ಹಿರಿಯೂರು :
ಪ್ರತೀ ಸಂಜೀವಿನಿ ಒಕ್ಕೂಟಗಳು ಸ್ವಾವಲಂಬಿಗಳಾಗಬೇಕೆಂಬ ನಿಟ್ಟಿನಲ್ಲಿ ಸರ್ಕಾರ ಹಲವು ತರಬೇತಿಗಳನ್ನು ಆಯೋಜಿಸುತ್ತಿದ್ದು, ಒಕ್ಕೂಟದ ಸದಸ್ಯರುಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂಬುದಾಗಿ ಚಿತ್ರದುರ್ಗ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಗಾಯತ್ರಿ ಹೇಳಿದ್ದಾರೆ.
ತಾಲ್ಲೂಕಿನ ಬಬ್ಬೂರು ಕೃಷಿವಿಜ್ಞಾನ ಕೇಂದ್ರದ ಆವರಣದಲ್ಲಿ ರಾಷ್ಟ್ರೀಯ ಜೀವನೋಪಾಯ ಅಭಿಯಾನ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಚಿತ್ರದುರ್ಗ ಜಿಲ್ಲಾ ಪಂಚಾಯತ್, ಹಿರಿಯೂರು ತಾಲೂಕು ಪಂಚಾಯತ್ ಇವರುಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ಆರಂಭಗೊಂಡ ಆದಿವಾಲ ಗ್ರಾಮಪಂಚಾಯತ್ ಮಟ್ಟದ ಶ್ರೀ ಭಾರತಾಂಬೆ ಸಂಜೀವಿನಿ ಮಾದರಿ ಒಕ್ಕೂಟದ ವಾರ್ಷಿಕ ಕ್ರಿಯಾ ಯೋಜನೆಯ 2ನೇ ಹಂತದ ನಾಲ್ಕು ದಿನಗಳ ತರಬೇತಿ ಹಾಗೂ ಬೆಂಗಳೂರು ಹಾಗೂ ಮೈಸೂರು ವಿಭಾಗದ ಸಂಪನ್ಮೂಲ ವ್ಯಕ್ತಿಗಳಿಗೆ ಆಯೋಜಿಸಿದ್ದ ಪ್ರಾತ್ಯಕ್ಷಿಕೆ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.
ಮಾದರಿ ಸಂಜೀವಿನಿ ಒಕ್ಕೂಟದ ದೂರದೃಷ್ಟಿ ಯೋಜನೆಯ ತರಬೇತಿಗಳು ಒಕ್ಕೂಟದ ಶಕ್ತಿಯನ್ನು ಇಮ್ಮಡಿಗೊಳಿಸಿದ್ದು, ಈ ಮೂಲಕ ಗುಂಪಿನ ಸದಸ್ಯರು ತನ್ನ ಗ್ರಾಮದ ಬಗ್ಗೆ ಹೊಸಕನಸುಗಳನ್ನು ಕಟ್ಟುವಂತಾಗಿದೆಯಲ್ಲದೆ, ಮಾದರಿ ಒಕ್ಕೂಟದ ಪರಿಕಲ್ಪನೆ, ಇಡೀ ಸಮುದಾಯವನ್ನು ಕೇಂದ್ರೀಕರಿಸಲಾಗುತ್ತಿದೆ, ಇದರಿಂದ ಒಕ್ಕೂಟವು ಪ್ರತಿಯೊಂದು ಹಂತದಲ್ಲೂ ಬಲವರ್ಧನೆಯಾಗುತ್ತದೆ ಎಂಬುದಾಗಿ ಹೇಳಿದರು.
ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ.ಪರಶುರಾಮ ರವರು ಮಾತನಾಡಿ, ಸಾಮಾಜಿಕವಾಗಿ ಹಿಂದುಳಿದವರನ್ನು ಮುಖ್ಯವಾಹಿನಿಗೆ ತರುವ ಕಾರ್ಯಗಳು ಗ್ರಾಮೀಣ ಅಭಿವೃದ್ಧಿಯಲ್ಲಿ ಬಹಳ ಮಹತ್ವವನ್ನು ಪಡೆಯುತ್ತದೆ. ಈ ನಿಟ್ಟಿನಲ್ಲಿ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಕೌಶಲ್ಯಾಭಿವೃದ್ಧಿಹಾಗೂ ತಾಂತ್ರಿಕತೆಯ ಮಹತ್ವವನ್ನು ತಿಳಿಸಿಕೊಡುವ ಕಾರ್ಯಗಳು ಆಗಬೇಕಿದೆ ಎಂದರಲ್ಲದೆ ಕೃಷಿ ವಿಜ್ಞಾನ ಕೇಂದ್ರದ ಮುಖೇನ ಸ್ವಸಹಾಯ ಗುಂಪುಗಳಿಗೆ ನೀಡಬಹುದಾದ ಹಲವು ಯೋಜನೆ ಗಳ ಬಗ್ಗೆ ಅವರು ತಿಳಿಸಿದರು.
ಹಿರಿಯೂರು ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಪ್ರಮೋದ್ ಮಾತನಾಡಿ, ತಾಲೂಕಿನಲ್ಲಿ 20 ಸಾವಿರ ಸ್ವಸಹಾಯ ಗುಂಪಿನ ಮಹಿಳೆಯರಿದ್ದು, ಇದು ಸಬಲೀಕರಣದ ದೊಡ್ಡ ಹೆಜ್ಜೆ ಎಂಬುದಾಗಿ ಹೇಳಿದರು. ಚಿತ್ರದುರ್ಗ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಯೋಗೇಶ್ವರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಶಿವರಾಮ್ ಹಾಗೂ ಮಲ್ಲಿಕಾರ್ಜುನ ಪಾಟೀಲ್, ತಾಲೂಕು ವ್ಯವಸ್ಥಾಪಕ ಸೈಫುದ್ದೀನ್ ಉಪಸ್ಥಿತರಿದ್ದರು. ವಲಯ ಮೇಲ್ವಿಚಾರಕಿ ದಿವ್ಯ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕರಾದ ಲಕ್ಷ್ಮಣ್ ಶ್ರೀಭಾರತಾಂಬೆ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಸಿಬ್ಬಂದಿಗಳು, ಪದಾಧಿಕಾರಿಗಳು, ಸದಸ್ಯರು ವಿವಿಧ ಜಿಲ್ಲೆಗಳ ರಾಜ್ಯ ,ಜಿಲ್ಲಾ , ತಾಲೂಕು, ಸಂಪನ್ಮೂಲ ವ್ಯಕ್ತಿಗಳು ಹಾಜರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.