ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲೆಯ ರೋಟರಿ ಬಾಲಭವನದಲ್ಲಿ ಚಿನ್ಮುಲಾದ್ರಿ ಸಾಹಿತ್ಯ ವೇದಿಕೆ ಹಾಗೂ ರೋಟರಿ ಕ್ಲಬ್ ಚಿನ್ಮುಲಾದ್ರಿ ಇವರ ಸಹಯೋಗದಲ್ಲಿ ಕವಿ ಶಿವಾನಂದ್ ಎನ್. ಬಂಡೇಹಳ್ಳಿ ಅವರ ‘ಕಡೆದಷ್ಟು ಕನಸುಗಳು’ ಕವನ ಸಂಕಲನದ ಲೋಕಾರ್ಪಣೆ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕವಿಗೋಷ್ಠಿ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು.
ಕಾರ್ಯಕ್ರಮದಲ್ಲಿ ಸಾಹಿತಿ ಡಾ. ಎಂ. ಗುರುನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು, ಕೃತಿ ಪರಿಚಯ ಮಾಡಿ ಮಾತನಾಡಿ ನೆಲಮೂಲದ ಭಾಷೆ ಮತ್ತು ವಸ್ತುವನ್ನು ಬಳಸಿ ಸಾಹಿತ್ಯ ರಚಿಸುವ ಬರಹಗಾರರು ಕಡಿಮೆ ಮಂದಿ ಇದ್ದಾರೆ ಎಂದು ಹೇಳಿದರು. ಆಡು ಭಾಷೆಯನ್ನು ಬಳಸಿಕೊಂಡು ಕಾವ್ಯ ರಚಿಸುವ ಕಲೆಯನ್ನು ಕೆಲವೇ ಕವಿಗಳು ಸಾಧಿಸಿದ್ದಾರೆ. ರಾಜರತ್ನಂ ಅವರ ‘ರತ್ನನ ಪದಗಳು’ ಓದುಗರ ಮನಸ್ಸಿನಲ್ಲಿ ಇಂದಿಗೂ ಅನುರಣಿಸುತ್ತಿರುವುದನ್ನು ಉದಾಹರಣೆಯಾಗಿ ಅವರು ಉಲ್ಲೇಖಿಸಿದರು.
ಶಿವಾನಂದ್ ಎನ್. ಬಂಡೇಹಳ್ಳಿ ಅವರ ಚೊಚ್ಚಲ ಕವನ ಸಂಕಲನವಾದ ‘ಕಡೆದಷ್ಟು ಕನಸುಗಳು’ ಕೃತಿಯಲ್ಲಿನ ಕೆಲವು ಕವಿತೆಗಳು ಮತ್ತೆ ರಾಜರತ್ನಂ ಅವರ ಕಾವ್ಯಗಳನ್ನು ನೆನಪಿಸುವಂತಿವೆ ಎಂದು ಅವರು ಅಭಿಪ್ರಾಯಪಟ್ಟರು. ವಿಶೇಷವಾಗಿ “ನಾವ್ ಕನ್ನಡಿಗರ್, ಬಯಲ್ ಸೀಮೇರ್ ನಾವ್, ನನ್ ಪ್ರಿಯ ಪುಟ್ನಂಜಿ, ರಗ್ಗು ಚಾಪೆ, ಕಾಡ್ಗೊಲ್ರು” ಮುಂತಾದ ಕವಿತೆಗಳ ಸಾಲುಗಳು ಓದುಗರ ಮನದಲ್ಲಿ ಮತ್ತೆ ಮತ್ತೆ ಅನುರಣಿಸುತ್ತವೆ ಎಂದರು.
ಕವನ ಸಂಕಲನದ ಶೀರ್ಷಿಕೆಯಂತೆ ಕವಿ ತನ್ನ ಅಂತರಾಳದಲ್ಲಿ ಅಡಗಿರುವ ಬಡತನ, ಕನ್ನಡತನ, ಕುಟುಂಬ, ನೋವು, ನಲಿವು, ಪ್ರೀತಿ, ಪ್ರೇಮ, ದೇಶಪ್ರೇಮ ಮತ್ತು ದಾಂಪತ್ಯ ಜೀವನದ ಅನೇಕ ಭಾವನೆಗಳನ್ನು ಕವಿತೆಗಳ ಮೂಲಕ ಹೊರಹಾಕಿದ್ದಾರೆ ಎಂದು ಅವರು ಹೇಳಿದರು. “ಕಾಮುಕರ ಕಾರಸ್ಥಾನ, ಬುರುಡೆ ಬುರುಡೆ, ಮತ್ತೆ ಬರುತ್ತಲಿವೆ ಆ ದಿನಗಳು” ಮುಂತಾದ ಕವಿತೆಗಳು ಸಮಾಜದ ವಾಸ್ತವತೆಗೆ ಕನ್ನಡಿ ಹಿಡಿದಂತಿವೆ ಎಂದರು.
ಚಿನ್ಮುಲಾದ್ರಿ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ದಯಾ ಪುತ್ತೂರ್ಕರ್ ಅವರು ಕೃತಿಗೆ ಮೆಚ್ಚುಗೆ ವ್ಯಕ್ತಪಡಿಸಿ ಕವಿಗೆ ಶುಭ ಹಾರೈಸಿದರು. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿಶೇಷ ವೇಷಭೂಷಣ ಧರಿಸಿದ್ದ ವೀರ ಮಹಿಳೆಯರನ್ನು ಖ್ಯಾತ ವಕೀಲರಾದ ದಿಲ್ ಶಾದ್ ಉನ್ನೀಸ್ ಹಾಗೂ ಬಿ.ಕೆ. ರೆಹಮತ್ ಉಲ್ಲಾ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಡಾ. ಮೇಘಾ ಜಿ.ಎಸ್., ಮೀರಾ ನಾಡಿಗ್ ಅಧ್ಯಕ್ಷತೆ ವಹಿಸಿದ್ದರು. ರವಿ ಅಂಬೇಕರ್, ಶಾರದಾ ಬಿ. ಜೈರಾಮ್, ಯಶೋಧರ ಜಿ.ಎನ್., ಬಸವರಾಜ್ ಹರ್ತಿ, ಸುಮಾ ರಾಜಶೇಖರ್, ಸತೀಶ್ ಕುಮಾರ್, ಶಿವಾನಂದ್ ಎನ್. ಬಂಡೇಹಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ಟಿ. ಶಿವಮೂರ್ತಿ ಕೋಡಿಹಳ್ಳಿ, ಚಳ್ಳಕೆರೆ.
About The Author
Discover more from JANADHWANI NEWS
Subscribe to get the latest posts sent to your email.