ಹಿರಿಯೂರು:
ನಗರದಲ್ಲಿರುವ ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ತೇರುಮಲ್ಲೇಶ್ವರಸ್ವಾಮಿ ಬ್ರಹ್ಮರಥೋತ್ಸವ ಇದೇ ತಿಂಗಳು ಫೆಬ್ರವರಿ 13ರಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.
ಕಳೆದ ಫೆಬ್ರವರಿ 3ರಿಂದಲೇ ಕಂಕಣೋತ್ಸವ ಕಾರ್ಯಕ್ರಮದೊಂದಿಗೆ ಶ್ರೀ ತೇರುಮಲ್ಲೇಶ್ವರ ಜಾತ್ರಾ ಮಹೋತ್ಸವ ಆರಂಭವಾಗಿದೆ. ಈಗಾಗಲೇ ಗಿಳಿ ವಾಹನೋತ್ಸವ, ಗಂಡಭೇರುಂಡ ವಾಹನೋತ್ಸವ, ನವಿಲು ವಾಹನೋತ್ಸವ, ಸಿಂಹ ವಾಹನೋತ್ಸವ, ನಂದಿ ಸರ್ಪ ವಾಹನೋತ್ಸವ, ಅಶ್ವ ವಾಹನೋತ್ಸವ, ಕಾರ್ಯಕ್ರಮಗಳು ಅದ್ದೂರಿಯಾಗಿ ಜರುಗಿವೆ.
ಫೆಬ್ರವರಿ 11ರಂದು ರಾತ್ರಿ 8ಗಂಟೆಗೆ ಗಜ ವಾಹನೋತ್ಸವ ನಡೆಯಲಿದೆ. ಫೆಬ್ರವರಿ 12 ರಂದು ಬಸವ ಅಲಿಯಾಸ್ ದೊಡ್ಡ ಉತ್ಸವ ಅಂದರೆ ಅಕ್ಕಿತಂಬಿಟ್ಟಿನ ಆರತಿ ಕಾರ್ಯಕ್ರಮವು ಬೆಳಿಗ್ಗೆಯಿಂದ ರಾತ್ರಿ ತನಕ ನೆರವೇರಲಿದೆ.
ಇಡೀ ತೇರುಮಲ್ಲೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಪ್ರಮುಖಘಟ್ಟ ಎಂದರೆ ಬ್ರಹ್ಮರಥೋತ್ಸವವು ಫೆಬ್ರವರಿ 13ರಂದು ಗುರುವಾರ ಬೆಳಗ್ಗೆ 10.00ಗಂಟೆಗೆ ಶಿವಧನಸ್ಸಿನ ಗಂಗಾಸ್ನಾನದ ಉತ್ಸವ, ಮಧ್ಯಾಹ್ನ12ಗಂಟೆಗೆ ಶ್ರೀತೇರುಮಲ್ಲೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಲಿದೆ.
ಮಧ್ಯಾಹ್ನ 1:30ಕ್ಕೆ ಪ್ರಸಾದವಿನಿಯೋಗ ಮತ್ತು ಸಂಜೆ 5ಕ್ಕೆ ಶ್ರೀ ಚಂದ್ರಮೌಳೇಶ್ವರ, ಶ್ರೀ ಉಮಾಮಹೇಶ್ವರ ರಥೋತ್ಸವ ನಡೆಯಲಿದೆ. ಶ್ರೀ ಮದಕರಿ ಯುವಕ ಸಂಘದಿಂದ ಜಂಗೀ ಕುಸ್ತಿಯನ್ನು ಫೆಬ್ರವರಿ 14ರಂದು ಶುಕ್ರವಾರ ಸಂಜೆ 4.00ಗೆ ಸಿದ್ಧನಾಯಕ ವೃತ್ತದಲ್ಲಿ ಏರ್ಪಡಿಸಲಾಗಿದೆ.
ಫೆಬ್ರವರಿ15ರಂದು ಶನಿವಾರ ರಾತ್ರಿ 8.00ಗಂಟೆಗೆ ಸುಮಂಗಲಿಯರಿಂದ ಕರ್ಪೂರದಾರತಿ ಫೆಬ್ರವರಿ16ರಂದು ಭಾನುವಾರ ಶ್ರೀ ಚಿಟಿಗುಮಲ್ಲೇಶ್ವರಸ್ವಾಮಿ ದೇವಸ್ಥಾನದಲ್ಲಿ ಅಭಿಷೇಕ ಹಾಗೂ ಉಯ್ಯಾಲೋತ್ಸವ ವಸಂತೋತ್ಸವ ಓಕಳಿ ನಡೆಯಲಿದೆ. ಫೆಬ್ರವರಿ 17ರಂದು ಸೋಮವಾರ ಕಂಕಣವಿಸರ್ಜನೆಯೊಂದಿಗೆ ಜಾತ್ರೆ ಮಹೋತ್ಸವಕ್ಕೆ ತೆರೆ ಎಳೆಯಲಾಗುತ್ತದೆ.
ಶ್ರೀ ತೇರುಮಲ್ಲೇಶ್ವರಸ್ವಾಮಿ ಜಾತ್ರೆ ಮಹೋತ್ಸವಕ್ಕೆ ಭಕ್ತಾದಿಗಳು ಹಾಗೂ ಸಾರ್ವಜನಿಕರು ತನುಮನ ಧನಧಾನ್ಯ ರೂಪದಲ್ಲಿ ಸಹಕರಿಸಿ ಸಾರ್ವಜನಿಕರು ಭಕ್ತಾದಿಗಳು ಶಾಂತಿ ರೀತಿಯಿಂದ ದೇವರ ಆಶಿರ್ವಾದ ಪಡೆಯಬಹುದು.


About The Author
Discover more from JANADHWANI NEWS
Subscribe to get the latest posts sent to your email.