ವರದಿ: ಶಿವಮೂರ್ತಿ ನಾಯಕನಹಟ್ಟಿ.
ನಾಯಕನಹಟ್ಟಿ : ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸರ್ಕಾರದ ವತಿಯಿಂದ ತುತ್ತು ವೈದ್ಯಕೀಯ ಸೇವೆಗೆಂದು ನೀಡಿರುವ 108 ಅಂಬುಲೆನ್ಸ್ ಅನ್ನು ಒಂದು ತಿಂಗಳಿನಿಂದ ನಿಲ್ಲಿಸಲಾಗಿದೆ ಎಂದು ಪ.ಪಂ ಮಾಜಿ ಸದಸ್ಯ ಟಿ ಬಸಪ್ಪ ನಾಯಕ ಗಂಭೀರ ಆರೋಪ ಮಾಡಿದರು.





ನಾಯಕನಹಟ್ಟಿ ಸಮುದಾಯ ಆರೋಗ್ಯ ಕೇಂದ್ರಕ್ಕೆಂದು ನೀಡಿರುವ 108 ಅಂಬುಲೆನ್ಸ್ ನ್ನು ಸತತ ಒಂದು ತಿಂಗಳಿನಿಂದ ನಿಲ್ಲಿಸಲಾಗಿದೆ. ಸರ್ಕಾರ ಬಡ ರೋಗಿಗಳ ಅನುಕೂಲಕ್ಕಾಗಿ ಕೋಟಿ ಕೋಟಿ ವೆಚ್ಚ ಮಾಡಿ ಸರ್ಕಾರದ ಸೌಲಭ್ಯಗಳು ಬಡವರಿಗೆ ಬರುವಂತಾಗಲಿ ಎಂದು 108 ಆಂಬುಲೆನ್ಸ್ ಸೇವೆಯನ್ನು ಪ್ರಾರಂಭಿಸಿದೆ. ಆದರೆ ರೋಗಿಗಳಿಗೆ ಸೇವೆ ನೀಡದೆ, ಆಸ್ಪತ್ರೆ ಕಾವಲಿಗೆ ಅಂಬುಲೆನ್ಸ್ ಅನ್ನು ನಿಲ್ಲಿಸಲಾಗಿದೆ. ಕೇವಲ ನೋಡಲಿಕ್ಕೆ ಮಾತ್ರ ಆಂಬುಲೆನ್ಸ್, ಮ್ಯೂಸಿಯಂನಲ್ಲಿ ಇಟ್ಟಿರುವ ಹಾಗೆ ಇಡಲಾಗಿದೆ.

ಶೀಘ್ರದಲ್ಲಿ ಶ್ರೀ ಗುರು ತಿಪ್ಪೇರುದ್ರಸ್ವಾಮಿಯ ಜಾತ್ರಾ ಮಹೋತ್ಸವ ಇರುವುದರಿಂದ ಬಂದಂತಹ ಭಕ್ತಾದಿಗಳಿಗೆ ಆರೋಗ್ಯ ಸೇವೆ ನೀಡುವರೆ ಎಂಬ ಸಂಶಯ ವ್ಯಕ್ತವಾಗುತ್ತಿದೆ. ಅಂಬುಲೆನ್ಸ್ ಗಾಗಿ 108 ಸಿಬ್ಬಂದಿಗಳಿಗೆ ಕರೆ ಮಾಡಿದರೆ ಪಕ್ಕದ ತುರುವನೂರು ಹಾಗೂ ತೊಳಕು ಆಸ್ಪತ್ರೆ ಅಂಬುಲೆನ್ಸ್ ಬರುವ ತನಕ ರೋಗಿಗಳು ಕಾಯುವ ಪರಿಸ್ಥಿತಿ ಇದೆ.
ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಆಂಬುಲನ್ ಸೇವೆ ಒದಗಿಸಿ ರೋಗಿಗಳ ಸೇವೆಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.
ಅಂಬುಲೆನ್ಸ್ ಚಾಲಕರನ್ನು ವಿಚಾರಿಸಿದಾಗ ವಾಹನಕ್ಕೆ ಟೈಯರ್ ಗಳ ಅವಶ್ಯಕತೆ ಇದೆ, ಇನ್ಶುರೆನ್ಸ್ ಮುಕ್ತಾಯಗೊಂಡಿದೆ. ಹೇಗೆ ವಾಹನವನ್ನು ಚಲಾಯಿಸುವುದು? ಹಲವು ಬಾರಿ ಜಿ ವಿ ಕೆ, ಇ ಎಂ ಆರ್ ಐ ಸಂಸ್ಥೆ ಅಧಿಕಾರಿಗಳಿಗೆ ಹಾಗೂ ಜಿಲ್ಲಾ ವೈದ್ಯಾಧಿಕಾರಿಗಳ, ತಾಲ್ಲೂಕು ವೈದ್ಯಾಧಿಕಾರಿಗಳ, ನಾಯಕನಹಟ್ಟಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿಗಳ ಹಾಗೂ ಅಧೀಕ್ಷಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ನೋವನ್ನು ಅರ್ಥಮಾಡಿಕೊಳ್ಳುತ್ತಿಲ್ಲ, ನಮಗೂ ರೋಗಿಗಳ ಸೇವೆ ಮಾಡಬೇಕೆಂದು ಅನಿಸುತ್ತದೆ. ಆದರೆ ಸೌಲಭ್ಯಗಳ ಕೊರತೆಯಿಂದ ಸಾಧ್ಯವಾಗುತ್ತಿಲ್ಲ, ಕರ್ತವ್ಯದಲ್ಲಿ ಇರುವ ಚಾಲಕರನ್ನು ಬೇರೆ ಆಸ್ಪತ್ರೆಯ 108 ಅಂಬುಲೆನ್ಸ್ ಗಳಿಗೆ ಕರ್ತವ್ಯಕ್ಕೆ ನಿಯೋಜನೆಗೊಳಿಸುತ್ತಾರೆ ಎಂದು ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು.
About The Author
Discover more from JANADHWANI NEWS
Subscribe to get the latest posts sent to your email.