January 29, 2026
IMG-20260110-WA0115.jpg

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವರ್ಷದ ಜನವರಿ 7ರಂದು ಈ ನಾಡು ಕಂಡ ಶ್ರೇಷ್ಠ ಮುತ್ಸದ್ದಿ ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರ ಆಡಳಿತಾವಧಿಯ ದಾಖಲೆಯನ್ನು ಮುರಿದಿದ್ದಾರೆ. ಅರಸು ಅವರು ಅಧಿಕಾರದಲ್ಲಿದ್ದ 2,789 ದಿನಗಳಿಗಿಂತ ಹೆಚ್ಚಾಗಿ 2,790 ದಿನಗಳನ್ನು ಪೂರೈಸಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಲ್ಲಿದ್ದಾರೆ.
ಆದರೆ, ಮಾನ್ಯ ಸಿದ್ದರಾಮಯ್ಯ ಅವರು ಎಷ್ಟು ದಿನ ಅಧಿಕಾರದಲ್ಲಿದ್ದರು ಎನ್ನುವುದೇ ಮುಖ್ಯವಲ್ಲ. ಆ ದಿನಗಳಲ್ಲಿ ಜನರಿಗಾಗಿ ಏನು ಮಾಡಿದರು ಎಂಬುದೇ ಮುಖ್ಯ. ಇದನ್ನೇ ಇಂದು ಇತಿಹಾಸ ಕೇಳುತ್ತಿದೆ ಎಂದು ಬಿಜೆಪಿ ಮುಖಂಡ ಪ್ರಭಾಕರ ಮ್ಯಾಸನಾಯಕ ಪ್ರಶ್ನಿಸಿದ್ದಾರೆ.
ಇತಿಹಾಸದ ಪುಟಗಳಲ್ಲಿ ದೇವರಾಜ ಅರಸು ಅವರು ಅಜರಾಮರವಾಗಿ ಉಳಿದಿದ್ದಾರೆ. ಹಾಗಾದರೆ ಸಿದ್ದರಾಮಯ್ಯ ಅವರು ಯಾವ ಕಾರಣಕ್ಕಾಗಿ ಇತಿಹಾಸದಲ್ಲಿ ಉಳಿಯಬೇಕು ಎಂದು ಜನರೂ ಇತಿಹಾಸದ ಜತೆ ಪ್ರಶ್ನಿಸುತ್ತಿವೆ ಎಂದು ಅವರು ಹೇಳಿದರು.
1970ರ ದಶಕದಲ್ಲೇ ದೇವರಾಜ ಅರಸು ಅವರು ಪಕ್ಷದ ಅಧ್ಯಕ್ಷರಾಗಿ ಸಾಮಾಜಿಕ ನ್ಯಾಯದ ಆಧಾರದ ಮೇಲೆ ಕಾಣದ, ಕೇಳದ ಜನರಿಗೆ ಟಿಕೆಟ್ ನೀಡಿದರು. ಆ ಮೂಲಕ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯಿಲಿ, ಧರ್ಮಸಿಂಗ್‌ ಮುಂತಾದ ನಾಯಕರನ್ನು ರಾಜಕೀಯವಾಗಿ ಬೆಳೆಸಿದರು. ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾದರು; ಮೊಯಿಲಿ ಹಾಗೂ ಧರ್ಮಸಿಂಗ್‌ ಮುಖ್ಯಮಂತ್ರಿಗಳಾದರು.
ಆದರೆ ಸಿದ್ದರಾಮಯ್ಯ ಅವರ ಗರಡಿಯಲ್ಲಿ ಬೆಳೆದ ಒಬ್ಬರೂ ಕೂಡ ರಾಷ್ಟ್ರೀಯ ಅಥವಾ ರಾಜ್ಯ ಮಟ್ಟದ ಮಹತ್ವದ ಹುದ್ದೆಗೆ ಏರಿದ್ದರೆ ಅದನ್ನು ಜನರ ಮುಂದೆ ಪ್ರಸ್ತುತಪಡಿಸಲಿ ಎಂದು ಪ್ರಭಾಕರ ಸವಾಲು ಹಾಕಿದರು.
ಸಿದ್ದರಾಮಯ್ಯ ಅವರು ಎರಡು ಬಾರಿ ಮುಖ್ಯಮಂತ್ರಿ, ಎರಡು ಬಾರಿ ಉಪಮುಖ್ಯಮಂತ್ರಿ, ಎರಡು ಬಾರಿ ವಿರೋಧ ಪಕ್ಷದ ನಾಯಕರಾಗಿದ್ದರು. ಆದರೆ ಒಂದೇ ಒಂದು ಬಾರಿ ಪಕ್ಷದ ಅಧ್ಯಕ್ಷರಾಗಿಲ್ಲ ಎಂಬುದು ಸತ್ಯ. ಬೂತ್ ಮಟ್ಟದಿಂದ ಕೆಲಸ ಮಾಡಿದ ಕಾರ್ಯಕರ್ತರು ಅಧಿಕಾರಕ್ಕೆ ಬರಬೇಕು ಎಂಬುದು ಜನಾಭಿಪ್ರಾಯವಾಗಿದ್ದರೂ, ಸಿದ್ದರಾಮಯ್ಯ ಅವರ ರಾಜಕಾರಣದಲ್ಲಿ ಇದು ತದ್ವಿರುದ್ಧವಾಗಿರುವುದು ಸ್ಪಷ್ಟವಾಗಿದೆ ಎಂದು ಅವರು ಹೇಳಿದರು.
ದೇವರಾಜ ಅರಸು ಅವರು ಹಿಂದುಳಿದ ವರ್ಗಗಳ ಏಳಿಗೆಗಾಗಿ ನಿಜವಾದ ಅರ್ಥದಲ್ಲಿ ಶ್ರಮಿಸಿದರು. ತಮ್ಮ ಜಾತಿಗೆ ಸೇರದ ನಾಯಕ ಸಮುದಾಯದ ಎಲ್.ಜಿ. ಹಾವನೂರು ಅವರನ್ನು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ನೇಮಿಸಿ, ಬಲಿಷ್ಠ ಸಮುದಾಯಗಳ ವಿರೋಧದ ನಡುವೆಯೂ ಅವರ ವರದಿಯನ್ನು ಜಾರಿಗೊಳಿಸಿದರು. ‘ಉಳುವವನೆ ಒಡೆಯ’ ಕಾನೂನು ಜಾರಿಗೆ ತಂದು ದೀನದಲಿತರು ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಶ್ರಮಿಸಿದರು. ಅದಕ್ಕಾಗಿಯೇ ದೇವರಾಜ ಅರಸು ಅವರು ಹಿಂದುಳಿದ ವರ್ಗಗಳ ದೊಡ್ಡ ಆಶಾಕಿರಣವಾಗಿ ಇಂದಿಗೂ ಜೀವಂತವಾಗಿದ್ದಾರೆ ಎಂದು ಹೇಳಿದರು.
ಬದ್ಧತೆ ಮತ್ತು ಆಷಾಢಭೂತಿತನ
ಈ ವಿಚಾರದಲ್ಲಿ ದೇವರಾಜ ಅರಸು ಅವರ ಬದ್ಧತೆ ಎಲ್ಲಿ? ಸಿದ್ದರಾಮಯ್ಯ ಅವರ ಆಷಾಢಭೂತಿತನ ಎಲ್ಲಿ? ಎತ್ತಣ ಮಾಮರ! ಎತ್ತಣ ಕೋಗಿಲೆ! ಅರಸು ಅವರದು ನಿಸ್ವಾರ್ಥ ರಾಜಕಾರಣವಾದರೆ, ಸಿದ್ದರಾಮಯ್ಯ ಅವರದು ಪರಮ ಸ್ವಾರ್ಥದ ರಾಜಕಾರಣ ಎಂದು ಪ್ರಭಾಕರ ಟೀಕಿಸಿದರು.
ಮುತ್ಸದ್ದಿಗಳನ್ನು ಮಾತ್ರ ಇತಿಹಾಸ ನೆನಪಿಟ್ಟುಕೊಳ್ಳುತ್ತದೆ. ಸಾಮಾನ್ಯ ರಾಜಕಾರಣಿಗಳನ್ನು ಜನರು ಬೇಗನೆ ಮರೆತು ಬಿಡುತ್ತಾರೆ. ಇತಿಹಾಸವು ಅವರನ್ನು ಕಸದ ಬುಟ್ಟಿಗೆ ಹಾಕುತ್ತದೆ ಎಂಬುದಕ್ಕೆ ಇದಕ್ಕಿಂತ ಹೆಚ್ಚಿನ ಸಾಕ್ಷಿ ಬೇಕಿಲ್ಲ ಎಂದರು.
ಚುನಾವಣೆಗೆ ರಾಜ್ಯದ ಜನ ಕಾಯುತ್ತಿದ್ದು, ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಕಸದ ಬುಟ್ಟಿಗೆ ಎಸೆಯುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಬಿಜೆಪಿ ಮುಖಂಡ ಪ್ರಭಾಕರ ಮ್ಯಾಸನಾಯಕ ಹೇಳಿದ್ದಾರೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading