January 29, 2026
1741607664692.jpg




ಚಿತ್ರದುರ್ಗಮಾ.10:
ಜಿಲ್ಲೆಯಲ್ಲಿ ಹಕ್ಕಿಜ್ವರದ ಯಾವುದೇ ಪ್ರಕರಣಗಳು ಇದುವರೆಗೂ ವರದಿಯಾಗಿಲ್ಲ, ಹೀಗಾಗಿ ಯಾವುದೇ ಆತಂಕ ಪಡುವ ಅಗತ್ಯವಿರುವುದಿಲ್ಲ. ಆದಾಗ್ಯೂ ಹಕ್ಕಿ ಜ್ವರ ಬಾರದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಮಟ್ಟದ ಪ್ರಾಣಿಜನ್ಯ ರೋಗಗಳ ತುರ್ತು ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಹಕ್ಕಿಜ್ವರದ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಆದಾಗ್ಯೂ ಹಕ್ಕಿಜ್ವರ ತಡೆಗಾಗಿ ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳು ಅಗತ್ಯ ಸಹಕಾರ ನೀಡಲಿದ್ದು, ಈಗಾಗಲೇ ರ್ಯಾಪಿಡ್ ರೆಸ್ಪಾನ್ಸ್ ತಂಡ ಸ್ಥಾಪಿಸಲಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಹಕ್ಕು ಜ್ವರ ಇರುವುದು ಖಚಿತಪಟ್ಟಿದ್ದು, ಜಿಲ್ಲೆಗೆ ವಿವಿಧ ಜಿಲ್ಲೆ ಹಾಗೂ ರಾಜ್ಯಗಳಿಂದಲೂ ಕೋಳಿ ಸಾಗಾಣಿಕೆ ಇದೆ. ಹೀಗಾಗಿ ಗಡಿ ಪ್ರದೇಶದಲ್ಲಿ ಈಗಾಗಲೆ ಸ್ಥಾಪಿಸಲಾಗಿರುವ ಚೆಕ್‍ಪೋಸ್ಟ್‍ಗಳಲ್ಲಿ ಸೂಕ್ತ ನಿಗಾ ವಹಿಸಬೇಕು. ಕೋಳಿಫಾರಂಗಳಿಗೆ ಪಶುವೈದ್ಯಾಧಿಕಾರಿಗಳ ತಂಡ ನಿಯಮಿತವಾಗಿ ಭೇಟಿ ನೀಡಿ, ಸ್ವಚ್ಛತೆ ನಿರ್ವಹಣೆಗೆ ಸೂಚನೆ ನೀಡುವಂತೆ ತಿಳಿಸಿದರು.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಹಾಗೂ ಉದ್ಯಮಿದಾರರಿಗೆ ಆರೋಗ್ಯ ನಿರೀಕ್ಷಕರು ಹಕ್ಕಿಜ್ವರದ ಕುರಿತು ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ತಾಕೀತು ಮಾಡಿದರು.
ಜಿಲ್ಲೆಯ ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಚಿಕನ್ ಮಾರಾಟ ಮಾಡುವ ಸ್ಟಾಲ್‍ಗಳಲ್ಲಿ ಅನೈರ್ಮಲ್ಯ ಇರುವ ಬಗ್ಗೆ ಬಹಳಷ್ಟು ದೂರುಗಳಿವೆ. ಹೀಗಾಗಿ ಆಯಾ ನಗರ, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ಪರಿಸರ ಅಭಿಯಂತರರು ಚಿಕನ್ ಸ್ಟಾಲ್‍ಗಳಿಗೆ ಭೇಟಿ ನೀಡಿ, ಮಳಿಗೆ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡಬೇಕು, ಹಾಗೂ ತ್ಯಾಜ್ಯವನ್ನು ಸಮರ್ಪಕವಾಗಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಸೂಕ್ತ ತಿಳುವಳಿಕೆ ನೀಡಬೇಕು, ಆದಾಗ್ಯೂ ಸ್ವಚ್ಛತೆ ಪಾಲನೆ ಮಾಡದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಪಶುಪಾಲನಾ ಮತ್ತು ಪಶುವೈದ್ಯಕಿಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಕುಮಾರ್ ಮಾತನಾಡಿ, ಹಕ್ಕಿಜ್ವರವು ಸಾಂಕ್ರಾಮಿಕ ರೋಗವಾಗಿದ್ದು, ಎವಿಯನ್ ಇನ್ ಪ್ಲೂ-ಎಂಜಾ ಎಂಬ ವೈರಾಣುವಿನಿಂದ ಬರುತ್ತದೆ. ನಾಟಿಕೋಳಿ, ಫಾರಂ ಕೋಳಿ, ಟರ್ಕಿ ಕೋಳಿ, ಕೌಜುಗನ ಹಕ್ಕಿ, ನವಿಲು ಹಕ್ಕಿ, ಬಾತುಕೋಳಿ, ಹಂಸ ಪಕ್ಷಿ ಇತ್ಯಾದಿ ಎಲ್ಲಾ ಹಕ್ಕಿ ಪ್ರಬೇಧಗಳಲ್ಲಿ ಕಂಡುಬರುತ್ತದೆ ಎಂದು ತಿಳಿಸಿದ ಅವರು, ಕೋಳಿ, ಪಕ್ಷಿಗಳಲ್ಲಿ ಹಠಾತ್ ಸಾವು, ಅಸಾಧರಣ ಸಾವು, ಸತ್ತ ಕೋಳಿಗಳ ಮೂಗು, ಬಾಯಿ ಮತ್ತು ಕಣ್ಣಿನಿಂದ ನೀರು ಸುರಿಯುವುದು, ಕೋಳಿಗಳ ಮೊಣಕಾಲು ಮತ್ತು ಪಾದಗಳು ನೀಲಿ ಬಣ್ಣಕ್ಕೆ ತಿರುವುದು ಇದರ ರೋಗ ಲಕ್ಷಣವಾಗಿದೆ ಎಂದು ತಿಳಿಸಿದರು.
ಹೆಚ್ಚಿನ ಸಂಖ್ಯೆಯಲ್ಲಿ ಕೋಳಿಗಳು ಅಸಹಜ ಸಾವನ್ನಪ್ಪಿದರೆ ಸಂಬಂಧಿಸಿದ ಕೋಳಿ ಸಾಕಾಣಿಕೆದಾರರು, ರೈತರು, ತಕ್ಷಣವೇ ಪಶುವೈದ್ಯರು, ಸಿಬ್ಬಂದಿಯವರ ಗಮನಕ್ಕೆ ತರಬೇಕು. ರೋಗನಿಯಂತ್ರಣ ಹಾಗೂ ಆರೋಗ್ಯ ರಕ್ಷಣೆ ಹಿತದೃಷ್ಠಿಯಿಂದ ಕೋಳಿಫಾರಂಗಳಿಗೆ ಅನುಮತಿ ಇಲ್ಲದೇ ಪ್ರವೇಶಿಸಬಾರದು. ಕೆರೆ, ಕಟ್ಟೆ, ನೀರಿನ ತೊರೆ, ನದಿ ಮತ್ತು ಇತರೆ ನೀರಿನ ಜಾಗಕ್ಕೆ ವಲಸೆ ಬರುವ, ಅಲ್ಲಿಯೇ ವಾಸಿಸುವ ಹಕ್ಕಿ, ಪಕ್ಷಿಗಳು ಅಸಹಜವಾಗಿ ಸತ್ತರೆ ತಕ್ಷಣವೇ ಪಶುವೈದ್ಯಕೀಯ ಗಮನಕ್ಕೆ ತರಬೇಕು. ಕೋಳಿ ಮತ್ತು ಕೋಳಿ ಉತ್ಪನ್ನಗಳನ್ನು ಮುಟ್ಟಿದಲ್ಲಿ ಸೋಪಿನಿಂದ ಕೈ ತೊಳೆದು ಸ್ವಚ್ಛತೆ ಕಾಯ್ದುಕೊಳ್ಳಬೇಕು. ಚಿಕನ್ ಅನ್ನು 70 ಡಿಗ್ರಿ ಸೆಂಟಿಗ್ರೇಡ್‍ನಲ್ಲಿ 10 ನಿಮಿಷ ಕೋಳಿ ಮಾಂಸ ಮತ್ತು ಮೊಟ್ಟೆಯನ್ನು ಬೇಯಿಸಿಯೇ ಸೇವಿಸಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ 337 ಕೋಳಿ ಫಾರಂಗಳು ಇದ್ದು, ಮಾಂಸದ ಕೋಳಿಗಳು ಮತ್ತು ಮೊಟ್ಟೆ ಕೋಳಿ ಸೇರಿದಂತೆ ಒಟ್ಟು 60.37 ಲಕ್ಷ ಕೋಳಿಗಳಿವೆ. ಸುಮಾರು 9 ಲಕ್ಷ ನಾಟಿ ಕೋಳಿಗಳು ಇವೆ. ಇದರಲ್ಲಿ ಅತಿ ಹೆಚ್ಚು ಮೊಳಕಾಲ್ಮೂರು ತಾಲ್ಲೂಕು ಒಂದರಲ್ಲೇ ಸುಮಾರು 34 ಲಕ್ಷ ಕೋಳಿಗಳು ಇವೆ. ಹಕ್ಕಿಜ್ವರ ತಡೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿ ಸಂಪರ್ಕಿಸುವ ಚಳ್ಳಕೆರೆ ತಾಲ್ಲೂಕಿನ ನಾಗಪ್ಪನಹಳ್ಳಿ ಗೇಟ್, ಹಿರಿಯೂರು ತಾಲ್ಲೂಕಿನ ಪಿ.ಡಿ.ಕೋಟೆ ಹಾಗೂ ಮೊಳಕಾಲ್ಮುರು ತಾಲ್ಲೂಕಿನ ಎದ್ದಲ್ಲಬೋಮ್ಮನಹಟ್ಟಿಯಲ್ಲಿ ಕೋಶಿ ಶೀತಜ್ವರ ರೋಗೋದ್ರೇಕ ಚೆಕ್‍ಪೋಸ್ಟ್‍ಗಳ ಸ್ಥಾಪಿಸಿ, ಪಶುವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನಿಯೋಜಿಸಿ, ದಿನನಿತ್ಯವೂ ಕೋಳಿ, ಕೋಳಿ ಮೊಟ್ಟೆ, ಕೋಳಿ ಆಹಾರ ತಪಾಸಣೆ ನಡೆಸಲಾಗುತ್ತಿದೆ. ಕೋಳಿ ಫಾರಂ ಮಾಲೀಕರು ತಮ್ಮ ಫಾರಂ ಪ್ರದೇಶವನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು ಹಾಗೂ ನಿಯಮಿತವಾಗಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಬೇಕು. ಒಡೆದುಹೋದ ಕೋಳಿ ಮೊಟ್ಟೆ ಹಾಗೂ ಸತ್ತ ಕೋಳಿಯನ್ನು ಸುಡಬೇಕು. ಫಾರಂ ಮೇಲಿನ ಕೋಳಿ, ಕೋಳಿ ಆಹಾರ, ಕುಡಿಯುವ ನೀರಿನ ಸಂಪರ್ಕಕ್ಕೆ ಬಾರದಂತೆ ಕ್ರಮ ವಹಿಸಬೇಕು ಎಂದು ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ಯಾವುದೇ ಹಕ್ಕಿ ಜ್ವರ ಪ್ರಕರಣ ವರದಿಯಾಗಿಲ್ಲ, ಆದಾಗ್ಯೂ ಯಾವುದೇ ಪರಿಸ್ಥಿತಿ ಎದುರಿಸಲು ಪಿಪಿಇ ಕಿಟ್, ಸುರಕ್ಷಾ ಕನ್ನಡಕ, ಔಷಧಿಗಳು ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಟ್ಟುಕೊಳ್ಳಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೋಳಿ ಶೀತ ಜ್ವರ, ಹಕ್ಕಿಜ್ವರದ ಮುಂಜಾಗ್ರತಾ ಕ್ರಮಗಳ ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಚಂದ್ರಶೇಖರ ಕಂಬಾಳಿಮಠ್ ಅವರು ಮಾತನಾಡಿ, ಹಕ್ಕಿಜ್ವರದ ಕಾರಣದಿಂದ ಸೋಂಕಿಗೆ ಒಳಗಾಗುವ ಮನುಷ್ಯರಲ್ಲಿ ನೆಗಡಿ, ಜ್ವರ, ಕೆಮ್ಮು ಹಾಗೂ ಭೇದಿ ಉಂಟಾಗುವ ರೋಗ ಲಕ್ಷಣಗಳು ಕಂಡುಬರುತ್ತವೆ. ಇದು ಮನುಷ್ಯರಿಂದ ಮನುಷ್ಯರಿಗೆ ಹರಡುವ ರೋಗವಲ್ಲ. ಈ ಕುರಿತು ಈಗಾಗಲೆ ಜಿಲ್ಲೆಯಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಆರೋಗ್ಯ ಇಲಾಖೆ ಕೈಗೊಂಡಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಂದ್ರಶೇಖರ್ ಕಂಬಾಳಿಮಠ, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ.ಕಾಳೇಸಿಂಘೆ, ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್ ಸೇರಿದಂತೆ ಪಶುಪಾಲನಾ ಮತ್ತು ಪಶೈವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading