ಹಿರಿಯೂರು:
ನಗರದ ನಂಜಯ್ಯನ ಕೊಟ್ಟಿಗೆ ಬಡಾವಣೆಯಲ್ಲಿ ಆಶ್ರಯ ಯೋಜನೆಯಡಿ ನಿರ್ಮಿಸಿರುವ ಜಿ.ಪ್ಲಸ್ 2 ಮನೆಗಳನ್ನು 2 ತಿಂಗಳ ಒಳಗೆ ಫಲಾನುಭವಿಗಳಿಗೆ ವಿತರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ನಗರಸಭೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಮೊದಲ ಹಂತದಲ್ಲಿ ಆರಂಭಿಸಿರುವ ಜಿ.ಪ್ಲಸ್ 2 ವಿನ್ಯಾಸದ 624 ಮನೆಗಳ ನಿರ್ಮಾಣ ಸ್ಥಳಕ್ಕೆ ಸಚಿವರು ಶನಿವಾರ ಭೇಟಿ ನೀಡಿದ ಸಂದರ್ಭದಲ್ಲಿ ವೀಕ್ಷಿಸಿ ಮಾತನಾಡಿದರು.
ಮನೆಗಳು ಬಹುತೇಕ ಪೂರ್ಣಗೊಂಡಿವೆ.ವಿದ್ಯುತ್, ನೀರಿನ ವ್ಯವಸ್ಥೆ, ರಸ್ತೆ ಇತ್ಯಾದಿ ಸೌಲಭ್ಯಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ಅರ್ಹರಿಗೆ ಮಾತ್ರ ಮನೆಗಳನ್ನು ಕೊಡಬೇಕು. ಎರಡನೇ ಹಂತದ ಜಿ.ಪ್ಲಸ್ 2ರ 1628 ಮನೆಗಳ ನಿರ್ಮಾಣ ಬೇಗ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರಲ್ಲದೆ,
ಮುಂದಿನ ಮೂರು ವರ್ಷಗಳಲ್ಲಿ ನಗರದಲ್ಲಿ ವಸತಿ ರಹಿತರು ಇಲ್ಲದ ರೀತಿಯಲ್ಲಿ ವಿವಿಧ ಯೋಜನೆಗಳಡಿಯಲ್ಲಿ ಸೂರು ಕಲ್ಪಿಸುವ ಕೆಲಸ ಮಾಡಲಾಗುವುದು. ಅಧಿಕಾರಿಗಳು ಈ ನಿಟ್ಟಿನಲ್ಲಿ ಬದ್ಧತೆಯಿಂದ ಕೆಲಸ ನಿರ್ವಹಿಸಬೇಕು ಎಂಬುದಾಗಿ ಅವರು ಹೇಳಿದರು.
ಮನೆಗಳ ವೀಕ್ಷಣೆ ನಂತರ ನಗರಸಭೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರಿಗೆ ಎಸ್.ಸಿ.ಪಿ, ಟಿ.ಡಸ್.ಟಿ ಯೋಜನೆಯಡಿ ಎಸ್ಸಿ, ಎಸ್ಟಿ ಸಮುದಾಯದ 31 ಪೌರಕಾರ್ಮಿಕರಿಗೆ ಸಚಿವರು ಫ್ರಿಡ್ಜ್ ಗಳನ್ನು ವಿತರಿಸಿದರು. ಪೌರ ಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಅಜಯ್ ಕುಮಾರ್, ಉಪಾಧ್ಯಕ್ಷೆ ಶ್ರೀಮತಿ ಅಂಬಿಕಾಆರಾಧ್ಯ, ಸ್ಥಾಯಿ ಸಮತಿ ಅಧ್ಯಕ್ಷ ಅನಿಲ್ ಕುಮಾರ್, ಪೌರಾಯುಕ್ತರಾದ ಎ.ವಾಸೀಂ, ನಗರಸಭಾ ಸದಸ್ಯರುಗಳಾದ ಈ.ಮಂಜುನಾಥ್, ಈರಲಿಂಗೇಗೌಡ, ಶ್ರೀಮತಿ ಶಿವರಂಜಿನಿ ಯಾದವ್, ಶ್ರೀಮತಿ ಗೀತಾ, ಶ್ರೀಮತಿ ಮೊದಲಮೇರಿಯಾ, ಶ್ರೀಮತಿ ಮಮತಾ, ಎಂ.ಡಿ.ಸಣ್ಣಪ್ಪ, ಮಾಜಿ ಅಧ್ಯಕ್ಷ ಟಿ.ಚಂದ್ರಶೇಖರ್, ಕೆ.ಪಿ.ಸಿ.ಸಿ ಸದಸ್ಯ ಸುರೇಶ್ ಬಾಬು, ದಿಂಡಾವರ ಮಹೇಶ್, ಸಾದತ್ ವುಲ್ಲಾ ಸೇರಿದಂತೆ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.






About The Author
Discover more from JANADHWANI NEWS
Subscribe to get the latest posts sent to your email.