
ಚಿತ್ರದುರ್ಗ ಜುಲೈ 11:
ವಾಣಿಜ್ಯ ಉದ್ದಿಮೆ ಪರವಾನಿಗೆ ಪಡೆದು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಎಲ್ಲಾ ಅಂಗಡಿಗಳು ಪ್ರತ್ಯೇಕವಾಗಿ ತಂಬಾಕು ಮಾರಾಟ ಪರವಾನಿಗೆಯನ್ನು ಪಡೆದುಕೊಳ್ಳಬೇಕು. ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ತಂಬಾಕು ಮಾರಾಟ ಮಾಡುವ ಶೇ.90 ರಷ್ಟು ಅಂಗಡಿಗಳಿಗೆ ತಿಂಗಳ ಒಳಗಾಗಿ ಪ್ರತ್ಯೇಕ ಪರವಾನಿಗೆ ನೀಡುವ ಗುರಿ ಸಾಧಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಾಕೀತು ಮಾಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ, ಶುಕ್ರವಾರ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ ಬಾರಿ ನಡೆದ ತ್ರೈಮಾಸಿಕ ಸಭೆಯಲ್ಲಿಯೇ, ಪ್ರತ್ಯೇಕವಾಗಿ ತಂಬಾಕು ಮಾರಾಟ ಪರವಾನಿಗೆ ನೀಡುವಂತೆ ಸೂಚಿಸಲಾಗಿತ್ತು. ನಗರ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪರವಾನಿಗೆ ನೀಡುವ ಕೆಲಸವಾಗಿಲ್ಲ. ಕೋಟ್ಪಾ ಕಾಯ್ದೆಯ ಅನುಸಾರ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿಗಳು ಪರವಾನಿಗೆ ಪಡೆಯುವುದು ಕಡ್ಡಾಯವಾಗಿದೆ. ಪ್ರತಿ ನಗರಸಭೆ ವ್ಯಾಪ್ತಿಯಲ್ಲಿ ಬಾರ್ ಅಂಡ್ ರೆಸ್ಟೋರೆಂಟ್, ಟೀ ಹಾಗೂ ಪಾನ್ ಶಾಪ್‍ಗಳಿಗೆ ವ್ಯಾಪಾರ ಪರವಾನಿಗೆ ನೀಡುವಾಗಲೇ, ಪ್ರತ್ಯೇಕವಾಗಿ ತಂಬಾಕು ಮಾರಾಟದ ಪರವಾನಿಗೆ ಪಡೆಯುವಂತೆ ಷರತ್ತು ವಿಧಿಸಬೇಕು. ನಗರಸಭೆ, ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ವಾಣಿಜ್ಯ ಉದ್ದಿಮೆ ಹಾಗೂ ವ್ಯಾಪಾರ ಪರವಾನಿಗೆ ಜೊತೆಗೆ, ತಂಬಾಕು ಮಾರಾಟ ಪರವಾನಿಗೆ ನೀಡಿದ ಕ್ರೂಢೀಕೃತ ವಿವರವನ್ನು ಎಂ.ಎಸ್.ಎಕ್ಸ್‍ನಲ್ಲಿ ಒದಗಿಸಬೇಕು. ತಿಂಗಳ ಒಳಗೆ ನಿಗದಿಪಡಿಸಿದ ಗುರಿ ಸಾಧಿಸದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಚ್ಚರಿಸಿದರು.
ತಂಬಾಕು ನಿಷೇಧ ಧೃಢೀಕರಣ ಪಡೆಯಲು ಸೂಚನೆ:




ಶಾಲಾ ಕಾಲೇಜು, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಹಾಗೂ ವ್ಯಾಪಾರ ಮಳಿಗೆಗಳಲ್ಲಿ, ಬಾರ್ ಮತ್ತು ರೆಸ್ಟೋರೆಂಟ್, ಕ್ಲಬ್‍ಗಳಲ್ಲಿ ತಂಬಾಕು ಸೇವನೆ ನಿಷೇಧ ಹಾಗೂ ಕೋಟ್ಪಾ ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿರುವ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಂದ ಧೃಡೀಕರಣ ಪಡೆಯುವಂತೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. ನಿಯಮ ಮೀರಿ ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡುವುದು ಕಂಡುಬಂದರೆ, ಅಂತಹ ವ್ಯಾಪಾರಿಗಳ ಬಾಡಿಗೆ ಒಡಂಬಡಿಕೆಯನ್ನು ರದ್ದು ಪಡಿಸುವಂತೆ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಬಾರ್ ಅಂಡ್ ರೆಸ್ಟೋರೆಂಟ್‍ಗಳಲ್ಲಿ ಎಲ್ಲೆಂದರಲ್ಲಿ ತಂಬಾಕು ಸೇವನೆ, ಧೂಮಪಾನ ಮಾಡುತ್ತಾರೆ. ಇದು ಪ್ಯಾಸಿವ್ ತಂಬಾಕು ಸೇವನೆಗೆ ಕಾರಣವಾಗುತ್ತಿದೆ, ಇದನ್ನು ನಿಯಂತ್ರಿಸುವಂತೆ ಅಬಕಾರಿ ಉಪ ಆಯುಕ್ತರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಬಾರ್ ಅಂಡ್ ರೆಸ್ಟೋರೆಂಟ್‍ಗಳಲ್ಲಿ ಟೇಬಲ್‍ಗಳಿಗೆ ಸಿಗರೇಟ್ ಸೇರಿದಂತೆ ಯಾವುದೇ ತಂಬಾಕು ಉತ್ಪನ್ನಗಳನ್ನು ಒದಗಿಸುವುದಕ್ಕೆ ನಿಷೇಧವಿದೆ. ಪ್ರತಿ ಬಾರ್ ಅಂಡ್ ರೆಸ್ಟೋರೆಂಟ್‍ಗಳಲ್ಲಿ ಪ್ರತ್ಯೇಕ ತಂಬಾಕು ಸೇವನಾ, ಧೂಮಪಾನ ವಲಯಗಳನ್ನು ನಿರ್ಮಿಸಬೇಕು. ಈ ನಿಯಮ ಪಾಲನೆ ನಂತರವೇ ಅಬಕಾರಿ ಇಲಾಖೆಯಿಂದ ಪರವಾನಿಗೆ ನೀಡಲಾಗುವುದು ಎಂದು ಅಬಕಾರಿ ಉಪ ಆಯುಕ್ತೆ ಆಶಾಲತಾ.ಕೆ ಸಭೆಗೆ ಮಾಹಿತಿ ನೀಡಿದರು. ಅಧಿಕಾರಿಗಳು ಬಾರ್ ಅಂಡ್ ರೆಸ್ಟೋರೆಂಟ್‍ಗಳಲ್ಲಿ ಈ ನಿಯಮ ಪಾಲನೆ ಆಗುತ್ತಿದೆಯೇ ಇಲ್ಲವೆ ಎಂಬುದರ ಬಗ್ಗೆ ಕಾಲಕಾಲಕ್ಕೆ ಪರಿಶೀಲಿಸಬೇಕು, ಉಲ್ಲಂಘನೆ ಕಂಡುಬಂದಲ್ಲಿ ಲೈಸೆನ್ಸ್ ರದ್ದತಿಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯ ಎಲ್ಲ ಶಾಲಾ, ಕಾಲೇಜು ಶಿಕ್ಷಣ ಸಂಸ್ಥೆಗಳನ್ನು ತಂಬಾಕು ಮುಕ್ತ ವಲಯಗಳನ್ನಾಗಿ ಮಾಡಬೇಕು, ಪ್ರತಿಯೊಂದು ಶಾಲಾ ಕಾಲೇಜು ವ್ಯಾಪ್ತಿಯಲ್ಲಿ ಈ ಬಗ್ಗೆ ಬೋರ್ಡ್ ಹಾಕಿಸಬೇಕು, ಅಲ್ಲದೆ ಶಾಲಾ ಕಾಲೇಜು ವ್ಯಾಪ್ತಿಯಲ್ಲಿನ ಅಂಗಡಿಗಳಲ್ಲಿ ಯಾವುದೇ ಕಾರಣಕ್ಕೂ ತಂಬಾಕು ಉತ್ಪನ್ನಗಳು ಮಾರಾಟ ಆಗದಂತೆ ಅಧಿಕಾರಿಗಳು ಆಗಿಂದಾಗ್ಗೆ ತಪಾಸಣೆ ನಡೆಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
4,801 ಪ್ರಕರಣ ರೂ.3,39,920 ದಂಡ ವಸೂಲಿ, ದಂಡ ಮೊತ್ತ ಹೆಚ್ಚಳ :
ಜಿಲ್ಲಾ ಅಪರಾಧ ದಾಖಲೆ ಬ್ಯೂರೋ ವರದಿ ಅನುಸಾರ 2025ರ ಏಪ್ರಿಲ್ ನಿಂದ ಜೂನ್ ವರೆಗೆ ಜಿಲ್ಲೆಯಲ್ಲಿ ಕೋಟ್ಪಾ ಕಾಯ್ದೆ ಉಲ್ಲಂಘನೆ ಅಡಿ ಒಟ್ಟು 4,801 ಪ್ರಕರಣಗಳನ್ನು ದಾಖಲಿಸಿ ಒಟ್ಟು ರೂ.3,39,920 ದಂಡ ವಸೂಲಿ ಮಾಡಲಾಗಿದೆ. ಪೊಲೀಸ್ ಇಲಾಖೆ ವತಿಯಿಂದ 2,764 ಪ್ರಕರಣ ದಾಖಲಿಸಿ ರೂ.2,22,450 ದಂಡ ವಸೂಲಿ ಮಾಡಿದ್ದು, ಅಬಕಾರಿ ಇಲಾಖೆ ವತಿಯಿಂದ 27 ಪ್ರಕರಣಗಳನ್ನು ದಾಖಲಿಸಿ ರೂ.2,800 ದಂಡ ವಸೂಲಿ ಮಾಡಲಾಗಿದೆ. ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ತಂಬಾಕು ನಿಯಂತ್ರ ಕೋಶದಿಂದ 317 ಪ್ರಕರಣ ದಾಖಲಿಸಿ 36,350 ದಂಡ ವಸೂಲಿ ಮಾಡಲಾಗಿದೆ. ಇತರೆ ಸ್ಥಳೀಯ ಸಂಸ್ಥೆಗಳು ಅಧಿಕಾರಿಗಳು ಸಹ ನಿಯಮಿತವಾಗಿ ದಾಳಿ ನಡೆಸಿ ದಂಡ ವಸೂಲಿ ಮಾಡುತ್ತಿದ್ದಾರೆ. ಈ ಎಲ್ಲಾ ದಂಡ ಮೊತ್ತದ ಪಾವತಿ ಕುರಿತು ಜಿ.ಪಂ.ಲೆಕ್ಕಾಧಿಕಾರಿಗಳಿಂದ ಆಡಿಟ್ ನಡೆಸುವಂತೆ ರಾಜ್ಯ ತಂಬಾಕು ನಿಯಂತ್ರಣ ಕೋಶ ನಿರ್ದೇಶನ ನೀಡಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಚಂದ್ರಶೇಖರ ಕಂಬಾಳಿ ಮಠ ಮಾಹಿತಿ ನೀಡಿದರು.
