಅಂತಹ ತಜ್ಞ ವೈದ್ಯರ ಕೊರತೆ ಕಾಡಬಾರದು. ಆಸ್ಪತ್ರೆಯಲ್ಲಿ ಇಂಜಿನಿಯರ್ ಗ್ರೇಡ್ 2 ಹಾಗೂ ಗ್ರೇಡ್ -3 ಹಂತದ 6 ಹುದ್ದೆಗಳು ಖಾಲಿಯಿವೆ. ಹೊರಗುತ್ತಿಗೆ ಅಥವಾ ಪ್ರಭಾರದಲ್ಲಿ ಈ ಹುದ್ದೆಗಳಿಗೆ ಭರ್ತಿ ಮಾಡಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು. ಜಿಲ್ಲಾಸ್ಪತ್ರೆಯ ದುರಸ್ಥಿ ಕಾಮಗಾರಿ ಪೂರ್ಣಗೊಂಡು ಎರಡು ವರ್ಷಗಳು ತುಂಬಿಲ್ಲ. ಆದರೂ ವಾರ್ಡ್ ಮೇಲ್ಛಾವಣಿ ಕುಸಿದು ಬಿದ್ದು ರೋಗಿಗಳಿಗೆ ತೊಂದರೆಯಾದ ಕುರಿತು ಮಾಧ್ಯಮಗಳಲ್ಲಿ ವರದಿ ಬಿತ್ತರವಾಗಿತ್ತು. ಕಟ್ಟಡ ಕ್ಷಮತೆ, ಅಗತ್ಯ ಇರುವ ದುರಸ್ಥಿ ಕೆಲಸಗಳ ಕುರಿತು ಇಂಜಿನಿಯರ್ ಅವರ ವರದಿ ಇಲ್ಲದೇ ದುರಸ್ಥಿ ಕಾಮಗಾರಿ ನಡೆಸಲಾಗಿದೆಯೇ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಜಿಲ್ಲಾ ಶಸ್ತ್ರಚಿಕಿತ್ಸಕರನ್ನು ಪ್ರಶ್ನಿಸಿದರು.
ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್ ಮೇಲಿನ ಕಾಳಜಿಗೆ ಅಸಮಧಾನ :


ಜಯದೇವ, ಕಿದ್ವಾಯಿ ಸೇರಿದಂತೆ ರಾಜ್ಯದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳು ಸಿಬ್ಬಂದಿ ಕೊರತೆ ನಡುವೆಯೂ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸುವ ರೋಗಿಗಳಿಗೆ ವಿಶ್ವ ದರ್ಜೆಯ ಚಿಕಿತ್ಸೆ ನೀಡುತ್ತಿವೆ. ಬೇರೆಡೆಗೆ ಹೊಲಿಸಿದರೆ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಸಿಬ್ಬಂದಿ ಸಂಖ್ಯೆ ಹೆಚ್ಚಿದೆ. ಆದರೆ ಇಲ್ಲಿನ ವೈದ್ಯರಿಗೆ ತಮ್ಮ ಸ್ವಂತ ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್‍ಗಳ ಮೇಲಿರುವಷ್ಟು ಕಾಳಜಿ ಜಿಲ್ಲಾಸ್ಪತ್ರೆಯ ಬಗ್ಗೆ ಇಲ್ಲ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಿಬ್ಬಂದಿ ಕೊರತೆ ನಡುವೆಯೂ ವೈದ್ಯರ ಖಾಸಗಿ ಆಸ್ಪತ್ರೆಗಳು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತವೆ. ಆದರೆ ಜಿಲ್ಲಾಸ್ಪತ್ರೆಯಲ್ಲಿ ಮಾತ್ರ ಇದು ಸಾಧ್ಯವಿಲ್ಲ ಎಂದರೆ ಹೇಗೆ? ಇದಕ್ಕೆಲ್ಲಾ ಇಚ್ಚಾಶಕ್ತಿ ಕೊರತೆಯೇ ಕಾರಣವಾಗಿದೆ. ಆಡಳಿತಾಧಿಕಾರಿಗಳು, ವೈದ್ಯರು, ಶುಶ್ರೂಷಕರು, ತಂತ್ರಜ್ಞರು, ಗ್ರೂಪ್ ಡಿ ಸಿಬ್ಬಂದಿಯ ಮೇಲೆ ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಹಿಡಿತ ಇಲ್ಲವೇ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಬೇಸರ ವ್ಯಕ್ತಪಡಿಸಿದರು.

ಎ.ಬಿ.ಆರ್.ಕೆ. ಅನುದಾನದ ಲೆಕ್ಕ ಪತ್ರ ನೀಡಲು ಸೂಚನೆ:


ಜಿಲ್ಲಾ ಆಸ್ಪತ್ರೆಯಲ್ಲಿ ಕಳೆದ 3 ವರ್ಷಗಳಲ್ಲಿ ಎ.ಬಿ.ಆರ್.ಕೆ (ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ) ಯೋಜನೆಯಡಿ ನೀಡಿದ ಶಸ್ತ್ರಚಿಕಿತ್ಸೆ ಹಾಗೂ ಯೋಜನೆಗೆ ಸರ್ಕಾರದಿಂದ ಬಿಡುಗಡೆ ಮಾಡಿದ ಅನುದಾನದ ಕುರಿತು ಲೆಕ್ಕ ಪತ್ರ ವಿವರಗಳನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಸೂಚಿಸಿದರು.
ಎ.ಬಿ.ಆರ್.ಕೆ ಅನುದಾನದಲ್ಲಿ ವೈದ್ಯರಿಗೆ ನೀಡಿದ ಭತ್ಯೆ, ಖರೀದಿಸಿದ ಔಷದೋಪಕರಣಗಳ ವೆಚ್ಚವನ್ನು ಪರಿಶೀಲನೆಗೆ ನೀಡಬೇಕು. ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಇರುವ ಆರ್ಥಿಕ ವೆಚ್ಚದ ಅಧಿಕಾರದಡಿ ಖರ್ಚು ಮಾಡಿದ ವೆಚ್ಚದ ಮಾಹಿತಿ ನೀಡಬೇಕು. ರಾಜ್ಯ ಔಷದೋಗ್ರಾಣದಿಂದ ಜಿಲ್ಲಾಸ್ಪತ್ರೆಗೆ ಸರಬರಾಜು ಮಾಡಿದ ಔಷಧಗಳ ವಿವರ ಹಾಗೂ ಖಾಸಗಿ ಸರಬರಾಜುದಾರರಿಂದ ಖರೀದಿಸಿದ ಔಷಧಗಳ ವಿವರವನ್ನು ಕಂಪನಿಗಳ ಹೆಸರು ಸಹಿತ ಪರಿಶೀಲನೆಗೆ ನೀಡುವಂತೆ ಹೇಳಿದರು.
ಸಿಜೇರಿಯನ್ ಹೆರಿಗೆ ಹೆಚ್ಚಳಕ್ಕೆ ಕಳವಳ :


