ನಾಯಕನಹಟ್ಟಿ: ಬುಡಕಟ್ಟು ಸಂಸ್ಕೃತಿಯ ಮ್ಯಾಸನಾಯಕರ ಆರಾಧ್ಯ ದೈವವಾದ ಶ್ರೀ ಗಾದ್ರಿಪಾಲನಾಯಕ ಸ್ವಾಮಿ ದೇವರ ಅಂಗವಾಗಿ ಗುಗ್ಗರಿ ಹಬ್ಬವನ್ನು ಗುಂತಕೋಲಮ್ಮನಹಳ್ಳಿ ಗ್ರಾಮದಲ್ಲಿ ಸೋಮವಾರ ಹಾಗೂ ಮಂಗಳವಾರ ಸಂಭ್ರಮ ಸಡಗರದಿಂದ ಅದ್ದೂರಿಯಾಗಿ ಆಚರಿಸಲಾಯಿತು.

ಸೋಮವಾರ ಚಿನ್ನಹಗರಿ ಹಳ್ಳದಲ್ಲಿ ಶ್ರೀ ಗಾದ್ರಿಪಾಲನಾಯಕ ಸ್ವಾಮಿಗೆ ವಿಶೇಷ ಗಂಗಾ ಪೂಜೆ ಸಲ್ಲಿಸಿ, ಸಕಲ ಬಿರುದಾವಳಿಗಳೊಂದಿಗೆ ದೇವರನ್ನು ಭಕ್ತಿಪೂರ್ವಕವಾಗಿ ಗ್ರಾಮಕ್ಕೆ ಕರೆತರಲಾಯಿತು. ಭಕ್ತರ ಘೋಷಣೆಗಳು, ಮಂಗಳವಾದ್ಯಗಳು ಮತ್ತು ಸಂಪ್ರದಾಯಿಕ ಆಚರಣೆಗಳ ನಡುವೆ ದೇವರ ಮೆರವಣಿಗೆ ಗ್ರಾಮದಲ್ಲಿ ಸಂಚರಿಸಿತು.
ಸೋಮವಾರ ರಾತ್ರಿ ದೇವರಿಗೆ ವಿಶೇಷ ಧಾರ್ಮಿಕ ಕಾರ್ಯಗಳು, ಪೂಜೆ–ಪುನಸ್ಕಾರಗಳು ಜರುಗಿದವು. ಭಕ್ತರು ಹರಕೆ ತೀರಿಸಿ, ಪೂಜೆಯಲ್ಲಿ ಭಾಗವಹಿಸಿದರು. ಹಬ್ಬದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.
ಈ ಸಂದರ್ಭದಲ್ಲಿ ಕೋಣನ ಬಸಣ್ಣ ಹಾಗೂ ಯಜಮಾನ ಪಾಲಯ್ಯ ಮಾತನಾಡಿ, ಬುಡಕಟ್ಟು ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಇಂತಹ ಹಬ್ಬಗಳ ಪಾತ್ರ ಮಹತ್ವದ್ದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಮಚಂದ್ರಪ್ಪ, ಬಡ ಪಾಪಯ್ಯ, ಕಿಲಾರಿ ಜಗಲೂರಯ್ಯ, ಪೂಜಾರಿ ಕರಿ ಬೋರಯ್ಯ, ಗೂಂಚಿಗಾರ ಪಾಲಯ್ಯ, ಚಂದ್ರಣ್ಣ, ಮೀಸೆ ಓಬಯ್ಯ, ಜಿ.ಎಂ. ಜಯಣ್ಣ, ಮಾಳಿಗೆ ಪಾಪಯ್ಯ, ಮ್ಯಾಸರ ಮಲ್ಲಯ್ಯ, ಗೌಡರ ಗುಂಡಪ್ಪ ಸೇರಿದಂತೆ ಶ್ರೀ ಗಾದ್ರಿಪಾಲನಾಯಕ ಸ್ವಾಮಿ ದೇವರ ಗುಡಿಕಟ್ಟಿನ ಅಣ್ಣ–ತಮ್ಮಂದಿರು ಹಾಗೂ ಗುಂತಕೋಲಮ್ಮನಹಳ್ಳಿ ಸಮಸ್ತ ಗ್ರಾಮಸ್ಥರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.