*
*ಹೊಳಲ್ಕೆರೆ, ಏ.11:* ಅನಾದಿ ಕಾಲದಿಂದಲೂ ಬೇರೂರಿದ್ದ ಮೌಢ್ಯ, ಕಂದಾಚಾರ, ಅಸ್ಪೃಶ್ಯತೆ
ವಿರುದ್ಧ ಜನಾಂದೋಲನ ರೂಪಿಸಿ ಕ್ರಾಂತಿಕಾರಿ ಚಳವಳಿ ನಡೆಸಿದ 12ನೇ ಶತಮಾನದ ಬಸವಾದಿ
ಶರಣ ಸಿದ್ಧಾಂತವನ್ನು ಪಾಲಿಸುವಲ್ಲಿ ಜನ ನಿರಾಸಕ್ತಿ ಪ್ರದರ್ಶಿಸುತ್ತಿದ್ದಾರೆ ಎಂದು
ಸಿದ್ಧಯ್ಯನಕೋಟೆ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಬೇಸರಿಸಿದರು.
ಪಟ್ಟಣದಲ್ಲಿ ಶನಿವಾರ ಆಯೋಜಿಸಿದ್ದ ಮಾದಿಗ ಸಮುದಾಯದ ಮುಖಂಡ ಭಾನುಮೂರ್ತಿ ನುಡಿನಮನ
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಬಸವಣ್ಣನ ಯುಗದಲ್ಲಿ ಬೇಡುವವರು ಇರಲಿಲ್ಲ,
ನೀಡುವವರು ಇದ್ದರು. ಆದರೆ, ಈಗ ಅಂತಹ ಪರಿಸ್ಥಿತಿ ಬದಲಾಗಿದೆ ಎಂದರು.
ಜಗತ್ತಿನಲ್ಲಿ ಅನೇಕರು ಹುಟ್ಟಿ ಕಣ್ಮರೆ ಆಗಿದ್ದಾರೆ. ಆದರೆ, ನಿಸ್ವಾರ್ಥ ಸೇವೆ ಮೂಲಕ
ಬದುಕಿದವರು ನಿಧನದ ಬಳಿಕವೂ ಜೀವಂತವಾಗಿದ್ದಾರೆ. ಆದರೆ, ಈಗಿನ ಜನರಲ್ಲಿ ಬಹುತೇಕ ಬದ್ಧತೆ, ಸೇವಾ ಮನೋಭಾವ, ಪರೋಪಕಾರಿ ಗುಣ ಕಣ್ಮರೆ ಆಗುತ್ತಿದೆ ಎಂದು ಬೇಸರಿಸಿದರು.
ಯಾರೂ ತಮಗಾಗಿ ಜೀವನ ಕಟ್ಟಿಕೊಳ್ಳುತ್ತಾರೆ ಅವರು ನೆಮ್ಮದಿ ಆಗಿರುತ್ತಾರೆ. ಅವರ
ಕುರಿತು ಆಕ್ಷೇಪಣೆ ಇಲ್ಲ. ಆದರೆ, ಮತ್ತೊಬ್ಬರ ಬದುಕಿನಲ್ಲಿ ವಿಷ ಬೀಜ ಬಿತ್ತುವ ಕಾರ್ಯ
ನಡೆಸುವವರು ಅತ್ಯಂತ ಅಪಾಯಕಾರಿಗಳು. ಇವರ ಕುರಿತು ಸದಾ ಎಚ್ಚರಿಕೆಯಿಂದರಬೇಕೆಂದು
ಬಸವಾದಿ ಶರಣರು ಸೇರಿ ಎಲ್ಲ ಮಹಾತ್ಮರು ಎಚ್ಚರಿಸಿದ್ದಾರೆ ಎಂದು ಹೇಳಿದರು.
ಮತ್ತೊಬ್ಬರ ಸಂಕಷ್ಟಕ್ಕೆ ಸ್ಪಂದಿಸುವವರು ಸದಾ ಜನ ನಾಯಕರಾಗಿ ಹೊರಹೊಮ್ಮಲಿದ್ದಾರೆ.
ಭಾನುಮೂರ್ತಿ ತೆರಿಗೆ ಇಲಾಖೆಯಲ್ಲಿ ಅಧಿಕಾರಿಯಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಜೊತೆಗೆ ಮಾದಿಗ ಹಾಗೂ ಇತರ ಎಲ್ಲ ಸಮುದಾಯಗಳ ಪ್ರಗತಿಗೆ ಶ್ರಮಿಸಿದ್ದಾರೆ. ಅವರ ಸೇವಾ
ಮನೋಭಾವವನ್ನು ಈಗಿನ ಯುವ ಪೀಳಿಗೆ ಮೈಗೂಡಿಸಿಕೊಳ್ಳಬೇಕೆಂದು ತಿಳಿಸಿದರು.
ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ನಾವು ಯಾವುದೇ ಕ್ಷೇತ್ರದಲ್ಲಿ ಇರಲಿ, ಜನಪರ ಚಿಂತನೆ ಬೆಳೆಸಿಕೊಳ್ಳಬೇಕು. ಇಲ್ಲದಿದ್ದರೆ ಜೀವನ ನಶ್ವರ ಎಂದು ಹೇಳಿದರು.
ಭಾನುಮೂರ್ತಿ ತೆರಿಗೆ ಇಲಾಖೆಯಲ್ಲಿ ಅಧಿಕಾರಿ ಆಗಿದ್ದರೂ ಒಳಮೀಸಲಾತಿ ಹೋರಾಟದಲ್ಲಿ
ಸಕ್ರಿಯರಾಗಿದ್ದರು. ಜೊತೆಗೆ ಅನೇಕ ಜನಪರ ಚಳವಳಿಗೆ ಬೆನ್ನೆಲುಬು ಆಗಿದ್ದರು. ಜನಪರ
ಕಾರ್ಯಕ್ರಮಗಳಿಗೆ ಆರ್ಥಿಕ ಸಹಾಯದ ಜೊತೆಗೆ ನೈತಿಕವಾಗಿ ಬೆಂಬಲವಾಗಿ ನಿಲ್ಲುವ ಗುಣ ಮಾದರಿ ಆಗಿತ್ತು ಎಂದು ಸ್ಮರಿಸಿದರು.
ತೆರಿಗೆ ಇಲಾಖೆ ನಿವೃತ್ತ ಅಧಿಕಾರಿ ತೇಗನೂರು ಮಾತನಾಡಿ, ನಮ್ಮ ಇಲಾಖೆಯಲ್ಲಿ
ಅಧಿಕಾರಿಯಾಗಿದ್ದ ಭಾನುಮೂರ್ತಿ ಅವರ ಸೇವಾಮನೋಭಾವ ಮಾದರಿ. ಅವರು ಸದಾ ಜನರ
ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದರು ಎಂದರು.
ಅನೇಕ ಸಂಘಟನೆಗಳ ಚಳವಳಿಗೆ ಆರ್ಥಿಕ ಸಹಾಯದ ಜೊತೆಗೆ ಹೋರಾಟವನ್ನು ಹೇಗೆ
ಮುನ್ನಡಿಸಿಕೊಂಡು ಹೋಗಿ ಬೇಡಿಕೆ ಈಡೇರಿಸಿಕೊಳ್ಳಬೇಕೆಂಬ ವಿಷಯದಲ್ಲಿ ಮಾರ್ಗದರ್ಶನ
ನೀಡುತ್ತಿದ್ದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಶೋಕ್ ಕುಮಾರ್ ಸೇರಿ ವಿವಿಧ ಕ್ಷೇತ್ರದ ಮುಖಂಡರು, ಹೋರಾಟಗಾರರು ಪಾಲ್ಗೊಂಡಿದ್ದರು.
*ಫೋಟೋ ಕ್ಯಾಪ್ಷನ್*
ಹೊಳಲ್ಕೆರೆಯಲ್ಲಿ ಆಯೋಜಿಸಿದ್ದ ಭಾನುಮೂರ್ತಿ ನುಡಿನಮನ ಕಾರ್ಯಕ್ರಮದಲ್ಲಿ
ಸಿದ್ದಯ್ಯನಕೋಟೆ ಶ್ರೀ ಮಾತನಾಡಿದರು.ಮಾಜಿ ಸಚಿವ ಎಚ್.ಆಂಜನೇಯ ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.