ಜಿಲ್ಲಾಸ್ಪತ್ರೆಯಲ್ಲಿ ಈ ವರ್ಷ ಏಪ್ರಿಲ್ ನಿಂದ ಆಗಸ್ಟ್‍ವರೆಗೆ ಒಟ್ಟು 2,638 ಹೆರಿಗೆಗಳು ಸಂಭವಿಸಿವೆ. ಈ ಪೈಕಿ 789 ಸಹಜ 1,859 ಸಿಜೇರಿಯನ್ ಹೆರಿಗೆಗಳಾಗಿವೆ. ಸಿಜೇರಿಯನ್ ಹೆರಿಗೆ ಪ್ರಮಾಣ ಹೆಚ್ಚಿರುವುದಕ್ಕೆ ಜಿಲ್ಲಾಧಿಕಾರಿ ವೆಂಕಟೇಶ್ ಕಳವಳ ವ್ಯಕ್ತಪಡಿಸಿದರು.
ಗರ್ಭಧಾರಣೆಯಿಂದ ಹಿಡಿದು ಮಗು ಜನಿಸಿದ ನಂತರವೂ ಗರ್ಭಿಣಿ ಹಾಗೂ ಬಾಣಂತಿಯರ ಆರೋಗ್ಯದ ಕಾಳಜಿ ವಹಿಸಲು ಸರ್ಕಾರ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಗರ್ಭಿಣಿಯರಿಗೆ ಪೌಷ್ಠಿಕ ಆಹಾರ ನೀಡುವುದರ ಮೂಲಕ ತೂಕ ಹೆಚ್ಚಳ, ರಕ್ತಹೀನತೆ, ಅಪೌಷ್ಠಿಕತೆ ತಪ್ಪಿಸಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೂ ಜಿಲ್ಲಾಸ್ಪತ್ರೆಯಲ್ಲಿ ಸಿಜೇರಿಯನ್ ಹೆರಿಗಳು ಹೆಚ್ಚಾಗುತ್ತಿರುವುದು ಏಕೆ ವೈದ್ಯರನ್ನು ಪ್ರಶ್ನಿಸಿದರು.
ಪ್ರಸಕ್ತ ವರ್ಷದಲ್ಲಿ ಜಿಲ್ಲಾಸ್ಪತ್ರೆಯಿಂದ 754 ಮೇಜರ್ ಆಪರೇಷನ್, 486 ಟ್ರಾಮಾ ಆಪರೇಷನ್, 441 ಕಣ್ಣಿನ ಶಸ್ತ್ರಚಿಕಿತ್ಸೆ 96 ಇತರೆ ಶಸ್ತ್ರಚಿಕತ್ಸೆಗಳನ್ನು ನಡೆಸಲಾಗಿದೆ. 1,70,020 ಹೊರ ರೋಗಿಗಳು, 22,624 ಒಳರೋಗಿಗಳು ಚಿಕಿತ್ಸೆ ಪಡೆದಿದ್ದಾರೆ. 2,920 ಸಿ.ಟಿ.ಸ್ಕ್ಯಾನ್, 5,874 ಎಂ.ಆರ್.ಐ ಸ್ಕಾನ್ ಮಾಡಲಾಗಿದೆ. 311 ರೋಗಿಗಳು 2,917 ಸೈಕಲ್‍ಗಳಷ್ಟು ಡಯಾಲಿಸಿಸ್‍ಗೆ ಒಳಪಟ್ಟಿದ್ದಾರೆ. 560 ರೋಗಗಳು ಐ.ಸಿ.ಯುಗೆ ದಾಖಲಾಗಿದ್ದಾರೆ. ಈ ಪೈಕಿ 93 ರೋಗಿಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ. 234 ರೋಗಿಗಳನ್ನು ಉನ್ನತ ಮಟ್ಟದ ಚಿಕಿತ್ಸೆಗಾಗಿ ಬೇರೆಡೆಗೆ ಶಿಫಾರಸ್ಸು ಮಾಡಲಾಗಿದೆ. 70 ರೋಗಿಗಳು ಮೃತಪಟ್ಟಿದ್ದಾರೆ. 15,799 ಪ್ರಕರಣಗಳಲ್ಲಿ ಎ.ಬಿ.ಆರ್.ಕೆ. ಕ್ಲೈಮ್ ಸಲ್ಲಿಕೆ ಮಾಡಲಾಗಿದೆ ಎಂದು ಜಿಲ್ಲಾಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಮಾಹಿತಿ ನೀಡಿದರು.
ಜಿಲ್ಲಾಸ್ಪತ್ರೆಯಲ್ಲಿ ಮೂಳೆಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗೆ ರೋಗಿಗಳು ವಾರಗಟ್ಟಲೇ ಕಾಯುವ ಪರಿಸ್ಥಿತಿ ಇದೆ. ಕೇವಲ 486 ಟ್ರಾಮಾ ಅಪರೇಷನ್‍ಗಳನ್ನು ಮಾಡಲಾಗಿದೆ. ಈ ವಿಭಾಗದಲ್ಲಿ 7 ತಜ್ಞ ವೈದ್ಯರು ಕೆಲಸ ಮಾಡುತ್ತಾರೆ. ಆದರೂ ದಿನಕ್ಕೆ ಕೇವಲ ಸರಾಸರಿ 2 ರಿಂದ 3 ಶಸ್ತ್ರಚಿಕಿತ್ಸೆಗಳನ್ನು ಮಾತ್ರ ಮಾಡಲಾಗುತ್ತಿದೆ. ರೋಗಿಗಳ ಮನವಿಗೆ ವೈದ್ಯರು ಸ್ಪಂದಿಸುವುದಿಲ್ಲ ಎಂದು ಆರೋಗ್ಯ ರಕ್ಷಾ ಸಮಿತಿ ಸದಸ್ಯರು ಸಭೆಯಲ್ಲಿ ದೂರಿದರು.
ಜಿಲ್ಲಾಸ್ಪತ್ರೆಯ ಮುಂದಿರುವ ರಸ್ತೆಯನ್ನು ಹಾಕರ್ ಹಾಗೂ ಪಾರ್ಕಿಂಗ್‍ಗೆ ಮೀಸಲಿರಿಸಿ, ವಾಹನ ಓಡಾಟ ನಿರ್ಬಂದಿಸಲು ನಗರಸಭೆ ತಿರ್ಮಾನ ಕೈಗೊಳ್ಳಬೇಕು. ಆಸ್ಪತ್ರೆಯ ಮುಂದಿರುವ ಆಟೋ ನಿಲ್ದಾಣಕ್ಕೂ ಬೇರೆಡೆ ಜಾಗ ಗುರುತಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ನಗರಸಭೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಪ್ರಸಾದ್, ನಿವಾಸಿ ವೈದ್ಯಾಧಿಕಾರಿ ಆನಂದ್ ಪ್ರಕಾಶ್, ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ಸಿ.ಓ.ಸುಧಾ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಡಾ.ಶೀತಲ್ ಪ್ರಶಾಂತ, ಚಿದಾನಂದ ಸ್ವಾಮಿ, ಹಬೀಬುಲ್ಲಾ, ನಾಗರಾಜ ಸಕ್ಕರೆ, ಎಂ.ಆರ್.ಸಿ. ಮೂರ್ತಿ, ರೆಹಮತ್ ಸೇರಿದಂತೆ ಮತ್ತಿತರರು ಇದ್ದರು.

========

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading