February 11, 2026
Free-Bus-Pass-2.jpg

ಚಳ್ಳಕೆರೆ:
ರಾಜ್ಯ ಸರ್ಕಾರ ಪ್ರತಿ ವರ್ಷ ಬಜೆಟ್‌ನಲ್ಲಿ ಪತ್ರಕರ್ತರಿಗಾಗಿ ಉಚಿತ ಬಸ್ ಪಾಸ್, ನಿವೇಶನ ಸೇರಿದಂತೆ ಹಲವು ಸೌಲಭ್ಯಗಳನ್ನು ಘೋಷಣೆ ಮಾಡುತ್ತದೆ. ಆದರೆ ಆ ಘೋಷಣೆಗಳು ಕಾಗದದಲ್ಲೇ ಸೀಮಿತವಾಗುತ್ತಿವೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ವಿಶೇಷವಾಗಿ ಗ್ರಾಮೀಣ ಮತ್ತು ತಾಲೂಕು ಮಟ್ಟದ ಪತ್ರಕರ್ತರು ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ.

ಗ್ರಾಮೀಣ ಪತ್ರಕರ್ತರು ದಿನನಿತ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಅಪಘಾತಗಳು, ಸಾಮಾಜಿಕ ಸಮಸ್ಯೆಗಳು, ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ ಅನೇಕ ವಿಷಯಗಳನ್ನು ಸಂಗ್ರಹಿಸಿ ತಕ್ಷಣ ಮಾಧ್ಯಮಗಳಿಗೆ ಕಳುಹಿಸುವ ಜವಾಬ್ದಾರಿ ಇವರ ಮೇಲಿದೆ. ಆದರೂ ಬಹುತೇಕ ಪತ್ರಿಕಾ ಸಂಸ್ಥೆಗಳು ಇವರನ್ನು “ಬಿಡಿ ಸುದ್ದಿಗಾರರು” ಎಂದು ನೇಮಿಸಿಕೊಂಡು ಯಾವುದೇ ನಿಶ್ಚಿತ ವೇತನ ನೀಡದೆ ದುಡಿಸಿಕೊಳ್ಳುತ್ತಿರುವುದು ದುಃಖಕರ ಸಂಗತಿ. ಕೆಲವರಿಗೆ ಲೈನೇಜ್ ಆಧಾರದಲ್ಲಿ ಅಲ್ಪ ಪ್ರಮಾಣದ ಹಣ ನೀಡಲಾಗುತ್ತಿದ್ದು, ಇನ್ನೂ ಕೆಲವರಿಗೆ ಸಂಪೂರ್ಣವಾಗಿ ವೇತನವಿಲ್ಲದೇ ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನೊಂದೆಡೆ, ರಾಜ್ಯ ಸರ್ಕಾರ ಮಹಿಳೆಯರಿಗೆ “ಶಕ್ತಿ ಯೋಜನೆ” ಅಡಿಯಲ್ಲಿ ಉಚಿತ ಬಸ್ ಪ್ರಯಾಣ ಸೌಲಭ್ಯ ನೀಡುತ್ತಿದೆ. ಆದರೆ ಸರ್ಕಾರದ ಯೋಜನೆಗಳನ್ನು ಗ್ರಾಮೀಣ ಮಟ್ಟದಲ್ಲಿ ಜನರಿಗೆ ತಲುಪಿಸುವ ಪತ್ರಕರ್ತರಿಗೆ ಉಚಿತ ಸಂಚಾರವೇ ಕನಸಾಗಿದೆ. ಜಿಲ್ಲಾಮಟ್ಟದಲ್ಲಿ ಸಂಚರಿಸಲು ಸರ್ಕಾರ ನೀಡುವ ಉಚಿತ ಬಸ್ ಪಾಸ್‌ಗೂ ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಲಾಗಿದ್ದು, ಅನೇಕ ಅರ್ಹ ಪತ್ರಕರ್ತರು ಆ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ.
ಪತ್ರಕರ್ತರು ಸಮಾಜದ ನಾಲ್ಕನೇ ಅಂಗವಾಗಿ ಕಾರ್ಯನಿರ್ವಹಿಸುತ್ತಾರೆ. ಜನಸಮಸ್ಯೆಗಳನ್ನು ಹೊರತರುವ ಮೂಲಕ ಸರ್ಕಾರದ ಗಮನಕ್ಕೆ ತರುವ ಜವಾಬ್ದಾರಿ ಇವರದು. ಆದರೆ ಅವರ ಜೀವನ ಭದ್ರತೆ, ಆರೋಗ್ಯ ವಿಮೆ, ನಿವೇಶನ, ಸಂಚಾರ ಸೌಲಭ್ಯಗಳ ವಿಷಯದಲ್ಲಿ ಸರ್ಕಾರ ಸ್ಪಷ್ಟ ಹಾಗೂ ಸಮಗ್ರ ನೀತಿ ರೂಪಿಸದಿರುವುದು ಪ್ರಶ್ನಾರ್ಹವಾಗಿದೆ.
ಆದ್ದರಿಂದ ಸರ್ಕಾರವು ಕೇವಲ ಭರವಸೆ ನೀಡುವ ಕೆಲಸವನ್ನೇ ಮುಂದುವರಿಸದೆ, ಗ್ರಾಮೀಣ ಮಟ್ಟದಲ್ಲಿ ದಿನನಿತ್ಯ ಸುದ್ದಿ ಸಂಗ್ರಹಿಸುವ ಎಲ್ಲಾ ಅರ್ಹ ಪತ್ರಕರ್ತರಿಗೆ ಶಕ್ತಿ ಯೋಜನೆ ಮಾದರಿಯಲ್ಲಿ ಉಚಿತ ಬಸ್ ಸೌಲಭ್ಯ, ನಿವೇಶನ ಹಂಚಿಕೆ, ಆರೋಗ್ಯ ವಿಮೆ ಮತ್ತು ಟೋಲ್ ಗೇಟ್‌ಗಳಲ್ಲಿ ಪತ್ರಕರ್ತರ ವಾಹನಗಳಿಗೆ ಉಚಿತ ಪ್ರವೇಶವನ್ನು ತಕ್ಷಣ ಜಾರಿಗೊಳಿಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.
ಗ್ರಾಮೀಣ ಪತ್ರಕರ್ತರ ಪರವಾಗಿ ಗೋಪನಹಳ್ಳಿ ಶಿವಣ್ಣ (ಪತ್ರಕರ್ತ) ಚಳ್ಳಕೆರೆ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಸಂಪರ್ಕ: 9482200525

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading