ವರದಿ: ಕೆ.ಟಿ.ಮೋಹನ್ ಕುಮಾರ್
ಸಾಲಿಗ್ರಾಮ( ಮೈಸೂರು ಜಿಲ್ಲೆ ): ಮಹಾ ಪುರುಷರ ಜಯಂತಿ ಆಚರಣೆ ಮಾಡುವುದರ ಜತೆಗೆ ಅವರ ಜೀವಿತಾವಧಿಯಲ್ಲಿ ಮಾಡಿದ ಸಾಧನೆಗಳನ್ನು ನೆನೆದು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರಖಂಡ್ರೆ ಹೇಳಿದರು.



ಅವರು ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಹಾಗೂ ವೀರಶೈವ ಲಿಂಗಾಯತ ಸಂಘಟನೆಗಳ ವತಿಯಿಂದ ಪಟ್ಟಣದ ಸರ್ಕಾರಿ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅನುಭವ ಮಂಟಪದ ಮೂಲಕ ಜಗತ್ತಿಗೆ ಪ್ರಜಾಪ್ರಭುತ್ವದ ಬುನಾದಿ ಹಾಕಿ ಕಾಯಕ ತತ್ವದ ಮೂಲಕ ಸಮಾನತೆಯ ಸಂದೇಶ ನೀಡಿದ ಅವರು ಅಜರಾಮರ ಎಂದರು.
ಬಸವ ಕಲ್ಯಾಣದಲ್ಲಿ 700 ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ನೂತನ ಅನುಭವ ಮಂಟಪದ ಕಾಮಗಾರಿಯನ್ನು ಮುಂದಿನ ವರ್ಷದ ಬಸವ ಜಯಂತಿಯ ವೇಳೆಗೆ ಪುರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುತ್ತದೆ. ಸಮಾಜದ ಇಂದಿನ ಸ್ಥಿತಿಯನ್ನು ಬದಲಿಸಲು ವಚನಗಳ ಸಾರ ಮತ್ತು ಅವುಗಳ ಅನುಕರಣೆ ಅಗತ್ಯವಾಗಿದ್ದು ಸರ್ವರೂ ಕೈಜೋಡಿಸಿ ಕಾಯಕ ತತ್ವಗಳನ್ನು ಪಾಲಿಸಿ ಜಾತ್ಯಾತೀತ ಹಾಗೂ ವ್ಯಸನಮುಕ್ರ ಸಮಾಜ ನಿರ್ಮಾಣ ಮಾಡುವ ಕೆಲಸ ಮಾಡಬೇಕೆಂದರು.
ಜನರಿಗೆ ಶಾಂತಿ ನೆಮ್ಮದಿಯ ಅಗತ್ಯವಿರುವುದರಿಂದ ಅದನ್ನು ಪಡೆಯಲು ಬಸವ ತತ್ವದ ಅವಶ್ಯಕತೆ ಇದ್ದು ಈ ವಿಚಾರವನ್ನು ಪ್ರತಿಯೊಬ್ಬರು ಅರಿತು ಒತ್ತಡ ಮುಕ್ತರಾಗಲು ಪ್ರಾಮಾಣಿಕವಾಗಿ ನಡೆದುಕೊಂಡು ಶುದ್ದ ಕಾಯಕದ ಜೀವನ ನಡೆಸಬೇಕೆಂದು ಸಲಹೆ ನೀಡಿದರು.
ಸಮಾಜದಲ್ಲಿ ಪ್ರತಿಯೊಬ್ಬರು ಮಾಡುವ ಕೆಲಸಕ್ಕೆ ಅದರದೆ ಆದ ಮಹತ್ವ ಮತ್ತು ಗೌರವ ಇರುವುದರಿಂದ ಮೇಲು ಕೀಳು ಎಂಬ ತಾರತಮ್ಯ ತೊರೆದು ಸರ್ವ ಜನರನ್ನು ಜತೆಯಲ್ಲಿ ಕರೆದುಕೊಂಡು ಹೋಗುವ ಕೆಲಸವನ್ನು ಮಾಡುವ ಮೂಲಕ ಬಸವಣ್ಣನವರಿಗೆ ಗೌರವ ನಿಡೋಣ ಎಂದು ಕರೆ ನೀಡಿದರು.
ಶಾಸಕ ಡಿ.ರವಿಶಂಕರ್ ಮಾತನಾಡಿ ಬಸವಣ್ಣನವರ ವಚನಗಳ ಸಾರವನ್ನು ಅಳವಡಿಸಿಕೊಂಡು ಅವರ ಆದರ್ಶಗಳನ್ನು ಪಾಲಿಸಿದರೆ ಎಲ್ಲರ ಬದುಕು ಹಸನಾಗುತ್ತದೆ ಎಂರರು.
ಜಗಜ್ಯೋತಿ ಬಸವೇಶ್ವರರ ಬದುಕು ಮತ್ತು ಉದ್ದೇಶ ಮನುಕುಲಕ್ಕೆ ಮಾದರಿಯಾಗಿದ್ದು ಅಂತಹ ಮಹಾನ್ ಪುರುಷ ನಮ್ಮ ನಾಡಿನಲ್ಲಿ ಜನಿಸಿದ್ದು ನಮ್ಮೆಲ್ಲರ ಸುದೈವ ಎಂದರಲ್ಲದೆ ಸಮಾನತೆಯ ಸಮಾಜ ನಿರ್ಮಾಣದ ಕನಸು ಕಂಡು ಅದನ್ನು ಸಾಕಾರ ಮಾಡಲು ಶ್ರಮಿಸಿದ ಸುಧಾರಕ ಅವರಾಗಿದ್ದರೆಂದರು. ನನ್ನ ಶಾಸಕತ್ವದ ಅವಧಿಯಲ್ಲಿ ನಾನು ಎಂದಿಗೂ ಜಾತಿ ರಾಜಕಾರಣ ಮಾಡದೆ ಸರ್ವರನ್ನು ಸಮಾನವಾಗಿ ಕಂಡು ಬಸವಣ್ಣನವರ ಕಾಯಕ ತತ್ವವನ್ನು ಪಾಲಿಸುತ್ತೇನೆಂದ ಅವರು ಕೆ.ಆರ್.ನಗರ ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ಬಸವ ಭವನವನ್ನು ಪೂರ್ಣಗೊಳಿಸುತ್ತೇನೆಂದು ಭರವಸೆ ನೀಡಿದರು.
ಮಾಜಿ ಸಚಿವ ಸಾ.ರಾ.ಮಹೇಶ್, ಮಾತನಾಡಿ ಕೆ.ಆರ್.ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಬಸವ ಭವನಕ್ಕೆ ಈ ಹಿಂದೆ ಹೆಚ್.ಡಿ.ಕುಮಾರಸ್ವಾಮಿಯವರು ಮತ್ತು ಬಸವರಾಜಬೊಮ್ಮಾಯಿ ಯವರು ಮುಖ್ಯ ಮಂತ್ರಿಗಳಾಗಿದ್ದ ಅವದಿಯಲ್ಲಿ ಮಂಜೂರಾಗಿದ್ದ ಅನುದಾನವನ್ನು ತಾಂತ್ರಿಕ ತೊಂದರೆಯ ನೆಪವೊಡ್ಡಿ ತಡೆ ಹಿಡಿದಿದ್ದು ಅರಣ್ಯ ಸಚಿವರು ಗಮನಹರಿಸಿ ಅನುಮತಿ ಕೊಡಿಸಬೇಕೆಂದರು. ಜತೆಗೆ ಸಾಲಿಗ್ರಾಮ ತಾಲೂಕು ಕೇಂದ್ರದಲ್ಲಿ ಬಸವ ಭವನ ನಿರ್ಮಾಣ ಮಾಡಲು ವೈಯುಕ್ತಿಕವಾಗಿ ಅರ್ಧ ಎಕರೆ ಜಾಗ ನೀಡುತ್ತೇನೆ ಎಂದು ಘೋಷಣೆ ಮಾಡಿದರು.
ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾ ಸಭಾದ ರಾಜ್ಯಾಧ್ಯಕ್ಷ ಶಂಕರ್ ಬಿದರಿ, ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್, ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಹಾಗೂ ವೀರಶೈವ ಲಿಂಗಾಯತ ಸಂಘಟನೆಗಳ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ ಮಾತನಾಡಿದರು.
ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ದಗಂಗಾಮಠದ ಸಿದ್ದಲಿಂಗ ಮಹಾಸ್ವಾಮೀಜಿರವರುಗಳು ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಪ್ರತಿಬಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಸಾಧಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮ ಆರಂಭಕ್ಕೂ ಮೊದಲು ಪಟ್ಟಣದ ಯೋಗಾ ನರಸಿಂಹ ಸ್ವಾಮಿ ದೇವಾಲಯದ ಬಳಿಯಿಂದ ಜಗಜ್ಯೋತಿ ಬಸವೇಶ್ವರರ ಭಾವಚಿತ್ರವನ್ನು ಪೂರ್ಣ ಕುಂಭ ಕಳಸ ಹೊತ್ತ ಮಹಿಳೆಯರು, ವಿವಿಧ ಕಲಾತಂಡಗಳೊಂದಿಗೆ ಹರ ಗುರು ಚರ ಮೂರ್ತಿಗಳು ಹಾಗೂ ಬಸವ ಭಕ್ತರ ಸಮ್ಮುಖದಲ್ಲಿ ವೈಭವದ ಮೆರವಣಿಗೆಯಲ್ಲಿ ವೇದಿಕೆಯವರೆಗೆ ಕರೆ ತರಲಾಯಿತು.
ಬೆಟ್ಟದಪುರ ಸಲಿಲಾಖ್ಯ ಮಠದ ಚನ್ನಬಸವದೇಶಿ ಕೇಂದ್ರಶ್ರೀಗಳು, ಗಾವಡಗೆರೆ ಗುರುಲಿಂಗ ಜಂಗಮ ಮಠದ ನಟರಾಜಸ್ವಾಮಿಗಳು, ರಾವಂದೂರು ಮುರುಘಾ ಮಠದ ಮೋಕ್ಷಪತಿಶ್ರೀಗಳು, ಮಾದಹಳ್ಳಿ ಉಕ್ಕಿನಕಂತೆ ಮಠದ ಸಾಂಬಸದಾಶಿವಸ್ವಾಮೀಜಿ, ಅರಕೆರೆ ವಿರಕ್ತ ಮಠದ ಸಿದ್ದೇಶ್ವರಶ್ರೀಗಳು ಸೇರಿದಂತೆ ಹಲವು ಮಠಾಧೀಶರುಗಳು, ವಿಧಾನ ಪರಿಷತ್ ಸದಸ್ಯ
ಸಿ.ಎನ್.ಮಂಜೇಗೌಡ, ಮಾಜಿ ಸದಸ್ಯ ತೋಂಟದಾರ್ಯ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ದೊಡ್ಡಸ್ವಾಮಿಗೌಡ, ಮೂಡ ಮಾಜಿ ಅಧ್ಯಕ್ಷ ಎಚ್.ಎನ್.ವಿಜಯ್,, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ಬಸವ ಬಳಗಗಳ ಒಕ್ಕೂಟದ ಮಾಜಿ ಅಧ್ಯಕ್ಷ ಪ್ರದೀಪ್, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಪಿ.ರಮೇಶ್ ಕುಮಾರ್, ಜಿ.ಪಂ.ಮಾಜಿ ಉಪಾಧ್ಯಕ್ಷ ಎ.ಎಸ್.ಚನ್ನಬಸಪ್ಪ, ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಕೆಂಪರಾಜು, ಮಾಜಿ ಅಧ್ಯಕ್ಷ ಚಂದ್ರಶೇಖರ, ಪ್ರಚಾರ ಸಮಿತಿ ಅಧ್ಯಕ್ಷ ಸರಗೂರುನಟರಾಜು, ಮುಖಂಡರುಗಳಾದ
ಕೆ.ಪಿ.ಪ್ರಭುಶಂಕೆರ್, ಪಶುಪತಿ ಜಗದೀಶ್, ಸರಗೂರು ಶಿವು, ದಡದಹಳ್ಳಿ ನಟರಾಜ್, ಎಸ್.ಪಿ.ಆನಂದ್, ಕೆಡಗ ನಟರಾಜ್, ಎಲ್.ಪಿ.ರವಿಕುಮಾರ್, ರಾಜಶೇಖರ್, ಲಾಳನಹಳ್ಳಿ ಮಹೇಶ್, ಗಾಯನಳ್ಳಿ ನಟರಾಜ್, ಮಹೇಶ್, ಸತೀಶ್, ತೇಜೊಮೂರ್ತಿ, ಹೊಸೂರುಕೀರ್ತಿ, ಕುಮಾರಸ್ವಾಮಿ, ಬಸವರಾಜು, ದಿಲೀಪ್, ಕುಮಾರ್, ರಾಣಿ, ಸತೀಶ್ ಸೇರಿದಂತೆ ಹಲವರು ಇದ್ದರು.
ಸಾಲಿಗ್ರಾಮ : ವೀರಶೈವ ಧರ್ಮದವರು ಸಹ ಇತ್ತೀಚೆಗೆ ವೈದಿಕ ಧರ್ಮ ಅನುಸುರಿಸುತ್ತಿದ್ದು ಕಾಯಕ ತತ್ವವನ್ನು ಮರೆಯುತ್ತಿದ್ದಾರೆ ಎಂದು ಮಾಜಿ ಸಚಿವ ಜೆ.ಸಿ.ಮಾದುಸ್ವಾಮಿ ವಿಷಾದಿಸಿದರು.
ಅವರು ಪಟ್ಟಣದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಜಗಜ್ಯೋತಿ ಬಸವೇಶ್ವರರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲ ನಡೆದಾಗ ಮಾತ್ರ ನಿಜವಾಗಿಯೂ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.
ಸಮಾಜದಲ್ಲಿ ನೊಂದವರು ಮತ್ತು ತುಳಿತಕ್ಕೊಳಗಾದವರಿಗೆ ಸಹಾಯ ಹಸ್ತ ಚಾಚುವುದು ವೀರಶೈವ ಧರ್ಮದ ಮೂಲ ಉದ್ದೇಶವಾಗಿದ್ದು ಪ್ರತಿಯೊಬ್ಬರು ಅದನ್ನು ಪಾಲಿಸಿ ಇತರರಿಗೆ ಮಾದರಿಯಾಗಬೇಕು ಎಂದರು.
ಮನುಷ್ಯನಿಗೆ ಮನೆಯಷ್ಠೆ ಮಠಗಳು ಪ್ರಮುಖವಾಗಿದ್ದು ನಾವೆಲ್ಲಾ ಸಹಾಯ ಮಾಡಿದರೆ ಭವಿಷ್ಯದಲ್ಲಿ ಅವುಗಳು ಸರ್ವರಿಗೂ ಸಹಾಯ ಹಸ್ತ ಚಾಚಲಿದ್ದು ಈ ವಿಚಾರವನ್ನು ಪ್ರತಿಯೊಬ್ಬರು ಅರಿಯಬೇಕೆಂದು ಸಲಹೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿ ಸಮಾಜವನ್ನು ತಿದ್ದುವ ಕೆಲಸವನ್ನು ಮಠಗಳು ಮಾಡಬೇಕಿದ್ದು ಸರ್ಕಾರಕ್ಕಿಂತ ಜವಬ್ದಾರಿಯುತವಾದ ಕೆಲಸ ಅವುಗಳಿಗೆ ಇದೆ ಎಂದರು.
ಬಸವಣ್ಣನವರು ಇವ ನಮ್ಮವ ಎಂದು ಎಲ್ಲರನ್ನು ಕಾಣಬೇಕೆಂದು ಶತಮಾನಗಳ ಹಿಂದೆಯೆ ಹೇಳಿದ್ದರು ಆದರೆ ಇಂದಿನ ರಾಜಕಾರಣಿಗಳು ಕಳ್ಳರು ಮತ್ತು ಕೊಲೆಗಾರರನ್ನು ನಮ್ಮವ ಎನ್ನುತ್ತಿದ್ದಾರೆ. ಇದರಿಂದ ಸಮಾಜ ಅದೋಗತಿಗೆ ಹೋಗುತ್ತಿದೆ ಎಂದರು.
ಸಮಾನತೆಯ ಸಮಾಜ ನಿರ್ಮಾಣವಾಗಲು ಸರ್ವರು ಪರಸ್ಪರ ಸಹೋದರತೆಯಿಂದ ಬದುಕಬೇಕು ಆದರೆ ಪ್ರಸ್ತುತ ದಿನಗಳಲ್ಲಿ ಹೆಂಡತಿಯೆ ಗಂಡನನ್ನು ಹಾಗೂ ಮಕ್ಕಳೇ ತಂದೆ ತಾಯಿಯನ್ನು ಕೊಲೆ ಮಾಡಿಸುವ ಮಟ್ಟಕ್ಕೆ ಇಳಿದಿದ್ದು ಇದು ಅತ್ಯಂತ ಆತಂಕಕಾರಿ ಬೆಳವಣಿಗೆ ಎಂದು ನುಡಿದರು.
About The Author
Discover more from JANADHWANI NEWS
Subscribe to get the latest posts sent to your email.