January 29, 2026
FB_IMG_1733748966124.jpg


ಚಿತ್ರದುರ್ಗಡಿ.09:
ನಿತ್ಯವೂ ಗೃಹರಕ್ಷಕ ದಳದವರಿಂದ ಪೊಲೀಸ್ ಇಲಾಖೆ ಸೇವೆ ಪಡೆಯುತ್ತಿದ್ದು, ಗೃಹರಕ್ಷಕರು ಪೊಲೀಸ್ ಇಲಾಖೆಗೆ ಪೂರಕ ಹಾಗೂ ಅವಿಭಾಜ್ಯ ಅಂಗವಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ರಂಜಿತ್ ಕುಮಾರ್ ಬಂಡಾರು ಹೇಳಿದರು.
ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್) ಮೈದಾನದಲ್ಲಿ ಸೋಮವಾರ ಜಿಲ್ಲಾ ಗೃಹರಕ್ಷಕ ದಳ ವತಿಯಿಂದ ಹಮ್ಮಿಕೊಂಡಿದ್ದ “ಅಖಿಲ ಭಾರತ ಗೃಹರಕ್ಷಕ ದಳ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಬಂದೋಬಸ್ತ್, ಚುನಾವಣೆ, ಪ್ರಕೃತಿ ವಿಕೋಪ ಹಾಗೂ ತುರ್ತು ಸಂದರ್ಭಗಳಲ್ಲಿ ಗೃಹ ರಕ್ಷಕ ದಳದವರ ಸಹಕಾರ ಪೊಲೀಸ್ ಇಲಾಖೆಗೆ ಅಗತ್ಯವಾಗಿ ಬೇಕಾಗಿದೆ. ಗೃಹ ರಕ್ಷಕರ ನಿಸ್ವಾರ್ಥ ಸೇವೆ ಮತ್ತು ಪೊಲೀಸ್ ಇಲಾಖೆಗೆ ನೀಡುವ ಸಹಕಾರ ಮುಂದುವರೆಯಲಿ ಎಂದು ಹೇಳಿದರು.
ಜಿಲ್ಲೆಯಲ್ಲಿ ಗೃಹರಕ್ಷಕರು ಬಹಳ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿರುವುದನ್ನು ನಾನು ನೋಡಿದ್ದೇನೆ. ಈಚೆಗೆ ನಡೆದ ಗಣೇಶ ಬಂದೋಬಸ್ತ್ ಸಂದರ್ಭದಲ್ಲಿ ಗೃಹ ರಕ್ಷಕ ಗುರುಮೂರ್ತಿ ಅವರು ಹೃದಯದ ಸಮಸ್ಯೆಯಿಂದ ಮರಣ ಹೊಂದಿದರು. ಅವರಿಗೆ ವಹಿಸಿರುವ ಕರ್ತವ್ಯವನ್ನು ಸೈನಿಕರಂತೆ, ಬದ್ಧತೆಯಿಂದ ಕಾಯನಿರ್ವಹಿಸಿ ನಮ್ಮೆಲ್ಲರಿಗೂ ಸ್ಫೂರ್ತಿದಾಯಕವಾಗಿದ್ದಾರೆ ಎಂದು ತಿಳಿಸಿದ ಅವರು, ಗೃಹ ರಕ್ಷಕರು ಆರೋಗ್ಯದ ಕಡೆಗೂ ಕಾಳಜಿ ವಹಿಸಿಬೇಕು ಎಂದು ಸಲಹೆ ನೀಡಿದರು.
ಗೃಹ ರಕ್ಷಕರು ಸಹ ಇನ್ನೂ ಹೆಚ್ಚಿನ ಶಿಸ್ತು ಹೊಂದುವುದು ಅಗತ್ಯವಾಗಿದೆ. ಪ್ರತಿ ವಾರವೂ ನಡೆಯುವ ಪರೇಡ್ ತರಬೇತಿಯಲ್ಲಿ ಭಾಗವಹಿಸಿ, ಶ್ರದ್ಧೆ ಹಾಗೂ ಶಿಸ್ತು ಬೆಳೆಸಿಕೊಳ್ಳಬೇಕು. ಪೊಲೀಸರಂತೆ ಗೃಹರಕ್ಷಕರು ಸಹ ಖಾಕಿ ಸಮವಸ್ತ್ರ ಧರಿಸುವುದರಿಂದ ಸಮವಸ್ತ್ರದಲ್ಲಿದ್ದಾಗ ಶಿಸ್ತು, ಪ್ರಾಮಾಣಿಕತೆ ಹಾಗೂ ಶ್ರದ್ಧೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಗೃಹರಕ್ಷಕ ದಳ ಜಿಲ್ಲಾ ಸಮಾದೇಷ್ಟರಾದ ಸಿ.ಕೆ.ಸಂಧ್ಯಾ ಮಾತನಾಡಿ, ಜಿಲ್ಲೆಯ ಗೃಹ ರಕ್ಷಕದಳವರು ಚುನಾವಣೆ ಹಾಗೂ ಇತರೆ ಬಂದೋಬಸ್ತ್‍ಗಳಿಗೆ ಮಹಾರಾಷ್ಟ್ರ ಸೇರಿದಂತೆ ಇತರೆ ರಾಜ್ಯಗಳಿಗೆ ತೆರಳಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇದರ ಜೊತೆಗೆ ತುರ್ತು ಸಂದರ್ಭಗಳಲ್ಲಿಯೂ ಸಹ ಉತ್ತಮ ಸೇವೆ ಸಲ್ಲಿಸಿದ್ದಾರೆ. ಪೊಲೀಸ್ ಇಲಾಖೆಯು ಗೃಹ ರಕ್ಷಕ ದಳಕ್ಕೆ ಸಂಪೂರ್ಣ ಸಹಕಾರ ನೀಡುತ್ತಿದ್ದು, ಉತ್ತಮ ಒಡನಾಡಿಯಾಗಿ ಕೆಲಸ ನಿರ್ವಹಿಸುತ್ತಿದ್ದೇವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಗೃಹ ರಕ್ಷಕ ದಳದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರಿಗೆ ಹಾಗೂ ರಕ್ತದಾನ ಮಾಡಿದ ಹಾಗೂ ಉತ್ತಮ ಸೇವೆ ಸಲ್ಲಿಸಿದ ಗೃಹ ರಕ್ಷಕರಿಗೆ ಸನ್ಮಾನಿಸಿ, ಗೌರವಿಸಲಾಯಿತು. ಗೃಹರಕ್ಷಕ ದಳ ಉಪ ಸಮಾದೇಷ್ಟರಾದ ಜಿ.ಹೆಚ್.ಲೋಕೇಶ್ ಅವರು ಪ್ರಮಾಣ ವಚನ ಬೋಧಿಸಿದರು. ಹಿರಿಯೂರು ಘಟಕಾಧಿಕಾರಿ ಹನುಮಂತರಾಯಪ್ಪ ವಾರ್ಷಿಕ ವರದಿ ಮಂಡಿಸಿದರು.
ಈಚೆಗೆ ನಿಧನರಾದ ಗೃಹ ರಕ್ಷಕ ಗುರುಮೂರ್ತಿ ಕುಟುಂಬ ವರ್ಗಕ್ಕೆ ಪೊಲೀಸ್ ಇಲಾಖೆಯಿಂದ ರೂ.1.50 ಲಕ್ಷ ಚೆಕ್‍ನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ರಂಜಿತ್ ಕುಮಾರ್ ಬಂಡಾರು ಅವರು ವಿತರಿಸಿದರು.
ಕಾರ್ಯಕ್ರಮದಲ್ಲಿ ಚಿತ್ರದುರ್ಗ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ದಿನಕರ್, ಗೃಹರಕ್ಷಕ ದಳ ಜಿಲ್ಲಾ ಸಮಾದೇಷ್ಟರಾದ ಸಿ.ಕೆ.ಸಂಧ್ಯಾ ಸೇರಿದಂತೆ ನಿವೃತ್ತ ಘಟಕಾಧಿಕಾರಿಗಳು, ವಿವಿಧ ತಾಲ್ಲೂಕಿನ ಗೃಹ ರಕ್ಷಕರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading