ವರದಿ: ಕೆ.ಟಿ.ಮೋಹನ್ ಕುಮಾರ್
ಸಾಲಿಗ್ರಾಮ (ಮೈಸೂರು ಜಿಲ್ಲೆ): ತಂಬಾಕು ಬೆಳೆಯುವ ರೈತರುಗಳಿಗೆ ಉತ್ತಮ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರವು ಕೊಡಿಸಿ ಕೊಡಬೇಕೆಂದು ಕುಪ್ಪೆ ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಕೆ.ಬಾಲಮನೋಹರ ಒತ್ತಾಯಿಸಿದ್ದಾರೆ.
ಅವರು ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ತಂಬಾಕನ್ನು ಬೆಳೆಯಲು ರೈತರು ಅಪಾರ ಹಣವನ್ನು ವ್ಯಯ ಮಾಡುತ್ತಿದ್ದು ಬೆಳೆಯನ್ನು ಬೆಳೆದ ನಂತರ ಅದನ್ನು ಮಾರುಕಟ್ಟೆಗೆ ಬಿಟ್ಟಾಗ ಅದರಿಂದ ದೊರೆಯುತ್ತಿರುವ ಹಣವು ಅತ್ಯಂತ ಕಡಿಮೆಯಾಗಿದ್ದು ಇದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಸಾಲಿಗ್ರಾಮ, ಕೆ.ಆರ್.ನಗರ, ಹುಣಸೂರು, ಪಿರಿಯಾಪಟ್ಟಣ, ಅರಕಲಗೂಡು, ಹೆಚ್.ಡಿ.ಕೋಟೆ, ಸರಗೂರು ಸೇರಿದಂತೆ ವಿವಿಧ ತಾಲೂಕುಗಳ ಹಲವು ಭಾಗಗಳಲ್ಲಿನ ತಂಬಾಕು ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪಕ್ಕದ ರಾಜ್ಯವಾದ ಆಂಧ್ರಪ್ರದೇಶದಲ್ಲಿ ಒಂದು ಕೆ ಜಿ ತಂಬಾಕಿಗೆ ಸುಮಾರು 400 ರೂಗಳು ದೊರೆಯುತ್ತಿದ್ದರೆ ನಮ್ಮ ಭಾಗದಲ್ಲಿ ಕೇವಲ 230 ರಿಂದ 290 ರೂಗಳಂತೆ ರೈತರುಗಳಿಂದ ಖರೀದಿ ಮಾಡಲಾಗುತ್ತಿದೆ. ಇಂತಹ ತಾರತಮ್ಯ ನೀತಿಯಿಂದ ತಂಬಾಕು ಬೆಳೆಯನ್ನೆ ಅವಲಂಬಿಸಿ ಜೀವನ ಸಾಗಿಸುತ್ತಿರುವ ರೈತರುಗಳಿಗೆ ಅಪಾರ ನಷ್ಟ ಉಂಟಾಗುತ್ತಿದೆ.
ರೈತರುಗಳಿಗೆ ಅನುಕೂಲ ಮಾಡಿಕೊಡುವಂತಹ ವಿಚಾರಗಳನ್ನು ಕೈ ಬಿಟ್ಟು ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳು ತಮ್ಮ ರಾಜಕೀಯ ಲಾಭಕ್ಕಾಗಿ ಪಾದಯಾತ್ರೆ ಮಾಡುವುದು, ಚುನಾವಣೆಗಳನ್ನ ನಡೆಸುವಂತಹ ಕೆಲಸಗಳನ್ನು ಮಾಡಿಕೊಂಡು ಬರುವುದರಲ್ಲಿ ತಮ್ಮ ಕಾಲವನ್ನು ಕಳೆಯುತ್ತಿದ್ದಾರೆ. ಇದರಿಂದ ರೈತರ ಸಂಕಷ್ಟವನ್ನು ಕೇಳಲು ಯಾರು ಇಲ್ಲವೇನೋ ಎಂಬ ಪರಿಸ್ಥಿತಿ ಉಂಟಾಗಿದೆ ಎಂದರು.
ಕೇಂದ್ರ ಸರ್ಕಾರದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಐದು ಜನ ಸಚಿವರುಗಳಿದ್ದರೂ ರಾಜ್ಯದ ರೈತರ ಬಗ್ಗೆ ಕನಿಷ್ಠ ಕಾಳಜಿ ತೊರದೆ ರಾಜಕೀಯ ಚದುರಂಗದಾಟದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಕೂಡಲೇ ಕೇಂದ್ರ ಸರ್ಕಾರದ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಹಾಸನ ಸಂಸದ ಶ್ರೇಯಸ್ ಪಟೇಲ್, ಮೈಸೂರಿನ ಸಂಸದ ಯದುವೀರ್ ಒಡೆಯರ್ ಹಾಗೂ ಚಾಮರಾಜನಗರ ಸಂಸದ ಸುನಿಲ್ ಬೋಸ್ ಅವರುಗಳು ಇತ್ತ ಗಮನ ಹರಿಸಿ ತಂಬಾಕು ಬೆಳೆಯುವ ರೈತರುಗಳಿಗೆ ಉತ್ತಮ ಬೆಲೆಯನ್ನು ಕೊಡಿಸಿ ಕೊಡಬೇಕೆಂದು ಒತ್ತಾಯಿಸಿದ್ದಾರೆ.
ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರಾಜೇಗೌಡ ಮಾತನಾಡಿ ರೈತರು ಬೆಳೆಯುವ ತಂಬಾಕನ್ನು ಮಾರಾಟ ಮಾಡಲು ಅಧಿಕೃತ ಲೈಸೆನ್ಸ್ ಹೊಂದಿರುವವರು ಹಾಗೂ ಕಾರ್ಡ್ ಹೊಂದಿರುವವರಿಗೆ ಸಮಾನ ರೀತಿಯಲ್ಲಿ ತಂಬಾಕು ಬೆಳೆಯನ್ನು ಮಾರಾಟ ಮಾಡಲು ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದರು. ಈ ಭಾಗದ ಶಾಸಕರುಗಳು ಹಾಗೂ ವಿಧಾನ ಪರಿಷತ್ ಸದಸ್ಯರುಗಳು ಕೂಡ ತಂಬಾಕು ಬೆಳೆಗಾರರ ಸಂಕಷ್ಟಕ್ಕೆ ಕೂಡಲೇ ಸ್ಪಂದಿಸುವ ಕೆಲಸ ಮಾಡಿ ಉತ್ತಮ ಬೆಂಬಲ ಬೆಲೆಯನ್ನು ಕೊಡಿಸುವ ಮೂಲಕ ರೈತರ ಬದುಕನ್ನು ಉಳಿಸಬೇಕೆಂದು ಆಗ್ರಹಿಸಿದರು.
ರೈತರಿಗೆ ಉತ್ತಮ ಬೆಲೆಯನ್ನು ಕೊಡಿಸಿಕೊಡುವಲ್ಲಿ ಕೇಂದ್ರ ಸರ್ಕಾರದ ಸಚಿವರು ಹಾಗೂ ಸಂಸದರುಗಳು ವಿಫಲವಾದರೆ ಅವರುಗಳ ಮನೆಯ ಮುಂದೆ ರೈತರುಗಳೊಂದಿಗೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
About The Author
Discover more from JANADHWANI NEWS
Subscribe to get the latest posts sent to your email.