ಹಿರಿಯೂರು ಫೆ.10:
ಬಾಳೆಯು ಮಾವಿನ ನಂತರ ನಮ್ಮ ದೇಶದ ಪ್ರಮುಖ ಹಣ್ಣಿನ ಬೆಳೆಯಾಗಿದ್ದು, ಭಾರತ ದೇಶವು ಪ್ರಪಂಚದಲ್ಲಿಯೇ ಅತಿ ಹೆಚ್ಚು ಉತ್ಪಾದನೆ ಮಾಡುವ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ರಜನೀಕಾಂತ ಹೇಳಿದರು.
ಬಬ್ಬೂರುಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಈಚೆಗೆ ಜಿಲ್ಲೆಯ ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರಿಗೆ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಕೃಷಿಯಲ್ಲಿ ತುಂತುರು ಮತ್ತು ಹನಿ ನೀರಾವರಿ ಘಟಕಗಳ ಅಳವಡಿಕೆ ಮತ್ತು ನಿರ್ವಹಣೆ, ಬಾಳೆ ಬೆಳೆಯ ಸುಧಾರಿತ ಬೇಸಾಯ ಕ್ರಮಗಳು, ಸಮಗ್ರ ರೋಗ ಮತ್ತು ಕೀಟಗಳ ನಿರ್ವಹಣೆ ಕುರಿತು ಆಯೋಜಿಸಲಾದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಮುಖವಾಗಿ ಏಲಕ್ಕಿ ಬಾಳೆ ಮತ್ತು ಪಚ್ಚ ಬಾಳೆಯನ್ನು ಚಿತ್ರದುರ್ಗ ಜಿಲ್ಲೆಯಲ್ಲಿ ಐದು ಸಾವಿರ ಹೇಕ್ಟೇರಿಗಿಂತ ಅಧಿಕ ಪ್ರದೇಶದಲ್ಲಿ ಬೆಳೆಯುತ್ತಿದ್ದಾರೆ. ಸೂಕ್ಷ್ಮ ನೀರಾವರಿ ಘಟಕಗಳನ್ನು ಉಪಯೋಗಿಸುವುದರಿಂದ ನೀರಿನ ಮಿತ ಬಳಕೆ ಮತ್ತು ಗೊಬ್ಬರದ ಉಳಿತಾಯ, ನೀರು ಹಾಯಿಸಲು ಕೂಲಿ ಕಾರ್ಮಿಕರ ಉಳಿತಾಯ, ಕಳೆಗಳ ನಿಯಂತ್ರಣ, ವಿದ್ಯುತ್ ಶಕ್ತಿ ಉಳಿತಾಯ ಹಾಗೂ ಕೊಳವೆಬಾವಿ ಮತ್ತು ತೆರೆದ ಬಾವಿಗಳಲ್ಲಿನ ನೀರಿನ ಸದ್ಬಳಕೆ ಮತ್ತು ಅವುಗಳ ಬಳಕೆಯ ಅವಧಿ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ ಎಂದರು.
ನಮ್ಮ ಕರ್ನಾಟಕ ರಾಜ್ಯವು ರಾಷ್ಟ್ರದಲ್ಲಿಯೇ ಅತಿ ಹೆಚ್ಚು ಪ್ರದೇಶದಲ್ಲಿ ಸೂಕ್ಷ್ಮ ನೀರಾವರಿ ಅಳವಡಿಸಿದ ರಾಜ್ಯವಾಗಿದೆ. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿ ರೈತರು ಅಗತ್ಯ ದಾಖಲಾತಿಗಳೊಂದಿಗೆ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಿ ತುಂತುರು ನೀರಾವರಿ ಘಟಕಗಳನ್ನು ಪಡೆಯಬಹುದಾಗಿದೆ. ಒಮ್ಮೆ ಸೂಕ್ಷ್ಮ ನೀರಾವರಿ ಪದ್ಧತಿಗೆ ಸಹಾಯಧನ ಪಡೆದ ಸಾಮಾನ್ಯ ವರ್ಗದ ರೈತರಿಗೆ ಮತ್ತೊಮ್ಮೆ ಸಹಾಯಧನ ಪಡೆಯಲು ಅವಕಾಶವಿರುವುದಿಲ್ಲ. ಆದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರಿಗೆ ಪ್ರತಿ ಏಳು ವರ್ಷಕ್ಕೊಮ್ಮೆ ಸೂಕ್ಷ್ಮ ನೀರಾವರಿ ಘಟಕಗಳನ್ನು ಸಹಾಯಧನದಲ್ಲಿ ನೀಡಲು ಅವಕಾಶವಿರುತ್ತದೆಂದರು.ಹಾಗೂ ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಸಂಪರ್ಕಿಸಲು ಕೋರಿದರು.
ಜೈನ್ ಇರಿಗೇಷನ್ ಸಂಸ್ಥೆಯ ಪ್ರತಿನಿಧಿ ಕೆ. ದೇವರಾಜ್ ಅವರು ಕೃಷಿ ಹಾಗೂ ತೋಟಗಾರಿಕಾ ಬೆಳಗಳಲ್ಲಿ ನೀರಿನ ಮಿತ ಬಳಕೆ ಹಾಗೂ ಉತ್ಪಾದಕತೆ ಹೆಚ್ಚಿಸಲು ಸ್ಪ್ರಿಂಕ್ಲರ್ ಮತ್ತು ಹನಿ ನೀರಾವರಿ ತಾಂತ್ರಿಕತೆ, ರಸಾವರಿ ತಂತ್ರಜ್ಞಾನ ಮತ್ತು ಅವುಗಳ ನಿರ್ವಹಣೆ ಹಾಗೂ ಅಂಗಾಂಶ ಬಾಳೆಯ ಕುರಿತು ವಿಷಯ ಮಂಡನೆ ಮಾಡಿದರು.
ಬಬ್ಬೂರು ಫಾರಂನಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ತಜ್ಞರಾದ ಡಾ. ಮಹಾಂತೇಶ್ ಮಾತನಾಡಿ, ರೋಗ ಮತ್ತು ಕೀಟ ರಹಿತ ಆರೋಗ್ಯವಾದ ಬಾಳೆ ಕಂದುಗಳನ್ನು ಜೂನ್ – ಜುಲೈ ತಿಂಗಳಲ್ಲಿ ನಾಟಿ ಮಾಡುವುದು ಸೂಕ್ತವಾಗಿದೆ. ಬಾಳೆಗೊನೆಗಳು ಸಂಪೂರ್ಣವಾಗಿ ಹೊರಹೊಮ್ಮಿದ ನಂತರ 5, 6 ಮತ್ತು 9ನೇ ತಿಂಗಳಲ್ಲಿ ಅರ್ಕ ಬಾಳೆ ಸ್ಪೆಷಲ್ 75 ಗ್ರಾಂ ಪ್ರತಿ 15 ಲೀಟರ್ ನೀರಿನ ಕ್ಯಾನಿಗೆ ಒಂದು ಶಾಂಪು ಸಾಚಟ್ ಅಥವಾ ಎರಡು ಮಿಲಿ ಸಾಬೂನು ಸಾಬೂನು ದ್ರಾವಣ ಮತ್ತು ಎರಡು ನಿಂಬೆಹಣ್ಣಿನ ರಸವನ್ನು ನೀರಿನಲ್ಲಿ ಚೆನ್ನಾಗಿ ಮಿಶ್ರಣ ಮಾಡಿ ಸಿಂಪಡಿಸಬೇಕು. ಪ್ರತಿ ಹೆಕ್ಟರಿಗೆ 30 ಕೆಜಿ ಅರ್ಕ ಬಾಳೆ ಸ್ಪೆಷಲ್ ಬಳಸುವುದರಿಂದ ಶೇಕಡ 15 ರಿಂದ 20 ರವರೆಗೆ ಹೆಚ್ಚಿನ ಇಳುವರಿ ಪಡೆಯಬಹುದೆಂದರು. ಕಂದು ಅಥವಾ ಅಂಗಾಂಶ ಸಸಿಗಳನ್ನು ನಾಟಿ ಮಾಡುವಾಗ ಅಲಸಂದೆಯನ್ನು ಬಿತ್ತನೆ ಮಾಡಿ, 45 ದಿನಗಳ ನಂತರ, ಬೆಳೆದ ಅಲಸಂದೆಯನ್ನು ಮಣ್ಣಿನಲ್ಲಿ ಸೇರಿಸುವುದು ಮತ್ತು 10 ದಿನಗಳ ನಂತರ ಎರಡನೇ ಬಾರಿ ಅಲಸಂದೆಯನ್ನು ಬಿತ್ತನೆ ಮಾಡಿ, 100 ದಿನಗಳ ನಂತರ ಮಣ್ಣಿನಲ್ಲಿ ಸೇರಿಸುವುದರಿಂದ ಬಾಳೆಯಲ್ಲಿ ಕಳೆಯನ್ನು ಅತ್ಯುತ್ತಮವಾಗಿ ನಿಯಂತ್ರಿಸಬಹುದು. ಅಲಸಂದೆ ಬೆಳೆಯನ್ನು ಎರಡು ಬಾರಿ ಬೆಳೆದು ಮಣ್ಣಿನಲ್ಲಿ ಸೇರಿಸಿ ಮಿಶ್ರಣ ಮಾಡುವುದರಿಂದ ಮಣ್ನಿನ ಫಲವತ್ತತೆ ಹೆಚ್ಚಿಸುವುದಲ್ಲದೆ ಕಳೆಗಳನಿಯಂತ್ರಿಸಲು ಸಹಕರಿಯಾಗಿದೆಂದರು. ಬಾಳೆ ಬೆಳೆ ತೋಟದ ಸುತ್ತಲೂ ಗಾಳಿ ತಡೆಯಾಗಿ ಚೊಗಚೆಯನ್ನು ಎರಡು ಸಾಲುಗಳಲ್ಲಿ ಬೆಳೆಯಬೇಕು ಹಾಗೂ ಸೊರಗು ರೋಗ ಬಾದೆಗೆ ಒಳಗಾದ ಕ್ಷೇತ್ರದಲ್ಲಿ ಎರಡು ವರ್ಷ ಬೆಳೆ ಬದಲಾವಣೆ ಮಾಡುವುದು ಸೂಕ್ತವೆಂದರು.


About The Author
Discover more from JANADHWANI NEWS
Subscribe to get the latest posts sent to your email.