ಚಿತ್ರದುರ್ಗ, ಜನವರಿ 11:
ರಾಯಲಸೀಮೆಯ ನೆಲದಲ್ಲಿ ಬೆಳೆದೂ, ಬಳ್ಳಾರಿಯ ಮಣ್ಣಿನಲ್ಲಿ ಹೋರಾಟದ ಗುರುತು ಬಿಟ್ಟೂ, ಆಂಧ್ರ–ಕರ್ನಾಟಕದ ಹೃದಯಭಾಗದಲ್ಲಿ ಸದಾಕಾಲ ಪ್ರತಿಧ್ವನಿಸುವ ಅಪ್ರತಿಮ ರಾಷ್ಟ್ರಪ್ರೇಮಿ ಸ್ವಾತಂತ್ರ್ಯ ಹೋರಾಟಗಾರ ಒಡ್ಡೆ ಓಬಣ್ಣ ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
ನಗರದ ಹೊರವಲಯದಲ್ಲಿರುವ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠದ ವತಿಯಿಂದ ಹಮ್ಮಿಕೊಳ್ಳಲಾದ ಸ್ವಾತಂತ್ರ್ಯ ಹೋರಾಟಗಾರ ಒಡ್ಡೆ ಓಬಣ್ಣ ಜಯಂತಿಯಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಉಯ್ಯಾಲವಾಡ ನರಸಿಂಹ ರೆಡ್ಡಿಯ ಕಾಲದಲ್ಲಿ ನೊಸ್ಸಂ ಸಂಸ್ಥಾನದ ವ್ಯಾಪ್ತಿಯಲ್ಲಿ ಇಂದಿನ ಕಡಪ, ಕರ್ನೂಲ್, ಅನಂತಪುರ ಹಾಗೂ ಕರ್ನಾಟಕದ ಬಳ್ಳಾರಿ ಸೇರಿದಂತೆ ಒಟ್ಟು 66 ಗ್ರಾಮಗಳು ಸೇರಿದ್ದವು. ಈ ಪ್ರದೇಶಗಳಾದ್ಯಂತ ಒಡ್ಡೆ ಓಬಣ್ಣನ ಹೋರಾಟದ ಗುರುತು ಇಂದಿಗೂ ಜೀವಂತವಾಗಿದೆ ಎಂದರು.
18ನೇ ಶತಮಾನದಲ್ಲಿ ಬ್ರಿಟಿಷರ ಅಧಿಪತ್ಯ ವೇಗವಾಗಿ ವಿಸ್ತಾರಗೊಳ್ಳುತ್ತಿದ್ದ ಸಂದರ್ಭದಲ್ಲಿ, ಗ್ರಾಮಮಟ್ಟದ ನಾಯಕತ್ವ ಹಾಗೂ ಜನಪದ ಶೌರ್ಯವನ್ನು ಒಟ್ಟುಗೂಡಿಸಿ ಬಂಡಾಯ ರೂಪಿಸಿದ ಅಪರೂಪದ ಹೋರಾಟಗಾರರಲ್ಲಿ ಒಡ್ಡೆ ಓಬಣ್ಣ ಅಗ್ರಗಣ್ಯರಾಗಿದ್ದರು. 1857ರ ಸಿಪಾಯಿ ದಂಗೆಯಕ್ಕೂ ಮುನ್ನವೇ, 1846ರಲ್ಲಿ ಆಂಧ್ರಪ್ರದೇಶದ ರೆನಾಟಿ ಪ್ರದೇಶದಲ್ಲಿ ಉಯ್ಯಾಲವಾಡ ನರಸಿಂಹ ರೆಡ್ಡಿಯೊಂದಿಗೆ ಸೇರಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಒಡ್ಡೆ ಓಬಣ್ಣ ಅವರು ಜನವರಿ 11, 1807ರಂದು ಆಂಧ್ರಪ್ರದೇಶದ ಕಡಪ ಜಿಲ್ಲೆಯ ನೊಸ್ಸಂ ಗ್ರಾಮದಲ್ಲಿ ಒಡ್ಡೆ ಸುಬ್ಬಣ್ಣ–ಸುಬ್ಬಮ್ಮ ದಂಪತಿಗಳಿಗೆ ಜನಿಸಿದರು. ಉಯ್ಯಾಲವಾಡ ನರಸಿಂಹ ರೆಡ್ಡಿಯ ಬಾಲ್ಯದ ಆಪ್ತ ಸ್ನೇಹಿತರಾಗಿದ್ದ ಅವರು, ಸೇನಾ ಕಮಾಂಡರ್ ಹಾಗೂ ಶೂರ ಗೊರಿಲ್ಲಾ ಯೋಧರಾಗಿದ್ದರು.
ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಜಾರಿಗೆ ತಂದ ರಿತ್ವರಿ ತೆರಿಗೆ ವ್ಯವಸ್ಥೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಒಳಗಾದ ಸಂದರ್ಭದಲ್ಲಿ, ಓಬಣ್ಣ ಅವರು ನರಸಿಂಹ ರೆಡ್ಡಿಯ ಬಲಗೈ ಬಂಟನಾಗಿ ಸುಮಾರು 10,000 ರೈತರ ಸೇನೆಯನ್ನು ಸಂಘಟಿಸಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದರು. 1846ರ ಜುಲೈ ತಿಂಗಳಲ್ಲಿ ಗಿಡ್ಡಲೂರು ಹಾಗೂ ಮಂಡ್ಲಪಾಡು ಯುದ್ಧಗಳಲ್ಲಿ ಬ್ರಿಟಿಷ್ ಸೇನೆಯನ್ನು ಮಣಿಸಿ ಶೌರ್ಯ ಪ್ರದರ್ಶಿಸಿದರು.
ಅಕ್ಟೋಬರ್ 6, 1846ರಂದು ಪೆರುಸೋಮುಲಾ ಸಮೀಪ ನಡೆದ ಯುದ್ಧದ ಬಳಿಕ ಓಬಣ್ಣ ಅವರನ್ನು ಸೆರೆಹಿಡಿದು, 1847ರ ಜನವರಿ 19ರಂದು ಅಂಡಮಾನ್ ದ್ವೀಪಕ್ಕೆ ಕಳುಹಿಸಲಾಯಿತು. ಉಯ್ಯಾಲವಾಡ ನರಸಿಂಹ ರೆಡ್ಡಿಯನ್ನು ಫೆಬ್ರವರಿ 22, 1847ರಂದು ಗಲ್ಲಿಗೇರಿಸಲಾಯಿತು ಎಂದು ಸ್ವಾಮೀಜಿ ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಕೊರಟಗೆರೆಯ ಬಸವ ಮಹಾಲಿಂಗ ಶ್ರೀಗಳು, ಮಸ್ಕಿಯ ಬಸವಪ್ರಸಾದ ಶ್ರೀಗಳು ಸಾನ್ನಿಧ್ಯವಹಿಸಿದ್ದರು. ಡಿ.ಕೆ.ಡಿ ಮಾಸ್ಟರ್ ರುದ್ರ, ಗಂಧರ್ವ ಮಂಜು, ಜಯಕರ್ನಾಟಕ ಸಂಘದ ರಾಜ್ಯ ಮಹಿಳಾ ಅಧ್ಯಕ್ಷೆ ಡಾ. ಜಿ.ಎಸ್. ಪುಷ್ಪಲತಾ, ಗೋಪಿನಾಥ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.