September 14, 2025
IMG-20250811-WA0174.jpg

ಚಳ್ಳಕೆರೆ: ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ನೆನ್ನೆ ನಡೆದ ತನುಶ್ರೀ ಪ್ರಕಾಶನ ಸಂಸ್ಶೆಯ ೪ ನೇ ರಾಜ್ಯಮಟ್ಟದ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಕವಿಯತ್ರಿ ಡಿ.ಶಬ್ರಿನಾ ಮಹಮದ್ ಅಲಿ ಅವರು ಮಾತನಾಡಿ, ಕವಿಗಳಿಗೆ ತನ್ನದೇಯಾದ ಸಾಮಾಜಿಕ ಜವಾಬ್ದಾರಿಗಳು ಇರುತ್ತವೆ. ವಚನಕಾರ ಮೆರಿಮಿಂಡದೇವ ಅವರ ಒಂದು ವಚನ ಹೀಗಿದೆ,ಹಸಿಯಾಗಲಿ ಕೃಷಿಯಾಗಲಿ, ವಾಚಕ ವಾಣಿಜ್ಯ ಮಸಿಯಾಗಲಿ ಮಾಡುವಲ್ಲಿ ಹುಸಿಯಿಲ್ಲಿದಿರಬೇಕು. ಈ ವಚನದಲ್ಲಿ ‘ಮಸಿ’ ಅಂದರೆ ಬರವಣಿಗೆ( ಸಾಹಿತಿಗಳು)ಕುರಿತು ಹೇಳಿದ್ದಾರೆ. ಹುಸಿಯ ನುಡಿಯದೇ ಸತ್ಯವನ್ನು ಸಾರುವಂತಹ ಬರವಣಿಗೆ ಬರಹಗಾರರದ್ದಾಗಿರಬೇಕು ಎಂದು ಎಚ್ಚರಿಸಿದ್ದಾರೆ.

ಅನಾದಿ ಕಾಲದಿಂದಲೂ ಕೆಲ ವರ್ಗದವರು,ದೇವರು& ಸಂಪ್ರದಾಯದ ಹೆಸರಲ್ಲಿ ಜನರನ್ನು ಮೌಢ್ಯಕ್ಕೆ ತಳ್ಳಿ ನಿರಂತರವಾಗಿ ಶೋಷಣೆಯನ್ನು ಮಾಡುತ್ತಾ ಬಂದಿದ್ದಾರೆ. ೧೨ ನೇ ಶತಮಾನದಲ್ಲಿ ಬಸವಾದಿ ಶರಣರು ಇದರ ವಿರುದ್ಧ ಸಿಡಿದೆದ್ದು ಜನರನ್ನ ಜಾಗೃತಗೊಳಿಸಿದರು. ಬಸವಣ್ಣನವರು ಸದಾಕಾಲ ತಮ್ಮ ವಚನಗಳ ಮೂಲಕ ವೈಜ್ಞಾನಿಕ & ವೈಚಾರಿಕ ಪ್ರಜ್ಞೆಯನ್ನು ಮೂಡಿಸಿದರು. ಸೋಮವಾರ ಮಂಗಳವಾರವೆಂದು ಮಾಡುವ ಭಕ್ತನ ಲಿಂಗ ಭಕ್ತ ಗೆಂದು ಸರಿಯೆಂಬನಯ್ಯ, ದಿನ ಶ್ರೇಷ್ಠವೋ,ಲಿಂಗ ಶ್ರೇಷ್ಠವೋ ಎಂದು ಹೇಳುವ ಮೂಲಕ ನಾವು ಉಸಿರಾಡುವ ಪ್ರತಿ ಗಳಿಗೆಯು ಶುಭವೇ ಆಗಿದೆ. ಅಶುಭ ಎನ್ನುವ ಮಾತೇ ಇಲ್ಲ ಎಂಬುದನ್ನ ತಿಳಿಸಿದರು. ೧೨ ನೇ ಶತಮಾನದ ವಚನಕಾರರಂತೆ ಇಂದಿನ ಬರಹಗಾರರು ಸಹ ಜನರಲ್ಲಿ ಜಾಗೃತಿಯನ್ನು ಮೂಡಿಸುವಂತಹ ಸಾಹಿತ್ಯವನ್ನು ರಚಿಸಬೇಕು ಎಂದು ತಿಳಿಸಿದರು.

ಮುಂದುವರೆದು ಕಾವ್ಯ ಎಂದರೇನು ಎಂದು ಮಾತನಾಡಿ, ಖಲೀಲ್ ಗಿಬ್ರಾನ್ ಅವರು ಕಾವ್ಯವೆಂದರೆ ಹೀಗೆ ಹೇಳುತ್ತಾರೆ. “ರಕ್ತ ಸುರಿಯುವ ಗಾಯದಿಂದ ಇಲ್ಲವೇ ಮುಗಳ್ನುಗುವ ಬಾಯಿಂದ ಗೊರ ಹೊಮ್ಮುವ ಗಾನವೇ ಕಾವ್ಯ”ಎಂದಿದ್ದಾರೆ. ದ.ರಾ ಬೇಂದ್ರೆಯವರು, “ಮಗುವಿನ ಮುಷ್ಠಿಯಲಿರುವ ತಾಯಿ ಸೆರಗಿನ ನೂಲು ಕವಿತೆ”ಎಂದಿದ್ದಾರೆ. ಗದ್ಯಕೂ & ಪದ್ಯಕೂ ಇರುವ ವ್ಯತ್ಯಾಸ ಗಮನಿಸಿ, ಪದ್ಯ ನಿರೀಕ್ಷಿಸುವ ಎಲ್ಲಾ ಲಕ್ಷಣಗಳನ್ನೊಳಗಂಡಂತೆ ನಮ್ಮ ಕವಿತೆ ರಚನೆಯಾಗಬೇಕು. ರಾಷ್ಟ್ರಕವಿ ಕುವೆಂಪು ಅವರು ಕವಿಯ ಲಕ್ಷಣ ಕುರಿತು ತಮ್ಮ ನುಡಿತೋರಣದಲ್ಲಿ ಹೀಗೆ ಹೇಳಿದ್ದಾರೆ, “ಜಾತಿ ಮತ ಇವೆಲ್ಲಾ ಬೇಕೆನ್ನುವವ ಅದೆಂತದೆ ದೊಡ್ಡ ಸಾಹಿತಿ ಆಗಿರಲಿ ಅವನಿಗೆ ನನ್ನ ಧಿಕ್ಕಾರ “ಎಂದು ಹೇಳಿದ್ದಾರೆ. ಅಂದರೆ ಬರಹಗಾರರು ಜನರನ್ನು ಬೇರೆಯಾಗಿಸುವ ಜಾತಿ ಮತಗಳ ದ್ವೇಷದ ಬೀಜ ಬಿತ್ತುವ ಕೆಲಸ ಮಾಡದೇ,ಅದರ ಬದಲಾಗಿ ಎಲ್ಲರನ್ನು ಒಗ್ಗೂಡಿಸುವ ಪ್ತೇವವನ್ನ,ಭಾತೃತ್ವವನ್ನ, ಮಾನವೀಯತೆಯನ್ನ ಸಾರಬೇಕು ಎಂದಿದ್ದಾರೆ. ಆ ನಿಟ್ಟಿನಲ್ಲಿಯೇ ನಾವು ಸಾಗಬೇಕಿದೆ ಎಂದರು.

ಕವಿತೆ ವಾಚಿಸುವಾಗ ‘ಹ’ ಕಾರ,’ಅ’ ಕಾರ ಅಲ್ಪ ಪ್ರಾಣ ಮಹಾಪ್ರಾಣ ಇವುಗಳನ್ನ ಗಮನಿಸದೇ ಓದಿದರೆ ಕವಿತೆ ಅರ್ಥ ಕಳೆದುಕೊಳ್ಳುತ್ತದೆ. ಹಾಗಾಗಿ ಕವಿಗಳು ಕನ್ನಡವನ್ನು ಸ್ಪಷ್ಟವಾಗಿ ಉಚ್ಛರಿಸುವದನ್ನು ಕಲಿತು ಇತರರಿಗೆ ಮಾದರಿಯಾಗಿ,ಈ ಮೂಲಕ ನಾವು ೨.೫೦೦ ವರ್ಷಗಳ ಇತಿಹಾಸ ಇರುವ ನಮ್ಮ ಕನ್ಮಡ ಭಾಷೆಯನ್ನು ಬಳಸುವ ಮೂಲಕ ಉಳಿಸಿಕೊಂಡು ಹೋಗಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಆಶಯನುಡಿಯನ್ನು ಅಣ್ಣಪ್ಪ ಮೇಟಿಗೌಡ ಆಡಿದರು,ಕವಿಗಳಾದ ಮಾನಸ, ಪಾಲಯ್ಯ,ಶಾರದಾ ಜಯರಾಂ, ಮಹಮದ್ ಅಲಿ, ಶಫೀವುಲ್ಲಾ,ಸೌಮ್ಯ ಬಾನಾಡಿ,ಹಂಸ ಶಂಕರ, ರೇಖಾ ಮುಂತಾದವರು ಭಾಗವಹಿಸಿದ್ದರು. ಮುದ್ದುರಾಜ್ ಅವರು ನಿರೂಪಣೆ ಮಾಡಿದರು.ತನುಶ್ರೀ ಪ್ರಕಾಶನದ ಅಧ್ಯಕ್ಷರಾದ ರಾಜು ಸೂಲೇನಹಳ್ಳಿಯವರು ವಂದಿಸಿದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading