(ವಿವೇಕಾನಂದರ ಜಯಂತಿ ನಿಮಿತ್ತ ವಿಶೇಷ ಲೇಖನ)
ಭಾರತದ ಅಧ್ಯಾತ್ಮ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಿದ ಮಹಾನ್ ಚಿಂತಕ ಸ್ವಾಮಿ ವಿವೇಕಾನಂದರು ಕೇವಲ ಧಾರ್ಮಿಕ ಗುರು ಮಾತ್ರವಲ್ಲ; ಅವರು ಯುವಜನತೆಯ ಆತ್ಮವಿಶ್ವಾಸ, ಚಿಂತನೆ ಮತ್ತು ರಾಷ್ಟ್ರನಿರ್ಮಾಣದ ಸಂಕಲ್ಪಕ್ಕೆ ದಿಕ್ಕು ನೀಡಿದ ಯುಗಪ್ರವರ್ತಕರು. ಅವರ ಆಲೋಚನೆಗಳು, ಸಂದೇಶಗಳು ಮತ್ತು ಜೀವನದ ಮೌಲ್ಯಗಳು ಇಂದಿನ ಯುವಸಮಾಜಕ್ಕೆ ಇನ್ನಷ್ಟು ಅಗತ್ಯವಾಗಿವೆ.

ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ ಯುವಜನತೆಯೇ ರಾಷ್ಟ್ರದ ನಿಜವಾದ ಶಕ್ತಿ. ಯುವಕರಲ್ಲಿರುವ ಶಕ್ತಿ, ಚೈತನ್ಯ ಮತ್ತು ಸೃಜನಶೀಲತೆಯ ಮೇಲೆ ಅವರಿಗೆ ಅಪಾರ ನಂಬಿಕೆ ಇತ್ತು.
“ಏಳಿ ಎದ್ದೇಳಿ, ಜಾಗೃತರಾಗಿ, ಗುರಿ ತಲುಪುವ ತನಕ ನಿಲ್ಲಬೇಡಿ” ಎಂಬ ಅವರ ಅಮರ ವಾಕ್ಯ ಯುವಕರಲ್ಲಿ ಆತ್ಮವಿಶ್ವಾಸ ಮತ್ತು ಉತ್ಸಾಹವನ್ನು ತುಂಬುತ್ತದೆ. ಆತ್ಮವಿಶ್ವಾಸವಿಲ್ಲದೆ ಯಾವುದೇ ಸಾಧನೆ ಸಾಧ್ಯವಿಲ್ಲ ಎಂದು ಅವರು ಸ್ಪಷ್ಟವಾಗಿ ಪ್ರತಿಪಾದಿಸಿದ್ದರು. ಆದ್ದರಿಂದ ಯುವಕರು ತಮ್ಮ ಅಂತರಂಗದ ಸಾಮರ್ಥ್ಯವನ್ನು ಅರಿತು, ಭಯ ಮತ್ತು ಸಂಶಯಗಳನ್ನು ತೊರೆದು ಧೈರ್ಯದಿಂದ ಬದುಕಿನ ಸವಾಲುಗಳನ್ನು ಎದುರಿಸಬೇಕೆಂಬುದೇ ಅವರ ಮೂಲ ಸಂದೇಶವಾಗಿದೆ.
ಇಂದು ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಯುವಜನರನ್ನು ಹೊಂದಿರುವ ರಾಷ್ಟ್ರವಾಗಿದೆ. ಯುವಕರು ಸಮಾಜ ಮತ್ತು ರಾಷ್ಟ್ರ ನಿರ್ಮಾಣದ ನಿಜವಾದ ಶಿಲ್ಪಿಗಳು. ಪ್ರಜಾಪ್ರಭುತ್ವದ ಬಲವರ್ಧನೆ, ಆರ್ಥಿಕ ಪ್ರಗತಿ, ತಂತ್ರಜ್ಞಾನ ಅಭಿವೃದ್ಧಿ ಹಾಗೂ ಸಾಮಾಜಿಕ ಬದಲಾವಣೆಗಳ ಭವಿಷ್ಯವನ್ನು ರೂಪಿಸುವವರು ಯುವಜನರೇ. ಬಡತನ, ನಿರುದ್ಯೋಗ, ಪರಿಸರ ಮಾಲಿನ್ಯ, ಸಾಮಾಜಿಕ ಅಸಮಾನತೆಗಳಂತಹ ಸಂಕೀರ್ಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯವೂ ಯುವಪೀಳಿಗೆಯಲ್ಲಿದೆ.