ಸಾರ್ವಜನಿಕ ಸ್ಥಳಗಳಲ್ಲಿ, ನಿಷೇಧಿತ ವಲಯದಲ್ಲಿ ತಂಬಾಕು ಉತ್ಪನ್ನ ಸೇವನೆ, ಧೂಮಪಾನ ಹಾಗೂ ಉಗುಳುವುದನ್ನು ಕಾಯ್ದೆಯನ್ವಯ ನಿಷೇಧಿಸಲಾಗಿದ್ದು, ಉಲ್ಲಂಘನೆಗೆ ಈ ಹಿಂದೆ ಇದ್ದ ದಂಡದ ಮೊತ್ತವನ್ನು 200 ರೂ. ಗಳಿಂದ 1,000 ರೂ. ಗಳಿಗೆ ಹೆಚ್ಚಿಸಲಾಗಿದೆ ಎಂದು ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಪ್ರಭುದೇವ ಮಾಹಿತಿ ನೀಡಿದರು.
ತಂಬಾಕು ಮುಕ್ತ ಗ್ರಾಮಗಳ ಘೋಷಣೆ:
ಜಿಲ್ಲೆಯಲ್ಲಿ ಒಟ್ಟು 14 ಹಳ್ಳಿಗಳನ್ನು ತಂಬಾಕು ಮುಕ್ತ ಗ್ರಾಮ ಎಂದು ಘೊಷಿಸಲು ಆಯ್ಕೆ ಮಾಡಿಕೊಳ್ಳಲಾಗಿದೆ. ಚಿತ್ರದುರ್ಗ ತಾಲ್ಲೂಕಿನ ಕಲ್ಲೇನಹಳ್ಳಿ, ಮಳಲಿ, ಹಾಯಿತೋಳು ಲಂಬಾಣಿಹಟ್ಟಿ, ಹೊಳಲ್ಕೆರೆಯ ಗರಗ, ಮಹದೇವಪುರ, ಕುಟಿಗೇಹಳ್ಳಿ, ಅಂದನೂರು ಗೊಲ್ಲರಹಟ್ಟಿ, ಹೊಸದುರ್ಗದ ರಂಗಾಪುರ, ಬೇವಿನಹಳ್ಳಿ, ಅರಸಿನತೋಟ, ಸಣ್ಣತಿಪ್ಪೇನಹಳ್ಳಿ, ಚಳ್ಳಕೆರೆಯ ಓಬಯ್ಯನಹಟ್ಟಿ ಗೊಲ್ಲರಹಟ್ಟಿ, ಹಿರಿಯೂರಿನ ಡಿ.ಕೆ.ಹಟ್ಟಿ, ಮೊಳಕಾಲ್ಮೂರಿನ ತುಪ್ಪದಕ್ಕನಹಳ್ಳಿಗಳು ತಂಬಾಕು ಮುಕ್ತವಾಗಲಿವೆ ಎಂದು ತಂಬಾಕು ನಿಯಂತ್ರಣ ಕೋಶ ಜಿಲ್ಲಾ ಸಲಹೆಗಾರ ಬಿ.ಎನ್. ಪ್ರಭುದೇವ ತಿಳಿಸಿದರು.
ಪ್ರಸಕ್ತ ತ್ರೈಮಾಸಿಕ ಅವಧಿಯಲ್ಲಿ ತಂಬಾಕು ವ್ಯಸನ ಮುಕ್ತ ಕೇಂದ್ರದಲ್ಲಿ 1,978 ಜನರು ಸೇವೆ ಪಡೆದಿದ್ದಾರೆ. 183 ಜನರು ಚಿಕಿತ್ಸೆ ಪಡೆದಿದ್ದಾರೆ. 25 ಜನರು ತಂಬಾಕು ಸೇವನೆ ತ್ಯಜಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಪ್ರಸಾದ್, ಪೊಲೀಸ್ ಉಪಾಧೀಕ್ಷಕ ಉಮೇಶ್ ಈಶ್ವರ ನಾಯ್ಕ್, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕ ಮಂಜುನಾಥ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ. ರವೀಂದ್ರ, ತಂಬಾಕು ನಿಯಂತ್ರಣ ಕೋಶ ವಿಭಾಗೀಯ ಸಂಯೋಜಕ ಮಹಾಂತೇಶ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
==========
About The Author
Discover more from JANADHWANI NEWS
Subscribe to get the latest posts sent to your email.