September 14, 2025
1757597230980.jpg



ಚಿತ್ರದುರ್ಗ ಸೆ.11:
ದೇಶದ ಗಡಿಯಲ್ಲಿ ನಮ್ಮನ್ನು ಕಾಯುವ ಸೈನಿಕರು ಎಷ್ಟು ಮುಖ್ಯವೋ, ರಾಷ್ಟ್ರೀಯ ಸಂಪತ್ತು ಎಂದು ಘೋಷಣೆಯಾಗಿರುವ ಕಾಡು, ವನ್ಯಜೀವಿ, ಜೀವ ಸಂಕುಲ ರಕ್ಷಿಸುವ ಹಸಿರು ಯೋಧರು ಕೂಡ ನಮ್ಮ ರಕ್ಷಕರು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರೋಣ ವಾಸುದೇವ್ ಹೇಳಿದರು.
ನಗರದ ಅರಣ್ಯ ಇಲಾಖೆಯ ವಿಭಾಗೀಯ ಕಚೇರಿ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಅರಣ್ಯ ಹುತಾತ್ಮರಿಗೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಹೆಚ್ಚಿನ ಸೌಲಭ್ಯ ಹಾಗೂ ಮೂಲ ಸೌಕರ್ಯಗಳನ್ನು ಸರ್ಕಾರವು ಅರಣ್ಯ ಇಲಾಖೆಗೆ ಕಲ್ಪಿಸಿಕೊಡಬೇಕು ಎಂದು ತಿಳಿಸಿದ ಅವರು, ಅರಣ್ಯ ಸಂರಕ್ಷಣೆಯ ಹೋರಾಟದಲ್ಲಿ ಹುತಾತ್ಮರಾದವರ ಸ್ಮರಣಾರ್ಥವಾಗಿ ಮಾಡುವ ಇದು ಮಹತ್ವದ ಕಾರ್ಯ. ಪರಿಸರ, ವನ್ಯಜೀವಿ, ಜೀವವೈವಿಧ್ಯವನ್ನು ರಕ್ಷಣೆ ಮಾಡುವ ಅವಕಾಶ ಸಂವಿಧಾನದಲ್ಲಿದ್ದು, ನಾವು ಅದನ್ನು ರೂಢಿಸಿಕೊಳ್ಳಬೇಕು. ಪರಿಸರ ಹಾನಿಯಾಗದಂತೆ ಎಚ್ಚರ ವಹಿಸಬೇಕು ಎಂದರು.
ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಮಾಲತೇಶ್ ಅರಸ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ವಿದ್ಯಾರ್ಥಿಗಳಲ್ಲಿ, ಜನಸಾಮಾನ್ಯರಲ್ಲಿ ಅರಣ್ಯ ಸಂರಕ್ಷಣೆಯ ಮಹತ್ವ ಸಾರಬೇಕು. ಪರಿಸರ, ವನ್ಯಜೀವಿ ಮತ್ತು ಪ್ರಕೃತಿಯ ಸಮತೋಲನಕ್ಕಾಗಿ ಅರಣ್ಯಗಳ ಅಗತ್ಯದ ಬಗ್ಗೆ ಅರಿವು ಮಾಡಿಸಬೇಕು, ಅರಣ್ಯ ಕಾಯ್ದೆಗಳ ಪಾಲನೆ ಮತ್ತು ಪರಿಸರ ಹಾನಿ ತಡೆಯುವ ಬಗ್ಗೆ ಜಾಗೃತಿ ಮೂಡಿಸುವುದು ನಮ್ಮ ಕರ್ತವ್ಯ ಎಂದರು.
ಚಿತ್ರದುರ್ಗ ಜಿಲ್ಲೆಯಲ್ಲಿ ವಿವಿಧ ಭಾಗಗಳಲ್ಲಿ ಮಾನವ ವನ್ಯಜೀವಿ ಸಂಘರ್ಷ ಹೆಚ್ಚಿದ್ದು, ಜಾಗೃತಿ ಜೊತೆಗೆ ಸಹಬಾಳ್ವೆ ಅಗತ್ಯವಾಗಿದೆ. ಕರಡಿ, ಚಿರತೆ ಸೇರಿದಂತೆ ವನ್ಯಜೀವಿಗಳು ಗ್ರಾಮದೊಳಗೆ ಬರಲು ನಾವೇ ಕಾರಣವಾಗಿದ್ದೇವೆ. ಇದರ ತಡೆಗೆ ಸರ್ಕಾರದ ಜೊತೆಗೆ ನಾಗರೀಕರ ಜವಾಬ್ದಾರಿ ಕೂಡ ಇದೆ. ಈ ನಿಟ್ಟಿನಲ್ಲಿ ವನ್ಯಜೀವಿ ಉಪಟಳದ ಗ್ರಾಮಗಳ ಜನರೊಂದಿಗೆ ಸಂವಾದ, ಚರ್ಚೆ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ. ಗೋಪ್ಯಾನಾಯ್ಕ ಮಾತನಾಡಿ, ಅರಣ್ಯ ಇಲಾಖೆಯ ಸಿಬ್ಬಂದಿಗಳು ದೇಶದ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗಾಗಿ ಮಾಡಿದ ತ್ಯಾಗ ಮತ್ತು ಬಲಿದಾನಗಳ ಸ್ಮರಣೆಗಾಗಿ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯನ್ನು ದೇಶದಾದ್ಯಂತ ಆಚರಿಸಲಾಗುತ್ತಿದೆ. 1966 ರಿಂದ 2025 ರವರೆಗೆ ರಾಜ್ಯದಲ್ಲಿ ಒಟ್ಟು 62 ಮಂದಿ ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರತರಾಗಿದ್ದಾಗ ಹುತಾತ್ಮರಾಗಿದ್ದಾರೆ ಎಂದರು.
ಚಿತ್ರದುರ್ಗ ಜಿಲ್ಲೆಯ ಇಬ್ಬರು ಯೋಧರಿಗೆ ನಮನ ಸಲ್ಲಿಸಿದ ಅವರು, ದೇಶದ ಎಲ್ಲಾ ಹುತಾತ್ಮರ ಸ್ಮರಣೆ ನಮ್ಮದಾಗಿದೆ, ಜಿಲ್ಲೆಯ ಅರಣ್ಯ ಸಿಬ್ಬಂದಿಗಳಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುತ್ತದೆ ಮತ್ತು ಅರಣ್ಯ ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ ಎಂದರು.
ಅರಣ್ಯ ಇಲಾಖೆಯ ಹುತಾತ್ಮರ ಸ್ಮರಣಾರ್ಥ ಇದೇ ಸಂದರ್ಭದಲ್ಲಿ ಪರೇಡ್ ನಡೆಸಲಾಯಿತು. ಮುಖ್ಯ ಅತಿಥಿಗಳಿಂದ ಅರಣ್ಯ ಹುತಾತ್ಮರಿಗೆ ಹೂಗುಚ್ಚ ಸಮರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಅರಣ್ಯ ಹುತಾತ್ಮರ ದಿನಾಚರಣೆಯ ಪಕ್ಷಿನೋಟ ಮತ್ತು ಅರಣ್ಯ ಹುತಾತ್ಮರ ಹೆಸರುಗಳನ್ನು ಸ್ಮರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ಎಲ್ಲಾ ತಾಲ್ಲೂಕಿನ ವಲಯ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಜೋಗಿಮಟ್ಟಿ ಪಾಲಕರು ಗಸ್ತು ವಿಭಾಗದವರು ಹಾಗೂ ಸಿಬ್ಬಂದಿ ಹಾಜರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading