ಚಿತ್ರದುರ್ಗಮಾ.11:
ಪ್ರಾರಂಭಿಕ ಹಂತದಲ್ಲೇ ಅಂಗವೈಕಲ್ಯ ಗುರುತಿಸುವಂತಾಗಬೇಕು. ಯಾವುದೇ ಕಾರಣಕ್ಕೂ ಕ್ಷೇತ್ರಮಟ್ಟದಲ್ಲಿ ಅಂಗವಿಕಲರಾಗಿ ಉಳಿಯಬಾರದು. ಪ್ರಾರಂಭಿಕ ಹಂತದಲ್ಲಿಯೇ ಅಂಗವಿಕಲತೆಯನ್ನು ಗುರುತಿಸಿದಾಗ ಮಾತ್ರ ಚಿಕಿತ್ಸೆ ಹಾಗೂ ಗುಣಪಡಿಸಲು ಸಾಧ್ಯವಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್ ಹೇಳಿದರು.
ನಗರದ ತರಾಸು ರಂಗಮಂದಿರದಲ್ಲಿ ಈಚೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ದಾವಣಗೆರೆ ಸಂಯೋಜಿತ ಪ್ರಾದೇಶಿಕ ಕೇಂದ್ರ, ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಎಂ.ಆರ್.ಡಬ್ಲ್ಯೂ, ವಿ.ಆರ್.ಡಬ್ಲ್ಯೂ, ಯು.ಆರ್.ಡಬ್ಲ್ಯೂಗಳಿಗೆ ವಿಶೇಷಚೇತನ ಮಕ್ಕಳನ್ನು ಪ್ರಾರಂಭಿಕ ಹಂತದಲ್ಲಿ ಗುರುತಿಸುವಿಕೆ ಹಾಗೂ ಶೀಘ್ರ ಮದ್ಯಸ್ಥಿಕೆ ಅರಿವು ಕಿಟ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾರಂಭಿಕ ಹಂತದಲ್ಲಿಯೇ ಅಂಗವೈಕಲ್ಯ ಗುರುತಿಸಿದರೆ ಅವರಿಗೆ ಯಾವ್ಯಾವ ಸೇವೆಗಳು, ಸೌಲಭ್ಯಗಳು ನೀಡಬಹುದಾಗಿದೆ ಎಂಬುವುದು ಗೊತ್ತಾಗಲಿದೆ. ಅಂಗವೈಕಲ್ಯಕ್ಕೆ ಅನುಗುಣವಾಗಿ ಚಿಕಿತ್ಸೆ ನೀಡಬಹುದಾಗಿದೆ. ಇದರ ಜೊತೆಗೆ ಬೆಂಬಲ ನೀಡುವ ಪಾಲಕರಿಗೆ ಕೌನ್ಸಿಲ್ ಕೊಡುವುದು, ನಂತರ ಯಾವ ಶಾಲೆಗೆ ಪ್ರವೇಶಾತಿ ಪಡೆಯಬೇಕು ಎಂಬ ಸಿದ್ಧತೆಯ ಬಗ್ಗೆ ತಿಳಿದುಕೊಳ್ಳುವುದು ಸಹ ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು.
ಕ್ಷೇತ್ರಮಟ್ಟದಲ್ಲಿ ಕಾರ್ಯನಿರ್ವಹಿಸುವ ಅಂಗನವಾಡಿ ಕಾರ್ಯಕರ್ತೆಯರು ತಾಯಿ ಗರ್ಭಾವಸ್ಥೆಯಲ್ಲೇ ಮಗುವಿನ ಬೆಳವಣಿಗೆ ತಿಳಿದುಕೊಳ್ಳುವುದು ಉತ್ತಮ. ಮನೆ ಭೇಟಿ, ಚುಚ್ಚುಮದ್ದು, ಆಹಾರ ಸೇವನೆ, ಹೆರಿಗೆ ಸಿದ್ಧತೆ ಕುರಿತು ಮಾಹಿತಿ ನೀಡಲಾಗುತ್ತಿದ್ದು, ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಬೇಕು. ಮಗುವಿನ ಬೆಳವಣಿಗೆ ಹಂತಗಳ ಕುರಿತು ಸೂಕ್ಷ್ಮವಾಗಿ ಗಮನಿಸಬೇಕು. ಬೆಳವಣಿಗೆ ಕುಂಠಿತಗೊಂಡಲ್ಲಿ ಅದನ್ನು ಗುರುತಿಸುವ ಕೆಲಸವಾಗಬೇಕು ಎಂದು ಹೇಳಿದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ಮಾತನಾಡಿ, ವಿಕಲತೆ, ನ್ಯೂನತೆಯನ್ನು ಪ್ರಾರಂಭಿಕ ಹಂತದಲ್ಲಿ ಹೇಗೆ ಗುರುತಿಸಬೇಕು, ಮಧ್ಯಸ್ಥಿಕೆಯನ್ನು ಹೇಗೆ ವಹಿಸಬೇಕು ಎಂಬುವುದರ ಕುರಿತು ತರಬೇತಿ, ಅರಿವು ಮೂಡಿಸುವ ಕಾರ್ಯಕ್ರಮದ ಅಂಗವಿಕಲತೆಯನ್ನು ಪ್ರಾರಂಭದಲ್ಲಿ ಹೇಗೆ ಗುರುತಿಸಬೇಕು ಎನ್ನುವುದರ ಸಂಬಂಧಪಟ್ಟ ಕಿಟ್ ವಿತರಣಾ ಕಾರ್ಯಕ್ರಮವನ್ನು ದಾವಣಗೆರೆಯ ದಿವ್ಯಾಂಗ ವ್ಯಕ್ತಿಗಳ ಕೌಶಲ್ಯಾಭಿವೃದ್ಧಿ ಪುನರ್ವಸತಿ ಮತ್ತು ಸಬಲೀಕರಣ ಸಂಯುಕ್ತ ಪ್ರಾದೇಶಿಕ ಕೇಂದ್ರದ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಈ ಕೇಂದ್ರವು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯದ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಈ ಕೇಂದ್ರದಲ್ಲಿ ವಿಕಲಚೇತನರಿಗೆ ಸಂಬಂಧಪಟ್ಟಂತೆ ಸಂಪೂರ್ಣ ಪುನರ್ವಸತಿ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭರಮಸಾಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎನ್.ಸುಧಾ, ಮಹಿಳಾ ಮತ್ತು ಅಭಿವೃದ್ಧಿ ಅಧಿಕಾರಿ ಪವಿತ್ರ, ಚಿತ್ರದುರ್ಗ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ, ಜಿಲ್ಲಾ ಪಂಚಾಯಿತಿ ಎಪಿಒ ಸುಮ, ದಾವಣಗೆರೆ ಸಿಆರ್‍ಸಿ ಪುನರ್ವಸತಿ ಅಧಿಕಾರಿ ವಿ.ಕನಗಸಭಾಪತಿ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಎಂ.ಆರ್.ಡಬ್ಲ್ಯೂ, ವಿ.ಆರ್.ಡಬ್ಲ್ಯೂ, ಯು.ಆರ್.ಡಬ್ಲ್ಯೂಗಳು ಇದ್ದರು.


About The Author
Discover more from JANADHWANI NEWS
Subscribe to get the latest posts sent to your email.