ಯೌವನವು ಸೃಜನಶೀಲತೆ ಮತ್ತು ಹೊಸದನ್ನು ರೂಪಿಸುವ ಉತ್ಸಾಹದ ವಯಸ್ಸು. ಭಾರತದಲ್ಲಿ ಸಾಮಾನ್ಯವಾಗಿ 15 ರಿಂದ 29 ವರ್ಷದೊಳಗಿನವರನ್ನು ಯುವಕರು ಎಂದು ಪರಿಗಣಿಸಲಾಗುತ್ತದೆ. 2011ರ ಜನಗಣತಿಯ ಪ್ರಕಾರ, ದೇಶದಲ್ಲಿ ಸುಮಾರು 42.2 ಕೋಟಿ ಯುವಜನರು ಇದ್ದರು ಎಂಬ ವರದಿ ಭಾರತವನ್ನು “ಯುವ ರಾಷ್ಟ್ರ” ಎಂದು ಗುರುತಿಸುತ್ತದೆ. ಇಂದಿಗೂ ವಿಶ್ವದ ಅತಿ ದೊಡ್ಡ ಯುವ ಜನಸಂಖ್ಯೆ ಭಾರತದಲ್ಲೇ ಇರುವುದರಿಂದ, ಇದು ನಮ್ಮ ರಾಷ್ಟ್ರಕ್ಕೆ ಮಹತ್ತರ ಅವಕಾಶವೂ ಹೌದು.
ಆದರೆ ಇಂದಿನ ಯುವಜನರು ನಿರುದ್ಯೋಗ, ತೀವ್ರ ಸ್ಪರ್ಧೆ, ಮಾನಸಿಕ ಒತ್ತಡ, ನೈತಿಕ ಮೌಲ್ಯಗಳ ಕುಸಿತದಂತಹ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರ ಚಿಂತನೆಗಳು ಯುವಜನತೆಗೆ ದಾರಿದೀಪವಾಗುತ್ತವೆ. ಅವರು ದೈಹಿಕ, ಮಾನಸಿಕ ಹಾಗೂ ಆತ್ಮಿಕ ಬಲಕ್ಕೆ ಸಮಾನ ಮಹತ್ವ ನೀಡಿದರು.
“ನಿಮ್ಮನ್ನು ನೀವು ದುರ್ಬಲರು ಎಂದು ಅಂದುಕೊಳ್ಳುವುದೇ ಮಹಾ ಪಾಪ” ಎಂಬ ಅವರ ಸಂದೇಶ ಯುವಕರಲ್ಲಿ ಆತ್ಮವಿಶ್ವಾಸ ಮತ್ತು ಧೈರ್ಯವನ್ನು ತುಂಬುತ್ತದೆ.
ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ ಶಿಕ್ಷಣವು ಕೇವಲ ಉದ್ಯೋಗ ಪಡೆಯುವ ಸಾಧನವಲ್ಲ; ಅದು ವ್ಯಕ್ತಿತ್ವ ನಿರ್ಮಾಣ, ಸಚ್ಚಾರಿತ್ರ್ಯ ಮತ್ತು ಮಾನವೀಯ ಮೌಲ್ಯಗಳ ಬೆಳವಣಿಗೆಗೆ ದಾರಿ ಮಾಡಿಕೊಡಬೇಕು. ಜ್ಞಾನವು ಸೇವೆಯೊಂದಿಗೆ ಬೆರೆತಾಗ ಮಾತ್ರ ಸಮಾಜಕ್ಕೆ ಉಪಯುಕ್ತವಾಗುತ್ತದೆ ಎಂಬುದು ಅವರ ನಂಬಿಕೆ. ವಿದ್ಯಾಭ್ಯಾಸದ ಜೊತೆಗೆ ಸೇವಾಭಾವ, ಶಿಸ್ತು ಮತ್ತು ನೈತಿಕತೆಯನ್ನು ಬೆಳೆಸಿದ ಯುವಕರು ರಾಷ್ಟ್ರಕ್ಕೆ ಅಮೂಲ್ಯ ಆಸ್ತಿಯಾಗುತ್ತಾರೆ ಎಂದು ಅವರು ನಂಬಿದ್ದರು.
ಇಂದು ಕೆಲವೇ ವೃತ್ತಿಗಳತ್ತ ಯುವಜನರನ್ನು ತಳ್ಳುವ ಸೀಮಿತ ಚಿಂತನೆ ಸಮಾಜದಲ್ಲಿ ಕಂಡುಬರುತ್ತಿದೆ. ಇದು ಯುವಕರ ಸಂಪೂರ್ಣ ಸಾಮರ್ಥ್ಯವನ್ನು ಕುಂಠಿತಗೊಳಿಸುವ ಪ್ರಮುಖ ಕಾರಣವಾಗಿದೆ. ಯುವಕರು ತಮ್ಮ ಆಸಕ್ತಿಗೆ ಅನುಗುಣವಾಗಿ ಎಲ್ಲ ಕ್ಷೇತ್ರಗಳಲ್ಲೂ ಸಮಾನ ಅವಕಾಶಗಳನ್ನು ಪಡೆದಾಗ ಮಾತ್ರ ನಿಜವಾದ ಅಭಿವೃದ್ಧಿ ಸಾಧ್ಯ. ಈ ಬದಲಾವಣೆಗೆ ಕುಟುಂಬ, ಸಮಾಜ ಮತ್ತು ಸರ್ಕಾರದ ಸಹಕಾರ ಅತ್ಯಗತ್ಯವಾಗಿದೆ.
ಪ್ರತಿ ವರ್ಷ ಜನವರಿ 12ರಂದು ಆಚರಿಸಲಾಗುವ ಸ್ವಾಮಿ ವಿವೇಕಾನಂದ ಜಯಂತಿಯನ್ನು ರಾಷ್ಟ್ರೀಯ ಯುವ ದಿನವಾಗಿ ಆಚರಿಸುವ ಮೂಲಕ, ರಾಷ್ಟ್ರವು ಯುವಶಕ್ತಿಯ ಮಹತ್ವವನ್ನು ಗೌರವಿಸುತ್ತದೆ.
“ನನಗೆ ನೂರು ಶಕ್ತಿಶಾಲಿ ಯುವಕರನ್ನು ಕೊಡಿ, ನಾನು ಭಾರತವನ್ನು ಪುನರ್ ನಿರ್ಮಿಸುತ್ತೇನೆ” ಎಂಬ ಸ್ವಾಮೀಜಿಯವರ ಪ್ರಸಿದ್ಧ ಹೇಳಿಕೆ ಯುವಶಕ್ತಿಯ ಮೇಲಿನ ಅವರ ಅಪಾರ ವಿಶ್ವಾಸವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ.
ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಆತ್ಮವಿಶ್ವಾಸ, ಪರಿಶ್ರಮ, ಶಿಸ್ತು, ಸೇವಾಭಾವ ಮತ್ತು ರಾಷ್ಟ್ರಪ್ರೇಮದೊಂದಿಗೆ ಯುವಕರು ಮುನ್ನಡೆದರೆ, ಬಲಿಷ್ಠ, ಸ್ವಾಭಿಮಾನಿ ಮತ್ತು ಆತ್ಮನಿರ್ಭರ ಭಾರತವನ್ನು ನಿರ್ಮಿಸುವುದು ಸಾಧ್ಯ. ನಿಜಾರ್ಥದಲ್ಲಿ ಸ್ವಾಮಿ ವಿವೇಕಾನಂದರು ಭಾರತದ ಯುವಜನತೆಯ ಶಿಲ್ಪಿ ಹಾಗೂ ಯುವಶಕ್ತಿಗೆ ಸದಾ ಪ್ರೇರಣೆಯ ಅಮರ ದೀಪ. ಅವರ ಚಿಂತನೆಗಳು ಇಂದಿಗೂ ಯುವಮನಸ್ಸುಗಳಿಗೆ ದಿಕ್ಕು ತೋರಿಸುತ್ತಲೇ ಇವೆ.
– ಡಾ. ನಾಗರಾಜ ಓಬಯ್ಯ
ಸಹಾಯಕ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು
ಅರ್ಥಶಾಸ್ತ್ರ ವಿಭಾಗ
ಕೆ.ಎಲ್.ಇ. ಸಂಸ್ಥೆಯ ಜೆ.ಟಿ. ಮಹಾವಿದ್ಯಾಲಯ, ಗದಗ
About The Author
Discover more from JANADHWANI NEWS
Subscribe to get the latest posts sent to your email.