September 14, 2025
1746870979331.jpg


ಚಿತ್ರದುರ್ಗಮೇ.10:
ಸಂಸಾರದಲ್ಲಿಯೇ ಇದ್ದು ಸಾಧಕಿಯಾಗಿ, ಸ್ತ್ರೀ ಸಮಾಜಕ್ಕೆ ಆದರ್ಶ ಸ್ತ್ರೀ ಶಿವಶರಣೆ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಎಂದು ಚಳ್ಳಕೆರೆ ಬಾಪೂಜಿ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾಗ ಸಹಾಯಕ ಪ್ರಾಧ್ಯಾಪಕ ಡಾ.ಜಿ.ವಿ.ರಾಜಣ್ಣ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಇವರ ಸಂಯುಕ್ತಾಶ್ರಯದಲ್ಲಿ ಶಿವಶರಣೆ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ ಸಮಾರಂಭದಲ್ಲಿ ಉಪನ್ಯಾಸ ನೀಡಿದರು.
ಕಾಯಕದ ಮೂಲಕ, ಸಂಸಾರದ ನೊಗಕ್ಕೆ ಹೆಗಲು ಕೊಡುವ ಮೂಲಕ ಭಕ್ತಿಯ ಸಾಧನೆ ಮಾಡಿ, ಭಕ್ತಿ ಮಾರ್ಗದ ಮೂಲಕ ಅನುಭಾವಿಯಾದವಳು ಮಲ್ಲಮ್ಮ. ತಾನು ಬದುಕಿನಲ್ಲಿ ಕಂಡುಂಡ ಅನುಭವಗಳನ್ನು ಇತರರಿಗೆ ಹಂಚುವ ದಾರಿ ತೋರುವ ಅನುಭಾವಿ ಮಲ್ಲಮ್ಮ. ಗೃಹಧರ್ಮ ಪಾಲಿಸುತ್ತಾ ನೋವುಂಡ ಸ್ಥಳದಲ್ಲೇ ನೋವಿಗೆ ಮದ್ದು ಮಾಡುತ್ತಾ ತನ್ನವರನ್ನು ಅವರ ಅಜ್ಞಾನದಿಂದ ಅರಿವಿನ ಕಡೆಗೆ ಕರೆತಂದು ಕಾಯಕದ ಮೂಲಕವೇ ಮಲ್ಲಿಕಾರ್ಜುನನ್ನು ಕಾಣಲು ಸಾಧ್ಯವಾಗಿಸಿದವಳು ಮಲ್ಲಮ್ಮ. ಮನೆಗೆದ್ದು-ಜಗಗೆಲ್ಲು ಎನ್ನುವ ತತ್ವ ಅವಳದ್ದು ಎಂದು ಹೇಳಿದರು.
ನಾಡಿನ ಚರಿತ್ರೆಯೊಳಗೆ ನೂರಾರು ರಾಣಿ-ಮಹಾರಾಣಿಯರು ಸಿಗಬಹುದು. ಹಾಗೆಯೇ ಸಾಂಸ್ಕøತಿಕ-ಆಧ್ಯಾತ್ಮಿಕ ಸಾಧನೆಯ ಉತ್ತುಂಗಕ್ಕೇರಿದ ಅನುಭಾವಿ ಮಹಿಳೆಯರು ದೊರಕಬಹುದು ಆದರೆ ಇವರೆಲ್ಲರಿಗಿಂತ ಭಿನ್ನವಾಗಿ ಕುಟುಂಬದ ಗೃಹಿಣಿಯಾಗಿ ತನ್ನ ಮನೆಯೊಳಗೆ ನೂರಾರು ಕಷ್ಟ-ನೋವುಗಳ ನಡುವೇ ಬದುಕಿ ಅದನ್ನೇ ಸಾಧನೆಯ ಹಾದಿಯಾಗಿಸಿಕೊಂಡು ಬದುಕಿ ತೋರಿಸಿಕೊಟ್ಟ ಮಹಾಶರಣೆ ಹೇಮರೆಡ್ಡಿ ಮಲ್ಲಮ್ಮ ಎಂದು ತಿಳಿಸಿದ ಅವರು, ಮಹಿಳೆಯನ್ನು ಗುರುವಾಗಿಸಿಕೊಂಡ ಆ ಹೆಸರಿನ ಮೂಲಕ ಗುರುತಿಸುವ ಏಕೈಕ ಸಮುದಾಯ ಹೇಮರೆಡ್ಡಿ ಮಲ್ಲಮ್ಮ ಸಮುದಾಯ ಎಂದು ಹೇಳಿದರು.
ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ ಮಾತನಾಡಿ, ಹೇಮರೆಡ್ಡಿ ಇಡೀ ಸ್ತ್ರೀ ಕುಲಕ್ಕೆ ಮಾದರಿಯಾಗಿರುವಂತೆ ವ್ಯಕ್ತಿತ್ವ ರೂಪಿಸಿಕೊಂಡು, ಕೌಟುಂಬಿಕ ಸಂಕಷ್ಟಗಳನ್ನು ಮೆಟ್ಟಿನಿಂತು, ಸಾಮಾಜಿಕ ಚಿಂತನೆಯಲ್ಲಿ ಬದುಕಿನ ಆದರ್ಶ ಮೌಲ್ಯ ರೂಢಿಸಿಕೊಂಡು ಧಾರ್ಮಿಕ ಸಾಧನೆಗೈದ ಮಹಾಶಿವ ಶರಣೆ ಹೇಮರೆಡ್ಡಿ ಮಲ್ಲಮ್ಮ ಎಂದು ಹೇಳಿದರು.
ರಡ್ಡಿ ಸಮಾಜಕ್ಕೆ ಬಡತನ ಬರದಂತೆ ಶ್ರೀ ಶೈಲ ಮಲ್ಲಿಕಾರ್ಜುಸ್ವಾಮಿಯಲ್ಲಿ ಬೇಡಿಕೊಂಡು ಸಮಾಜದ ಏಳಿಗೆಗಾಗಿ ಹೇಮರೆಡ್ಡಿ ಮಲ್ಲಮ್ಮ ಶ್ರಮಿಸಿದ್ದಾರೆ ಎಂದು ಹೇಳಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ. ತಾಜ್‍ಪೀರ್ ಮಾತನಾಡಿ, ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಸ್ತ್ರೀ ಕುಲಕ್ಕೆ ಮಾದರಿ. ಅವರ ತತ್ವಾದರ್ಶಗಳು ಸರ್ವಕಾಲಿಕ ಶ್ರೇಷ್ಠ. ಎಷ್ಟೇ ಕಷ್ಟ ತೊಂದರೆಗಳು ಬಂದರೂ ಕೂಡ ಅದನ್ನು ಎದುರಿಸಿದ ದಿಟ್ಟ ಮಹಿಳೆ. ಇವರ ಆದರ್ಶ ಜೀವನ ಎಲ್ಲರಿಗೂ ಮಾದರಿಯಾಗಿದ್ದು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ಪ್ರತಿಯೊಬ್ಬ ಮಹಿಳೆ ನಡೆಯುವುದು ಅವಶ್ಯವಿದೆ ಎಂದು ಹೇಳಿದರು.
ಜಿಲ್ಲಾ ವೀರಶೈವ-ಲಿಂಗಾಯತ ಹೇಮರೆಡ್ಡಿ ಮಲ್ಲಮ್ಮ ಸಮಾಜ ಅಧ್ಯಕ್ಷ ಜಿ.ಚಿದಾನಂದಪ್ಪ ಮಾತನಾಡಿ, ಹೇಮರೆಡ್ಡಿ ಮಲ್ಲಮ್ಮ ಕಷ್ಟ-ಕಾರ್ಪಣ್ಯಗಳ ನಡುವೆಯೂ ಆದರ್ಶ ಬದುಕು ಸಾಗಿಸಿ ಸಮಾಜಕ್ಕೆ ದಾರಿ ದೀಪವಾದವರು. ರಡ್ಡಿ ಸಮುದಾಯದ ಬದುಕು ಸದಾ ಬಂಗಾರವಾಗಲಿ ಎಂದು ಪ್ರಾರ್ಥಿಸಿದ ಆ ಮಹಾ ತಾಯಿ ಸಮಾಜಕ್ಕೆ ಮಾದರಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆಹಾರ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ಜಿಲ್ಲಾ ವೀರಶೈವ-ಲಿಂಗಾಯತ ಹೇಮರೆಡ್ಡಿ ಮಲ್ಲಮ್ಮ ಸಮಾಜ ಪ್ರಧಾನ ಕಾರ್ಯದರ್ಶಿ ಡಿ.ಟಿ.ಶಿವಾನಂದಪ್ಪ, ಮುಖಂಡರಾದ ನಾಗರಾಜ್ ಸಂಗಂ, ಡಾ.ಫಾಲಾಕ್ಷಪ್ಪ, ಡಾ.ಮಹಂತೇಶ್, ಬಸವರಾಜ್ ಮೇಟಿಕುರ್ಕಿ, ವೀರಭದ್ರಪ್ಪ, ಡಾ.ರಮೇಶ್, ಜಿ.ನಾಗಭೂಷಣ್, ಸುಜಾತಾ ಶಿವಾನಂದಪ್ಪ, ಸುನೀತಾ ಮಲ್ಲಿಕಾರ್ಜುನ್, ಅಲ್ಲಾಡಿ ವಿಜಯ್ ಕುಮಾರ್, ಮನೋಹರ್, ತಿಪ್ಪೇಸ್ವಾಮಿ, ಮಲ್ಲಿಕಾರ್ಜುನಪ್ಪ, ಮಹಂತೇಶ್, ಚಂದ್ರಶೇಖರ್, ಪ್ರತಿಭಾ ಅರುಣ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಾಪಯ್ಯ. ಡಿ.ಆರ್.ಲೋಕೇಶ್ವರಪ್ಪ ಸೇರಿದಂತೆ ಮತ್ತಿತರರು ಇದ್ದರು. ಚಿತ್ರದುರ್ಗದ ಕೆಪಿಎಂ ಗಣೇಶಯ್ಯ ಮತ್ತು ತಂಡದವರು ಗೀತಗಾಯನ ನಡೆಸಿಕೊಟ್ಟರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading