September 14, 2025
1754919859432.jpg



ಚಿತ್ರದುರ್ಗ  ಆಗಸ್ಟ್ 11:
ಜಿಲ್ಲೆಯ ಕೈಗಾರಿಕಾ ಪ್ರದೇಶ, ಕೈಗಾರಿಕಾ ಘಟಕಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಮಟ್ಟದ ಏಕಗವಾಕ್ಷಿ ಸಮಿತಿ, ಕೈಗಾರಿಕಾ ಸ್ಪಂದನಾ ಹಾಗೂ ಪಿಎಂಇಜಿಪಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಅಕ್ಷಯ ಫುಡ್ ಪಾರ್ಕ್, ಕೆಳಗೋಟೆ ಕೈಗಾರಿಕಾ ಪ್ರದೇಶ, ಚಳ್ಳಕೆರೆ ಕೈಗಾರಿಕಾ ವಸಾಹತು, ಮೇಟಿಕುರ್ಕೆ ಕೈಗಾರಿಕಾ ಪ್ರದೇಶಕ್ಕೆ ನೀರು, ವಿದ್ಯುತ್, ರಸ್ತೆ ಸೇರಿದಂತೆ ಇನ್ನಿತರೆ ಅಗತ್ಯ ಮೂಲ ಸೌಕರ್ಯಗಳ ಕಲ್ಪಿಸಬೇಕು ಎಂದು ತಿಳಿಸಿದರು.
ಹಿರಿಯೂರು ತಾಲ್ಲೂಕಿನ ಹುಚ್ಚವ್ವನಹಳ್ಳಿ ಗ್ರಾಮದಲ್ಲಿ ಸ್ಥಾಪಿತವಾಗಿರುವ ಅಕ್ಷಯಫುಡ್ ಪಾರ್ಕ್‍ಗೆ ಹೋಗಲು ಸಂಪರ್ಕ ರಸ್ತೆ ಇಲ್ಲದೇ ತುಂಬಾ ಸಮಸ್ಯೆಯಾಗುತ್ತಿದೆ ಎಂದು ಉದ್ದಿಮೆದಾರರು ಸಭೆಯ ಗಮನಕ್ಕೆ ತಂದರು. ಅಕ್ಷಯ್ ಫುಡ್ ಪಾರ್ಕ್‍ನ ಸಂಪರ್ಕ ರಸ್ತೆಯನ್ನು ಕೈಗೊಳ್ಳಲು ಹಿರಿಯೂರು ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ, ಸಂಚಾರಕ್ಕೆ ಸಮಸ್ಯೆಯಾಗದಂತೆ ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಇಂಡಸ್ಟ್ರೀಯಲ್ ಕಾರಿಡಾರ್ ಯೋಜನೆಗೆ ಭೂ ಸ್ವಾಧೀನವಾಗಿರುವ ಮೇಟಿಕುರ್ಕೆ ಮತ್ತು ಕರಿಓಬನಹಳ್ಳಿ ಗ್ರಾಮದಲ್ಲಿ ಭೂಸ್ವಾಧೀನ ಜಮೀನು ಪೈಕಿ ಕೆಐಎಡಿಬಿ ಕಾಯ್ದೆ ಕಲಂ 28 (8) ರಡಿ ಅಭಿವೃದ್ಧಿ ಶಾಖೆಗೆ ಈಗಾಗಲೇ ಹಸ್ತಾಂತರವಾಗಿರುವ 920-06 ಎಕರೆ ಜಮೀನು ಹಾಗೂ ಹಸ್ತಾಂತರಿಸಲು ಬಾಕಿ ಇರುವ 236-06 ಎಕೆರೆ ಜಮೀನು ಹಸ್ತಾಂತರಕ್ಕೆ ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಪ್ರಧಾನಮಂತ್ರಿಗಳ ಉದ್ಯೋಗ ಸೃಜನೆ ಯೋಜನೆಗಳ ಜಿಲ್ಲಾಮಟ್ಟದ ಕಾರ್ಯಕಾರಿ ಸಮಿತಿ ಸಭೆ: ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಆನಂದ್ ಮಾತನಾಡಿ, 2025-26ನೇ ಸಾಲಿಗೆ ಪ್ರಧಾನಮಂತ್ರಿಗಳ ಉದ್ಯೋಗ ಸೃಜನೆ ಯೋಜನೆಯನ್ನು ಅನುಷ್ಠಾನಗೊಳಿಸಲು ಜಿಲ್ಲಾ ಕೈಗಾರಿಕಾ ಕೇಂದ್ರ, ಕೆವಿಐಬಿ ಮತ್ತು ಕೆವಿಐಸಿ ಬೆಂಗಳೂರು ಅವರಿಗೆ ಆನ್‍ಲೈನ್‍ನಲ್ಲಿ ಅರ್ಜಿ ಹಾಕಲು ಕೇಂದ್ರ ಸರ್ಕಾರದಿಂದ ಅವಕಾಶ ಕಲ್ಪಿಸಿರುತ್ತಾರೆ. ಆದರೆ ಪ್ರಸ್ತುತ ಸಾಲಿಗೆ ಯಾವುದೇ ಗುರಿ ನಿಗದಿಪಡಿಸದೇ ಇರುವುದರಿಂದ ಆನ್‍ಲೈನ್‍ನಲ್ಲಿ ಸಲ್ಲಿಸಿದ ಅರ್ಜಿಗಳನ್ನು ಗುರಿ ಬಂದ ನಂತರ ಬ್ಯಾಂಕಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಸಭೆಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಪಿಎಂ ವಿಶ್ವಕರ್ಮ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading