February 10, 2026
IMG-20260210-WA0294.jpg

ಚಳ್ಳಕೆರೆ ತಾಲೂಕಿನ ಪರಶುರಾಂಪುರ ಹೋಬಳಿ ಕೇಂದ್ರದ ಮುಖ್ಯ ರಸ್ತೆಗಳ ಅಭಿವೃದ್ಧಿ ಹಾಗೂ ರಸ್ತೆ ಅಗಲೀಕರಣ ಕಾಮಗಾರಿಯಲ್ಲಿ ಭಾರೀ ತಾರತಮ್ಯ ನಡೆಯುತ್ತಿದೆ ಎಂದು ರೈತ ಸಂಘದ ಮುಖಂಡರು ತೀವ್ರ ಆರೋಪ ಮಾಡಿದ್ದಾರೆ. ರಸ್ತೆ ಅಗಲೀಕರಣದ ನೆಪದಲ್ಲಿ ಕೆಲ ಕಟ್ಟಡಗಳಿಗೆ ಮಾತ್ರ ಮಾರ್ಕ್ ಹಾಕಲಾಗಿದ್ದು, ಪ್ರಭಾವಿಗಳ ಹಾಗೂ ಶ್ರೀಮಂತರ ಕಟ್ಟಡಗಳನ್ನು ತೆರವುಗೊಳಿಸಲು ಅಧಿಕಾರಿಗಳು ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕಟ್ಟಡಗಳಿಗೆ ಮಾರ್ಕ್ ಹಾಕಿರುವ ಸ್ಥಳದಲ್ಲಿಯೇ ಇಂದಿಗೂ ಯಾವುದೇ ತೆರವು ಕಾರ್ಯ ನಡೆಯದೆ, ರಸ್ತೆಯ ಮಧ್ಯೆ ಇರುವ ವಿದ್ಯುತ್ ಕಂಬಗಳನ್ನು ಕೂಡ ಸ್ಥಳಾಂತರಿಸಿಲ್ಲ. ಪಾದಚಾರಿಗಳಿಗೆ ಅಗತ್ಯವಾದ ಫುಟ್‌ಪಾತ್ ನಿರ್ಮಾಣಕ್ಕೂ ಯಾವುದೇ ಕ್ರಮ ಕೈಗೊಳ್ಳದಿರುವುದು ಆಡಳಿತದ ನಿರ್ಲಕ್ಷ್ಯದ ಪರಾಕಾಷ್ಠೆಯಾಗಿದೆ ಎಂದು ರೈತರು ಕಿಡಿಕಾರಿದ್ದಾರೆ.
ರಸ್ತೆ ಅಗಲೀಕರಣದಲ್ಲಿ ಬಡವರಿಗೆ ಒಂದು ನ್ಯಾಯ, ಶ್ರೀಮಂತರಿಗೆ ಇನ್ನೊಂದು ನ್ಯಾಯ ಎಂಬಂತೆ ರಾಜಕೀಯ ಪ್ರೇರಿತ ತಾರತಮ್ಯ ನಡೆಯುತ್ತಿದೆ. ಇದು ಸಂಪೂರ್ಣವಾಗಿ ಕಾನೂನು ಬಾಹಿರವಾಗಿದ್ದು, ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ತರುತ್ತಿದೆ ಎಂದು ರೈತ ಸಂಘ ಆರೋಪಿಸಿದೆ.
ಈ ಕುರಿತು ಮಾತನಾಡಿದ ರೈತ ಸಂಘದ ಹೋಬಳಿ ಅಧ್ಯಕ್ಷ ಕೃಷ್ಣಪ್ಪ, ತಾಲೂಕು ಅಧ್ಯಕ್ಷ ಹಂಪಣ್ಣ, ಗೌರವಾಧ್ಯಕ್ಷ ರಾಜಣ್ಣ, ಕಾರ್ಯದರ್ಶಿ ರುದ್ರಪ್ಪ, ರೈತ ಸಂಘ ಸದಸ್ಯರು ಕುಲ್ಡಿ ಈರಣ್ಣ, ಭೂತರಾಜ್ ಸೇರಿದಂತೆ ಇತರರು, ರಸ್ತೆ ಅಗಲೀಕರಣ ಕಾಮಗಾರಿ ತಕ್ಷಣವೇ ಕಾನೂನುಬದ್ಧವಾಗಿ, ಎಲ್ಲರಿಗೂ ಸಮಾನವಾಗಿ ನಡೆಯಬೇಕು ಎಂದು ಆಗ್ರಹಿಸಿದರು.
ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣ ಎಚ್ಚೆತ್ತುಕೊಳ್ಳದಿದ್ದರೆ, ರೈತರು ಮತ್ತು ಸಾರ್ವಜನಿಕರು ಸೇರಿ ಬೀದಿಗಿಳಿದು ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading